Andolana originals

‘ಬಹುರೂಪಿ: ಅಂಬೇಡ್ಕರ್ ಆಶಯಗಳ ವಿಶ್ವಮೈತ್ರಿ ಪ್ರದರ್ಶನ’

ಸಂದರ್ಶನ: ಚಿರಂಜೀವಿ ಸಿ.ಹುಲ್ಲಹಳ್ಳಿ

‘ಆಂದೋಲನ’ ಸಂದರ್ಶನದಲ್ಲಿ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಭಿಮತ 

ಮೈಸೂರು: ರಂಗಭೂಮಿಯ ಒಳಗೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅರಿವಿನ ಬೆಳಕನ್ನು ಚೆಲ್ಲುವ ಹೊಸ ಪ್ರಯೋಗಕ್ಕೆ ಈ ಬಾರಿ ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಾಂದಿ ಹಾಡಿದೆ.

ಇದು ಬಹುರೂಪಿಯ ರಜತ ಮಹೋತ್ಸವ ವರ್ಷದ ಹೆಮ್ಮೆಯೂ ಹೌದು ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.

ಅಂಬೇಡ್ಕರ್ ಅವರ ಸಮಾನತೆ ಆಶಯದ ಚಿಂತನೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿ ಅಂಬೇಡ್ಕರ್‌ರ ಹೆಸರಿನಲ್ಲಿ , ಅವರ ಆಶಯಗಳನ್ನು ದೃಶ್ಯರೂಪದಲ್ಲಿ ಜನರಿಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದರು.

‘ಆಂದೋಲನ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ನಾಟಕೋತ್ಸವದ ರೂಪುರೇಷೆ, ಆಶಯಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಬಹುರೂಪಿಯಲ್ಲಿ ಅಂಬೇಡ್ಕರ್ ಅವರ ಆಶಯಗಳನ್ನು ಪ್ರಧಾನವಾಗಿ ಇಟ್ಟು ಕೊಂಡಿರುವ ಉದ್ದೇಶ?

ಸತೀಶ್ ತಿಪಟೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಬಸವಣ್ಣ, ಟಾಲ್‌ಸ್ಟಾಯ್, ರವೀಂದ್ರ ನಾಥ ಠಾಗೋರ್‌ರ ಆಶಯಗಳನ್ನೂ ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಹಿಂದಿನ ಕೆಲ ನಾಟ ಕೋತ್ಸವಗಳಲ್ಲಿ ಪ್ರಯೋಗ ಮಾಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಬಾಬಾ ಸಾಹೇಬ್‌ರ ಸಮಾನತೆಯನ್ನು ಕುರಿತು ಅರಿವು ಮೂಡಿಸಲು ರಂಗಾಯಣ ಸಜ್ಜಾಗಿದೆ. ಅಂಬೇಡ್ಕರ್ ಬದುಕು, ಬರಹ, ಜೀವನ ಚರಿತ್ರೆ, ಹೋರಾಟಗಳ ಗೀತೆಗಳು, ನಾಟಕಗಳು, ಜನಪದ ಕಲೆಗಳ ಮೂಲಕ ಸಮಾನತೆಯ ಸಂದೇಶ ಸಾರಲು ರಂಗಾಯಣ ಸಜ್ಜಾಗಿದೆ. ಜ. ೧೧ರಿಂದ ೧೮ರವರೆಗೆ ೮ ದಿನಗಳ ಕಾಲ ರಂಗಾಯಣವು ಬಾಬಾಸಾಹೇಬರ ಸಾಂಸ್ಕೃತಿಕ ಅನುಸಂಧಾನಕ್ಕೆ ಮುನ್ನುಡಿಯಾಗಲಿದೆ.

ಆಂದೋಲನ: ಈಗಿನ ಕಾಲಘಟ್ಟದಲ್ಲಿ ಅಂಬೇಡ್ಕರ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಏನು ಹೇಳುತ್ತೀರಿ?

ಸತೀಶ್ ತಿಪಟೂರು: ಬಾಬಾ ಸಾಹೇಬರು ಭಾರತಕ್ಕೆ ಸೀಮಿತವಾಗಿಲ್ಲ. ಅವರದ್ದು ವಿಶ್ವಪ್ರಜ್ಞೆ. ಅವರ ಅರಿವಿನ ಬಗೆಗೆ ಕಳೆದ ಒಂದೂವರೆ ದಶಕದಲ್ಲಿ ಬಹಳಷ್ಟು ಸಂಶೋಧನೆಗಳು ನಡೆದಿವೆ; ಈಗಲೂ ನಡೆಯುತ್ತಿವೆ. ಜಾತೀಯತೆ, ಭೇದ-ಭಾವ, ತಾರತಮ್ಯ, ಶೋಷಣೆ ಇದೆಯೋ ಅಲ್ಲೆಲ್ಲಾ ಬಾಬಾ ಸಾಹೇಬರು ಬಿಡುಗಡೆಯ ಬೆಳಕಾಗಿದ್ದಾರೆ. ಹೀಗಾಗಿ ಯಾವುದೇ ಭೇದವಿಲ್ಲದೆ, ಪ್ರತಿಯೊಬ್ಬರೂ ಬಾಬಾಸಾಹೇಬರ ಬಗ್ಗೆ ಅರಿಯುವುದು ಇವತ್ತಿನ ತುರ್ತಾಗಿದೆ. ಬಾಬಾ ಸಾಹೇಬರ ಹೋರಾಟಗಳು, ಆಶಯಗಳೊಂದಿಗೆ ಸಾಂಸ್ಕೃತಿಕ ಅನುಸಂಧಾನ ಮಾಡಬೇಕಿದೆ. ಆ ಮೂಲಕ ಅವರನ್ನು ಮೂಲನೆಲೆಯಲ್ಲಿಯೇ ನೋಡುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ನಾಟಕ, ಹಾಡುಗಳು, ಚಿತ್ರಕಲೆ, ಚಲನಚಿತ್ರಗಳಲ್ಲಿ ಬಾಬಾ ಸಾಹೇಬರನ್ನು ಮುಖ್ಯವಾಗಿ ಪರಿಗಣಿಸಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ಎಲ್ಲ ಮಜಲುಗಳನ್ನೂ ಒಂದೇ ಸೂರಿನಡಿಯಲ್ಲಿ ಬಹುರೂಪಿ ಕೊಡಲಿದೆ ಎಂದರು.

ಆಂದೋಲನ: ಮಣಿಪುರದ ೮೦ ವರ್ಷ ವಯಸ್ಸಿನ ಮಹಿಳಾ ಕಲಾವಿದರಾದ ಹೇಯ್ನಾಮ್ ಸಾಬಿತ್ರಿ ಅವರನ್ನು ಬಹುರೂಪಿಗೆ ಆಯ್ಕೆ ಮಾಡಿರುವುದಕ್ಕೆ ಕಾರಣವೇನು?

ಸತೀಶ್ ತಿಪಟೂರು: ಹೇಯ್ನಾಮ್ ಸಾಬಿತ್ರಿ ಕೇವಲ ಮಣಿಪುರಕ್ಕೆ ಸೀಮಿತವಾದ ಕಲಾವಿದರಲ್ಲ. ದೇಶದ ರಂಗಭೂಮಿಯನ್ನು ಪ್ರತಿನಿಧಿಸುವ ಪ್ರತಿಭಾವಂತರು. ೨೦೧೨ರಿಂದ ಫ್ರಾನ್ಸ್, ಸ್ವೀಡನ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದ ಯುವ ಕಲಾವಿದರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕಲಾ ಸಾಧನೆಯು ಹಲವಾರು ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಮತ್ತು ಸಂಶೋಧ ನೆಯ ಆಸಕ್ತಿಗೆ ಕಾರಣವಾಗಿದೆ. ೮೦ ವರ್ಷದ ವಯಸ್ಸಿ ನವರಾದ ಇವರು ಈಗಲೂ ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ಹಲವು ಪ್ರಯೋಗಗಳು ರಂಗಭೂಮಿಯ ಪಠ್ಯಗಳಾಗಿವೆ. ನಟಿಯಾಗಿ ಭಾರತದಲ್ಲಿ ದೊಡ್ಡ ಹೆಸರು. ಇವರನ್ನು ಗೌರವಿಸುವುದು ರಂಗಾಯಣದ ಹೆಮ್ಮೆ ಎಂದರು.

ಆಂದೋಲನ: ಪಂಜಾಬ್ ರಾಜ್ಯದ ಗಾಯಕರಾದ ಗಿನ್ನಿ ಮಾಯಿ ಅವರ ಕಾರ್ಯಕ್ರಮವನ್ನೂ ಆಯೋಜಿಸಿದ್ದೀರಿ. ಸ್ಥಳೀಯ ರಂಗಾಸಕ್ತರು ಸ್ಪಂದಿಸುವ ನಿರೀಕ್ಷೆ ಇದೆಯೇ?

