commercial LPG cylinder
ಚಿರಂಜೀವಿ ಸಿ ಹುಲ್ಲಹಳ್ಳಿ
ಮೈಸೂರು: ‘ಎತ್ತಿಗೆ ಜ್ವರ, ಎಮ್ಮೆಗೆ ಬರೆ’ ಎಂಬಂತೆ, ಮಧ್ಯ ಪ್ರಾಚ್ಯದಲ್ಲಿ ಸಮರ ನಡೆಯುತ್ತಿದ್ದರೆ ಭಾರತದಲ್ಲಿ ಜನಸಾಮಾನ್ಯರ ಬದುಕು ಸಮಸ್ಯೆಗಳ ಸುಳಿಗೆ ಸಿಲುಕುತ್ತಿದೆ. ವಿದ್ಯುಚ್ಛಕ್ತಿ ಶುಲ್ಕ, ನೀರಿನ ಕರ ಹಾಗೂ ವಾಣಿಜ್ಯ ಸಿಲಿಂಡರ್ ದರ ಏರಿಕೆಯ ಹೊಡೆತಕ್ಕೆ ನಾಗರಿಕರು ಹೈರಾಣಾಗಿದ್ದಾರೆ.
ಯುದ್ಧದಿಂದ ಎಲ್‌ಪಿಜಿ ಅಭಾವ ಸೃಷ್ಟಿಯಾಗಿ ಜನತೆ ತತ್ತರಿಸಿರುವುದರ ನಡುವೆಯೇ ಕೇಂದ್ರ ಸರ್ಕಾರ ಒಂದೇ ತಿಂಗಳಲ್ಲಿ 3 ಬಾರಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಿದೆ. 14 ವರ್ಷಗಳ ನಂತರ ರಾಜ್ಯ ಸರ್ಕಾರ ಶೇ.30ರಷ್ಟು ನೀರಿನ ತೆರಿಗೆ ಮತ್ತು ಯುನಿಟ್‌ಗೆ 35ಪೈಸೆ ವಿದ್ಯುಚ್ಛಕ್ತಿ ಶುಲ್ಕವನ್ನು ಹೆಚ್ಚಳ ಮಾಡಿದರೆ, ಕೇಂದ್ರ ಸರ್ಕಾರ ಒಂದೇ ತಿಂಗಳಲ್ಲಿ ಮೂರು ಬಾರಿ (ಒಟ್ಟು 497 ರೂ. ) ವಾಣಿಜ್ಯ ಸಿಲಿಂಡರ್ ದರವನ್ನು ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ಜನಸಾಮಾನ್ಯರ ಆರ್ಥಿಕ ಸ್ಥಿತಿ ದುರ್ಬಲವಾಗಿದೆ.
ಪ್ರತಿ ತಿಂಗಳ ಮೊದಲ ದಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂ ಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು, ಅಂತಾರಾಷ್ಟ್ರೀಯ ಮಾನ ದಂಡಗಳು ಹಾಗೂ ವಿನಿಮಯ ದರದ ಆಧಾರದ ಮೇಲೆ ಸಿಲಿಂಡರ್‌ಗಳ ದರಗಳನ್ನು ಪರಿಷ್ಕರಿಸುತ್ತವೆ. ಆದರೆ, ಕಳೆದ ತಿಂಗಳು ಮೂರು ಬಾರಿ ದರ ಹೆಚ್ಚಳ ಮಾಡಲಾಗಿದೆ.
ಗ್ಯಾಸ್ ಸಿಲಿಂಡರ್ ಮಾರ್ಚ್ 1ರಂದು 130 ರೂ. , ಮಾರ್ಚ್7ರಂದು 115 ರೂ. ಹಾಗೂ ಇತ್ತೀಚಿನ ಪರಿಷ್ಕರಣೆ ಯಲ್ಲಿ202 ರೂ. ದರ ಹೆಚ್ಚಳ ಕಂಡುಬಂದಿದೆ. ಇದರ ಜೊತೆಗೆ ಹಿಂದೆ ನೀಡಲಾಗುತ್ತಿದ್ದ 150 ರೂ. ರಿಯಾಯಿತಿ ಯನ್ನು ಮಾರ್ಚ್ 7ರಿಂದ ಹಿಂಪಡೆಯಲಾಗಿದೆ. ಈ ಕ್ರಮವು ವ್ಯಾಪಾರಿಗಳ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡವನ್ನು ಉಂಟು ಮಾಡಿದೆ. ಈ ಪ್ರಕ್ರಿಯೆಗಳು ಆಹಾರ ವಲಯವನ್ನು ತಲ್ಲಣಗೊಳಿಸಿದ್ದು, ಹಲವಾರು ಹೋಟೆಲ್‌ಗಳು ಈಗಾಗಲೇ ತಿಂಡಿ-ತಿನಿಸುಗಳ ಬೆಲೆಯಲ್ಲಿ ೫ ರೂ. ಗಳಷ್ಟು ಹೆಚ್ಚಳವಾಗಿದೆ.
