Andolana originals

ಜನಮೆಚ್ಚಿದ್ದ ಆರ್ಕೆಸ್ಟ್ರಾ ; ಬದಲಾದ ಕ್ರೇಜ್

ಆರ್ಕೆಸ್ಟ್ರಾ. . . ಈ ಪದ ಕೇಳಿದರೆ ಸಾಕು, ಯುವಜನರ ಎದೆ ಯಲ್ಲಿ ತಮ್ಮ ಮೆಚ್ಚಿನ ಸಿನಿಮಾಗಳ ಹಾಡುಗಳ ಝೇಂಕಾರ, ಸ್ವರ ಲಾಲಿತ್ಯ, ಸಂಗೀತದ ಸಂಭ್ರಮ ಏಕಕಾಲದಲ್ಲಿ ಮೇಳೈಸಿ ಸಂತಸ ವನ್ನು ಇಮ್ಮಡಿಯಾಗಿಸುತ್ತಿತ್ತು. ಹೌದು. ಅದೊಂದಿತ್ತು ಕಾಲ. . . ಈಗ ಒಂದು ಕೈಯಲ್ಲಿ ಮೊಬೈಲ್ -ನ್, ಇನ್ನೊಂದು ಕೈಯಲ್ಲಿ ಮೈಕ್ ಇದ್ದರೆ ಸಾಕು, ಸಕಲೆಂಟು ಬಗೆಯ ಹಾಡುಗಳೂ ಸಾಂಗೋ ಪಸಾಂಗವಾಗಿ ಮೂಡಿಬರುತ್ತವೆ. . . . ಇದು ಕರೋಕೆ ಕಾಲ!

೧೦-೧೫ ವರ್ಷಗಳ ಹಿಂದೆ ಆರ್ಕೆಸ್ಟ್ರಾ (ರಸಮಂಜರಿ) ವೈಭೋಗದಿಂದ ಕೂಡಿತ್ತು. ಸಂಗೀತ ಪರಿಕರಗಳನ್ನು ಬಳಸಿ ಕೊಂಡು ಕನಿಷ್ಠ ೮-೧೦ ಮಂದಿ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರನ್ನು ರಂಜಿಸುತ್ತಿದ್ದರು. ಕಾರ್ಯಕ್ರಮ ಸಂಗೀತಮಯವಾಗಿ ಯಶಸ್ವಿಯಾಗುತ್ತಿತ್ತು. ಯಾವಾಗ ಸಂಗೀತ ಸ್ವರಗಳ ಪರಿಕರಗಳನ್ನು ಬಳಸದೇ ಕೇವಲ ಯೂಟ್ಯೂಬ್‌ನಿಂದ ದೊರಕುವ ‘ಕರೋಕೆ’ಯ ತಂತ್ರಾಂಶವು ಲಭಿಸಲು ಶುರುವಾ ಯಿತೋ ಆಗ ಆರ್ಕೆಸ್ಟ್ರಾದ ಪರಿಸ್ಥಿತಿ ಚಿಲ್ಲರೆ ಕಾಸಿನಂತಾಯಿತು.

