Andolana originals

ಡಾ.ರಾಮಕೃಷ್ಣಪ್ಪ ಮರಳಿ ಮಣ್ಣಿಗೆ ಬಂದ ಹಸಿರುವಾಸಿ

ಜಿ.ಕೃಷ್ಣಪ್ರಸಾದ್‌ 

‘ಯಾರೋ ಬಿಲ್ಡರ್ಸ್ ೩೦೦ ಕೋಟಿ ರೂ. ಹಣ ಕೊಡುತ್ತಾರೆ ಎಂದು ಕಂಟೋನ್ಮೆಂಟ್ ರೈಲು ನಿಲ್ದಾಣದ ಹಿಂಭಾಗದ ಜಾಗ ಕೊಡುವ ಸಲುವಾಗಿ, ಅಲ್ಲಿ ಬೆಳೆದಿರುವ ನೂರಾರು ವರ್ಷ ವಯಸ್ಸಿನ ೩೬೮ ಮರಗಳನ್ನು ಕಡಿಯಲು ಅನುಮತಿ ಕೊಡೋದು ಯಾವ ನ್ಯಾಯ. ನಡೀರಿ! ನಾನೂ ಬರ್ತೀನಿ. ಹೋರಾಟ ಮಾಡೋಣ’ ಎಂದು ತಲೆಯ ಮೇಲಿನ ಟೋಪಿ ತೆಗೆದು ಡಾ.ರಾಮಕೃಷ್ಣಪ್ಪ ಗುಡುಗಿದರು. ತೋಟದಲ್ಲಿ ಸುತ್ತಾಡುತ್ತಾ ಬಿಸಿಲಿಗೆ ಕೆಂಪಾಗಿದ್ದ ಅವರ ಮುಖ ಇನ್ನಷ್ಟು ಕೆಂಪಾಯಿತು.

‘ಆರೋಗ್ಯ ಭಾಗ್ಯ ಮತ್ತೆಲ್ಲಾ ಭಾಗ್ಯಗಳಿಗಿಂತ ಬಹು ದೊಡ್ಡ ಭಾಗ್ಯ. ಆರೋಗ್ಯವೇ ಇಲ್ಲದ ಮೇಲೆ ಮನುಷ್ಯನಿಗೆ ಬೇರೆಲ್ಲಾ ಭಾಗ್ಯಗಳನ್ನು ಕಟ್ಟಿಕೊಂಡು ಏನಾಗಬೇಕಿದೆ? ಮೊದಲು ಹಣ್ಣು ಹಂಪಲು ಬೆಳೆಸೋದನ್ನು ಮಕ್ಕಳಿಗೆ ಕಲಿಸೋಣ’ ಎಂದು ತೋಟ ನೋಡಲು ಬಂದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಗೆ ಡಾ. ರಾಮಕೃಷ್ಣಪ್ಪ ಕಿವಿಮಾತು ಹೇಳಿದರು.

ಕೃಷಿ ಕುಟುಂಬದಿಂದ ಬಂದ ಡಾ.ಕೆ.ರಾಮಕೃಷ್ಣಪ್ಪ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನವರು. ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದವರು. ಇವರು ತೋಟಗಾರಿಕೆ ಇಲಾಖೆಯಲ್ಲಿದ್ದಾಗ ತಂದ ಬದಲಾವಣೆಗಳು, ರೂಪಿಸಿದ ಯೋಜನೆಗಳು ಒಂದೆರೆಡಲ್ಲ. ಬನ್ನೇರುಘಟ್ಟ ರಸ್ತೆಯ ಹುಳಿಮಾವು ಸಮೀಪದ ‘ಜೈವಿಕ ಕೇಂದ್ರವನ್ನು’ ಕಟ್ಟಿ ಬೆಳೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಅಭಿವೃದ್ಧಿಪಡಿಸಿದರು. ಸಾವಯವ ಕೃಷಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ‘ಜೈವಿಕ್ ಕೃಷಿಕ್ ಸೊಸೈಟಿ’ಯನ್ನು ಕಟ್ಟಿ ಬೆಳೆಸಿದರು. ಬಿ.ಟಿ. ಬದನೆಯ ಮೂಲಕ ಕುಲಾಂತರಿ ತಳಿಗಳನ್ನು ರೈತರ ಹೊಲಕ್ಕೆ ನುಗ್ಗಿಸುವ ಕಂಪೆನಿಗಳ ಪ್ರಯತ್ನವನ್ನು ತಡೆಯುವಲ್ಲಿ ಇವರು ವಹಿಸಿದ ಪಾತ್ರ ಹಿರಿದು. ಇವರು ಕೊಟ್ಟ ವರದಿಯ ಆಧಾರದ ಮೇಲೆ ಕರ್ನಾಟಕ ಸರ್ಕಾರ ಬಿ.ಟಿ. ಬದನೆಯ ಕ್ಷೇತ್ರ ಪ್ರಯೋಗವನ್ನು ನಿಷೇಧಿಸಿತು. ಸಾವಯವ ಕೃಷಿ ನೀತಿಯನ್ನು ಪರಿಷ್ಕರಿಸಲು ಕೃಷಿ ಮಂತ್ರಿ ಕೇಳಿಕೊಂಡಿದ್ದು ಡಾ.ರಾಮಕೃಷ್ಣಪ್ಪನವರನ್ನೇ.

