Andolana originals

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ

  • ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ

ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’ ದಶ ಕಥೆಗಳ ತಂಗುದಾಣವೆಂಬ ಅರ್ಥಪೂರ್ಣವಾದ ಶೀರ್ಷಿಕೆಯ ಹೊತ್ತಗೆ ಓದುಗರಲ್ಲಿ ಭರವಸೆಯನ್ನು ಮೂಡಿಸುವ ಕಥಾ ಸಂಕಲನವಾಗಿದೆ. ದಣಿದವರಿಗೆ ಕ್ಷಣಕಾಲ ತಂಗಿ ವಿಶ್ರಾಂತಿ ಪಡೆಯುವ ತಾಣವೇ ಅರವಟ್ಟಿಗೆ. ಹಾಗೆಯೇ,“ಧಾವಂತ ಬದುಕಿನ ಗಡಿಬಿಡಿಯಲ್ಲಿ ಓದು ಮನಸ್ಸಿಗೆ ವಿಶ್ರಾಂತಿಯ ತಂಗುದಾಣವಾಗಿ, ಭಾವನೆಗಳಿಗೆ ಹೊಸ ಚೈತನ್ಯ ನೀಡುತ್ತದೆ. ” ಬದುಕಿನ ವಿಭಿನ್ನ ಮಗ್ಗುಲುಗಳಿಂದ ಹೊರಟ ಕೃತಿಯ ಎಲ್ಲ ಹತ್ತು ಕಥೆಗಳೂ ಓದುಗರನ್ನು ಕ್ಷಣಕಾಲ ನಿಲ್ಲಿಸಿ, ತಮ್ಮ ಸುತ್ತಲಿನ ಪರಿಸರ, ಸಂಬಂಧಗಳು, ನೆಲಮೂಲ ಸಂಸ್ಕೃತಿ ಮತ್ತು ಮನುಷ್ಯನ ಅಂತರಂಗದ ಕುರಿತು ಆಲೋಚಿಸುವಂತೆ ಮಾಡುತ್ತವೆ. ಇಲ್ಲಿನ ಕಥೆಗಳು ಕೇವಲ ಘಟನೆಗಳನ್ನು ಹೇಳುವುದಿಲ್ಲ. ಅವು ಬದುಕಿನ ಸತ್ಯಗಳನ್ನು ಮನಸ್ಸಿಗೆ ತಟ್ಟುವಂತೆ ತೆರೆದಿಡುತ್ತವೆ. ಹರಯದ ಭಾವನೆಗಳಿಂದ ಹಿಡಿದು ಬದುಕಿನ ಪಕ್ವತೆಯವರೆಗೆ ಹಲವು ಮಜಲುಗಳನ್ನು ದಾಟುವ ಕಥೆಗಳು ಇಲ್ಲಿವೆ.

ನಂಜನಗೂಡು ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಕುಮಾರ್‌ರವರು ರೈತ ಕುಟುಂಬದ ಗ್ರಾಮೀಣ ಪರಿಸರದಲ್ಲಿ ಬೆಳೆದವರು. ಇವರು ಜನಪದ ಬದುಕಿನ ಲಯ ಮತ್ತು ನೆಲಮೂಲ ಸಂಸ್ಕೃತಿಯ ಜೀವಂತ ಮೌಲ್ಯಗಳನ್ನು ಮನನ ಮಾಡುತ್ತಾ, ಅವುಗಳನ್ನು ಕುರಿತು ನಿರಂತರವಾಗಿ ಆಲೋಚಿಸುವ ಸಂವೇದನಾಶೀಲ ಸಾಹಿತಿಯಾಗಿದ್ದಾರೆ.

