Andolana originals

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ ಸಭೆಯಲ್ಲಿ ನನ್ನ ಬಾಯಿಂದ ಮಾತುಗಳೇ ಹೊರಡುತ್ತಿರಲಿಲ್ಲ. ಸಮಿತಿಯ ಸಭೆಗಳಲ್ಲಿ ಎಲ್ಲರೂ ತಮ್ಮ ತಮ್ಮ ಅಭಿ ಪ್ರಾಯಗಳನ್ನು ವ್ಯಕ್ತ ಪಡಿಸುತ್ತಿರುವಾಗ, ನಾನೊಬ್ಬನೇ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿರುವುದು ವಿಚಿತ್ರವಾಗಿತ್ತು. ನನ್ನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಶಬ್ದಗಳು ನನ್ನಲ್ಲಿ ಇರುತ್ತಿರಲಿಲ್ಲ.

ಈ ಮಧ್ಯೆ ಒಂದು ಗಂಭೀರ ವಿಷಯ ಸಮಿತಿಯಲ್ಲಿ ಚರ್ಚೆಗೆ ಬಂದಿತು. ‘ಆ ದಿನ ಸಭೆಗೆ ಹೋಗದಿರುವುದು ತಪ್ಪು. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸದಿರುವುದು ಹೇಡಿತನ’ ಎಂದು ನನಗೆ ತೋರಿತು. ಚರ್ಚೆ ಪ್ರಾರಂಭವಾದುದು ಹೀಗೆ. ಆ ಮಂಡಲಿಯ ಅಧ್ಯಕ್ಷರು ಮಿ. ಹಿಲ್ಸ್ ಎಂಬವರು. ಅವರು ಥೇಮ್ಸ್ ಕಬ್ಬಿಣದ ಕಾರ್ಖಾನೆಯ ಒಡೆಯರಾಗಿದ್ದರು. ಅವರು ನಿಷ್ಠುರ ನೀತಿವಾದಿಗಳಾಗಿದ್ದರು. ಆ ಶಾಕಾಹಾರಿ ಮಂಡಲಿ ನಡೆಯುತ್ತಿದ್ದುದು ಪೂರ್ಣವಾಗಿ ಅವರ ಆರ್ಥಿಕ ಸಹಾಯದಿಂದಲೇ ಎಂದು ಹೇಳಬಹುದು. ಸಮಿತಿಯ ಅನೇಕ ಸದಸ್ಯರು ಬಹುಮಟ್ಟಿಗೆ ಅವರ ಪೋಷಣೆಗೆ ಒಳಪಟ್ಟವರೇ ಆಗಿದ್ದರು. ಶಾಕಾಹಾರಕ್ಕಾಗಿ ಪ್ರಸಿದ್ಧರಾಗಿರುವ ಡಾಕ್ಟರ್ ಆಲಿನ್ಸನ್ ಸಹ ಸಮಿತಿಯ ಸದಸ್ಯರಾಗಿದ್ದರು. ಅವರು ಆಗತಾನೇ ಹೊಸದಾಗಿ ಪ್ರಾರಂಭವಾಗಿದ್ದ ಕೃತಕ ಸಂತಾನ ನಿರೋಧ ಚಳವಳಿ ಯನ್ನು ಒಪ್ಪಿ ಆ ವಿಧಾನಗಳನ್ನು ಕೂಲಿಗಾರರಿಗೆ ಬೋಽಸು ತ್ತಿದ್ದರು. ಸಂತಾನನಿರೋಧ ಕೃತಕೋಪಾಯಗಳು ಜನರ ನೀತಿಯನ್ನು ಮೂಲೋತ್ಪಾಟನೆ ಮಾಡುವುವೆಂದು ಮಿ. ಹಿಲ್ಸ್ ಭಾವಿಸಿದ್ದರು. ‘ಶಾಕಾಹಾರಿ ಮಂಡಲಿಯ ಉದ್ದೇಶ’ ಬರಿಯ ಆಹಾರದ ವಿಷಯ ಮಾತ್ರವಲ್ಲ, ಮನುಷ್ಯನ ನೈತಿಕ ಸುಧಾರಣೆ ಎಂಬುದು ಮಿ. ಹಿಲ್ಸ್ ಅಭಿಪ್ರಾಯವಾಗಿತ್ತು. ಡಾಕ್ಟರ್ ಆಲಿನ್ಸನ್‌ರನ್ನು ಮಂಡಲಿಯ ಸದಸ್ಯತ್ವದಿಂದ ತೆಗೆದುಹಾಕಬೇಕೆಂಬ ಒಂದು ಸೂಚನೆ ಸಮಿತಿಯ ಮುಂದೆ ಬಂತು. ಆ ಪ್ರಶ್ನೆಯಲ್ಲಿ ನನಗೆ ಬಹಳ ಅಭಿರುಚಿಯೂ, ಕುತೂಹಲವೂ ಇದ್ದಿತು. ಕೃತಕ ಗರ್ಭನಿರೋಧಕ ಕ್ರಮಗಳನ್ನು ಕುರಿತ ಡಾಕ್ಟರ್ ಆಲಿನ್ಸನ್‌ರ ಅಭಿಪ್ರಾಯಗಳು ಅಪಾಯಕರ ವೆಂದು ನಾನು ಭಾವಿಸಿದ್ದೆ. ನಿಷ್ಠುರ ನೀತಿ ಪ್ರಚಾರಕರಾದ ಮಿ. ಹಿಲ್ಸ್‌ರವರು ಆಲಿನ್ಸನ್‌ರ ಅಭಿಪ್ರಾಯಗಳನ್ನು ವಿರೋಽಸಿ ದುದು ಸರಿ ಎಂಬುದು ನನ್ನ ಮತವಾಗಿತ್ತು. ಮಿ. ಹಿಲ್ಸ್ ರಲ್ಲಿಯೂ ಅವರ ದಾತೃತ್ವದಲ್ಲಿಯೂ ನನಗೆ ತುಂಬಾ ಗೌರವವಿದ್ದಿತು. ಆದರೆ ನಿಷ್ಠುರವಾದ ನೀತಿಪ್ರಚಾರ, ಶಾಕಾಹಾರಿ ಮಂಡಲಿಯ ಉದ್ದೇಶಗಳಲ್ಲಿ ಒಂದು ಆಗಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದ ಮಾತ್ರಕ್ಕೆ ಅವರನ್ನು ಶಾಕಾಹಾರಿ ಮಂಡಲಿಯ ಸದಸ್ಯತ್ವದಿಂದ ತೆಗೆದುಹಾಕುವುದು ನ್ಯಾಯ ವಲ್ಲವೆಂಬುದು ನನ್ನ ಅಭಿಪ್ರಾಯವಾಗಿತ್ತು. ನನ್ನ ಅಭಿಪ್ರಾಯ ಹೀಗಿತ್ತು. ಯಾವ ಶಾಕಾಹಾರಿಯಾದರೂ ಸರಿಯೆ, ಇತರ ನೀತಿಗಳನ್ನು ಕುರಿತು ಅವನ ಅಭಿಪ್ರಾಯ ಏನೇ ಇರಲಿ, ಶಾಕಾಹಾರಿ ಮಂಡಲಿಯ ಸದಸ್ಯನಾಗಿರಬಹುದು.

