ಲಕ್ಷ್ಮಿಕಾಂತ್ ಕೊಮಾರಪ್ಪ
ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಲಹೆ
ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅದರ ಜೊತೆಗೆ ಮಾಹಿತಿ ಕೊರತೆಯಿಂದ ರೋಗಬಾಧೆಯಿಂದಾಗಿ ಕೆಲವು ರೈತರು ನಷ್ಟವನ್ನೂ ಅನುಭವಿಸುತ್ತಿದ್ದಾರೆ.
ಹೀಗಾಗಿ ಬಿತ್ತನೆಯ ಶುಂಠಿಯ ಆಯ್ಕೆ, ಬಿತ್ತನೆ ಶುಂಠಿಯ ಬೀಜೋಪಚಾರದ ಬಗ್ಗೆ ಗೋಣಿಕೊಪ್ಪಲಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಅಗತ್ಯ ಸಲಹೆ ನೀಡಿದೆ.
ಈ ವರ್ಷವೂ ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಮತ್ತು ಪ್ರದೇಶ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ವೈಜ್ಞಾನಿಕ ಮಾಹಿತಿಯಿಲ್ಲದೆ ಶುಂಠಿ ಬೆಳೆಯುತ್ತಿರುವವರು ಗೆಡ್ಡೆ ಕೊಳೆ ರೋಗ, ಮಹಾಕಾಳಿ ರೋಗದಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಶುಂಠಿ ಕೃಷಿಗೆ ಬಿತ್ತನೆ ಬೀಜದ ಆಯ್ಕೆ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆರೋಗ್ಯಕರ, ರೋಗ-ಕೀಟ ರಹಿತ, ತಾಜಾ ಹಾಗೂ ಬಲಿಷ್ಠ ಶುಂಠಿಯನ್ನು ಮಾತ್ರ ಆಯ್ಕೆ ಮಾಡಬೇಕು. ಹುಳುಕು, ಕೊಳೆ, ಕಪ್ಪು ಕಲೆಗಳು ಇರುವ ಶುಂಠಿಗಳನ್ನು ಬಿತ್ತನೆಗೆ ಬಳಸಬಾರದು. ಸರಿಯಾದ ಗಾತ್ರದ ಅಂದರೆ ಕನಿಷ್ಠ ೩೦ ರಿಂದ ೩೫ ಗ್ರಾಂ, ಗರಿಷ್ಟ ೧೦೦ ಗ್ರಾಂ ತೂಕದ ಶುಂಠಿಯ ತುಂಡುಗಳನ್ನು ಬಿತ್ತನೆಗೆ ಬಳಸಬೇಕು, ಅತಿ ಚಿಕ್ಕ ತುಂಡುಗಳನ್ನು ಬಳಸಬಾರದು.
ಪ್ರತಿ ಬಿತ್ತನೆ ಶುಂಠಿಯಲ್ಲಿ ಕನಿಷ್ಠ ೧ ರಿಂದ ೨, ಗರಿಷ್ಟ ೪ ರಿಂದ ೫ ಆರೋಗ್ಯಕರ ಗಿಣ್ಣುಗಳು ಇರಬೇಕು. ಗಿಣ್ಣುಗಳು ಹಸಿರು ಅಥವಾ ತಾಜಾ ಬಣ್ಣದಲ್ಲಿ ಇರಬೇಕು. ಶುಂಠಿಯ ಬಣ್ಣ ಮಂಜಳ-ಹಳದಿ ಅಥವಾ ಬೆಳ್ಳಗಿನ ಬಣ್ಣದಲ್ಲಿರಬೇಕು. ಒತ್ತಿದಾಗ ಮೃದುವಾಗಿರದೆ ಗಟ್ಟಿಯಾಗಿರಬೇಕು. ಹಿಂದಿನ ಬೆಳೆಯಲ್ಲಿ ರೋಗ ಕಾಣಿಸದ ತೋಟದಿಂದ ಬೀಜ ಆಯ್ಕೆ ಮಾಡುವುದು ಸೂಕ್ತ.
ಸ್ಥಳೀಯವಾಗಿ ಉತ್ತಮ ಫಲ ನೀಡುವ ಮತ್ತು ರೋಗ ನಿರೋಧಕ ಶಕ್ತಿ ಇರುವ ತಳಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆ ಬೀಜದ ರೈಸೋಮ್‌ಗಳನ್ನು ನೆರಳಿನಲ್ಲಿಯೇ, ಒಣ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇಡಬೇಕು. ನೇರವಾಗಿ ಸೂರ್ಯನ ರಶ್ಮಿ ಬೀಳುವ ಜಾಗದಲ್ಲಿ ಇಡಬಾರದು. ಬಹಳ ಹಳೆಯ ಅಥವಾ ಒಣಗಿದ ರೈಸೋಮ್‌ಗಳನ್ನು ಬಳಸಬಾರದು. ಅವಽಗೆ ಮುಂಚಿತವಾಗಿ ಕಟಾವಾದ ತಾಕುಗಳ ಶುಂಠಿಯನ್ನು ಬಿತ್ತನೆಗೆ ಬಳಸಬಾರದು. ೨೭೦ರಿಂದ ೩೦೦ ದಿನಗಳು ತುಂಬಿದ ಶುಂಠಿಯನ್ನು ಬಿತ್ತನೆಗೆ ಆಯ್ಕೆ ಮಾಡಿಕೊಳ್ಳಬೇಕು.