೨೦೧೪ರಲ್ಲಿ ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಡಾ.ರಾಮಕೃಷ್ಣಪ್ಪ ಅಪ್ಪಿಕೊಂಡದ್ದು ಕೃಷಿಯನ್ನು. ಮೈಸೂರಿನ ಹೊರವಲಯದ, ಬೆಳಗೊಳ ಗ್ರಾಮದ ಬಳಿ ‘ಬೆಳವಲ ತೋಟ’ವನ್ನು ಕಟ್ಟಿ, ನೂರಾರು ರೈತರಿಗೆ, ಮುಖ್ಯವಾಗಿ ಯುವ ಜನಾಂಗಕ್ಕೆ ಸಾವಯವ ಕೃಷಿಯ ಬಗ್ಗೆ ಪ್ರೀತಿ ಮೂಡಿಸುತ್ತಿದ್ದಾರೆ. ಎಂಟು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಬೆಳವಲ ತೋಟದಲ್ಲಿ ಸಸ್ಯವೈವಿಧ್ಯವೇ ಮನೆ ಮಾಡಿದೆ. ೧೦೦ಕ್ಕೂ ಹೆಚ್ಚಿನ ವೈವಿಧ್ಯಮಯ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೆ, ನೈಸರ್ಗಿಕವಾಗಿ ಗಿಡಗಳನ್ನು ಬೆಳೆಸಿರುವುದು ಬೆಳವಲ ತೋಟದ ಹೆಚ್ಚುಗಾರಿಕೆ. ಕಡಿಮೆ ನೀರು, ನೆಲ ಮುಚ್ಚಿಗೆ, ಹಣ್ಣಿನ ಗಿಡಗಳ ನಡುವೆ ಸೊಪ್ಪು, ತರಕಾರಿ ಬೆಳೆಸುವುದು, ವರ್ಷಪೂರ ಹೊಲದಲ್ಲಿ ಒಂದಲ್ಲ ಒಂದು ಬೆಳೆ ಇರುವಂತೆ ನಿರ್ವಹಣೆ ಮಾಡುತ್ತಾರೆ. ಹಣ್ಣಿನ ಗಿಡಗಳು ,ಹಸಿರೆಲೆ ಗೊಬ್ಬರದ ಗಿಡಗಳು ಮತ್ತು ಕಾಡುಗಿಡಗಳನ್ನು ಜೊತೆಗೂಡಿಸಿ ’ ಮರ ಆಧಾರಿತ ತೋಟ’ ನಿರ್ಮಿಸಿದ್ದಾರೆ.

ನಿಸರ್ಗದ ಜೊತೆ ಕೃಷಿ ಮಾಡುವುದು ಖುಷಿಯ ಕೆಲಸ; ಕೂಲಿ ಕೆಲಸವಲ್ಲ. ಬೆಳವಲ ತೋಟದಲ್ಲಿ, ಸಾವಯವ ಕೃಷಿಗೆ ಅಂಬೆಗಾಲಿಡುತ್ತಿ ರುವ ಹೊಸ ತಲೆಮಾರಿನ ರೈತರಿಗೆ ಪಾಠ ಹೇಳಿ ಕೊಡಲಾಗುತ್ತದೆ. ಈ ತರಬೇತಿ ನಾಲ್ಕು ಗೋಡೆಗಳ ನಡುವಿನ ಪುಸ್ತಕದ ಬದನೆ ಕಾಯಿಯಲ್ಲ. ಆಸಕ್ತರು ತೋಟದಲ್ಲಿ ತಂಗಿದ್ದು ನಿಸರ್ಗವನ್ನು ಅರ್ಥ ಮಾಡಿಕೊಳ್ಳಬೇಕು; ವಿಷಮುಕ್ತವಾಗಿ ಕೃಷಿ ಮಾಡುವುದನ್ನು ಕಲಿಯಬೇಕು. ಡಾ.ರಾಮಕೃಷ್ಣರ ಮಾರ್ಗದರ್ಶನದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಹಲವಾರು ರೈತರು ಸಾವಯವ ತೋಟ ಕಟ್ಟಿದ್ದಾರೆ. ‘ಡಾ.ರಾಮಕೃಷ್ಣಪ್ಪನವರ ಒತ್ತಾಸೆಯೇ ನಾನು ಸಾವಯವ ಕೃಷಿಯತ್ತ ಮುಖ ಮಾಡಲು ಮೂಲ ಪ್ರೇರಣೆ’ ಎಂದು ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ನೆನೆಯುತ್ತಾರೆ.

