ಕೃಷ್ಣ ಸಿದ್ದಾಪುರ
ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನ; ನಿಂತಿರುವ ಲಾರಿಯೊಳಗೆ ರಾಶಿ ರಾಶಿ ಕಸ
ಸಿದ್ದಾಪುರ: ಸ್ವಚ್ಛತೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಎಲ್ಲೆಂದರಲ್ಲಿ ಕಸ ಹಾಕುವ ಪ್ರಕ್ರಿಯೆ ಮುಂದುವರಿದಿದೆ. ಈ ನಡುವೆ ಸಿದ್ದಾಪುರದಲ್ಲಿ ನಿಲುಗಡೆಯಾಗಿರುವ ಹಳೆಯ ಲಾರಿಯೇ ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಇದೇ ಲಾರಿಗೆ ಕಸ ತಂದು ಸುರಿಯಲಾಗುತ್ತದೆ.
ಸಿದ್ದಾಪುರದ ಮೈಸೂರು ರಸ್ತೆ ವ್ಯಾಪ್ತಿಯಲ್ಲಿ ಒಂದು ಹಳೆಯ ಲಾರಿ ೪ ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಿದೆ. ಈ ಲಾರಿಗೆ ಸಂಬಂಧಿಸಿದಂತೆ ಯಾವುದೇ ಮಾಲೀಕರು ಅಥವಾ ಸಂಬಂಧಿತರು ಮುಂದೆ ಬಂದು ಜವಾಬ್ದಾರಿ ವಹಿಸಿಕೊಳ್ಳದೆ ಇರುವುದರಿಂದ ಅದು ಕಸದ ತ್ಯಾಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ.
ನಿರುಪಯುಕ್ತವಾಗಿರುವ ಈ ಲಾರಿಯೊಳಗೆ ಮತ್ತು ಸುತ್ತಮುತ್ತ ಜನರು ಪ್ಲಾಸ್ಟಿಕ್, ಗೃಹ ತ್ಯಾಜ್ಯ, ಅಳಸಿದ ಆಹಾರ, ವಿವಿಧ ರೀತಿಯ ಕಸವನ್ನು ತಂದು ಎಸೆದಿದ್ದಾರೆ. ದಿನದಿಂದ ದಿನಕ್ಕೆ ಕಸದ ಪ್ರಮಾಣ ಹೆಚ್ಚಾಗಿ ಲಾರಿಯಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದೆ. ರಸ್ತೆಬದಿ ನಿಂತಿರುವ ಲಾರಿಯಲ್ಲಿ ಕಸ ಸಂಗ್ರಹವಾಗಿರುವುದರಿಂದ ಪರಿಸರ ಮಾಲಿನ್ಯದೊಂದಿಗೆ ಅರಣ್ಯ ಪ್ರದೇಶ ಹಾಗೂ ಪ್ರಕೃತಿ ಸಂಪತ್ತಿಗೆ ಹಾನಿ ಆಗುತ್ತಿದೆ.
ಜೊತೆಗೆ ದುರ್ನಾತ, ಕೀಟಗಳು ಹಾಗೂ ರೋಗಗಳ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಬೆನ್ನಲ್ಲೇ ಗ್ರಾ.ಪಂ. ಕಸ ತೆರವಿಗೆ ಕ್ರಮ ಕೈಗೊಂಡಿದೆ. ಗ್ರಾ.ಪಂ. ವತಿಯಿಂದ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಸ್ವಚ್ಛತೆ ಪ್ರಜ್ಞಾವಂತ ನಾಗರಿಕರ ಕರ್ತವ್ಯ: ಕೊಡಗು ಜಿಲ್ಲೆ ತನ್ನ ಹಸಿರು ಕಾಡು, ಸ್ವಚ್ಛ ವಾತಾವರಣ ಮತ್ತು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಆದರೆ ಇಂತಹ ನಿರ್ಲಕ್ಷ್ಯ ಮತ್ತು ಜವಾಬ್ದಾರಿಯ ಕೊರತೆಯಿಂದ ಸ್ವಚ್ಛ ಕೊಡಗು ಎಂಬ ನಮ್ಮ ಹೆಮ್ಮೆ ಮಸುಕಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ವಚ್ಛತಾ ಕಾರ್ಯ ಕೇವಲ ಆಡಳಿತ ವ್ಯವಸ್ಥೆಯ ಕೆಲಸವಲ್ಲ, ಅದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಬೇಕು ಎಂದು ಸಮಾಜಕ್ಕೆ ಕರೆ ನೀಡಿದ್ದಾರೆ.
