ನಾನು ನನ್ನನ್ನು ಆಳವಾಗಿ ಪರಿಶೋಧಿಸಿಕೊಂಡಂತೆಲ್ಲ ನನ್ನ ಆಂತರಿಕ ಮತ್ತು ಬಾಹ್ಯ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ನನಗೆ ತೋರಿತು. ನನ್ನ ವೆಚ್ಚದಲ್ಲಿಯೂ ಜೀವನಕ್ರಮದಲ್ಲಿಯೂ ನಾನು ಬದಲಾವಣೆಯನ್ನು ಮಾಡಿಕೊಂಡ ಕೂಡಲೇ ಅದಕ್ಕಿಂತ ಇನ್ನೂ ಮುಂಚಿತವಾಗಿ ನನ್ನ ಆಹಾರದಲ್ಲಿ ಬದಲಾವಣೆ ಮಾಡಲು ಪ್ರಾರಂಭಿಸಿದೆ. ಶಾಕಾಹಾರದ ಮೇಲೆ ಗ್ರಂಥಗಳನ್ನು ರಚಿಸಿದ್ದ ಲೇಖಕರು, ಆ ಪ್ರಶ್ನೆಯನ್ನು ಅತ್ಯಂತ ಸೂಕ್ಷ್ಮವಾಗಿ ಧಾರ್ಮಿಕ, ವೈಜ್ಞಾನಿಕ, ವ್ಯಾವಹಾರಿಕ ಮತ್ತು ವೈದ್ಯಕೀಯ ದೃಷ್ಟಿಯಿಂದ ವಿಚಾರ ಮಾಡಿರುವುದು ನನಗೆ ಕಂಡಿತು. ಅವರು ನೈತಿಕವಾಗಿ ಈ ತೀರ್ಮಾನಕ್ಕೆ ಬಂದಿದ್ದರು.
‘ಪ್ರಾಣಿಗಳ ಮೇಲೆ ಮನುಷ್ಯನ ಅಧಿಕಾರದ ಅಥವಾ ಅಧಿಪತ್ಯದ ಸ್ಥಾಪನೆ ಎಂದರೆ ಪ್ರಾಣಿಗಳನ್ನು ಕೊಂದು ತಿನ್ನುವುದಲ್ಲ. ಶಕ್ತರು ಅಶಕ್ತರನ್ನು ಕಾಪಾಡಬೇಕು. ಮನುಷ್ಯರು ಒಬ್ಬರನ್ನೊಬ್ಬರು ಕಾಪಾಡುವಂತೆ ಮನುಷ್ಯರಿಗೂ ಪ್ರಾಣಿಗಳಿಗೂ ಅನ್ಲೋನ್ಯ ಸಹಾಯ ಇರಬೇಕು’. ಮನುಷ್ಯನು ಆಹಾರವನ್ನು ಸೇವಿಸುವುದು ಭೋಗಕ್ಕಾಗಿ ಅಲ್ಲ. ಪ್ರಾಣವನ್ನು ಉಳಿಸಿಕೊಂಡಿರುವುದಕ್ಕಾಗಿ ಎಂಬ ಸತ್ಯವನ್ನೂ ಅವರು ಸ್ಥಾಪಿಸಿದ್ದರು. ಅದರಂತೆ ಅವರಲ್ಲಿ ಕೆಲವರು, ಮಾಂಸವನ್ನು ಮಾತ್ರವೇ ಅಲ್ಲ, ಮೊಟ್ಟೆ, ಹಾಲನ್ನೂ ಸಹ ತ್ಯಜಿಸಬೇಕೆಂದು ಸೂಚಿಸಿ ತಾವೂ ಅದರಂತೆ ಆಚರಿಸುತ್ತಿದ್ದರು. ಕೆಲವರು ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿ, ‘ಮನುಷ್ಯ ತನ್ನ ಆಹಾರವನ್ನು ಬೇಯಿಸಿಕೊಂಡು ತಿನ್ನಲು ಅವನ ಶರೀರದ ರಚನೆಯಾಗಿಲ್ಲ. ಕಳಿತ ಹಣ್ಣುಗಳನ್ನು ಸೇವಿಸಲು ತಕ್ಕಂತೆ ಅವನ ದೇಹದ ಸೃಷ್ಟಿಯಾಗಿದೆ. ಹಾಲು ಕುಡಿಯಬೇಕಾದರೆ ತಾಯಿಯ ಹಾಲು ಮಾತ್ರ. ಹಲ್ಲು ಬಂದ ಕೂಡಲೇ ಅಗಿಯುವ ಆಹಾರವನ್ನು ಸೇವಿಸಲು ಪ್ರಾರಂಭಿಸಬೇಕು’ ಎಂಬ ತೀರ್ಮಾನಕ್ಕೆ ಬಂದಿದ್ದರು. ವೈದ್ಯಕೀಯ ದೃಷ್ಟಿಯಿಂದ ಮಸಾಲೆಗಳನ್ನೆಲ್ಲ ತ್ಯಜಿಸಬೇಕೆಂದೂ ಅವರು ಸೂಚಿಸಿದ್ದರು. ವ್ಯಾವಹಾರಿಕ ಮತ್ತು ಆರ್ಥಿಕ ದೃಷ್ಟಿಯಿಂದ, ಶಾಕಾಹಾರ ಅತ್ಯಂತ ಕಡಿಮೆ ವೆಚ್ಚದ ಆಹಾರವೆಂದು ಅವರು ಸಿದ್ಧ ಮಾಡಿ ತೋರಿಸಿದ್ದರು. ಈ ವಿಚಾರಗಳೆಲ್ಲ ನನ್ನ ಮೇಲೆ ಪರಿಣಾಮ ಉಂಟು ಮಾಡಿದವು. ಶಾಕಾಹಾರದ ಹೋಟಲುಗಳಲ್ಲಿ ಈ ಎಲ್ಲ ಬಗೆಯ ಶಾಕಾಹಾರಿಗಳೂ ನನಗೆ ಸಿಕ್ಕುತ್ತಿದ್ದರು. ಇಂಗ್ಲೆಂಡಿನಲ್ಲಿ ಒಂದು ಶಾಕಾಹಾರಿ ಸಂಸ್ಥೆ ಇತ್ತು. ಅವರು ತಮ್ಮದೇ ಆದ ಒಂದು ವಾರಪತ್ರಿಕೆಯನ್ನು ನಡೆಸುತ್ತಿದ್ದರು. ಆ ಪತ್ರಿಕೆಗೆ ನಾನು ಚಂದಾದಾರನಾದೆ. ಸಂಘಕ್ಕೂ ಸದಸ್ಯನಾದೆ. ಸ್ವಲ್ಪ ಕಾಲದೊಳಗಾಗಿ ಅದರ ಕಾರ್ಯಕಾರಿ ಸಮಿತಿಯ ಸದಸ್ಯನೂ ಆದೆ. ಅಲ್ಲಿ ಶಾಕಾಹಾರವಾದದ ಪ್ರಮುಖರೆನಿಸಿಕೊಂಡಿದ್ದವರ ಪರಿಚಯ ನನಗೆ ಉಂಟಾಯಿತು. ನಾನೂ ಶಾಕಾಹಾರದ ಮೇಲೆ ನನ್ನ ಸ್ವಂತ ಪ್ರಯೋಗಗಳನ್ನು ಪ್ರಾರಂಭಿಸಿದೆ.
