ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು
ಭಾರತದ ಸಂಸತ್ತಿನಲ್ಲಿ ಮತ್ತು ಫೇಸ್ಬುಕ್-ವಾಟ್ಸ್ಆಪ್ಗಳಲ್ಲಿ ಕೆಲವಾರಗಳ ಹಿಂದೆ, ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದರ ಬಗೆಗೆ ಬಿಸಿ-ಬಿಸಿ ಚರ್ಚೆ, ವಿವಾದಗಳು ನಡೆದದ್ದು ಈಗ ಹಳೆಯ ವಿಷಯ. ಅಂತಹುದೇ ಚರ್ಚೆ ಕರ್ನಾಟಕದ ನಾಡಗೀತೆಯ ಬಗೆಗೂ ನಡೆದದ್ದು ನೆನಪಿರಬಹುದು. ಇತ್ತೀಚಿನ ದಿನಗಳಲ್ಲಿ, ನಮ್ಮ ಸರ್ಕಾರ ಹಾಲು, ಮೊಸರಿನ ಬೆಲೆ ಏರಿಸಿರುವ ವಿಚಾರದಲ್ಲೂ ಕಾವೇರಿದ ಚರ್ಚೆಗಳು ನಡೆಯುತ್ತಿವೆ. ಹೀಗೆ ವಿವಾದಗಳೆದ್ದಾಗ, ನಮ್ಮ ಚುನಾಯಿತ ಪ್ರತಿನಿಧಿಗಳ ಬದಲಾಗಿ, ನಾವೇ ಖುದ್ದು ನಿರ್ಧರಿಸುವುದು ಉತ್ತಮವೇ?
ಅಮೆರಿಕದಲ್ಲಿ ಅದು ಸಾಧ್ಯವಿದೆ. ಬ್ಯಾಲಟ್ ಪೇಪರ್ ಕೇವಲ ಅಭ್ಯರ್ಥಿಗಳ ಆಯ್ಕೆ ಅಥವಾ ಕೆಳಗಿಳಿಸುವುದಕ್ಕೆ ಮಾತ್ರ ಸೀಮಿತವಲ್ಲ. ಭಾರತದಲ್ಲಿ ನಮ್ಮ ಪ್ರತಿನಿಧಿಳು ಶಾಸನ ಸಭೆಗಳಲ್ಲಿ ಚರ್ಚೆ ಮಾಡಿ ನಿರ್ಧರಿಸುವ ನಾಡಗೀತೆಯ ಉದ್ದ, ಮೊಸರಿನ ಬೆಲೆ, ಅಂತಹ ಎಷ್ಟೋ ವಿಷಯಗಳನ್ನು, ಅಮೆರಿಕದಲ್ಲಿ ಮತದಾರರೇ ಚುನಾವಣೆ ಮೂಲಕ ನಿರ್ಧರಿಸುತ್ತಾರೆ.