ಅರವಟ್ಟಿಗೆ ಕೃತಿ ಮನುಷ್ಯ ಬದುಕಿನ ಹಲವು ಭಾವ-ಬಂಧಗಳ ಬೆಸುಗೆಯಾಗಿ ಕಾಣಿಸುತ್ತದೆ. ಲೇಖಕರೇ ಹೇಳುವಂತೆ ಇಲ್ಲಿಯ ಎಲ್ಲ ಕಥೆಗಳು ಸಾಂದರ್ಭಿಕವಾಗಿ ಸಹಜ ಅಭಿವ್ಯಕ್ತಿಯಾಗಿ ಮೂಡಿಬಂದಿವೆ. ಅವರನ್ನು ಸದಾ ಕಾಡುತ್ತಿದ್ದ ವಸ್ತು ಮತ್ತು ಪಾತ್ರಗಳು ಆಸಕ್ತಿದಾಯಕವಾಗಿ ಮೂಡಿಬಂದಿವೆ. ಯಾವುದೇ ಕಥೆಯ ಭಾಷೆ ತನ್ನ ಪರಿಸರವನ್ನು ಬಿಟ್ಟು ಇರುವುದಿಲ್ಲ. ಕಥೆ ಪರಿಸರವನ್ನು ಬಿಟ್ಟು ಹೊರಗೆ ನಿಂತಾಗ ಅದು ಕೇವಲ ಘಟನೆಗಳ ಸರಮಾಲೆಯಾಗುತ್ತದೆ. ಪರಿಸರದೊಳಗೆ ಬೆರೆತಾಗ ಮಾತ್ರ ಅದು ಜೀವಂತವಾಗುತ್ತದೆ.

ಕಥೆ ಓದಿ ಮುಗಿದ ಮೇಲೂ ಅದರ ಪಾತ್ರವೊಂದು, ಮಾತೊಂದು, ನೋವೊಂದು ಅಥವಾ ಮೌನವೊಂದು ಸಹೃದಯನ ಮನಸ್ಸಿನಲ್ಲಿ ಉಳಿದರೆ ಅದೇ ಕಥೆಯ ನಿಜವಾದ ಗೆಲುವು. ಇಲ್ಲಿ ಕೌಟುಂಬಿಕತೆಯ ಮಹತ್ವ, ವೈಚಾರಿಕತೆ, ವೈಜನಿಕತೆಯ ಅರಿವಿನ ಅಗತ್ಯತೆ, ಬಡತನ, ಹಸಿವು, ಜತೀಯತೆಯ ಕ್ರೌರ್ಯ ಎಲ್ಲವನ್ನೂ ಲೇಖಕರು ಕಟ್ಟಿಕೊಟ್ಟಿದ್ದಾರೆ. ಶಿವಕುಮಾರ್‌ರವರ ಸಾಮಾಜಿಕ ಕಳಕಳಿ ಅವರ ಎಲ್ಲಾ ಕಥೆಗಳಲ್ಲೂ ಕಂಡು ಬರುತ್ತದೆ. ವಿಶೇಷವಾಗಿ ಈ ಕೃತಿ ಓದುಗನ ಅಂತಃಕರಣವನ್ನು ಕಲಕುವಂತಿದೆ.

ಮೊದಲ ಕಥೆ ‘ಮಾನಸಿ’ಯಲ್ಲಿ ವೃದ್ಧರು ಮತ್ತು ಮಕ್ಕಳ ನಡುವಿನ ಸಂಬಂಧಗಳ ತಾಕಲಾಟ ಸೊಗಸಾಗಿ ನಿರೂಪಣೆಗೊಂಡಿದೆ. ತಂದೆ ತಾಯಂದಿರ ನೋವು, ಮಕ್ಕಳ ತಾತ್ಸಾರ, ಅಂತರ್ಜಾತಿ ವಿವಾಹ, ಆಸ್ತಿ ಮೇಲಿನ ಮೋಹ ಹಾಗೂ ದೇಹ ದಾನದಂತಹ ಮಹತ್ವದ ವಿಚಾರಗಳು ಕತೆಯಲ್ಲಿ ಮನೋಜ್ಞವಾಗಿ ಮೂಡಿಬಂದಿವೆ.

