ಎಚ್.ಎಚ್.ದಿನೇಶ್‌ಕುಮಾರ್
ಮೈಸೂರು: ಒಂದು ತಿಂಗಳ ಹಿಂದೆ ಬಹಳಷ್ಟು ದುಬಾರಿಯಾಗಿದ್ದ ತೆಂಗಿನಕಾಯಿ ಬೆಲೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದ್ದು, ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ಒಂದೆರಡು ತಿಂಗಳುಗಳಲ್ಲಿತೆಂಗಿನಕಾಯಿ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಗಗನಕ್ಕೇರಿತ್ತು. ಸಣ್ಣ ಗಾತ್ರದ ಕಾಯಿಯ ದರ ೨೫ ರೂ.ನಿಂದ ೩೦ ರೂ. ವರೆಗೆ ಇತ್ತು. ದೊಡ್ಡ ಗಾತ್ರದ ಕಾಯಿಯ ಬೆಲೆಯನ್ನಂತೂ ಕೇಳುವುದೇ ಬೇಡ ಎಂಬಂತಿತ್ತು. ದರ ಹೆಚ್ಚಳದಿಂದ ಗ್ರಾಹಕನ ಜೇಬಿಗೆ ಕತ್ತರಿ ಬೀಳುವಂತಾಗಿದ್ದರೂ, ತೆಂಗು ಬೆಳೆಗಾರರಿಗೆ ಮಾತ್ರ ಆರ್ಥಿಕವಾಗಿ ಅನುಕೂಲವಾಗಿದೆ.
ಸಾಮಾನ್ಯವಾಗಿ ರಾಜ್ಯ ಹಾಗೂ ಕೇರಳದಲ್ಲಿ ಯಥೇಚ್ಛವಾಗಿ ತೆಂಗಿನ ಕಾಯಿ ಉತ್ಪಾದನೆ ಆಗುತ್ತಿತ್ತು. ಇದರಿಂದಾಗಿ ಈ ಹಿಂದೆ ತೆಂಗಿನಕಾಯಿ ಬೆಲೆ ೨೫ ರೂ.ನಿಂದ ೩೦ ರೂ. ವರೆಗೆ ಇತ್ತು. ಬೇಸಿಗೆಯ ಕಾರಣ ಜನವರಿ ತಿಂಗಳಿನಿಂದ ಮೇ ತಿಂಗಳ ವರೆಗೆ ತೆಂಗಿನಕಾಯಿಯ ಬೆಲೆ ಹೆಚ್ಚಳವಾಗುವುದು ಸಾಮಾನ್ಯ ಸಂಗತಿ. ಆದರೆ, ಹಿಂದೆ ಒಂದು ಕೆಜಿಗೆ ೩೦ರಿಂದ ೪೦ ರೂ. ಇದ್ದ ತೆಂಗಿನಕಾಯಿ ದರ, ಈ ಬಾರಿ ಬರೋಬ್ಬರಿ ೮೦ ರೂ.ಗೆ ಏರಿಕೆಯಾಗಿತ್ತು.
ತೆಂಗಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲಿ ಈ ಮಟ್ಟದ ಬೆಲೆ ಹೆಚ್ಚಳವಾಗಿದ್ದ ಉದಾಹರಣೆ ಇರಲಿಲ್ಲ. ಇದರಿಂದಾಗಿ ಸಾರ್ವಜನಿಕರು ತೆಂಗಿನಕಾಯಿ ಖರೀದಿಸಲು ಹಿಂದೆಮುಂದೆ ನೋಡುತ್ತಿದ್ದರು. ಕೆಲವರಂತೂ ಅಡುಗೆಗೆ ಕಾಯಿ ಬಳಸುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಇನ್ನು ಹೋಟೆಲ್‌ಗಳ ಮಾಲೀಕರಿಗಂತೂ ತೆಂಗಿಕಾಯಿ ಬೆಲೆ ಏರಿಕೆಯು ಬಿಸಿ ತುಪ್ಪದಂತಾಗಿದೆ. ಕಾಯಿ ಇಲ್ಲದೆ ಬಹುತೇಕ ಯಾವುದೇ ಅಡುಗೆಯನ್ನೂ ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ಕಾಯಿ ಬೆಲೆ ನಾಲ್ಕುಪಟ್ಟು ಹೆಚ್ಚಳವಾಗಿದ್ದರಿಂದ ಹೋಟೆಲ್‌ಗಳ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದರು.
ಇದೀಗ ತೆಂಗಿನಕಾಯಿ ಬೆಲೆ ಒಂದು ಕೆಜಿಗೆ ೧೫ ರೂ.ನಷ್ಟು ಇಳಿಕೆಯಾಗಿದೆ. ೭೫ ರೂ. ನಿಂದ ೮೦ ರೂ.ವರೆಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಬೆಲೆ ಇದೀಗ ೬೦ ರಿಂದ ೬೫ ರೂ.ಗೆ ಇಳಿದಿದೆ. ಇದರಿಂದ ಗ್ರಾಹಕರ ಮೊಗದಲ್ಲಿ ಸ್ವಲ್ಪಮಟ್ಟಿಗಿನ ಸಂತಸ ಕಾಣುತ್ತಿದೆ.