ಸಮಿತಿಯಲ್ಲಿ ನನ್ನ ಅಭಿಪ್ರಾಯವನ್ನು ಒಪ್ಪಿದ ಇತರ ಸದಸ್ಯರೂ ಇದ್ದರು. ಆದರೆ ನನ್ನ ಸ್ವಂತ ಅಭಿಪ್ರಾಯವನ್ನು ನಾನೇ ವ್ಯಕ್ತಪಡಿಸುವುದು ಸರಿ ಎಂದು ನನಗೆ ತೋರಿತು. ವ್ಯಕ್ತಪಡಿಸುವುದು ಹೇಗೆ ಎಂಬುದು ಪ್ರಶ್ನೆಯಾಯಿತು. ಸಭೆಯಲ್ಲಿ ಮಾತನಾಡಲು ನನಗೆ ಧೈರ್ಯವಿರಲಿಲ್ಲ. ಆದುದರಿಂದ ನಾನು ನನ್ನ ಭಾಷಣವನ್ನು ಬರೆದು ಇಟ್ಟುಕೊಂಡೆ. ಜೇಬಿನಲ್ಲಿ ಆ ಕಾಗದವನ್ನು ಇಟ್ಟು ಕೊಂಡು ನಾನು ಸಭೆಗೆ ಹೋದೆ. ನನಗೆ ಜ್ಞಾಪಕವಿರುವ ಮಟ್ಟಿಗೆ ಅದನ್ನು ಓದುವುದಕ್ಕೆ ಸಹ ನನಗೆ ಧೈರ್ಯವಾಗಲಿಲ್ಲ. ಅಧ್ಯಕ್ಷರು ಅದನ್ನು ಯಾರಿಂದಲೋ ಓದಿಸಿದರು. ಡಾಕ್ಟರ್ ಆಲಿನ್ಸನ್‌ರಿಗೆ ಸೋಲಾಯಿತು. ಹೀಗೆ ನನ್ನ ಮೊದಲನೆಯ ಹೋರಾಟ ದಲ್ಲಿಯೆ, ನಾನು ಸೋಲುವ ಪಕ್ಷಕ್ಕೆ ಸೇರು ವವನಾದೆ. ನಾನು ನ್ಯಾಯ ಪಕ್ಷಕ್ಕೆ ಹೋರಾಡಿದೆ ಎಂಬ ಭಾವನೆಯಿಂದ ನನಗೆ ಸ್ವಲ್ಪ ಸಮಾಧಾನವಾಯಿತು. ಈ ಸಂಗತಿ ನಡೆದ ನಂತರ, ನಾನು ಸಮಿತಿಗೆ ರಾಜೀನಾಮೆ ಕೊಟ್ಟೆನೆಂದು ಅಲ್ಪ ಸ್ವಲ್ಪ ನೆನಪಿದೆ.

