Andolana originals

ಗಾಂಧಿ ಅಭಿಯಾನ ಅರಿವಿನ ಯಾನ ; ಗಾಂಧಿ ವಾದಕ್ಕೆ ಮನಸೋತಿದ್ದ ಬಳ್ಳಾರಿ ಸಿದ್ದಮ್ಮ

ಡಾ. ಎಂ. ಡಿ. ಉಮೇಶ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಬಳ್ಳಾರಿ ಸಿದ್ದಮ್ಮನವರು ೧೯೦೩ರಲ್ಲಿ ಬಸೆಟಪ್ಪ ಮತ್ತು ಶಿವಮ್ಮ ದಂಪತಿಯ ಪುತ್ರಿಯಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ದುಂಡಸಿ ಗ್ರಾಮದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ಸಂಪ್ರದಾಯಸ್ಥ ಕುಟುಂಬವಾದ್ದರಿಂದ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವ ಪದ್ಧತಿ ಇರಲಿಲ್ಲ. ಅವರ ಕಲಿಕೆ ಏನಿದ್ದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿತ್ತು. ಸಿದ್ಧಮ್ಮಳಿಗೆ ಕಲಿಯಬೇಕೆಂಬ ಇಚ್ಛೆಯಿದ್ದರೂ ತಂದೆತಾಯಿಯವರು ಪ್ರೋತ್ಸಾಹ ನೀಡಲಿಲ್ಲ. ಕದ್ದುಮುಚ್ಚಿ ನಾಲ್ಕನೆಯ ತರಗತಿಯವರೆಗೆ ವ್ಯಾಸಂಗ ಮಾಡಿದರು. ಬಳ್ಳಾರಿಯ ಮುರಿಗೆಪ್ಪನವರೊಂದಿಗೆ ವಿವಾಹ ನೆರವೇರಿತು.

ರಾಷ್ಟ್ರೀಯ ಆಂದೋಲನ ಇಡೀ ದೇಶವನ್ನು ವ್ಯಾಪಿಸಿದ ಕಾಲಘಟ್ಟವದು. ಮಹಾತ್ಮ ಗಾಂಧೀಜಿಯವರ ಪ್ರಭಾವದಿಂದಾಗಿ ೧೯೨೦ರಲ್ಲಿ ಅಸಹಕಾರ ಚಳವಳಿ, ೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹಗಳು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿತು. ವಿದ್ಯಾವಂತರಲ್ಲದಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರ ಮನಸ್ಸು ತುಡಿಯುತ್ತಿತ್ತು. ಮಹಾತ್ಮ ಗಾಂಧೀಜಿಯವರನ್ನು ನೋಡಿರದಿದ್ದರೂ ಅವರ ಪ್ರಭಾವ ಸಿದ್ದಮ್ಮ ಮತ್ತು ಮುರಿಗೆಪ್ಪ ದಂಪತಿಗಳ ಮೇಲೆ ಗಾಢ ಪ್ರಭಾವ ಬೀರಿತು. ಸಿದ್ಧಮ್ಮನವರಿಗೆ ಗಾಂಧೀಜಿಯನ್ನು ನೋಡಬೇಕು, ಆ ಮಹಾತ್ಮನೊಂದಿಗೆ ಮಾತನಾಡ ಬೇಕು, ಅವರು ಎಲ್ಲಿ ಇರುತ್ತಾರೆ, ಎಲ್ಲಿ ಸಿಗುತ್ತಾರೆ ಎಂಬ ಕುತೂಹಲ ಆಕೆಯದ್ದು. ಗಾಂಧೀಜಿಯ ವರನ್ನು ನೋಡಬೇಕೆಂದರೆ ವಾರ್ಧಾದಲ್ಲಿ ಸಿಗುತ್ತಾರೆ ಎಂಬುದು ಹೇಗೋ ತಿಳಿಯಿತು.