ಹೀಗಾಗಿ, ಬ್ಯಾಲಟ್ ಪೇಪರಿನಲ್ಲಿ, ಕೇವಲ ಉಮೇದುವಾರರ ಹೆಸರುಗಳು ಇರುವುದಿಲ್ಲ. ವಿವಿಧ ವಿಚಾರಗಳ ಕುರಿತು ಓದಿ, ನಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿಯೂ ಇರುತ್ತದೆ. ಈ ಬಾರಿಯ ಚುನಾವಣೆಯಲ್ಲಿ, ಅಲಬಾಮಾ ರಾಜ್ಯದ ಮತದಾರರು, ತಮಗಿಷ್ಟವಾದ ಅಭ್ಯರ್ಥಿಗಳಿಗೆ ಮತ ಹಾಕುವುದರ ಜೊತೆಗೆ, ಅಲ್ಲಿನ ಸರ್ಕಾರಿ ಹೈಸ್ಕೂಲುಗಳಲ್ಲಿ ವಾರಕ್ಕೊಮ್ಮೆಯಾದರೂ ಕಡ್ಡಾಯ ವಾಗಿ ರಾಷ್ಟ್ರಗೀತೆಯ ಮೊದಲ ಚರಣವನ್ನು ಹಾಡಲೇಬೇಕೇ ಎಂಬುದನ್ನು ನಿರ್ಧರಿಸಬೇಕಿತ್ತು. ಇನ್ನು, ಐಡಾಹೋ ರಾಜ್ಯದಲ್ಲಿ, ಅಲ್ಲಿನ ಮತದಾರರ ಮುಂದಿದ್ದ ಒಂದು ಪ್ರಶ್ನೆ: ‘ಆರು ವಿವಿಧ ಬಂದೂಕುಗಳಲ್ಲಿ ಅಧಿಕೃತವಾದ ನಾಡ-ಬಂದೂಕು (State-Gun) ಯಾವುದಿರಬೇಕು?’ ಇದರಲ್ಲಿ, ಅಂತಿಮವಾಗಿ ೧.೬ ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದ ‘ವಿಂಚೆಸ್ಟರ್ ಮಾಡೆಲ್ ೧೮೭೩’ ಬಂದೂಕು ‘ಸ್ಟೇಟ್ ಗನ್’ ಆಗಿ ಆಯ್ಕೆಯಾಯಿತು!
ಕೇವಲ ಬಂದೂಕು ಮಾತ್ರವಲ್ಲ, ರಾಜ್ಯದ ಅಧಿಕೃತ ಹಕ್ಕಿ, ಹೂವು, ಹಣ್ಣು, ಮತ್ತು ಸಿಹಿ ಉಪಹಾರಗಳನ್ನು ಸಹ ಅಮೆರಿಕನ್ನರು ಮತದಾನದ ಮೂಲಕವೇ ನಿರ್ಧರಿಸುತ್ತಾರೆ! ಬಂದೂಕು ಮತ್ತು ಬೇಟೆ ಸಾಮಾನ್ಯವಿರುವ ಅಮೆರಿಕದಲ್ಲಿ, ಮುಂದೊಮ್ಮೆ, ‘ನಾಡ-ಬಂದೂಕಿನಿಂದ ನಾಡ- ಪಕ್ಷಿಯನ್ನು ಬೇಟೆಯಾಡ ಬಹುದೇ?’ ಎನ್ನುವುದೂ ಚುನಾವಣೆಯ ವಿಷಯವಾಗಬಹುದು. ಇದು ಉತ್ಪ್ರೇಕ್ಷೆಯ ಮಾತಲ್ಲ. ೧೯೯೦ರ ದಶಕದ ಚುನಾವಣೆಯೊಂದರಲ್ಲಿ, ಸ್ಯಾನ್ ಫ್ರಾನ್ಸಿಸ್ಕೋದ ಮತದಾರರು ‘ಪೊಲೀಸರು ಗಸ್ತು ತಿರುಗುವಾಗ, ಅವರು, ತಮ್ಮೊಂದಿಗೆ ಮಾತನಾಡುವ ಗೊಂಬೆ (Ventriloquist Dummy) ಇಟ್ಟುಕೊಳ್ಳಬಹುದೇ?’ ಎಂಬುದನ್ನು ಮತದಾನದ ಮೂಲಕ ನಿರ್ಧರಿಸಿದರು. ಶೇ.೫೧ರಷ್ಟು ಮತದಾರರು ಅದಕ್ಕೆ ತಮ್ಮ ಸಮ್ಮತಿ ನೀಡಿದರು. ಇದು ವಿಚಿತ್ರವೆ ನ್ನಿಸಿದರೆ, ಇದನ್ನೂ ಗಮನಿಸಿ: ಕೊಲರಾಡೋ ರಾಜ್ಯದ ಡೆನ್ವರ್ ನಗರದ ಮತ ದಾರರ ಮುಂದಿದ್ದ ಒಂದು ಪ್ರಶ್ನೆ: ‘ನಮ್ಮ ನಗರದಲ್ಲಿರುವ ಪರಗ್ರಹವಾಸಿಗಳನ್ನು ಮತ್ತು ಅವರ ವಾಹನಗಳನ್ನು (Aliens and UFOs) ಹದ್ದುಬಸ್ತಿನಲ್ಲಿಡಲು ಸಮಿತಿಯೊಂದನ್ನು ರಚಿಸಬೇಕೇ?’ ೨೦೧೦ರ ಆ ಚುನಾವಣೆಯ ಆ ಪ್ರಶ್ನೆಗೆ, ಶೇ.೮೭ ಮಂದಿ ಮತದಾರರು ‘ಬೇಡ’ ಎಂದೇ ಉತ್ತರಿಸಿದರಂತೆ. ಆ ಮತದಾರರಲ್ಲಿ, ಬಹುಪಾಲು ಮಂದಿ ಪರಗ್ರಹಗಳಿಂದ ಬಂದವರೇ ಇದ್ದಿರಬಹುದು.