ನಾನು ಮನೆಯಿಂದ ತರಿಸಿದ್ದ ಮಿಠಾಯಿ, ಮಸಾಲೆ ಮುಂತಾದವುಗಳನ್ನು ತಿನ್ನುವುದನ್ನು ನಿಲ್ಲಿಸಿದೆ. ಮನಸ್ಸು ಬೇರೆ ಕಡೆಗೆ ತಿರುಗಿದುದರಿಂದ ಮಸಾಲೆಯ ಆಸೆ ತಪ್ಪಿಹೋಯಿತು. ಮಸಾಲೆ ಇಲ್ಲದೆ ಬೇಯಿಸಿದ ಸಪ್ಪೆಯಾದ ರಿಚ್ಮಂಡ್ ಬಸಲೆ ಸೊಪ್ಪು ನನಗೆ ರುಚಿಸಿತು. ಅಂತಹ ಅನೇಕ ಪ್ರಯೋಗಗಳಿಂದ, ರುಚಿಯ ನಿಜವಾದ ಮೂಲ ನಾಲಗೆಯಲ್ಲ, ಮನಸ್ಸು ಎಂಬ ಪಾಠವನ್ನು ನಾನು ಕಲಿತೆ. ಮುಖ್ಯವಾದ ಪ್ರಯೋಗ ವಲ್ಲದೆ ನಾನು ಅನೇಕ ಚಿಲ್ಲರೆ ಪ್ರಯೋಗಗಳನ್ನೂ ಜತೆಯ ಲ್ಲಿಯೇ ನಡೆಸುತ್ತಿದ್ದೆ. ಉದಾ ಹರಣೆಗೆ, ಒಂದು ಸಮಯದಲ್ಲಿ ಪಿಷ್ಟ, ಪದಾರ್ಥವನ್ನು ಬಿಡುವುದು, ಮತ್ತೊಂದು ಸಂದರ್ಭದಲ್ಲಿ ಬರಿಯ ರೊಟ್ಟಿ ಮತ್ತು ಹಣ್ಣುಗಳಿಂದಲೇ ಜೀವಿಸುವುದು, ಮತ್ತೊಂದು ವೇಳೆ ಕೆನೆ, ಹಾಲು ಮತ್ತು ಮೊಟ್ಟೆಗಳನ್ನು ಮಾತ್ರ ಸೇವಿಸುವುದು. ಇವುಗಳಲ್ಲಿ ಕೊನೆಯ ಪ್ರಯೋಗ ಉಲ್ಲೇಖಾರ್ಹವಾಗಿದೆ. ಪಿಷ್ಟರಹಿತ ಆಹಾರವನ್ನು ಸೇವಿಸಬೇಕೆಂದು ಪ್ರಚಾರ ಮಾಡಿದ ಸುಧಾರಕ, ಮೊಟ್ಟೆಯು ಉತ್ತಮವಾದ ಆಹಾರವೆಂದು ಹೇಳುತ್ತಿದ್ದುದಲ್ಲದೆ, ಅದು ಮಾಂಸವೇ ಅಲ್ಲವೆಂದು ಸಾಧಿಸುತ್ತಿದ್ದ. ಮೊಟ್ಟೆಗಳನ್ನು ತಿನ್ನುವುದರಿಂದ ಯಾವ ಪ್ರಾಣಿಗೂ ಹಿಂಸೆ ಇಲ್ಲವೆಂಬ ಮಾತು ಸ್ವತಃಸಿದ್ಧವಾಗಿತ್ತು. ಈ ಸಮರ್ಥನೆಗೆ ಸೋತು ನಮ್ಮ ತಾಯಿಗೆ ಕೊಟ್ಟಿದ್ದ ಮಾತಿಗೆ ವಿರುದ್ಧವಾಗಿ ಮೊಟ್ಟೆಗಳನ್ನು ತಿಂದೆ. ಆದರೆ ನಾನು ಹಾಗೆ ಪ್ರಜ್ಞೆ ತಪ್ಪಿದುದು ತಾತ್ಕಾಲಿಕವಾಗಿತ್ತು. ನಾನು ತಾಯಿಗೆ ಕೊಟ್ಟಿದ್ದ ಪ್ರತಿಜ್ಞೆಗೆ, ನನಗೆ ಇಷ್ಟ ಬಂದಂತೆ ಈ ಹೊಸ ಅರ್ಥವನ್ನು ಹಾಕಲು, ನನಗೆ ಅಧಿಕಾರವಿರಲಿಲ್ಲ. ನನ್ನಿಂದ ಪ್ರತಿಜ್ಞೆ ಮಾಡಿಸಿದಾಗ, ನಮ್ಮ ತಾಯಿ ಅದಕ್ಕೆ ಕೊಟ್ಟ ಅರ್ಥ ನನಗೆ ತಿಳಿದಿತ್ತು. ಆಕೆಯ ಅರ್ಥದಂತೆ ಮಾಂಸವೆಂದರೆ ಮೊಟ್ಟೆ ಸಹ. ಹೀಗೆ ಆ ಪ್ರತಿಜ್ಞೆಯ ರಹಸ್ಯ ನನ್ನ ಮನಸ್ಸಿಗೆ ಬಂದ ಕೂಡಲೇ ನಾನು ಮೊಟ್ಟೆಗಳನ್ನು ತ್ಯಜಿಸಿದೆ. ಅದಕ್ಕೆ ಸಂಬಂಽಸಿದಂತೆ ಪ್ರಯೋಗಗಳನ್ನೂ ತ್ಯಜಿಸಿದೆ.
ಇಂಗ್ಲೆಂಡಿನಲ್ಲಿ ಆವರೆಗೆ ನಾನು ಅನುಸರಿಸಿದ ಪ್ರಯೋಗಗಳು, ಮಿತವ್ಯಯ ಮತ್ತು ಆರೋಗ್ಯ ದೃಷ್ಟಿಯಿಂದ ನಡೆಸಿದವಾಗಿದ್ದವು. ನಾನು ದಕ್ಷಿಣ ಆಫ್ರಿಕಾಕ್ಕೆ ಹೋಗುವವರೆಗೆ, ಕಾರ್ಮಿಕ ದೃಷ್ಟಿಯಿಂದ ಅವನ್ನು ರೂಪಿಸಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನನ್ನ ಪ್ರಯೋಗಗಳು ಇನ್ನೂ ಕಠಿಣವಾದುವು. ಅವುಗಳ ವಿಚಾರ ಮುಂದೆ. ಆದರೆ ಈ ಎಲ್ಲ ಪ್ರಯೋಗಗಳ ಬೀಜಾಂಕುರ, ಇಂಗ್ಲೆಂಡಿನಲ್ಲಿರುವಾಗಲೇ ಆಯಿತು. ಶಾಕಾಹಾರ ಪದ್ಧತಿ, ಇಂಗ್ಲೆಂಡಿನಲ್ಲಿ ಹೊಸ ಪದ್ಧತಿಯಾಗಿತ್ತು. ಅದು ನನಗೂ ಹೊಸದೇ ಆಗಿತ್ತು. ಏಕೆಂದರೆ ಈಗಾಗಲೇ ತಿಳಿಸಿರುವಂತೆ ಇಂಗ್ಲೆಂಡಿಗೆ ಹೋಗುವ ವೇಳೆಗೆ ನಾನು ಮಾಂಸಾಹಾರಕ್ಕೆ ಮನವೊಲಿದವನಾಗಿದ್ದೆ. ಅನಂತರ ಶಾಕಾಹಾರ ಉತ್ತಮವಾದುದೆಂಬುದು ನನ್ನ ಬುದ್ಧಿಗೆ ಒಪ್ಪಿಗೆಯಾಯಿತು.
