Andolana originals

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ವಾಹನ ಚಾಲನೆ ಅಪಾಯ

ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ ೧೮ರ ಬುಧವಾರ ಆರಂಭವಾಗಿದೆ. ಅಂದು ಬಹುತೇಕ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಬಂದಿದ್ದಾರೆ. ಪರೀಕ್ಷೆ ಮುಗಿಸಿಕೊಂಡು ಅದೇ ದ್ವಿಚಕ್ರ ವಾಹನ ಸವಾರಿ ಮಾಡುತ್ತಾ ಮನೆಗೆ ತೆರಳಿದ್ದಾರೆ. ಕೆಲವು ವಿದ್ಯಾರ್ಥಿಗಳಂತೂ ತಮ್ಮ ಬೇಜವಾಬ್ದಾರಿ ಪೋಷಕರನ್ನು ಹಿಂಬದಿಯಲ್ಲಿ ಕೂರಿಕೊಂಡು ವಾಹನ ಸವಾರಿ ಮಾಡಿಕೊಂಡು ಬಂದಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕ-ಬಾಲಕಿಯರು ವಾಹನ ಸವಾರಿ/ಚಾಲನೆ ಮಾಡುವುದು ಮೋಟಾರು ವಾಹನ ಕಾಯಿದೆಯ ಅನ್ವಯ ಶಿಕ್ಷಾರ್ಹ ಅಪರಾಧ. ಇಂತಹ ಮಕ್ಕಳು ಬಾಲಾಪರಾಧ ತಡೆ ಕಾಯಿದೆ ಅನ್ವಯ ವಿಚಾರಣೆ ಎದುರಿಸುವುದರ ಜೊತೆಗೆ ಅಂತಹ ಮಕ್ಕಳಿಗೆ ಸವಾರಿ/ಚಾಲನೆ ಮಾಡಲು ವಾಹನ ನೀಡಿದ ಪೋಷಕರು ಮತ್ತು ವಾಹನದ ಮಾಲೀಕರಿಗೆ ನ್ಯಾಯಾಲಯವು ೨೫ ಸಾವಿರ ರೂ. ದಂಡ ವಿಧಿಸಬಹುದು ಹಾಗೂ ಅಂತಹ ಪೋಷಕರಿಗೆ ಮೂರು ವರ್ಷಗಳ ಸೆರೆವಾಸದ ಶಿಕ್ಷೆಯನ್ನೂ ವಿಧಿಸಬಹುದು.

ಜೊತೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಚಲಾಯಿಸಿದ/ ಸವಾರಿ ಮಾಡಿದ ವಾಹನದ ನೋಂದಣಿಯನ್ನು ಒಂದು ವರ್ಷದ ಅವಽಗೆ ರದ್ದು ಮಾಡಬಹುದು. ಅದರೊಂದಿಗೆ ವಾಹನ ಸವಾರಿ ಮಾಡಿದ/ ಚಲಾಯಿಸಿದ ಅಪ್ರಾಪ್ತ ವಯಸ್ಸಿನ ಬಾಲಕ-ಬಾಲಕಿಗೆ ೨೫ ವರ್ಷ ತುಂಬುವವರೆಗೆ ಚಾಲನಾ ಪರವಾನಗಿ ನೀಡದಂತೆ ಕ್ರಮಕೈಗೊಳ್ಳಬಹುದು. ಅಕಸ್ಮಾತ್ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಸವಾರಿ/ ಚಾಲನೆ ಮಾಡಿ ಅಪಘಾತ ಎಸಗಿ ಬೇರೆಯವರಿಗೆ ಗಾಯ ಉಂಟಾದರೆ ಅಥವಾ ಪ್ರಾಣಹಾನಿ ಸಂಭವಿಸಿದರೆ ಅಂತಹ ವಾಹನಕ್ಕೆ ಮಾಡಿಸಿರುವ ವಿಮೆ ಉಪಯೋಗಕ್ಕೆ ಬರುವುದಿಲ್ಲ. ಅಂತಹ ಸಮಯದಲ್ಲಿ ಆ ವಾಹನದ ಮಾಲೀಕರೇ ಪರಿಹಾರ ನೀಡಬೇಕಾಗುತ್ತದೆ. ಆಗ ಆ ಪೋಷಕರು ತಮ್ಮ ಮನೆ-ಮಠ ಮಾರಿಕೊಂಡು ಬೀದಿಗೆ ಬರಬೇಕಾಗುತ್ತದೆ.