‘ಪೆರಿಯಸ್ವಾಮಿ’ ಎಲ್ಲರ ಸಂಕಷ್ಟಗಳಿಗೆ ಹೆಗಲು ಕೊಡುವ ಮಾನವೀಯ ವ್ಯಕ್ತಿತ್ವದ ಸ್ವಾಭಿಮಾನಿ ಮನುಷ್ಯ. ತನ್ನವರೇ ತನ್ನನ್ನು ನಂಬದ ಕಾರಣ ಆತ ಅನುಭವಿಸಿದ ಯಾತನೆ ಮನ ಮುಟ್ಟುತ್ತದೆ.

‘ಆತ್ಮಹತ್ಯೆಯ ಸುತ್ತ’ ಕತೆಯು ಪತ್ರಿಕೋದ್ಯಮ ಪತ್ರಕರ್ತರ ಒಳ ಹೊರಗಿನ ಆಯಾಮಗಳನ್ನು ಸೂಕ್ಷ್ಮ ದೃಷ್ಟಿಯಿಂದ ತೆರೆದಿಡುತ್ತದೆ. ‘ಜತೀಕರಣ’ದಲ್ಲಿ ಸಮಾಜವನ್ನು ಕಾಡುತ್ತಿರುವ ಅಸಮಾನತೆ, ಜತೀಯತೆ ಹಾಗೂ ಧಾರ್ಮಿಕ ವಿಭಜನೆಗಳ ಮೊಗ್ಗುಲನ್ನು ತೆರೆದಿಡುತ್ತದೆ. ಬಡತನದ ಕ್ರೌರ್ಯವನ್ನು ಲೇಖಕರು ಓದುಗರ ಆಂತರ್ಯಕ್ಕೆ ತಲುಪಿಸಿದ್ದಾರೆ.

ಶೀರ್ಷಿಕೆಯ ಕತೆಯಲ್ಲಿ ಅರಸಿ ಬಂದವರಿಗೆ ಆಶ್ರಯ ನೀಡುತ್ತಿದ್ದ ‘ಅರವಟ್ಟಿಗೆ’ ಕಾಲಕ್ರಮೇಣ ನಿಜವಾದ ಉದ್ದೇಶಗಳಿಗಿಂತ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದನ್ನು ಅರವಟ್ಟಿಗೆಯೇ ಕುಟುಂಬದ ಸದಸ್ಯನೊಬ್ಬನೊಂದಿಗೆ ಆತ್ಮ ನಿವೇದನೆ ಮಾಡಿಕೊಳ್ಳುವಾಗ ಸಂದರ್ಭ ಭಾವಸ್ಪರ್ಶಿಯಾಗಿದೆ.

‘ಶ್ರುತಿ ಸೇರದ ಗಾನ’ ದುರಂತ ಪ್ರೇಮ ಕಥೆ. ಇಲ್ಲಿ ಮದುವೆಯು ಎರಡು ಕುಟುಂಬಗಳು ಒಪ್ಪಿ ಮಾಡಿದರೆ ಸಂಬಂಧ ಗಟ್ಟಿಗೊಳ್ಳುವ ಭಾವ ಸೊಗಸಾಗಿ ಬಿಂಬಿತವಾಗಿದೆ.

‘ಬಿ. ಕಾಂ ಹುಡುಗ’ ಕತೆಯು ಪ್ರಸ್ತುತ ಯುವಜನರ ಬದುಕಿನ ಬಗ್ಗೆ ಆತಂಕ ಹುಟ್ಟಿಸುತ್ತದೆ. ಪಕ್ವತೆ ಮೂಡುವ ಮುನ್ನವೇ ಪ್ರೀತಿಯ ಮೋಹಕ್ಕೆ ವಶವಾದರೆ, ಕನಸುಗಳಿಗಿಂತ ಗೊಂದಲಗಳೇ ಹೆಚ್ಚಾಗುವುದು ಎನ್ನುವ ನಿಲುವು ಕತೆಗಾರರದಾಗಿದೆ.

