Andolana originals

ನಾಳೆಯಿಂದ ಮಡಿಕೇರಿಯಲ್ಲಿ ಕಾಫಿ ದಸರಾ ಸಂಭ್ರಮ

ನವೀನ್ ಡಿಸೋಜ

೫೦ ಮಳಿಗೆಗಳಲ್ಲಿ ಕಾಫಿ ವೈವಿಧ್ಯ; ೧೩ ಸಾಧಕ ಕೃಷಿಕರಿಗೆ ಸನ್ಮಾನ, ೬೮ ಪೌರಕಾರ್ಮಿಕರಿಗೆ ಗೌರವ

ಮಡಿಕೇರಿ: ಮಂಜಿನ ನಗರಿ ಮಡಿಕೇರಿಯ ದಸರಾ ಸಂಭ್ರಮಕ್ಕೆ ಕಾಫಿಯ ಘಮ ಮತ್ತಷ್ಟು ಮೆರುಗು ನೀಡಲು ಸಜ್ಜಾಗಿದೆ. ಕಾಫಿ ಕೃಷಿ, ಉದ್ಯಮ, ಗುಣಮಟ್ಟ ಮತ್ತು ಪ್ರವಾಸೋದ್ಯಮದ ಸಾಧ್ಯತೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂರನೇ ವರ್ಷದ ಕಾಫಿ ದಸರಾ ಅ.೧೩ ಮತ್ತು ೧೪ರಂದು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಕಾಫಿಗೆ ಸಂಬಂಧಿಸಿದ ೫೦ ಮಳಿಗೆಗಳು, ತಜ್ಞರ ವಿಚಾರಗೋಷ್ಠಿ, ಸಂವಾದ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ ಈ ಬಾರಿಯ ಕಾಫಿ ದಸರಾದ ಪ್ರಮುಖ ಆಕರ್ಷಣೆಗಳಾಗಿವೆ.

ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅವರ ಪರಿಕಲ್ಪನೆಯಲ್ಲಿ ಕೂರ್ಗ್ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿ ರುವ ಕಾಫಿ ದಸರಾ, ಕೊಡಗಿನ ಕಾಫಿ ಸಂಸ್ಕೃತಿ ಮತ್ತು ಕೃಷಿ ಪರಂಪರೆಯನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶ ಹೊಂದಿದೆ. ಅ.೧೩ರಂದು ಸಂಜೆ ೪ ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಕಾಫಿ ಸಂಬಂಧಿತ ಮಳಿಗೆಗಳನ್ನು ಶಾಸಕ ಡಾ.ಮಂಥರ್ಗೌಡ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ಕಾಫಿಯ ವಿವಿಧ ತಳಿಗಳು, ಉತ್ಪನ್ನಗಳು ಮತ್ತು ಉದ್ಯಮದ ಸಾಧ್ಯತೆಗಳನ್ನು ಪರಿಚಯಿಸುವ ಮಳಿಗೆಗಳು ಕಾಫಿ ಪ್ರಿಯರನ್ನು ಆಕರ್ಷಿಸಲಿವೆ.

ಅ.೧೪ರಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ದಿ.ಸಾಕಮ್ಮ ಅವರ ಹೆಸರಿನ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ. ಜೆ.ದಿನೇಶ್ ಉದ್ಘಾಟಿಸಲಿದ್ದಾರೆ. ಶಾಸಕ ಡಾ.ಮಂಥರ್ ಗೌಡ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ ೧೧ ಗಂಟೆಯಿಂದ ಕಾಫಿ ಕೃಷಿಗೆ ಸಂಬಂಧಿಸಿದ ವಿಚಾರಗೋಷ್ಠಿ ಮತ್ತು ಸಂವಾದ ನಡೆಯಲಿದೆ. ಕಾಫಿ, ನಿಸರ್ಗ ಮತ್ತು ಪ್ರವಾಸೋದ್ಯಮದ ನಡುವಿನ ಸಂಬಂಧದ ಕುರಿತು ವಿರಾಜಪೇಟೆಯ ಪ್ರವಾಸೋ ದ್ಯಮಿ ಭಜನ್ ಬೋಪಣ್ಣ ಮಾತನಾಡಲಿದ್ದಾರೆ. ಕೃಷಿಕರಲ್ಲಿ ಆತಂಕ ಮೂಡಿಸಿರುವ ಇ.ಯು.ಡಿ.ಆರ್. ಮತ್ತು ಇಂಡಿಕಾಫ್ ಕುರಿತಂತೆ ಬೆಂಗಳೂರಿನ ಭಾರತೀಯ ಕಾಫಿ ಮಂಡಳಿ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ.ಪ್ರದೀಪ್ ಬಾಬು ಮಾಹಿತಿ ನೀಡಲಿದ್ದಾರೆ. ಚಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಡಾ.ರಶ್ಮಿ ಅವರು ಕೊಡಗಿನ ಕಾಫಿಯ ಗುಣಮಟ್ಟ ಮತ್ತು ಮಹತ್ವವನ್ನು ವಿವರಿಸಲಿದ್ದು, ಹಟ್ಟಿ ಕಾಫಿ ಸಂಸ್ಥೆಯ ಯತೀಶನ್ ಅವರು ಕಾಫಿ ಕೆಫೆಗಳ ಭವಿಷ್ಯದ ಕುರಿತು ಮಾತನಾಡಲಿದ್ದಾರೆ.