ಈ ಮುಖಹೇಡಿತನ, ನಾನು ಇಂಗ್ಲೆಂಡಿನಲ್ಲಿರುವವ ರೆಗೂ ಇದ್ದೇ ಇದ್ದಿತು. ಯಾರನ್ನಾದರೂ ಸ್ವಾಭಾವಿಕವಾಗಿ ನೋಡುವುದಕ್ಕೆ ಹೋದಾಗ ಅಲ್ಲಿ ನಾಲ್ಕಾರು ಜನರಿದ್ದರೆ ನನ್ನ ಬಾಯಿಯಿಂದ ಮಾತೇ ಹೊರಡುತ್ತಿರಲಿಲ್ಲ. ನಾನು ಒಂದು ಸಲ, ಮಜುಂದಾರರೊಡನೆ ವೆಂಟ ನಾರ್ ಎಂಬಲ್ಲಿಗೆ ಹೋದೆ. ಅಲ್ಲಿ ನಾವು ಒಂದು ಶಾಕಾ ಹಾರಿ ಕುಟುಂಬದಲ್ಲಿ ಇಳಿದುಕೊಂಡೆವು. ಎಥಿಕ್ಸ್ ಆಫ್ ಡಯಟ್ (ಆಹಾರ ನೀತಿ) ಎಂಬ ಪುಸ್ತಕವನ್ನು ಬರೆದ ಹೋವರ್ಡ್ ಸಹ ಈ ಕ್ಷೇತ್ರದಲ್ಲಿ ಇದ್ದರು. ಅವರನ್ನು ನಾವು ಭೇಟಿಯಾದೆವು. ಶಾಕಾಹಾರ ಪ್ರಚಾರದ ಒಂದು ಸಭೆಯಲ್ಲಿ ನಾನು ಭಾಷಣ ಮಾಡಬೇಕೆಂದು ಅವರು ಆಹ್ವಾನಿಸಿದರು. ಭಾಷಣವನ್ನು ಬರೆದುಕೊಂಡು ಹೋಗಿ ಓದುವುದು ತಪ್ಪಲ್ಲ ಎಂದು ನಾನು ವಿಚಾರಿಸಿ ತಿಳಿದು ಕೊಂಡಿದ್ದೆ. ಅನೇಕ ಭಾಷಣಕಾರರು ತಮ್ಮ ಭಾಷಣ ಸುಸಂಗತವಾಗಿಯೂ, ಸೂಕ್ಷ ವಾಗಿಯೂ ಇರುವುದಕ್ಕಾಗಿ, ಹಾಗೆ ಮಾಡುತ್ತಿದ್ದರೆಂಬುದು ನನಗೆ ಗೊತ್ತಿತ್ತು. ಅಶುಭಾಷಣ ಮಾಡುವುದಂತೂ ನನ್ನಿಂದ ಸಾಧ್ಯವೇ ಇರಲಿಲ್ಲ. ಆದುದರಿಂದ ನಾನು ನನ್ನ ಭಾಷಣವನ್ನು ಬರೆದುಕೊಂಡಿದ್ದೆ. ಅದನ್ನು ಓದಬೇಕೆಂದು ನಾನು ಸಭೆಯಲ್ಲಿ ಎದ್ದು ನಿಂತೆ. ಆದರೆ ಓದಲಾರದೆ ಹೋದೆ. ನನ್ನ ಭಾಷಣ ಒಂದು ಪುಟದಷ್ಟು ಮಾತ್ರ ಇತ್ತು. ಆದರೂ ನನ್ನ ಕಣ್ಣು ಮಂಜಾಯಿತು.
ನನಗೆ ನಡುಕ ಬಂತು. ಮಜುಂದಾರರು ನನಗಾಗಿ ಅದನ್ನು ತಾವೇ ಓದಬೇಕಾಯಿತು. ಅವರ ಸ್ವಂತ ಭಾಷಣ ಸೊಗಸಾಗಿತ್ತು. ಅದನ್ನು ಕೇಳಿ ಶೋತೃಗಳು ಕರತಾಡನ ಮಾಡಿದರು. ನನಗೆ ನಾಚಿಕೆಯಾಯಿತು. ನನ್ನ ಅಶಕ್ತಿ ಗಾಗಿ ನನ್ನ ಹೃದಯ ದುಃಖದಿಂದ ತುಂಬಿತು. ನಾನು ಕೊನೆಯ ಸಲ ಇಂಗ್ಲೆಂಡಿನಲ್ಲಿ ಬಹಿರಂಗ ಭಾಷಣ ಮಾಡಲು ಪ್ರಯತ್ನಿಸಿದುದು, ಆ ದೇಶವನ್ನು ಬಿಟ್ಟು ಭಾರತಕ್ಕೆ ಹೊರಟಾಗ, ಆ ಪ್ರಯತ್ನವೂ ಹಾಸ್ಯಾಸ್ಪದವಾಗಿ ನನ್ನ ಅವಮಾನದಲ್ಲಿಯೇ ಕೊನೆಗೊಂಡಿತು. ನಾನು, ಈ ಹಿಂದೆಯೇ ಹೇಳಿರುವ ಹಾಲ್ಬಾರ್ ಹೋಟಲಿಗೆ, ನನ್ನ ಶಾಕಾಹಾರಿ ಮಿತ್ರರನ್ನು ಭೋಜನಕ್ಕೆ ಆಹ್ವಾನಿಸಿದ್ದೆ. ನಾನು ಹೀಗೆ ಯೋಚಿಸಿದೆ. ಶಾಕಾಹಾರಿ ಫಲಾಹಾರ ಮಂದಿರದಲ್ಲಂತೂ ಶಾಕಾಹಾರ ಭೋಜನ ದೊರಕಿಯೇ ದೊರಕುತ್ತದೆ. ಆದರೆ ಮಾಂಸಾಹಾರ ಭೋಜನಶಾಲೆಯಲ್ಲಿ ಸಹ ಏಕೆ ಶಾಕಾಹಾರದ ಊಟ ದೊರಕಬಾರದು. ಹಾಲ್ಬಾರ್ ಫಲಾಹಾರ ಮಂದಿರದ ವ್ಯವಸ್ಥಾಪಕರಿಗೆ, ಶುದ್ಧ ಶಾಕಾಹಾರ ಭೋಜನವನ್ನೇ ಒದಗಿಸಬೇಕೆಂದು ಗೊತ್ತುಮಾಡಿದ್ದೆ. ಶಾಕಾಹಾರಿಗಳು ಈ ಹೊಸ ಪ್ರಯೋಗವನ್ನು ಆನಂದದಿಂದ ಸ್ವಾಗತಿಸಿದರು. ಎಲ್ಲ ಊಟಗಳ ಏರ್ಪಾಡುಗಳೂ ಭೋಗ ಮತ್ತು ಸಂತೋಷ ಕೂಟಗಳೇ. ಆದರೆ ಪಾಶ್ಚಾತ್ಯರು ಅದನ್ನೇ ಒಂದು ಕಲೆಯನ್ನಾಗಿ ಬೆಳೆಸಿದ್ದಾರೆ. ಅವು ಸಂಭ್ರಮದಿಂದಲೂ ಅಟ್ಟಹಾಸದಿಂದಲೂ ಆಚರಿಸಲ್ಪಡುತ್ತವೆ. ಅಲ್ಲಿ ಭಾಷಣಗಳೂ ಆಗುತ್ತವೆ. ನಾನು ಮಿತ್ರರಿಗಾಗಿ ಏರ್ಪಡಿಸಿದ್ದ ಆ ಸಣ್ಣ ಭೋಜನ ಕೂಟದಲ್ಲಿಯೂ, ಈ ಆಡಂಬರಗಳೆಲ್ಲ ಇದ್ದವು. ಭಾಷಣಗಳೂ ಆದವು. ಭಾಷಣ ಮಾಡಲು ನನ್ನ ಸರದಿ ಬಂದಾಗ ನಾನು ಎದ್ದು ನಿಂತುಕೊಂಡೆ. ನಾಲ್ಕಾರು ವಾಕ್ಯಗಳ ಒಂದು ಭಾಷಣವನ್ನು ನಾನು ಬಹಳ ಎಚ್ಚರಿಕೆಯಿಂದ ಯೋಚಿಸಿ ಸಿದ್ದ ಮಾಡಿಟ್ಟುಕೊಂಡಿದ್ದೆ. ಆದರೆ ಮೊದಲನೆಯ ವಾಕ್ಯವನ್ನು ಉಚ್ಚರಿಸಿದ ಮೇಲೆ ಮುಂದಕ್ಕೆ ಮಾತು ಹೊರಡಲೇ ಇಲ್ಲ. ಕಾಮನ್ಸ್ ಸಭೆಯಲ್ಲಿ ಆಡಿಸನ್‌ನರು ಮಾಡಿದ ಪ್ರಥಮ ಭಾಷಣದ ಕಥೆಯನ್ನು ಕೇಳಿದ್ದೆ. ಆಡಿಸನ್ನರು ಭಾಷಣವನ್ನು ಪ್ರಾರಂಭಿಸಿ ಮೂರು ಸಲ ‘ನನಗೆ ತೋರುವುದೇನೆಂದರೆ, ನನಗೆ ತೋರುವುದೇನೆಂದರೆ, ನನಗೆ ತೋರುವುದೇನೆಂದರೆ’ ಎಂದು ಹೇಳಿ ಮುಂದೆ ಮಾತು ಹೊರಡದೆ ನಿಲ್ಲಿಸಿಬಿಟ್ಟರು.