” ಪ್ರಕೃತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ನಮ್ಮೆಲ್ಲರ ಹೊಣೆಯೂ ಹೌದು. ಪ್ರಜ್ಞಾವಂತ ನಾಗರಿಕರು ಬೇಜವಾಬ್ದಾರಿಯಾಗಿ, ತೋಚಿದಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ, ಸ್ವಚ್ಛತೆ ಕಾಪಾಡಬೇಕು. ಸ್ವಚ್ಛ ಕೊಡಗು-ಸುಂದರ ಕೊಡಗು ನಮ್ಮ ಜವಾಬ್ದಾರಿಯಾಗಿದೆ.”
-ಬಾವ ಮಾಲ್ದಾರೆ, ಕನ್ನಡ ಪರ ಹೋರಾಟಗಾರರು, ಸಿದ್ದಾಪುರ
” ಸಂಬಂಧಿತ ಇಲಾಖೆ ತಕ್ಷಣ ಕ್ರಮ ಕೈಗೊಂಡು ಈ ಲಾರಿಯನ್ನು ಇಲ್ಲಿಂದ ತೆರವುಗೊಳಿಸಬೇಕು. ಈ ಸ್ಥಳದಲ್ಲಿ ಮತ್ತೆ ಕಸ ಎಸೆಯದಂತೆ ಎಚ್ಚರಿಕಾ ಫಲಕಗಳು ಮತ್ತು ಮೇಲ್ವಿಚಾರಣೆ ವ್ಯವಸ್ಥೆ ಅಳವಡಿಸಬೇಕು. ಸಾರ್ವಜನಿಕರಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಬೇಕು.”
-ಅನ್ವೇಶ್, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ
” ಮೈಸೂರು ರಸ್ತೆಯಲ್ಲಿ ಕೆಟ್ಟು ನಿಂತ ವಾಹನದಲ್ಲಿ ಕಸ ತುಂಬಿರುವ ಬಗ್ಗೆ ಗಮನಕ್ಕೆ ಬಂದ ತಕ್ಷಣ ವಿಲೇವಾರಿ ಮಾಡಿಸಲಾಗಿದೆ. ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ಜಾಗದಸಮಸ್ಯೆ ಇದೆ. ನಗರದ ಎಲ್ಲ ಭಾಗಗಳಿಗೂ ಕಸ ಸಂಗ್ರಹಿಸಲು ವಾಹನ ಕಳುಹಿಸುತ್ತಿದ್ದೇವೆ. ಆದರೂ ಜನ ರಸ್ತೆಬದಿಗಳಲ್ಲಿ ಕಸ ಸುರಿಯುತ್ತಿದ್ದಾರೆ. ಕೆಲವು ಭಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ನಗರದ ಶುಚಿತ್ವ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ. ಎಲ್ಲೆಂದರಲ್ಲಿ ಕಸ ಎಸೆಯುವುದು ಕಂಡುಬಂದಲ್ಲಿ ದಂಡ ವಿಧಿಸುತ್ತಿದ್ದು, ಎಸೆಯುವವರ ಮಾಹಿತಿಯನ್ನು ಆಧಾರ ಸಹಿತ ನೀಡಿದವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುತ್ತಿದೆ.”
-ಪ್ರೇಮ ಗೋಪಾಲ, ಅಧ್ಯಕ್ಷರು, ಸಿದ್ದಾಪುರ ಗ್ರಾಪಂ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…