‘ಯುವ ಪೀಳಿಗೆ ಮರಳಿ ಮಣ್ಣಿಗೆ ಬಾರದ ಹೊರತು, ಕೃಷಿಗೆ ಭವಿಷ್ಯವಿಲ್ಲ’ ಎಂದು ನಂಬಿರುವ ಡಾ.ರಾಮಕೃಷ್ಣಪ್ಪ ತಮ್ಮ ತೋಟವನ್ನೇ ಸಾವಯವ ಕೃಷಿ ಬಗ್ಗೆ ಒಲವುಳ್ಳ ಪ್ರೀತಿಯ ಯುವಕ, ಯುವತಿಯರಿಗೆ ತೆರೆದಿಟ್ಟಿದ್ದಾರೆ. ಹತ್ತಾರು ಕಾಲೇಜುಗಳ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ತೋಟಕ್ಕೆ ಬಂದು ಕೆಲಸ ಮಾಡುತ್ತಾರೆ. ಬೀಜ ಬಿತ್ತುವುದರಿಂದ ಹಿಡಿದು ಕೊಯ್ಲಿನವರೆಗೆ ಮಣ್ಣು ಮುಟ್ಟಿ ಕೆಲಸ ಮಾಡುತ್ತಾರೆ. ತಾವು ಬೆಳೆದ ಪದಾರ್ಥಗಳನ್ನು ಸಾವಯವ ಸಂತೆಗಳಿಗೆ ಕೊಂಡೊಯ್ದು, ಮಾರಾಟ ಮಾಡುತ್ತಾರೆ. ಇದರಿಂದ ಬರುವ ಲಾಭದ ಹಣ ಅವರ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗುತ್ತದೆ. ‘ಕಾಲೇಜಿನಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಹತ್ತು ಪಟ್ಟು ಇಲ್ಲಿ ಕಲಿತಿದ್ದೇವೆ. ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ , ಮಾರಾಟದ ಕಲೆ ಕರಗತವಾಗಿದೆ’ ಎನ್ನುತ್ತಾರೆ ಬೆಳವಲದ ಹಸಿರು ವಿದ್ಯಾರ್ಥಿ ಮದನ್. ಎಂಎಸ್ಸಿ (ತೋಟಗಾರಿಕೆ) ಪದವಿಯಲ್ಲಿ ಚಿನ್ನದ ಪದಕ ಪಡೆದ ಲಾವಣ್ಯ, ಪರಿಸರ ಪೂರಕ ಕೃಷಿ ಕಲಿಯಲು ಬೆಳವಲ ತೋಟದಲ್ಲಿ ನೆಲೆಯೂರಿದ್ದಾರೆ.

ಸಂಪರ್ಕ: ಮೊ. ೯೬೨೦೯ ೯೯೨೦೩

” ೭೨ ವಸಂತಗಳನ್ನು ಕಂಡಿರುವ ಡಾ.ರಾಮಕೃಷ್ಣಪ್ಪನವರ ದಣಿವರಿಯದ ಕೃಷಿ ಚಟುವಟಿಕೆಗಳಿಗೆ ಒತ್ತಾಸೆಯಾಗಿ ನಿಂತವರು ಮಡದಿ ಮಂಜುಳಾ. ಸ್ನಾತಕೋತ್ತರ ಪದವೀಧರೆಯಾದರೂ, ಮಣ್ಣು ಮುಟ್ಟಿ ಕೃಷಿ ಮಾಡುತ್ತಾ, ದನಕರುಗಳ ಆರೈಕೆ ಮಾಡುತ್ತಾ ಬೆಳವಲ ಫಾರಂಗೆ ಜೀವ ತುಂಬುತ್ತಿದ್ದಾರೆ. ಮಗಳು ಶೃತಿ ಮತ್ತು ಅಳಿಯ ಜರೇಮಿ ಹೆಸರಾಂತ ವಾಸ್ತುಶಿಲ್ಪಿಗಳು. ಬೆಳವಲ ತೋಟದಲ್ಲಿ ಇವರು ನಿರ್ಮಿಸಿರುವ ಮಣ್ಣಿನ ಮನೆ ವಿಶಿಷ್ಟವಾದದ್ದು.”