ಇಂಗ್ಲಿಷ್‌ನಲ್ಲಿ ‘ಕನ್‌ಸೀವ್’ ಎಂಬ ಪದಕ್ಕೆ ತೋರು ಎಂದೂ, ಗರ್ಭಧಾರಣೆ ಮಾಡು ಎಂದೂ ಅರ್ಥವಾಗುತ್ತದೆ. ಆಗ ಒಬ್ಬ ವಿನೋದಗಾರ ಎದ್ದು ನಿಂತು ‘ಈ ಗೃಹಸ್ಥ ಮೂರು ಸಲ ಗರ್ಭಧಾರಣೆ ಮಾಡಿದ, ಆದರೆ ಏನನ್ನೂ ಹೆರಲಿಲ್ಲ’ ಎಂದು ಹೇಳಿದ. ಈ ಸಂಗತಿಯನ್ನೇ ಆಧಾರವಾಗಿಟ್ಟು ಕೊಂಡು ನಾನು ಒಂದು ವಿನೋದವಾದ ಭಾಷಣವನ್ನು ಮಾಡಬೇಕೆಂದು ಯೋಚಿಸಿಕೊಂಡಿದ್ದೆ. ಆದುದರಿಂದ ನಾನು ನನ್ನ ಭಾಷಣವನ್ನು ಅದರಿಂದಲೇ ಪ್ರಾರಂಭಿಸಿದೆ. ಆದರೆ ನನ್ನ ಮಾತು ಅಲ್ಲಿಗೆ ನಿಂತಿತು. ನನ್ನ ಜ್ಞಾಪಕ ಶಕ್ತಿ ಪೂರ್ಣವಾಗಿ ಮರೆಯಾಯಿತು. ವಿನೋದದ ಭಾಷಣವನ್ನು ಮಾಡುವುದಕ್ಕೆ ಹೋಗಿ ನಾನೇ ಹಾಸ್ಯ ಕ್ಕೀಡಾದೆ. ನಾನು ಇದ್ದಕ್ಕಿದ್ದಂತೆ, ‘ಮಿತ್ರರೇ, ನೀವು ನನ್ನ ಆಹ್ವಾನವನ್ನು ಅಂಗೀಕರಿಸಿ ಬಂದುದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ’ ಎಂದು ಹೇಳಿ ತಪ್ಪನೆ ಕುಳಿತುಬಿಟ್ಟೆನು.