‘ಹಸಿರು ಟವೆಲ್’ ಕಗ್ಗಲೂರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಕೈಗಾರಿಕೆ ಆರಂಭಿಸಲು ಬರುವ ಸನ್ನಿವೇಶ, ರೈತ ಸಂಘದ ಪ್ರಾಮಾಣಿಕ ಹೋರಾಟ ಮತ್ತು ಪರಿಣಾಮಗಳು ವರ್ತಮಾನ ಸಮಾಜಕ್ಕೆ ಮಾದರಿಯಾಗುವಂತಿದೆ. ‘ಮುಚ್ಚಿಟ್ಟ ಇತಿಹಾಸ’ ವಾಸ್ತವದ ಮುಖವನ್ನು ಮಸುಕಾಗಿಸುವ ಹುನ್ನಾರ ಗಳು ನಿರಂತರವಾಗಿ ಸಾಗುತ್ತಲೇ ಇರುತ್ತವೆ. ಪ್ರಾಮಾಣಿಕವಾದ ಅನ್ವೇಷಣೆಯ ಮೂಲಕ ನಿಜವಾದ ಇತಿಹಾಸ ಬೆಳಕಿಗೆ ಬರುತ್ತದೆ ಎನ್ನುವುದು ವಾಸ್ತವವಾದವಾಗಿದೆ.

‘ಬಯಸಿ ಬಂದವರು’ ಆಸ್ತಿಯ ದಾಹ, ಸಂಬಂಧಗಳನ್ನು ಮರೆತು ಸ್ವಾರ್ಥಕ್ಕೆ ಮಣೆ ಹಾಕುತ್ತದೆ. ತನ್ಮೂಲಕ ಲೇಖಕರ ಮಾನವೀಯತೆ, ಸಹಜ ನ್ಯಾಯದ ಮನೋಭಾವವನ್ನು ಪ್ರತಿಪಾದಿಸುತ್ತದೆ.

ಒಟ್ಟಾರೆ ಈ ಕೃತಿಯಲ್ಲಿನ ಕಥೆಗಳು ಓದುಗನ ಮನಸ್ಸಿನಲ್ಲಿ ಪ್ರಶ್ನೆ, ಅನುಭವ ಮತ್ತು ನೆನಪನ್ನು ಉಳಿಸಿ ಹೊಸ ಆಲೋಚನೆಯ ತಂಗುದಾಣಗಳಾಗಿವೆ.

 

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

14 mins ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

15 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

18 hours ago

ಶೂಟೌಟ್‌ ಪ್ರಕರಣ ; ಮೃತರು ಬೇಟೆಗಾರರು ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ

ಹನೂರು : ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​​ ಸಿಗುತ್ತಿದೆ. ದನ ಹುಡುಕಲು ಹೋಗಿದ್ದವರ…

18 hours ago

ನಕಲಿ ಔಷಧ ಜಾಲ ಪತ್ತೆ ಪ್ರಕರಣ ; ಎಸ್‌ಐಟಿ ತನಿಖೆಗೆ ಆದೇಶ

ಬೆಂಗಳೂರು: ಬೆಂಗಳೂರು ದಕ್ಷಿಣದ ದೊಡ್ಡೇರಿಯಲ್ಲಿ ಬೃಹತ್ ನಕಲಿ ಔಷಧ ಜಾಲ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಪ್ರಕರಣವನ್ನು…

19 hours ago

ಮುಡಾ ಬದಲಿ ನಿವೇಶನಗಳ ಹಂಚಿಕೆ ಆದೇಶ ರದ್ದು ; ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಸಚಿವ ಯತೀಂದ್ರ

ಸದ್ದಿಲ್ಲದೆ ಕೈಗೊಂಡ ತೀರ್ಮಾನಕ್ಕೆ ಬೆಚ್ಚಿದ ರಿಯಲ್‌ ಎಸ್ಟೇಟ್ ಉದ್ಯಮಿಗಳು; ಮೂರು ಪಕ್ಷಗಳಲ್ಲೂ ತಳಮಳ ಕೆ.ಬಿ.ರಮೇಶನಾಯಕ ಮೈಸೂರು : ಕಳೆದ ಎರಡು…

20 hours ago