ಮತ್ತಷ್ಟು ಏರಿಕೆಯಾ ಗುವುದು ನಿಶ್ಚಿತವಾಗಿದೆ. ವ್ಯಾಪಾರಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಶೇ. ೫ರಿಂದ ೧೦ರವರೆಗೆ ದರ ಏರಿಕೆ ಅನಿವಾರ್ಯ ವಾಗಲಿದೆ. ಸಣ್ಣ ಪ್ರಮಾಣದ ಟೀ ಅಂಗಡಿಗಳ ಮಾಲೀಕರು ಮತ್ತು ಬೀದಿ ವ್ಯಾಪಾರಿಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೋಟೆಲ್ ಊಟ, ಟೀ ಹಾಗೂ ಇತರೆ ತಿಂಡಿ-ತಿನಿಸುಗಳ ದರ ಏರಿಕೆಯಿಂದ ನಿತ್ಯಜೀವನದ ಖರ್ಚು ಹೆಚ್ಚಾಗುತ್ತಿದ್ದು, ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಆರ್ಥಿಕ ಒತ್ತಡವನ್ನು ಅನುಭವಿಸುವಂತಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದಿಂದ ಈಗಾಗಲೇ ಹೋಟೆಲ್‌ಗಳಲ್ಲಿ 40 ರೂ. ಇದ್ದ ಅನ್ನ-ಸಾಂಬಾರ್ 45 ರೂ. ಆಗಿತ್ತು. ಈಗ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯು ಮತ್ತಷ್ಟು ಹೆಚ್ಚಳವಾಗಲಿದ್ದು, ನೇರ ಪರಿಣಾಮ ಶ್ರೀ ಸಾಮಾನ್ಯರಿಗೆ ಬೀಳಲಿದೆ. ಇದರ ನಡುವೆ ನೀರಿನ ಕರ, ವಿದ್ಯುಚ್ಛಕ್ತಿ ಶುಲ್ಕ ಮತ್ತು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯೂ ವ್ಯಾಪಾರಿಗಳಿಗೆ ಮತ್ತೊಂದು ಹೊರೆ ಆಗಿದೆ.
ಮೈಸೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಣ್ಣ ಟೀ ಅಂಗಡಿಗಳು ಮತ್ತು ಬೀದಿಬದಿ ಫಾಸ್ಟ್ ಫುಡ್ ವ್ಯಾಪಾರಿಗಳು ಈಗ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಬೆಲೆ ಹೆಚ್ಚಿಸಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ, ಹೆಚ್ಚಿಸದಿದ್ದರೆ ನಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ದರ ಒಂದು ತಿಂಗಳ ಅವಧಿಯಲ್ಲಿ 497 ರೂ. ಹೆಚ್ಚಳವಾಗಿರುವ ಕಾರಣ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ. ಈಗಾಗಲೇ ಹೋಟೆಲ್ ಉದ್ಯಮ ಬಾರಿ ಸಂಕಷ್ಟಕ್ಕೆ ಸಿಲುಕಿದೆ. ನಷ್ಟದ ಹೊರೆ ತಪ್ಪಿಸಲು ಬೆಲೆ ಏರಿಕೆ ಮಾಡಬೇಕಾಗುತ್ತದೆ. -ಸಿ. ನಾರಾಯಣ ಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ
ಆರ್ಥಿಕ ವರ್ಷದ ಆರಂಭವೂ ಸಾರ್ವಜನಿಕರ ಜೀವನದ ಮೇಲೆ ಭಾರಿ ಸಂಕಷ್ಟವನ್ನು ತಂದೊಡ್ಡಿದೆ. ಯುದ್ಧದ ಪರಿಣಾಮದಿಂದ ಈಗಾಗಲೇ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿರುವುದು ಜನರು ಜೀವನ ನಡೆಸಲು ಹೆಣಗಾಡುವಂತೆ ಮಾಡಿದೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬದುಕು ನಡೆಸಲು ಕಷ್ಟವಾಗಲಿದೆ. -ಶಿವು, ಮೈಸೂರು
ವಾಣಿಜ್ಯ ಬಳಕೆ ಸಿಲಿಂಡರ್ ದರ ಏರಿಕೆ ಹಿನ್ನೆಲೆಯಲ್ಲಿ ಟೀ-ಕಾಫಿಯ ಬೆಲೆ ಹೆಚ್ಚಳ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ದರ ಹೆಚ್ಚಿಸದಿದ್ದರೆ ನಮಗೆ ನಷ್ಟವಾಗಲಿದೆ. ಕೆಲ ತಿಂಗಳ ಹಿಂದೆ ಟೀ-ಕಾಫಿ ಬೆಲೆಗಳು ಪರಿಷ್ಕರಣೆಯಾಗಿವೆ. ಗ್ರಾಹಕರು ಹೇಗೆ ಸ್ವೀಕರಿಸುತ್ತಾರೋ! -ಶ್ರೀಕಾಂತ್, ಟೀ ಅಂಗಡಿ ಮಾಲೀಕ
ಎಚ್.ಹಾಲಪ್ಪ ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಅಪೂರ್ಣ ಎಂದು ನಂಬಿದ್ದ ತಮ್ಮ ಕಾರ್ಯಪ್ರವೃತ್ತಿಯಿಂದ ಸಮಾಜದಲ್ಲಿ ಸಮಾನತೆಯನ್ನು ಜೀವಂತಗೊಳಿಸಿದ ದೇಶದಾದ್ಯಂತ ಬಾಬೂಜಿ ಎಂದೇ…
ಹಿಂದಿ ಭಾಷೆಯ ಪ್ರಶ್ನೆ ಮತ್ತೆ ವಿವಾದವನ್ನು ಉಂಟು ಮಾಡಿದೆ. ತನ್ನ ಮಾತೃ ಭಾಷೆಯಲ್ಲದ ಮತ್ತು ಉತ್ತರ ಭಾರತದ ರಾಜ್ಯಗಳ ಮಾತೃ…
ನವೀನ್ ಡಿಸೋಜ ಶಿಪ್‌ಮೆಂಟ್ ವಿಳಂಬ, ಕಂಟೇನರ್ ಕೊರತೆ, ಹಡಗುಗಳ ಅಭಾವ, ಇಂಧನ ಅನಿಶ್ಚಿತತೆ ಕಾಫಿ ಉತ್ಪಾದನಾ ವಲಯದಲ್ಲಿ ಗೊಂದಲದ ವಾತಾವರಣ …
ನಂದಿನಿ ಎನ್. ಹತ್ತು ಜನರಿಗಾಗುವಷ್ಟು ಅಡುಗೆಗೆ ಕೇವಲ ೨ ಮೆಣಸಿನ ಕಾಯಿ ಸಾಕು ಎಂದರೆ ನಂಬುತ್ತೀರಾ!? ನಾಗಾಲ್ಯಾಂಡ್ ಪ್ರವಾಸದಲ್ಲಿ ಅಲ್ಲಿನ…
ತಾಜ್ ಗಡಿನಾಡು ಇರಾನ್ ಮೇಲೆ ಫೆಬ್ರವರಿ ಅಂತ್ಯಕ್ಕೆ ಆರಂಭಗೊಂಡ ಅಮೆರಿಕ-ಇಸ್ರೇಲ್ ದೇಶಗಳ ಜಂಟಿ ಯುದ್ಧ ತಿಂಗಳು ಕಳೆದರೂ ಇನ್ನೂ ಅಂತ್ಯಗೊಂಡಿಲ್ಲ.…
ಮಂಜು ಕೋಟೆ ಕೋಟೆ: ೧೦ ವರ್ಷಗಳಿಂದ ಬಳಕೆಗೆ ಬಾರದ ಕಟ್ಟಡ; ಮತ್ತೊಂದು ಕಾಮಗಾರಿಯೂ ನನೆಗುದಿಗೆ ಎಚ್.ಡಿ.ಕೋಟೆ: ಪಟ್ಟಣದ ಹೃದಯ ಭಾಗದಲ್ಲಿ…