ಕಲಿತಿರುವ ಕಲೆಗಾಗಿ ಸ್ವರ ನಿಲ್ಲಿಸಲು ಆಗದ ಸ್ಥಿತಿಗೆ ಪರಿಶುದ್ಧ ಹಾಡುಗಾರರು ತಲುಪಿದ್ದಾರೆ. ಎಲ್ಲಾ ತರಹದ ಹಾಡುಗಳನ್ನು ಬಾಯಿಪಾಠ ಮಾಡಿಕೊಂಡು, ನಾನಾ ವಿಧದ ಸಂಗೀತ ಸ್ವರ ಗಳನ್ನು ನುಡಿಸಿ, ಆರ್ಕೆಸ್ಟ್ರಾ ಮಾಡುತ್ತಿದ್ದ ಕಾಲವೇ ಮನರಂಜ ನಾತ್ಮಕ ವೈಭೋಗದಿಂದ ವಿಜೃಂಭಿಸುತ್ತಿತ್ತು. ಆಗ ಹಾಡುತ್ತಿದ್ದ ತಂಡಗಳೂ ಕಡಿಮೆ ಸಂಖ್ಯೆಯಲ್ಲಿದ್ದವು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ, ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಹೋಗಿ ಹಾಡಬೇಕಾದಷ್ಟು ಬೇಡಿಕೆ ಆ ತಂಡ ಗಳಿಗಿತ್ತು. ಸಾಕಷ್ಟು ದೂರ ಕ್ರಮಿಸಬೇಕಾಗಿದ್ದ ಕಾರಣಕ್ಕೂ, ತಂಡ ಗಳು ಕಡಿಮೆ ಇದ್ದ ಕಾರಣಕ್ಕೂ, ಅನಿವಾರ್ಯ ಸಂದರ್ಭ ಗಳಿಂದ, ಪ್ರತಿಷ್ಠೆ ಕಾರಣಕ್ಕೂ ಒಪ್ಪಿತವಾಗುವ ತಂಡಗಳಿಗೆ ದೊರಕುತ್ತಿದ್ದ ಸಂಭಾವನೆ ಲಾಭದಾಯಕವಾಗಿಯೂ ಇರುತ್ತಿತ್ತು. ಆ ದಶಕಗಳಲ್ಲಿ ಒಂದು ಪ್ರದರ್ಶನಕ್ಕೆ ಸುಮಾರು ರೂ. ೨೫,೦೦೦- ೩೦,೦೦೦ ರೂ. ಗಳಷ್ಟು ಗೌರವಪೂರ್ವಕವಾಗಿ ಲಭಿಸುತ್ತಿತ್ತು.

ಯಾವಾಗ ಕರೋಕೆ ತಂತ್ರಾಂಶವು ಆವಿಷ್ಕಾರವಾಯಿತೋ, ಆಗ ಮೂಲೆ ಮೂಲೆಗಳಲ್ಲಿ ಸಣ್ಣ ಸಣ್ಣ ಆರ್ಕೆಸ್ಟ್ರಾ ತಂಡಗಳು ಹುಟ್ಟಿಕೊಂಡವು. ಸಂಗೀತದ ಗಂಧವೇ ಗೊತ್ತಿಲ್ಲದವರೂ ಹಾಡಲು ಶುರುಮಾಡಿದರು. ಒಂದರ್ಥದಲ್ಲಿ ‘ಏಳು ಸ್ವರಗಳು ಅನೇಕ ಭಾಗಗಳಾದಂತಾಯಿತು! ’ ಕರೋಕೆ ತಂತ್ರಾಂಶದಿಂದ ಹಾಡಲು ಮ್ಯಾನುವಲ್ ಇನ್‌ಸ್ಟ್ರುಮೆಂಟಲ್ಸ್ ಅಂದರೆ, ಸಂಗೀತ ನುಡಿಸುವ ಪರಿಕರಗಳು ಬೇಕಿಲ್ಲ. ಸ್ವರಗಳನ್ನು ನುಡಿಸುವವರೂ ಬೇಕಿಲ್ಲ, ಹಾಡಲು ಒಬ್ಬ ಗಂಡಸು, ಒಬ್ಬ ಹೆಂಗಸು, ಸೌಂಡ್ಸ್ ಇದ್ದರಷ್ಟೆ ಸಾಕು ಒಂದು ಆರ್ಕೆಸ್ಟ್ರಾ ಕಾರ್ಯ ಕ್ರಮ ಯಶಸ್ವಿಯಾಗಿಬಿಡುತ್ತದೆ. ಇದು ಈ ಕಾಲದ ಆರ್ಕೆಸ್ಟ್ರಾ ಸ್ಥಿತಿಯಾಗಿದೆ. ಈಗ ಕರೋಕೆ ಕಾರಣಕ್ಕಾಗಿ ಹುಟ್ಟಿಕೊಂಡ ಆರ್ಕೆಸ್ಟ್ರಾ ಪ್ರದರ್ಶನಗಳಿಗೆ, ಒಂದು ಪ್ರದರ್ಶನಕ್ಕೆ ದೊರೆಯ ಬಹುದಾದ ಸಂಭಾವನೆ ೮,೦೦೦-೧೦,೦೦೦ ರೂ. ಅಷ್ಟೆ. ಇದರಿಂದ ಆರ್ಕೆಸ್ಟ್ರಾದ ದುಸ್ಥಿತಿಯನ್ನು ಗ್ರಹಿಸಬಹುದು. ಇದರ ನಡುವೆಯೂ ತನ್ನ ಸಹಜತ್ವವನ್ನೂ, ಸಂಗೀತಕ್ಕೆ ಧಕ್ಕೆಯಾಗದಂತೆ ಮ್ಯಾನುವಲ್ ಇನ್‌ಸ್ಟ್ರುಮೆಂಟಲ್ಸ್ ಬಳಸುತ್ತ ಶಿಸ್ತು, ಗೌರವವನ್ನು ಕಾಯ್ದುಕೊಂಡಿರುವ ಆರ್ಕೆಸ್ಟ್ರಾ ತಂಡಗಳನ್ನೂ ಕಾಣಬಹುದು.