ನಮ್ಮ ಚುನಾಯಿತ ಪ್ರತಿನಿಧಿಗಳ ಬದಲು, ನಾವೇ ಎಲ್ಲವನ್ನೂ ನಿರ್ಧರಿಸುವುದು ಮೇಲ್ನೋಟಕ್ಕೆ ಆಕರ್ಷಕವೆನ್ನಿಸಬಹುದು. ೧೯೯೦ರ ದಶಕದಲ್ಲಿ, ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ ಎಂಬ ಆತಂಕ ಕ್ಯಾಲಿಫೋರ್ನಿಯಾ ರಾಜ್ಯದ ಜನರಲ್ಲಿ ಮೂಡಿತು. ಅದಕ್ಕೆ ಪರಿಹಾರವನ್ನು ಅವರು ಚುನಾವಣೆಯ ಮೂಲಕ ಖುದ್ದಾಗಿ ಕಂಡುಕೊಂಡರು. ‘ಯಾರೇ ಆಗಲಿ ಮೂರು ಬಾರಿ ಅಪರಾಧ ಮಾಡಿದರೆ, ಅವರನ್ನು ಜೀವಾವಧಿಗೆ ಜೈಲಿನಲ್ಲಿ ಇಡಬೇಕೇ?’ ಎಂಬ ಬ್ಯಾಲಟ್ ಪ್ರಶ್ನೆಗೆ ಅವರು ಬಹುಮತದಿಂದ ‘ಹೌದು, ಅದೇ ಸರಿ’ ಎಂದು ಉತ್ತರಿಸಿದರು. ಮುಂದಿನ ದಶಕದ ಹೊತ್ತಿಗೆ ಅಲ್ಲಿನ ಜೈಲುಗಳು ಭರ್ತಿಯಾಗ ತೊಡಗಿದವು. ಹೀಗೆ ಜೀವಾವಽ ಶಿಕ್ಷೆಗೆ ಒಳಗಾದವರು, ಬಹು ಮಟ್ಟಿಗೆ, ಪಿಕ್- ಪಾಕೆಟ್ಟೋ, ಬ್ರೆಡ್ ಕಳ್ಳತನದಂತಹ ಪುಡಿಗಳ್ಳರು. ಕೊನೆಗೆ, ಪ್ರತಿನಿತ್ಯ ಬಂದು ತುಂಬುತ್ತಿದ್ದ ಅಂತಹವರನ್ನಿಡಲು, ಹೊಸ ಜೈಲುಗಳನ್ನು ನಿರ್ಮಿಸಬೇಕಾಯಿತು. ತುಂಬಿದ ಜೈಲುಗಳಲ್ಲಿರುವ ಆ ಕೈದಿಗಳನ್ನು ನೋಡಿಕೊಳ್ಳಲು ಪ್ರತಿ ವರ್ಷ ಸರ್ಕಾರಿ ಬೊಕ್ಕಸದಿಂದ ಹೆಚ್ಚು ಹೆಚ್ಚು ಹಣವನ್ನೂ ಪಕ್ಕಕ್ಕಿಡಬೇಕಾಯಿತು. ಬಿಗಡಾಯಿಸುತ್ತಿದ್ದ ಈ ಪರಿಸ್ಥಿತಿಯನ್ನು ಅದೇ ಮತದಾರರು ಇನ್ನೊಂದು ಚುನಾವಣೆಯ ಮೂಲಕ ನಿಭಾಯಿಸಿದರು: ‘೯೫೦ ಡಾಲರ್ಗಿಂತ ಕಡಿಮೆ ಮೊತ್ತದ ವಸ್ತುಗಳನ್ನು ಕದಿಯುವುದು ಜೈಲಿಗೆ ಕಳಿಸುವಂತಹ ಅಪರಾಧವೇ?’ ಎಂಬ ಪ್ರಶ್ನೆಗೆ ‘ಅಲ್ಲ’ ಎನ್ನುವುದೇ ಬಹು ಜನರ ಉತ್ತರವಾಯಿತು. ಈಗ ಇನ್ನೊಂದು ಸಮಸ್ಯೆ ಎದ್ದಿದೆ. ಇತ್ತೀಚಿನ ದಿನಗಳಲ್ಲಿ, ಕೆಲವೊಂದು ಪತ್ರಿಕಾ ವರದಿಗಳ ಪ್ರಕಾರ, ಅಲ್ಲಿನ ಅಂಗಡಿಗಳಲ್ಲಿ, ಕಳ್ಳರು, ಬೆಲೆ ನೋಡಿ, ೯೫೦ ಡಾಲರಿಗಿಂತ ಕಡಿಮೆ ಬೆಲೆಯ ವಸ್ತುಗಳನ್ನು ರಾಜಾರೋಷವಾಗಿ ಕದಿಯುತ್ತಿದ್ದಾರಂತೆ.
‘ಬೆಲೆ ನೋಡಿ ಕದಿಯುವುದು ದೊಡ್ಡ ತಪ್ಪೇ?’ ಎನ್ನುವುದೂ ಮುಂದೊಂದು ಚುನಾವಣೆಯ ವಿಷಯವಾಗಬಹುದು.
ನವದೆಹಲಿ: 13 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಪೊಲೀಸರು ನೋಟಿಸ್…
ಬೆಂಗಳೂರು: ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ, ಅಂದರೆ ಎಕ್ಯೂಐ, 186ಕ್ಕೆ ತಲುಪಿದೆ.…
ಬೆಂಗಳೂರು: ನಿಮ್ಮ ರೇಷನ್ ಕಾರ್ಡ್ಗೆ ಇನ್ನೂ ಇ-ಕೆವೈಸಿ ಮಾಡಿಸಿಲ್ವಾ? ಹಾಗಿದ್ದರೆ ಗಮನಿಸಿ. ಇ-ಕೆವೈಸಿ ಮಾಡಿಸಲು ಇಂದೇ ಕೊನೆಯ ದಿನ! ಈಗಾಗಲೇ…
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು, ನವೆಂಬರ್ 10, ಕೊನೆಯ ದಿನ. ಕೊನೆಯ ದಿನವಾದ್ದರಿಂದ…
ಈ ದೀಪ ಪ್ರೀತಿಯ ರೂಪ ನಾನೊಂದು ದೀಪ ಹಚ್ಚುತ್ತೇನೆ ನಮ್ಮೊಳಗಿನ ಅಜ್ಞಾನ, ಅಹಂ ಅಂಧಕಾರವೆಲ್ಲಾ ಅಳಿದು, ಸುಜ್ಞಾನದ ಬೆಳಕು ಬೆಳಗಲಿಯೆಂದು…
೨೦೨೫-೨೬ ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೊಡಮಾಡುವ ಸ್ವಚ್ಛ ಸರ್ವೇಕ್ಷಣ್ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರು ಭಾಜನವಾಗಿರುವುದು…