ನಾನು ದಕ್ಷಿಣ ಆಫ್ರಿಕಾಕ್ಕೆ ಹೋದಮೇಲೆಯೇ, ಈ ಮುಖಹೇಡಿತನ ದೂರವಾಯಿತು. ಆದರೂ ನಾನು ಅದನ್ನು ಪೂರ್ಣವಾಗಿ ಜಯಿಸಲಿಲ್ಲ. ಆಶುಭಾಷಣ ಮಾಡುವುದು ನನ್ನಿಂದ ಸಾಧ್ಯವೇ ಇರಲಿಲ್ಲ. ಅಪರಿಚಿತರ ಎದುರಿಗೆ ಭಾಷಣ ಮಾಡಲು ನಾನು ಹಿಂದೆಗೆಯುತ್ತಿದ್ದೆ. ಸಾಧ್ಯವಾದೆಡೆಗಳಲ್ಲೆಲ್ಲ ಭಾಷಣ ಮಾಡುವುದಕ್ಕೆ ತಪ್ಪಿಸಿಕೊಳ್ಳುತ್ತಿದ್ದೆ. ಇಂದೂ ಸಹ ಸ್ನೇಹಿತರೊಂದಿಗೆ ಸುಮ್ಮನೆ ಮಾತುಕತೆಯಾಡುತ್ತಾ ಕಾಲ ಕಳೆಯಲು ನನಗೆ ಇಷ್ಟವಿಲ್ಲ. ಹಾಗೆ ಮಾಡಲು ನನ್ನಿಂದ ಸಾಧ್ಯವೇ ಇಲ್ಲ.