ಮತಾಂತರಗೊಂಡವನ ಹೊಸ ಉತ್ಸಾಹದಿಂದ, ನಾನು ವಾಸವಾಗಿದ್ದ ಬೇಸ್ ವಾಟರ್ ಎಂಬ ಭಾಗದಲ್ಲಿ ಒಂದು ಶಾಕಾಹಾರಿ ಮಂಡಲವನ್ನು ಸ್ಥಾಪಿಸಲು ನಾನು ನಿಶ್ಚಯಿಸಿದೆ. ಅಲ್ಲಿ ವಾಸಿಸುತ್ತಿದ್ದ ಸರ್ ಎಡ್ರಿನ್ ಆರ್ನಾಲ್ಟ್‌ರನ್ನು ಅದರ ಉಪಾಧ್ಯಕ್ಷರಾಗಿರಲು ನಾನು ಆಹ್ವಾನಿಸಿದೆ. ಶಾಕಾಹಾರಿ ಎಂಬ ಪತ್ರಿಕೆಯ ಸಂಪಾದಕರಾಗಿದ್ದ ಡಾಕ್ಟರ್ ಓಲ್ಡ್ ಫೀಲ್ಡ್ ಮಂಡಳದ ಅಧ್ಯಕ್ಷರಾದರು. ನಾನೇ ಕಾರ್ಯದರ್ಶಿಯಾದೆ. ಮಂಡಲಿ ಕೆಲವು ಕಾಲ ಚೆನ್ನಾಗಿ ನಡೆಯಿತು. ಆದರೆ ಕೆಲವು ತಿಂಗಳೊಳಗಾಗಿ ಆದರ ಚಟುವಟಿಕೆಗಳು ಮುಕ್ತಾಯವಾದುವು. ಕ್ಲುಪ್ತ ಕಾಲದಲ್ಲಿ ಸ್ಥಳದಿಂದ ಸ್ಥಳಕ್ಕೆ ಬದಲಾಯಿಸುವ ನನ್ನ ನಿಯಮದಂತೆ ನಾನು ಆ ಭಾಗವನ್ನು ಬಿಟ್ಟು ಬೇರೆ ಕಡೆಗೆ ಬದಲಾಯಿಸಿದುದೇ ಇದಕ್ಕೆ ಕಾರಣ. ಆದರೆ ಈ ಅಲ್ಪಕಾಲದ ಮತ್ತು ಮಿತವಾದ ಅನುಭವ, ಸಂಸ್ಥೆಗಳನ್ನು ಕಟ್ಟುವುದರಲ್ಲಿಯೂ, ನನಗೆ ಸ್ವಲ್ಪ ಅನುಭವ ಕೊಟ್ಟಿತು.
ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಕುವೆಂಪು ನಗರದ ಎಂ -ಬ್ಲಾಕ್ ನಲ್ಲಿರುವ ಭಾರತ್ ಮಾತಾ ಉದ್ಯಾನವನವು ಕುವೆಂಪು ನಗರದ ಪ್ರಮುಖ…
ಮೈಸೂರಿನ ವಿಜಯನಗರ ಎರಡನೇ ಹಂತದ ದಿವ್ಯರೂಪ ಕಲ್ಯಾಣ ಮಂಟಪದ ಸಮೀಪ ಮೂರು ವಾರಗಳಿಂದ ದಿನದಲ್ಲಿ ಆರು ಗಂಟೆಗಳ ಕಾಲ ಪ್ರತಿ…
ಡಿಸೆಂಬರ್‌ನಲ್ಲಿ ವಜ್ರಮಹೋತ್ಸವ ; ಸಂಭ್ರಮಕ್ಕೆ ಸಿದ್ಧತೆ ಚಿರಂಜೀವಿ ಸಿ.ಹುಲ್ಲಹಳ್ಳಿ ಕರ್ನಾಟಕದ ನೆಲ, ಜಲ, ಭಾಷೆಯ ಏಳಿಗೆಗಾಗಿ ಕಾವ್ಯ, ಸಾಹಿತ್ಯ ಮತ್ತು…
ಡಾ. ಎಂ. ಡಿ. ಉಮೇಶ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬಳ್ಳಾರಿ ಸಿದ್ದಮ್ಮನವರು ೧೯೦೩ರಲ್ಲಿ ಬಸೆಟಪ್ಪ…
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…