ಕಾಫಿ ಕೃಷಿಯಲ್ಲಿ ಎದುರಾಗುತ್ತಿರುವ ಸವಾಲುಗಳು, ಗುಣಮಟ್ಟದ ಉತ್ಪಾದನೆ, ಮಾರುಕಟ್ಟೆ ಅವಕಾಶಗಳು ಮತ್ತು ಕಾಫಿ ಆಧಾರಿತ ಪ್ರವಾಸೋದ್ಯಮದ ಬೆಳವಣಿಗೆ ಕುರಿತು ಚರ್ಚೆ ನಡೆಯಲಿರುವುದು ಕೃಷಿಕರು ಹಾಗೂ ಉದ್ಯಮಾಸಕ್ತರಿಗೆ ಉಪಯುಕ್ತವಾಗಲಿದೆ.

ಕಾಫಿ ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಜಿಲ್ಲೆಯ ೧೩ ಸಾಧಕರನ್ನು ಮಧ್ಯಾಹ್ನ ೧೨.೩೦ಕ್ಕೆ ಸಾಕಮ್ಮ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತದೆ. ಚೆಯ್ಯಂಡಾಣೆಯ ಮಕ್ಕಿಮನೆ ಸುಧೀರ್, ಬಗ್ಗನಮನೆ ಸುರೇಂದ್ರ, ಸೋಮವಾರಪೇಟೆಯ ಉದಯ್ ಈಶ್ವರನ್, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಮಡಿಕೇರಿಯ ಕಾಫಿ ತಜ್ಞ ಕೆ.ಕೆ. ವಿಶ್ವನಾಥ್, ತಾಕೇರಿಯ ಕೃಷಿ ಸ್ವಸಹಾಯ ಸಂಘ, ಮಣಜೂರಿನ ಶೇಷಪ್ಪ, ಕಾಫಿ ಬ್ಲಾಗರ್ ಪಟ್ಟಡ ಕಾರ್ತಿಕ್, ನಾಕೂರು ಶಿರಂಗಾಲದ ಪಿ.ಎಂ. ಬಿಜು, ಸುಂಟಿಕೊಪ್ಪದ ಪನ್ಯ ತೋಟದ ಎಸ್.ಬಿ.ಜಯರಾಜ್, ಕೊಡ್ಲಿಪೇಟೆಯ ಮಹಮ್ಮದ್ ರಾಝ, ನೆಲ್ಯಹುದಿಕೇರಿಯ ಇ.ಹೆಚ್. ಹನೀಫ ಹಾಗೂ ಮಡಿಕೇರಿಯ ವೀಲ್ ಕೆಫೆ ಈ ಬಾರಿಯ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಕಾಫಿ ದಸರಾ ಕೇವಲ ಕಾಫಿ ಕೃಷಿ ಮತ್ತು ಉದ್ಯಮಕ್ಕೆ ಸೀಮಿತವಾಗದೆ, ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರ ಸೇವೆಯನ್ನೂ ಗುರುತಿಸಲಿದೆ. ಅ.೧೩ರಂದು ಸಂಜೆ ೬ ಗಂಟೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಮಡಿಕೇರಿ ನಗರದ ೬೮ ಪೌರಕಾರ್ಮಿಕರನ್ನು ಶಾಸಕ ಡಾ.ಮಂಥರ್ ಗೌಡ ಸನ್ಮಾನಿಸಿ, ಗೌರವಿಸಲಿದ್ದಾರೆ.