ಆಗಾಗ್ಗೆ ನನ್ನನ್ನು ಅಪಹಾಸ್ಯಕ್ಕೆ ಈಡುಮಾಡುವುದರ ಹೊರತು, ನನ್ನ ಈ ಸ್ವಾಭಾವಿಕ ಲಜ್ಜೆಯಿಂದ ನನಗೆ ಮತ್ತಾವ ಹಾನಿಯೂ ಆಗಲಿಲ್ಲವೆಂದು ಹೇಳಬೇಕು. ಅದರ ಬದಲು ಅದರಿಂದ ನನಗೆ ಬಹಳ ಲಾಭವೇ ಆಗಿದೆ. ಮಾತನಾಡು ವುದರಲ್ಲಿ ನನ್ನ ಸಂಕೋಚ ಪ್ರಕೃತಿ ಪ್ರಾರಂಭದಲ್ಲಿ ನನಗೆ ಸ್ವಲ್ಪ ದುಃಖವನ್ನು ಉಂಟುಮಾಡಿದರೂ, ಈಗ ಅದೇ ಸಂತೋಷವಾಗಿದೆ. ಆದರ ಅತ್ಯಂತ ದೊಡ್ಡ ಲಾಭ ಅದು ನನಗೆ, ಮಾತಿನಲ್ಲಿ ಮಿತಿಯನ್ನು ಕಲಿಸಿರುವುದು. ನನ್ನ ವಿಚಾರಗಳನ್ನು ಹತೋಟಿಯಲ್ಲಿಡುವ ಅಭ್ಯಾಸ ನನಗೆ ಸ್ವಾಭಾವಿಕವಾಗಿಯೇ ಉಂಟಾಗಿದೆ. ನಾನು ಚೆನ್ನಾಗಿ ಆಲೋಚನೆ ಮಾಡದೆ ಒಂದು ಮಾತನ್ನೂ ಆಡಲಿಲ್ಲ, ಬರೆ ಯಲಿಲ್ಲ ಎಂಬ ಪ್ರಶಸ್ತಿಪತ್ರವನ್ನು ನನಗೆ ನಾನೇ ಈಗ ಕೊಟ್ಟುಕೊಳ್ಳಬಲ್ಲೆ. ನಾನು ಹೇಳಿದುದು, ಬರೆದುದು ಇದಾ ವುದಕ್ಕಾಗಿಯೂ ನಾನು ಪಶ್ಚಾತ್ತಾಪ ಪಡಬೇಕಾದ ಕಾರಣ ಉಂಟಾದುದು ನನಗೆ ಜ್ಞಾಪಕವಿಲ್ಲ. ಇದರಿಂದ ನನಗೆ ಅನೇಕ ಅನಿಷ್ಟಗಳು ತಪ್ಪಿದುವಲ್ಲ. ಕಾಲವೂ ಉಳಿಯಿತು.