ಬಿಸಿಲಿನ ತಾಪ ಕಾರಣ: ತೆಂಗು ಬೆಳೆಗಾರರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಈ ಮಟ್ಟದ ಬಿಸಿಲು ಬಂದಿರಲಿಲ್ಲ. ಈ ಬಾರಿ ಬಿಸಿಲಿನ ತಾಪ ಹೆಚ್ಚಿದ್ದರಿಂದ ಇಳುವರಿ ಕಡಿಮೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆಯಾಗುತ್ತಿರುವ ಕಾರಣ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ ಎನ್ನುತ್ತಾರೆ.
ಎಳನೀರಿಗೆ ಬೇಡಿಕೆ ಕಡಿಮೆ: ಬೇಸಿಗೆಯಲ್ಲಿ ಧಗೆ ಹೆಚ್ಚಿತ್ತು. ಅದರಿಂದ ಎಳನೀರಿಗೆ ಹೆಚ್ಚು ಬೇಡಿಕೆ ಇತ್ತು. ರಾಜ್ಯದಲ್ಲಿ ಬೆಳೆದ ಎಳನೀರು, ಉತ್ತರ ಭಾರತಕ್ಕೂ ಪ್ರತೀ ದಿನ ಸರಬರಾಜು ಆಗುತ್ತಿತ್ತು. ಮಳೆ ಶುರುವಾಗಿರುವ ಹಿನ್ನೆಲೆಯಲ್ಲಿ ಎಳನೀರಿಗೆ ಬೇಡಿಕೆ ಕಡಿಮೆಯಾಗಿದೆ. ರೈತರಿಗೆ ತೆಂಗಿನಕಾಯಿಗಿಂತ ಎಳನೀರು ಮಾರಾಟದಲ್ಲಿ ಹೆಚ್ಚು ಲಾಭ ದೊರೆಯುತ್ತಿದೆ. ಎಳನೀರು ಕೀಳುವುದು, ಸಾಗಣೆ ಎಲ್ಲವೂ ಖರೀದಿದಾರರ ವೆಚ್ಚದಲ್ಲೇ ಆಗುತ್ತದೆ. ಹೀಗಾಗಿ ತೆಂಗು ಬೆಳೆಗಾರರಿಗೆ ಅಧಿಕ ಲಾಭಾಂಶ ಸಿಗುತ್ತಿದೆ. ತೆಂಗಿನಕಾಯಿ ಬೆಲೆ ಹೆಚ್ಚಳವಾಗಲು ಈ ಅಂಶ ಕೂಡ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇನ್ನೆರಡು ತಿಂಗಳಿನಲ್ಲಿ ಸರಿಹೋಗಲಿದೆ: ರೈತ ಮುಖಂಡರು ಹೇಳುವ ಪ್ರಕಾರ ತೆಂಗಿನಕಾಯಿ ಬೆಲೆ ಮುಂದಿನ ನವೆಂಬರ್‌ವರೆಗೂ ಏರಿಕೆಯಾಗುವ ಸಾಧ್ಯತೆ ಇಲ್ಲ.
ಕೊಬ್ಬರಿ ಬೆಲೆ ಇಳಿಕೆ: ಈ ನಡುವೆ ಕೊಬ್ಬರಿ ಗಿಟುಕಿನ ಬೆಲೆ ಕೂಡ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ೧೫೫ ರೂ. ನಿಂದ ೧೬೦ ರೂ. ಇದೆ. ಹೀಗಾಗಿ ಬಹುತೇಕರು ತೆಂಗಿನಕಾಯಿ ಬದಲಿಗೆ ಅಡುಗೆಗೆ ಕೊಬ್ಬರಿ ಬಳಸುತ್ತಿದ್ದಾರೆ.
” ಕಳೆದ ಎರಡು ತಿಂಗಳುಗಳಿಗೆ ಹೋಲಿಸಿದಲ್ಲಿ ತೆಂಗಿನ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ. ಅಂತರ್ಜಲ ಕೊರತೆ ಹಾಗೂ ಇಳುವರಿ ಕಡಿಮೆ ಇನ್ನಿತರ ಕಾರಣಗಳಿಂದ ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಹೆಚ್ಚಳವಾಗಿತ್ತು. ಇದೀಗ ಎಲ್ಲೆಡೆ ಮಳೆಯಾಗಿರುವ ಕಾರಣ ಇಳುವರಿ ಹೆಚ್ಚಾಗಿದ್ದು, ದರವೂ ಇಳಿಕೆಯಾಗಿದೆ.”
ನಾಗಣ್ಣ, ತೆಂಗಿನಕಾಯಿ ವ್ಯಾಪಾರಿ
” ಕಳೆದ ಮೂರು ತಿಂಗಳಿಂದಲೇ ತೆಂಗಿನಕಾಯಿ ಬೆಲೆ ಸ್ವಲ್ಪ ಸ್ವಲ್ಪವೇ ಹೆಚ್ಚಳವಾಗುವ ಮೂಲಕ ಊಹೆಗೆ ಮೀರಿ ಬೆಲೆ ಏರಿಕೆ ಕಂಡಿತ್ತು. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಇದೀಗ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಲ್ಲಿ ಹೋಟೆಲ್ ಉದ್ಯಮ ಇದೆ.”
ಸಿ.ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…
ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…