ಗಾಂಧೀಜಿಯವರನ್ನು ನೋಡಲೇಬೇಕು, ಅವರೊಂದಿಗೆ ಮಾತನಾಡಲೇಬೇಕು ಎಂಬ ಹಂಬಲದಿಂದ ವಾರ್ಧಾಕ್ಕೆ ತೆರಳಿದರು ಸಿದ್ದಮ್ಮ. ಗಾಂಧೀಜಿಯವರನ್ನು ನೋಡಿ ಸಿದ್ದಮ್ಮನವರು ತುಂಬಾ ಸಂತೋಷಪಟ್ಟರು. ಅವರೊಂದಿಗೆ ಮಾತನಾಡಿದರು, ಆಶ್ರಮದಲ್ಲಿ ಸ್ವಚ್ಛತೆ, ಪಾತ್ರೆ ತೊಳೆಯುವುದು, ದವಸ ಧಾನ್ಯಗಳನ್ನು ಶುಚಿಗೊಳಿಸುವುದು, ಪ್ರಾರ್ಥನೆ, ಭಜನೆ ಇವೇ ಮುಂತಾದವು ಕಡ್ಡಾಯವಾಗಿದ್ದವು. ರಾಷ್ಟ್ರದ ನಾಯಕರಾದ ಸರ್ದಾರ್ ವಲ್ಲಭಭಾಯಿ ಪಟೇಲ್, ರಾಜಗೋಪಾಲಚಾರಿ, ಕಾಮರಾಜ್ ಮುಂತಾದವರನ್ನು ಕಾಣುವ ಭಾಗ್ಯ ಸಿದ್ದಮ್ಮನವರಿಗೆ ದೊರೆಯಿತು. ತಾನೂ ಅಂತಹ ನಾಯಕಿಯಾಗಬೇಕೆಂಬ ಹಂಬಲ ಸಿದ್ದಮ್ಮನವರಲ್ಲಿ ಮೂಡಿತು. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕೆಂದು ತೀರ್ಮಾನಿಸಿದರು. ಕರ್ನಾಟಕ ರಾಜ್ಯವು ಅಂದು ಹರಿದು ಹಂಚಿಹೋಗಿತ್ತು. ಒಂದು ಕಡೆ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಕರ್ನಾಟಕದಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಮಹಿಳೆಯರು ಕೂಡ ಭಾಗವಹಿಸಿ ಚಳವಳಿ ಮಾಡಿರುವ ಕೆಲವರನ್ನು ಮಾತ್ರ ಇಲ್ಲಿ ನೆನೆಯಬಹುದು. ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಪುರ, ನಾಗಮ್ಮ ಪಾಟೀಲ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ ಪ್ರಮುಖರು. ಬಳ್ಳಾರಿ ಸಿದ್ದಮ್ಮನವರು ಮುಂಚೂಣಿಯಲ್ಲಿದ್ದ ಚಳವಳಿಗಾರರನ್ನು ಹುರಿದುಂಬಿಸುತ್ತಿದ್ದರು. ಪೊಲೀಸರಿಗೆ ಹೆದರದೆ ಬಹಿರಂಗ ಭಾಷಣಗಳನ್ನು ಮಾಡುತ್ತಿದ್ದರು. ಸಿದ್ಧಮ್ಮನವರು ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಚಳವಳಿಗಳು, ಹರತಾಳಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಗಾಂಧಿ ಮಾರ್ಗಿಗಳಾದ ಎಸ್. ನಿಜಲಿಂಗಪ್ಪ, ಟಿ. ಸಿದ್ಧಲಿಂಗಯ್ಯ, ಕೆ. ಎಸ್. ಪಾಲರು ಹಾಗೂ ಇನ್ನಿತರ ಮುಖಂಡರ ಚಳವಳಿಗಳಿಗೆ ಸಾಥ್ ನೀಡುತ್ತಿದ್ದರು ಸಿದ್ದಮ್ಮ.