ಇಂತಹ ತಂಡಗಳ ಪ್ರದರ್ಶನಕ್ಕೆ ತಕ್ಕ ಬೆಲೆ ನೀಡುತ್ತಿರುವುದನ್ನೂ ನೋಡಬಹುದಾಗಿದೆ. ಸಂಗೀತದ ಪರಿಕರಗಳನ್ನೇ ಬಳಸುವ ಆರ್ಕೆಸ್ಟ್ರಾ ಪ್ರದರ್ಶನಕ್ಕೆ ಸುಮಾರು ೪೦,೦೦೦-೫೦,೦೦೦ ರೂ. ಗಳಷ್ಟು ದೊರೆಯುತ್ತಿದ್ದ ಉದಾಹರಣೆಗಳನ್ನೂ ಹೆಸರಿಸಬಹುದು.

ಹಿಂದಿನ ಕಾಲದಲ್ಲಿ ಆರ್ಕೆಸ್ಟ್ರಾ ಕಲಾವಿದರಿಗೆ, ಅವನು/ಅವಳು ಹಾಡುವ ಸ್ವರದ ಸೆಳೆತಕ್ಕೆ ಅಥವಾ ನುಡಿಸುವ ಸಂಗೀತಕ್ಕೆ ಪ್ರೇಕ್ಷಕರು ‘ನೋಟುಗಳ ಹಾರ’ವನ್ನು ಹಾಕಿ ಸಂಭ್ರಮಿಸುತ್ತಿ ದ್ದರು. ಆದರೆ ಈಗ ಅಂತಹ ಸನ್ನಿವೇಶಗಳು ಅಪರೂಪದಲ್ಲಿ ಅಪರೂಪ ಆಗಿಬಿಟ್ಟಿವೆ. ಅದೂ ಪ್ರಸಿದ್ಧ ಕಲಾವಿದರಿಗೆ ಅಂತಹ ‘ನೋಟುಗಳ ಹಾರ’ಗಳು ಕೊರಳಿಗೆ ಗೌರವ, ಅಭಿಮಾನದ ರೂಪದಲ್ಲಿ ಬೀಳುತ್ತಿವೆ. ಈಗಿನ ಆರ್ಕೆಸ್ಟ್ರಾದವರಿಗೆ ‘ನೋಟುಗಳ ಹಾರ’ ಹಾಕುವುದಿರಲಿ, ಒಪ್ಪಿಕೊಂಡಿರುವ ಹಣದಲ್ಲೂ ಸ್ವಲ್ಪ ಕಡಿಮೆ ನೀಡುವ ಸನ್ನಿವೇಶಗಳೂ ಹೆಚ್ಚಾಗಿವೆ.