ಈಗಾಗಲೇ ರಾಜ್ಯದ ಹಲವು ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಬೇಜವಾಬ್ದಾರಿಯುತ ಪೋಷಕರಿಗೆ ೨೫ ಸಾವಿರ ರೂ. ದಂಡ ವಿಧಿಸುವ ಜೊತೆಗೆ ಕೆಲವು ದಿನಗಳ ಸೆರೆವಾಸವನ್ನೂ ವಿಧಿಸಿದ ನಿದರ್ಶನಗಳು ಇವೆ. ಅಪ್ರಾಪ್ರ ವಯಸ್ಸಿನ ಮಗನಿಗೆ ವಾಹನ ಸವಾರಿ ಮಾಡಲು ಅವಕಾಶ ನೀಡಿದ ಆರೋಪಿಯೊಬ್ಬರಿಗೆ ಮೈಸೂರಿನ ಜೆಎಂಎಫ್‌ಸಿ ಎರಡನೇ ನ್ಯಾಯಾಲಯವು ೧೮.೧೧.೨೦೨೫ರಂದು ೨೫ ಸಾವಿರ ರೂ. ದಂಡ ವಿಧಿಸಿದೆ.

ಆದರೂ ಇಂತಹ ಬೇಜವಾಬ್ದಾರಿ ಪೋಷಕರು ಎಚ್ಚೆತ್ತುಕೊಂಡಿಲ್ಲ. ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ ಎನ್ನುತ್ತದೆ ನ್ಯಾಯಶಾಸ್ತ್ರ. ನನಗೆ ಕಾನೂನಿನ ಅರಿವಿರಲಿಲ್ಲ ಎನ್ನುವ ಮೂಲಕ ಪೋಷಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು. ಈ ವಿಚಾರವಾಗಿ ಕಾನೂನಿನ ಅರಿವಿದ್ದೂ ಪೋಷಕರು ತಮ್ಮ ಮಕ್ಕಳಿಗೆ ಸವಾರಿ ಮಾಡಲು ವಾಹನ ನೀಡುತ್ತಿದ್ದಾರೆ ಎಂದರೆ ಅದು ಅವರ ದುರಹಂಕಾರಕ್ಕೆ ಸಾಕ್ಷಿ. ಹಲವಾರು ಪೋಷಕರು ತಮ್ಮ ಪುಟ್ಟ ಮಕ್ಕಳನ್ನು ದ್ವಿಚಕ್ರವಾಹನದ ಮುಂದೆ ಕೂರಿಸಿಕೊಂಡು ರಾಜಾರೋಷವಾಗಿ ನಗರದ ಮುಖ್ಯರಸ್ತೆಗಳಲ್ಲಿ ಮಕ್ಕಳಿಂದಲೇ ವಾಹನ ಸವಾರಿ ಮಾಡಿಸುತ್ತಿದ್ದಾರೆ. ಶಾಲೆಗೆ ತೆರಳುವಾಗ ಇಂತಹ ಬೇಜವಾಬ್ದಾರಿ ಪೋಷಕರು ಮಕ್ಕಳ ಕೈಗೆ ವಾಹನ ನೀಡಿ ತಾವು ಹಿಂದೆ ಕುಳಿತು ಬೀಗುತ್ತಿರುತ್ತಾರೆ.

ಇದು ದಂಡನಾರ್ಹ ಅಪರಾಧ ಎಂಬ ಅರಿವು ಅಂತಹ ಬೇಜವಾಬ್ದಾರಿ ಪೋಷಕರಿಗಿಲ್ಲ ಅಥವಾ ಆ ಪೋಷಕರಿಗೆ ಹಣದ ಮದ ಇರಬಹುದು. ಅಷ್ಟೇ ಅಲ್ಲ, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಸವಾರಿ ಮಾಡುತ್ತಾ ಶಾಲಾ ಕಾಲೇಜು ಹಾಗೂ ಟ್ಯೂಷನ್ ಕೇಂದ್ರಗಳಿಗೆ ಹೋಗಿ ಬರುತ್ತಿದ್ದಾರೆ. ಅದರಲ್ಲೂ ವಾಹನ ಸವಾರಿ ಮಾಡುವ ಹೈಸ್ಕೂಲ್ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ.