ಕಾಫಿ ದಸರಾ ಸಮಿತಿಯಲ್ಲಿ ವಿನೋದ್ ಮೂಡಗದ್ದೆ, ಪಾಲೆಯಂಡ ರೂಪಾ ಸುಬ್ಬಯ್ಯ, ವೀಣಾಕ್ಷಿ ರವಿಕುಮಾರ್, ಮಿನಾಜ್ ಪ್ರವೀಣ್, ಎಚ್.ಟಿ. ಶಿವಪ್ಪ, ಮೇಪಾಡಂಡ ಸವಿತಾ ಕೀರ್ತನ್, ಪುದಿನೆರವನ ರೇವತಿ ರಮೇಶ್ ಹಾಗೂ ಮೂವೆರ ಸರಿತಾ ಹರೀಶ್ ಕಾರ್ಯನಿರ್ವಹಿಸಿದ್ದು, ಬಿ.ವೈ. ರಾಜೇಶ್ ಗೌರವ ಸಲಹೆಗಾರರಾಗಿ ಸಹಕರಿಸಿದ್ದಾರೆ ಎಂದು ಕಾಫಿ ದಸರಾ ಸಂಚಾಲಕ ಹೆಚ್.ಟಿ.ಅನಿಲ್ ತಿಳಿಸಿದ್ದಾರೆ.

” ಮಡಿಕೇರಿ ದಸರಾ ಜನೋತ್ಸವದಲ್ಲಿ ಅ.೧೩ ಮತ್ತು ೧೪ ರಂದು ೩ ನೇ ವರ್ಷದ ಕಾಫಿ ದಸರಾ ಆಯೋಜಿತವಾಗಿದ್ದು, ಕಾಫಿಗೆ ಸಂಬಂಧಿಸಿದ ವೈವಿಧ್ಯಮಯ ೫೦ ಮಳಿಗೆಗಳು ಮೇಳೈಸಲಿವೆ. ಕಾಫಿ ದಸರಾದಲ್ಲಿ ೧೩ ಸಾಧಕ ಕೃಷಿಕರಿಗೆ ಗೌರವ, ಸನ್ಮಾನ ಹಾಗೂ ಪೌರಕಾರ್ಮಿಕರಿಗೂ ಗೌರವ ಸಮರ್ಪಣೆ ನಡೆಯಲಿದೆ. ಕಾಫಿ ಕೃಷಿ ಸಂಬಂಧಿತ ವಿವಿಧ ವಿಚಾರಗೋಷ್ಠಿ ಮತ್ತು ಸಂವಾದವೂ ಇರಲಿದೆ.”

 -ಹೆಚ್.ಟಿ.ಅನಿಲ್, ಸಂಚಾಲಕ, ಕಾಫಿ ದಸರಾ

 

 

 

ಆಂದೋಲನ ಡೆಸ್ಕ್

Recent Posts

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

8 mins ago

ಎಸ್‌ಐಆರ್: ಪ್ರತಿಭಟನೆ ಹತ್ತಿಕ್ಕುವ ಯತ್ನ ಸರಿಯಲ್ಲ

ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ ಎಂದು…

16 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ದಲಿತ ಚಳವಳಿಗೆ ಬೇಕಾಗಿದೆ ‘ಹೊಳಪು’

ಆಶಾದಾಯಕ ಕನಸು ಬಿತ್ತುವ ಕೆಲಸಕ್ಕೆ ಚಾಲನೆ ಸಿಗಬೇಕು ಕರ್ನಾಟಕದ ರಾಜಕೀಯ ಚರಿತ್ರೆಯ ದಿಕ್ಕು ೧೯೮೩ ರಲ್ಲಿ ಬದಲಾಯಿತು. ಅರ್ಥಾತ್, ಸ್ವಾತಂತ್ರ್ಯೋತ್ತರ…

27 mins ago

ನಾವು ಇಂದು ಸರೆಂಡರ್ ಆಗಲ್ಲ

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಡೆಡ್ ಬಾಡಿ ಬಿಸಾಕುವ ಸಮಯದಲ್ಲಿ ರಾಘವೇಂದ್ರ ಮತ್ತು ಕಾರ್ತಿಕ್ ಮಧ್ಯೆ ಗಲಾಟೆಯಾಗಿ, ಆತ ಸರೆಂಡರ್…

37 mins ago

ಎಚ್.ಡಿ.ಕೋಟೆಯಲ್ಲಿ ರಂಗೇರಿದ ನವರಾತ್ರಿ ಉತ್ಸವ

ಮಂಜು ಕೋಟೆ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ೯ ದಿನಗಳು ವಿವಿಧ ಕಾರ್ಯಕ್ರಮ ಎಚ್.ಡಿ.ಕೋಟೆ: ವಿಶ್ವ ವಿಖ್ಯಾತ ಮೈಸೂರು ದಸರಾ ಭಾನುವಾರ…

53 mins ago