ಸತೀಶ್ ತಿಪಟೂರು: ಪ್ರಸ್ತುತ ದೇಶದಲ್ಲಿ ಜನಪ್ರಿಯ ಗಾಯಕರಲ್ಲಿ ಗಿನ್ನಿಮಾಯಿ ಕೂಡ ಒಬ್ಬರು. ಮೂಲತಃ ಪಂಜಾಬ್ ರಾಜ್ಯದ ಇವರು ‘ಅಂಬೇಡ್ಕರ್ ರೈಟ್’ ಹಾಡುಗಳನ್ನು ಕಟ್ಟಿ ಹಾಡಿ ಜಾಗತಿಕವಾಗಿ ಪ್ರಸಿದ್ಧರಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಇವರ ಕಾರ್ಯಕ್ರಮ ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.

ಆಂದೋಲನ: ಈ ಬಾರಿಯ ಬಹುರೂಪಿ ನಿರೀಕ್ಷೆಗಳೇನು?

ಸತೀಶ್ ತಿಪಟೂರು: ೨೫ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಬಹುರೂಪಿ ನಾಟಕೋತ್ಸವ ಕುರಿತು ಬಹಳಷ್ಟು ನಿರೀಕ್ಷೆಗಳು ಇವೆ. ಆದರೆ, ಈ ನಿರೀಕ್ಷೆಗಳನ್ನು ನಾನು ಹೇಳುವುದಕ್ಕಿಂತ ಉತ್ಸವದಲ್ಲಿ ಪಾಲ್ಗೊಂಡ ಜನ ಸಮೂಹ ಹೇಳಿದರೆ ಚೆನ್ನಾಗಿರುತ್ತದೆ. ಬಾಬಾಸಾಹೇಬರ ವಿಶ್ವಜ್ಞಾನದ ಅರಿವನ್ನು ಹೊನಲಾಗಿಸುವ ನಿಟ್ಟಿನಲ್ಲಿ ಬಹುರೂಪಿ ಯಶಸ್ವಿಯಾಗುವ ನಿರೀಕ್ಷೆ ಇದೆ

ಆಂದೋಲನ ಡೆಸ್ಕ್

Recent Posts

ಮಾರ್ಚ್.‌6ರಂದು ರಾಜ್ಯ ಬಜೆಟ್‌ ಮಂಡನೆಗೆ ಚಿಂತನೆ

ಬೆಂಗಳೂರು: ಮುಂಬರುವ ಮಾರ್ಚ್‌ ತಿಂಗಳಲ್ಲಿ ಬಜೆಟ್‌ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.‌6ರಂದು ಬಜೆಟ್‌ ಮಂಡಿಸುವ ಬಗ್ಗೆ ಸಿಎಂ…

22 mins ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಪ್ರಯಾಣಿಕರಿಗೆ ಗಾಯ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…

34 mins ago

ಮೈಸೂರು| ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಪೊರಕೆ ಚಳುವಳಿ

ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…

47 mins ago

ಮಲೆಮಹದೇಶ್ವರ ಬೆಟ್ಟ: ನೂತನ ಸೋಲಾರ್‌ ಘಟಕ ಉದ್ಘಾಟಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…

1 hour ago

ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಜಲಜಾ ಶೇಖರ್‌ ಆಯ್ಕೆ

ಸೋಮವಾರಪೇಟೆ: ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ.9, 2026ರಂದು ಐಗೂರು ಗ್ರಾಮದಲ್ಲಿ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ…

1 hour ago

ರಾಜ್ಯ ಸರ್ಕಾರ ಜಿಲ್ಲೆಗೊಂದು ಮಿನಿ ಚಿತ್ರಮಂದಿರ ನಿರ್ಮಿಸಬೇಕು: ಸಾಹಿತಿ ಬರಗೂರು ರಾಮಚಂದ್ರಪ್ಪ

ಮೈಸೂರು: ಕನ್ನಡ ಚಲನಚಿತ್ರೋದ್ಯಮದ ಉತ್ತಜನ ಹಾಗೂ ಪ್ರೋತ್ಸಾಹಕ್ಕಾಗಿ ರಾಜ್ಯ ಸರ್ಕಾರ ಜಿಲ್ಲೆಗೊಂದು ಮಿನಿ ಚಿತ್ರಮಂದಿರ ನಿರ್ಮಿಸಬೇಕು ಎಂದು ಹಿರಿಯ ಸಾಹಿತಿ…

2 hours ago