ಇಂದಿನ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಶಿವಪುರದಲ್ಲಿ ೧೯೩೮ ಏಪ್ರಿಲ್ ೧೧, ೧೨ ಹಾಗೂ ೧೩ ರಂದು ಕಾಂಗ್ರೆಸ್ ಧ್ವಜವನ್ನು ಹಾರಿಸಲು ತೀರ್ಮಾನಿಸಲಾಯಿತು. ಇದನ್ನು ರಾಷ್ಟ್ರಕೂಟವೆಂದು ಕರೆಯಲಾಯಿತು. ೧೯೩೮ ಏಪ್ರಿಲ್ ೧೧ ನೇ ತಾರೀಖು ಶಿವಪುರದಲ್ಲಿ ಮೂವತ್ತು ಸಾವಿರ ಜನ ಸೇರಿದರು. ಜಿಲ್ಲಾ ಮ್ಯಾಜಿಸ್ಟ್ರೇಟರಾದ ಜಿ. ಎಂ. ಮೇಕ್ರಿಯವರು ಶಿವಪುರ ಸುತ್ತ-ಮುತ್ತ ನಿಷೇಧಾಜ್ಞೆ ಹೇರಿದರು. ೧೧ ನೇ ತಾರೀಖು ಟಿ. ಸಿದ್ಧಲಿಂಗಯ್ಯನವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಟಿ. ಸಿದ್ಧಲಿಂಗಯ್ಯನವರು ಧ್ವಜಾರೋಹಣ ಮಾಡಿದ ತಕ್ಷಣ ಅವರನ್ನು ಬಂಧಿಸಲಾಯಿತು. ಸಿದ್ಧಲಿಂಗಯ್ಯನವರ ತರುವಾಯ ಹೆಚ್. ಸಿ. ದಾಸಪ್ಪನವರು, ಎಂ. ಎನ್. ಜೋಯಿಸ್, ಯಶೋಧರ ದಾಸಪ್ಪ ನಂತರ ಬಳ್ಳಾರಿ ಸಿದ್ಧಮ್ಮನವರು ಧ್ವಜಾರೋಹಣ ಮಾಡಿದರು. ಇವರುಗಳನ್ನು ಬಂಧಿಸಿ ಮಂಡ್ಯದ ಜಿಲ್ಲಾ ನ್ಯಾಯಾಲಯಕ್ಕೆ ಕರೆದೊಯ್ದರು. ಬಳ್ಳಾರಿ ಸಿದ್ಧಮ್ಮನವರಿಗೆ ಶಿಕ್ಷೆಯಾಯಿತು. ಈ ಸ್ವಾತಂತ್ರ್ಯ ಹೋರಾಟ ಮುಂದೆ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಸಿದ್ದಮ್ಮನವರಿಗೆ ಪ್ರೇರಣೆಯಾಯಿತು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಬಳ್ಳಾರಿ ಸಿದ್ದಮ್ಮನವರ ಪಾತ್ರ ಬಹಳ ಮುಖ್ಯವಾದುದ್ದಾಗಿದೆ.