ಈ ವಿಚಾರವಾಗಿ ಶಾಲಾ ಕಾಲೇಜು ಹಾಗೂ ಟ್ಯೂಷನ್ ಕೇಂದ್ರಗಳ ಶಿಕ್ಷಕ ವೃಂದಕ್ಕೂ ಕಾನೂನು ಅರಿವು ಇದ್ದಂತಿಲ್ಲ. ಶಾಲಾ ಕಾಲೇಜು ಹಾಗೂ ಟ್ಯೂಷನ್ ಕೇಂದ್ರದ ಬಳಿ ಸಾಲಾಗಿ ನಿಂತ ದ್ವಿಚಕ್ರ ವಾಹನಗಳೇ ಇದಕ್ಕೆ ಸಾಕ್ಷಿ. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಸವಾರಿ/ ಚಾಲನೆ ಮಾಡಿದರೆ ಅವರ ಪೋಷಕರಿಗೆ ಶಿಕ್ಷೆ ಆಗುತ್ತದೆ ಎಂಬ ಮಾಹಿತಿಯನ್ನು ಶಾಲಾ ಪುಸ್ತಕದ ಪಠ್ಯದ ಮೂಲಕ ಮಕ್ಕಳಿಗೆ ತಿಳಿಸಿದರೆ, ಈ ಮಕ್ಕಳಿಗೆ ಅರಿವು ಮೂಡಬಹುದು. ಈ ಮಾಹಿತಿ ಪಠ್ಯದಲ್ಲಿ ಇದ್ದರೆ ಶಿಕ್ಷಕ ವೃಂದಕ್ಕೂ ಜ್ಞಾನೋದಯ ಆಗಬಹುದು. ಹಾಗಾಗಿ ಪಠ್ಯಪುಸ್ತಕ ಸಮಿತಿಯು ಈ ವಿಚಾರವಾಗಿ ಚಿಂತಿಸಿ ಈ ಮಾಹಿತಿಯನ್ನು ಪಠ್ಯದಲ್ಲಿ ತಕ್ಷಣ ಅಳವಡಿಸುವ ಮೂಲಕ ಮಕ್ಕಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಕಾನೂನು ಅರಿವು ಮೂಡಿಸಬೇಕಾಗಿದೆ.

ಶಾಲಾ ಕಾಲೇಜುಗಳು ಪುನರಾರಂಭವಾಗುವ ಮುನ್ನ ಈ ಮಾಹಿತಿಯನ್ನು ಶಾಲಾ ಪಠ್ಯದಲ್ಲಿ ಸೇರಿಸುವುದರ ಜೊತೆಗೆ ಈ ಮಾಹಿತಿಯನ್ನು ಪೊಲೀಸರು ಪೋಸ್ಟರ್/ ಫ್ಲೆಕ್ಸ್ ಮೂಲಕ ಪ್ರತಿಯೊಂದು ಶಾಲಾ ಕಾಲೇಜು ಹಾಗೂ ಟ್ಯೂಷನ್ ಕೇಂದ್ರದ ಪ್ರವೇಶದ್ವಾರದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಲು ಪೊಲೀಸ್ ಇಲಾಖೆ ನಿರ್ದೇಶನ ನೀಡಲಿ.

ಅದಕ್ಕೂ ಮುನ್ನ ಮೈಸೂರಿನ ಪೊಲೀಸ್ ಆಯುಕ್ತರು ಪ್ರತಿಯೊಂದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಬಳಿ ದಕ್ಷ ಸಂಚಾರ ಪೊಲೀಸರನ್ನು ನಿಯೋಜಿಸಿ, ವಿದ್ಯಾರ್ಥಿಗಳು ಸವಾರಿ ಮಾಡುವ ವಿದ್ಯಾರ್ಥಿಗಳ ವಾಹನವನ್ನು ಜಪ್ತಿ ಮಾಡಿ ಅಂತಹ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವ ಬೇಜವಾಬ್ದಾರಿ ಪೋಷಕರಿಗೆ ತಕ್ಕ ಪಾಠ ಕಲಿಸಬೇಕಾಗಿದೆ.

” ಶಾಲಾ ಕಾಲೇಜುಗಳು ಪುನರಾರಂಭವಾಗುವ ಮುನ್ನ ಈ ಮಾಹಿತಿಯನ್ನು ಶಾಲಾ ಪಠ್ಯದಲ್ಲಿ ಸೇರಿಸುವುದರ ಜೊತೆಗೆ ಈ ಮಾಹಿತಿಯನ್ನು ಪೊಲೀಸರು ಪೋಸ್ಟರ್/ ಫ್ಲೆಕ್ಸ್ ಮೂಲಕ ಪ್ರತಿಯೊಂದು ಶಾಲಾ ಕಾಲೇಜು ಹಾಗೂ ಟ್ಯೂಷನ್ ಕೇಂದ್ರದ ಪ್ರವೇಶದ್ವಾರದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಲು ಪೊಲೀಸ್ ಇಲಾಖೆ ನಿರ್ದೇಶನ ನೀಡಲಿ.”

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

20 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

20 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

1 day ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

1 day ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

1 day ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

1 day ago