‘ಮಣ್ಣಿನ ಜೊತೆ ಒಡನಾಡುವುದು ನನಗೆ ತೃಪ್ತಿ ಕೊಡುವ ಕಾಯಕ. ನಮ್ಮ ಯುವ ಪೀಳಿಗೆ ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳದೆ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಮಣ್ಣಿನಿಂದಲೇ ಎಲ್ಲ ’ ಎನ್ನುವ ಡಾ.ರಾಮಕೃಷ್ಣಪ್ಪನವರಿಗೆ ಪ್ರತಿದಿನವೂ ಪರಿಸರ ದಿನವೇ. ತಮ್ಮ ಸಂಪರ್ಕಕ್ಕೆ ಬಂದವರಿಗೆಲ್ಲಾ ಮಣ್ಣಿನ ಪ್ರೀತಿಯನ್ನು ಹಂಚುತ್ತಾರೆ.

ಪರಿಸರ ಹೋರಾಟಗಳಲ್ಲಿ ಡಾ.ರಾಮಕೃಷ್ಣಪ್ಪ ಸದಾ ಮುಂದು. ರಸ್ತೆ ಬದಿಯ ಮರಗಳ ಮಾರಣ ಹೋಮ, ಕುಕ್ಕರಹಳ್ಳಿ ಕೆರೆ ಉದ್ಯಾನದ ನೆಲಕ್ಕುರುಳಿದ ಮರವನ್ನು ಮರು ನೆಡುವ ಕಾರ್ಯವಿರಲಿ ಇವರು ಹಾಜರು. ಸಾವಯವ ಕೃಷಿ ತೋಟ ಕಟ್ಟುವ, ರೈತರ ಮಾರುಕಟ್ಟೆ ಆರಂಭಿಸುವ, ಪರಿಸರ ಪೂರಕ ನೀತಿ ನಿಯಮಗಳನ್ನು ರೂಪಿಸುವ ಸಭೆ – ಮಾತುಕತೆಗಳಲ್ಲಿ ಇವರು ಸದಾ ಬ್ಯುಸಿ.

ಆಂದೋಲನ ಡೆಸ್ಕ್

Recent Posts

ಟಾಕ್ಸಿಕ್‌ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌

ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಹೊಸ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…

20 seconds ago

ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜಾಗೃತಿ ರಥಯಾತ್ರೆಗೆ ಚಾಲನೆ

ಮೈಸೂರು: ಡ್ರಗ್ಸ್‌ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ಆಂದೋಲನದ ರಥಯಾತ್ರೆಗೆ ಮೈಸೂರಿನಲ್ಲಿ ಇಂದು ಚಾಲನೆ ದೊರೆಯಿತು. ಮೈಸೂರು ನಗರದ ಜೆ.ಕೆ…

15 mins ago

ರಾಜ್ಯದಲ್ಲಿ ಮತ್ತೆ ಟಿಪ್ಪು ಜಯಂತಿ: ಆಡಳಿತಾರೂಢ ಕಾಂಗ್ರೆಸ್‌ ನಡೆಗೆ ವಿಪಕ್ಷ ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಶಾಸಕ ಕಾಶಪ್ಪನವರ್‌…

2 hours ago

ರಾಜ್ಯದ ಮಹಿಳಾ ನೌಕರರಿಗೆ ಬಿಗ್‌ ಶಾಕ್:‌ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಬಿಗ್‌ ಶಾಕ್‌ ಎಂಬಂತೆ ರಾಜ್ಯ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.…

2 hours ago

ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಕೊಡಗು: ಶನಿವಾರಸಂತೆಯಲ್ಲಿ ವಿದ್ಯುತ್‌ ವಿತರಣಾ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ನಾಳೆ ಕೊಡಗಿನ ಕೆಲ ಪ್ರದೇಶಗಳಲ್ಲಿ…

2 hours ago

ಇಂಡಿಗೋ ಬಿಕ್ಕಟ್ಟಿನ ನಡುವೆ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ನವದೆಹಲಿ: ಇಂಡಿಗೋ ವಿಮಾನಯಾ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟಿನ ನಡುವೆ ಕಾನೂನು ಮತ್ತು ನಿಯಮಗಳು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ನರೇಂದ್ರ…

2 hours ago