ಬಿತ್ತನೆ ಶುಂಠಿಯನ್ನು ಸಂಗ್ರಹಿಸುವ ಮೊದಲು, ೨೦೦ ಕೆ.ಜಿ. ಶುಂಠಿ ಬೀಜವನ್ನು ಪ್ರೊಪಿಕೊನಜೋಲ್ ೨೦೦ ಮಿ.ಲಿ. ಅಥವಾ ಕಾರ್ಬೆಂಡಜಿಮ್ + ಮ್ಯಾಂಕೋಜೆಬ್ ೪೦೦ ಗ್ರಾಂ ಅಥವಾ ೬೦೦ ಗ್ರಾಂ ಮ್ಯಾಂಕೋಜೆಬ್ ಮತ್ತು ಕ್ವಿನಾಲ್‌ಫಾಸ್ ೪೦೦ ಮಿ.ಲಿ.ಯನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರತೆಗೆದು ೧೫ ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ, ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು.
ಸಾವಯವ ಪದ್ಧತಿಯಲ್ಲಿ ಶುಂಠಿಯನ್ನು ಬೆಳೆಯುವವರು ಪ್ರತೀ ಲೀಟರ್ ನೀರಿಗೆ ಅಥವಾ ಪ್ರತಿ ಕೆ.ಜಿ.ಬಿತ್ತನೆ ಬೀಜಕ್ಕೆ ಸುಡೋ ಮೋನಾಸ್ ೧೦.೦ ಗ್ರಾಂ.ಅನ್ನು ಮಿಶ್ರಣ ಮಾಡಿ ಅದಕ್ಕೆ ಬಿತ್ತನೆ ಶುಂಠಿಯನ್ನು ಅದ್ದಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರ ತೆಗೆದು ೩೦ ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿದ ನಂತರ ಬಿತ್ತನೆ ಮಾಡಬೇಕು.
ಬೀಜೋಪಚಾರ ಮಾಡುವಾಗ ಶುಂಠಿಯನ್ನು ಅದ್ದಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಲೇಬೇಕು. ಹೆಚ್ಚಿನ ರೈತರು ಶಿಫಾರಸು ಮಾಡಿರುವ ಶಿಲೀಂಧ್ರನಾಶಕವನ್ನು ಉಪಯೋಗಿಸುತ್ತಾರಾದರೂ ಶುಂಠಿಯನ್ನು ಶಿಲೀಂಧ್ರನಾಶಕದ ದ್ರಾವಣದಲ್ಲಿ ಮುಳುಗಿಸಿದ ನಂತರ ೫ ನಿಮಿಷಗಳಲ್ಲೇ ಹೊರತೆಗೆದು, ನೆರಳಿನಲ್ಲಿ ೩೦ ನಿಮಿಷಗಳ ಕಾಲ ಒಣಗಿಸದೆ ಬಿತ್ತನೆ ಮಾಡುತ್ತಾರೆ. ಇದು ಸರಿಯಾದ ಬೀಜೋಪಚಾರದ ಕ್ರಮವಲ್ಲ. ಒಂದು ಬಾರಿ ಕಲಸಿದ ದ್ರಾವಣದಲ್ಲಿ ಬೀಜೋಪಚಾರ ಮಾಡಿದ ನಂತರ ಮತ್ತೆ ಅದೇ ದ್ರಾವಣವನ್ನು ಬಳಸುವುದಾದರೆ ಶೇ.೫೦ ಶಿಫಾರಸು ಮಾಡಿರುವ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಮತ್ತೆ ಸೇರಿಸಬೇಕು. ಬೀಜೋಪಚಾರಕ್ಕೆ ಶಿಫಾರಸು ಮಾಡಿರುವ ಶಿಲೀಂದ್ರ ನಾಶಕ ಮತ್ತು ಕೀಟನಾಶಕವನ್ನು ಮಾತ್ರ ಉಪಯೋಗಿಸಬೇಕು.
ಸಲಹೆ ನೀಡಲಾದ ಪೀಡೆನಾಶಕವನ್ನು ಬಿಟ್ಟು ಬೇರೆ ಯಾವುದೇ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಮಿಶ್ರಣ ಮಾಡಬಾರದು ಎಂದು ಗೋಣಿಕೊಪ್ಪಲಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಸಲಹೆ ನೀಡಿದೆ.
” ಶುಂಠಿಯು ಮುಖ್ಯವಾದ ಸಂಬಾರ ಬೆಳೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಶುಂಠಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೆಲವರು ಪಾಳು ಬಿಟ್ಟಿರುವ ಕೃಷಿ ಪ್ರದೇಶಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಶುಂಠಿ ಬೆಳೆಯುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಶುಂಠಿ ಬಿತ್ತನೆ, ಬೀಜೋಪಚಾರ ಮಾಡದಿದ್ದಲ್ಲಿ ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಕೃಷಿ ವಿಜ್ಞಾನ ಕೇಂದ್ರದ ಸಲಹೆಯನ್ನು ಪಡೆದು ರೈತರು ಲಾಭದಾಯಕ ಕೃಷಿ ಮಾಡಬೇಕು.”
-ಡಾ.ಕೆ.ವಿ.ವೀರೇಂದ್ರ ಕುಮಾರ್, ಪ್ರಕೃತಿ, ಸಸ್ಯ ಸಂರಕ್ಷಣೆ ವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…