ದಾವಣಗೆರೆ ಜಿಲ್ಲೆಯ ಪ್ರಥಮ ಶಾಸಕಿಯಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿದ್ದ ಸಿದ್ದಮ್ಮನವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗಿಯಾದ ಪ್ರಮುಖ ಮಹಿಳಾ ಹೋರಾಟಗಾರ್ತಿಯಾಗಿದ್ದರು. ದಾವಣಗೆರೆ ನಗರದ ಕಸ್ತೂರ ಬಾ ಬಡಾವಣೆಯಲ್ಲಿ ಉದ್ಯಾನವೊಂದಕ್ಕೆ ಬಳ್ಳಾರಿ ಸಿದ್ದಮ್ಮನವರ ಹೆಸರನ್ನು ಇಡಲಾಗಿದೆ. ರಾಜ್ಯ ಪುನರ್‌ವಿಂಗಡಣಾ ಆಯೋಗದ ಕರಡು ವರದಿಯ ಪ್ರಕಾರ, ಈ ಹಿಂದೆ ಬಳ್ಳಾರಿ ಜಿಲ್ಲೆಯು ಆಂಧ್ರಪ್ರದೇಶಕ್ಕೆ ಸೇರುವುದಿತ್ತು. ಇದನ್ನು ಬಲವಾಗಿ ವಿರೋಽಸಿದವರಲ್ಲಿ ಬಳ್ಳಾರಿ ಸಿದ್ದಮ್ಮನವರು ಮೊದಲಿಗರು. ಜೊತೆಗೆ ಹಲವು ಮಹಿಳೆಯರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇಷ್ಟಕ್ಕೇ ಸುಮ್ಮನಾಗದ ಸಿದ್ದಮ್ಮನವರು ಚಿತ್ರದುರ್ಗಕ್ಕೆ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಅಗಮಿಸಿದಾಗ, ೪೦ಕ್ಕೂ ಹೆಚ್ಚು ಮಹಿಳೆಯರನ್ನು ಒಗ್ಗೂಡಿಸಿ ಅಧ್ಯಕ್ಷರನ್ನು ಚಿತ್ರದುರ್ಗದಲ್ಲಿ ಭೇಟಿಯಾಗಿ ಬಳ್ಳಾರಿ ಜಿಲ್ಲೆ ಕರ್ನಾಟಕ ರಾಜ್ಯಕ್ಕೆ ಸೇರಬೇಕು ಎಂದು ಒತ್ತಾಯಿಸಿ ಬಳ್ಳಾರಿಯನ್ನು ಉಳಿಸಿಕೊಂಡ ಕೀರ್ತಿ ಬಳ್ಳಾರಿ ಸಿದ್ದಮ್ಮನವರಿಗೆ ಸಲ್ಲುತ್ತದೆ.

ನಂತರ ಬಳ್ಳಾರಿ ಸಿದ್ದಮ್ಮ ಗಾಂಧೀಜಿ ಪರಿಕಲ್ಪನೆಯ ಗ್ರಾಮಾಭಿವೃದ್ಧಿಯ ಕಡೆ ಗಮನ ಹರಿಸಿದರು. ಹತ್ತಿಯಿಂದ ನೂಲುವುದು, ನೂಲಿನಿಂದ ಬಟ್ಟೆ ತಯಾರಿಕೆ, ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಜನರಿಗೆ ತರಬೇತಿ ನೀಡಿದರು. ಸ್ವದೇಶಿ ವಸ್ತ್ರವನ್ನೆ ಧರಿಸಲು ಜನರಲ್ಲಿ ಜಾಗೃತಿ ಮೂಡಿಸಿದರು. ಬಳ್ಳಾರಿ ಸಿದ್ದಮ್ಮನವರು ತಮ್ಮ ೭೯ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

 

ಆಂದೋಲನ ಡೆಸ್ಕ್

Recent Posts

ನಾಡಿನುದ್ದಕ್ಕೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕಂಪು

ಡಿಸೆಂಬರ್‌ನಲ್ಲಿ ವಜ್ರಮಹೋತ್ಸವ ; ಸಂಭ್ರಮಕ್ಕೆ ಸಿದ್ಧತೆ ಚಿರಂಜೀವಿ ಸಿ.ಹುಲ್ಲಹಳ್ಳಿ ಕರ್ನಾಟಕದ ನೆಲ, ಜಲ, ಭಾಷೆಯ ಏಳಿಗೆಗಾಗಿ ಕಾವ್ಯ, ಸಾಹಿತ್ಯ ಮತ್ತು…

11 mins ago

ಗಾಂಧಿ ಅಭಿಯಾನ ಅರಿವಿನ ಯಾನ ; ಆಹಾರದ ಕುರಿತು ಕೆಲವು ಚಿಲ್ಲರೆ ಪ್ರಯೋಗಗಳು

ನಾನು ನನ್ನನ್ನು ಆಳವಾಗಿ ಪರಿಶೋಧಿಸಿಕೊಂಡಂತೆಲ್ಲ ನನ್ನ ಆಂತರಿಕ ಮತ್ತು ಬಾಹ್ಯ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ನನಗೆ ತೋರಿತು. ನನ್ನ…

35 mins ago

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

1 day ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

1 day ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

1 day ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

1 day ago