ಸತ್ಯದ ಆರಾಧಕ, ಮೌನವನ್ನು ಅವಲಂಬಿಸುವುದು ಅವಶ್ಯಕವೆಂಬುದು ನನ್ನ ಅನುಭವ. ತಿಳಿದೋ ತಿಳಿಯದೆಯೋ ಅತಿಶಯೋಕ್ತಿ, ಸತ್ಯವನ್ನು ಮುಚ್ಚಿಡುವುದು, ಬದಲಾಯಿಸುವುದು ಮನುಷ್ಯನ ಸ್ವಭಾವ. ಇದನ್ನು ಜಯಿಸಬೇಕಾದರೆ ಮೌನ ಅವಶ್ಯಕ. ಮಿತಭಾಷಿಯು ಯಾವಾಗಲೂ ತನ್ನ ಮಾತಿನಲ್ಲಿ ಎಚ್ಚರಿಕೆಯುಳ್ಳವನಾಗಿರುತ್ತಾನೆ. ಅವನು ತನ್ನ ಪ್ರತಿಯೊಂದು ಮಾತನ್ನೂ ತೂಕಮಾಡಿ ಆಡುತ್ತಾನೆ. ಮಾತನಾಡಲು ಜನರು ತುಂಬಾ ಉತ್ಸುಕರಾಗಿರುವುದು ನಮ್ಮ ಕಣ್ಣಿಗೆ ಬೀಳುತ್ತಿದೆ. ಯಾವ ಸಭೆಯ ಅಧ್ಯಕ್ಷರನ್ನೂ ಮಾತನಾಡಲು ನಮಗೆ ಸ್ವಲ್ಪ ಅವಕಾಶ ಕೊಡಿ ಎಂದು ಪೀಡಿಸುವ ಚೀಟಿಗಳು ಮುತ್ತುತ್ತವೆ. ಹಾಗೆ ಅವಕಾಶ ಸಿಕ್ಕಿದ ಕೂಡಲೇ ಭಾಷಣಕಾರ ತನಗೆ ದೊರೆತ ಕಾಲವನ್ನು ಮೀರಿ ಇನ್ನಷ್ಟು ಕಾಲವನ್ನು ಬೇಡುತ್ತಾನೆ. ಅಪ್ಪಣೆಯೆ ಇಲ್ಲದೆ ಮಾತುಗಳನ್ನು ಮುಂದುವರಿಸುತ್ತಲೇ ಇರುತ್ತಾನೆ. ಭಾಷಣಗಳಿಂದೆಲ್ಲ ಯಾರಿಗೂ ಏನೂ ಪ್ರಯೋಜನವಿಲ್ಲ. ಇದು ಸುಮ್ಮನೇ ಕಾಲಹರಣ. ನಿಜವಾಗಿ ನನ್ನ ಲಜ್ಜೆ ನನ್ನ ಗುರಾಣಿಯಾಗಿ ನನ್ನನ್ನು ರಕ್ಷಿಸಿದೆ.

 

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

33 mins ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

2 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

17 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

20 hours ago

ಶೂಟೌಟ್‌ ಪ್ರಕರಣ ; ಮೃತರು ಬೇಟೆಗಾರರು ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ

ಹನೂರು : ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​​ ಸಿಗುತ್ತಿದೆ. ದನ ಹುಡುಕಲು ಹೋಗಿದ್ದವರ…

20 hours ago