ಮೈಸೂರು ಭಾಗದಲ್ಲಿ ಆರ್ಕೆಸಾ ಬೆಳೆದು ಬಂದ ಬಗೆ
ಸುಮಾರು ೧೯೮೦-೯೦ರ ಕಾಲಘಟ್ಟದಲ್ಲಿ ಆರ್ಕೆಸ್ಟ್ರಾ ಸಂಸ್ಕೃತಿಯು ಮೈಸೂರು ಭಾಗದಲ್ಲಿ ಜನಪ್ರಿಯಗೊಂಡು ಉತ್ತುಂಗಕ್ಕೆ ತಲುಪಿತ್ತು. ಈ ದಶಕಗಳ ಆರಂಭದಲ್ಲಿ ಸ್ಥಳೀಯ ಹಬ್ಬಗಳು, ಜಾತ್ರೆಗಳಲ್ಲಿ ಭಕ್ತಿ ಸ್ವರೂಪದಲ್ಲಿ ಆರ್ಕೆಸ್ಟ್ರಾ ಮೊದಲ ಹೆಜ್ಜೆ ಇಟ್ಟಿತು ಎನ್ನಬಹುದು. ಈ ಮೊದಲ ಹೆಜ್ಜೆಗಳಲ್ಲಿ ಹಬ್ಬ, ಜಾತ್ರೆಗಳಲ್ಲದೆ, ವಿಶೇಷ ಕಾರ್ಯಕ್ರಮ ಗಳಲ್ಲೂ ಆರ್ಕೆಸ್ಟ್ರಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಬಂದಿತು. ರಂಗಭೂಮಿ, ಪೌರಾಣಿಕ ನಾಟಕಗಳ ಆಯೋಜನೆ ಸಂದರ್ಭಗಳು, ಬೀದಿ ನಾಟಕಗಳ ಜೊತೆಗೆ ಆರ್ಕೆಸ್ಟ್ರಾ ಪ್ರದರ್ಶನಗಳು ಜನರ ಮನಸ್ಸನ್ನು ಸೂರೆ ಮಾಡುತ್ತಿದ್ದವು. ಪ್ರಸ್ತುತವಾಗಿ ಎಲ್ಲ ಮದುವೆಗಳಲ್ಲಿ, ನಾಡಹಬ್ಬಗಳಲ್ಲಿ, ವಿಶೇಷ ಪೂಜೆಗಳಲ್ಲಿ, ಸಾವಿನ ಸಂದರ್ಭಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೆ ಆರ್ಕೆಸ್ಟ್ರಾ ಪ್ರದರ್ಶನಗಳು ವಿಜೃಂಭಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ಸಿನಿಮಾ ಹಾಡುಗಳಿಗೆ ಹೆಚ್ಚು ಬೇಡಿಕೆ ಇದೆ.

ಮತ್ತೊಂದು ಮಗ್ಗುಲಿಗೆ ಹೊರಳಿದ ಆರ್ಕೆಸ್ಟ್ರಾ
ಆರ್ಕೆಸ್ಟ್ರಾ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ. ಇಂತಹ ಹಾಡುಗಾರರೇ ಹಾಡಬೇಕು, ಇಂತಹವರೇ ಸಂಗೀತ ನುಡಿಸ ಬೇಕು ಎಂದು ಕೇಳುವವರೂ ಇದ್ದಾರೆ. ಇದರಲ್ಲಿ ಕೇಳುಗರ ಅಭಿಮಾನ, ಸೇರುವ ಜನ ಎಲ್ಲವೂ ಕೂಡಿರುತ್ತದೆ. ಇದು ಆರ್ಕೆಸ್ಟ್ರಾ ಕಂಪೆನಿಗಳ ಖ್ಯಾತಿಯನ್ನು ಅವಲಂಬಿಸಿರುತ್ತದೆ. ಇನ್ನುಳಿದ ಕಂಪೆನಿಗಳ ಅಥವಾ ತಂಡಗಳ ಮೇಲೆ ಅಭಿಮಾನ ಇಲ್ಲದೇ ಹೋದರೂ, ಇಂತಹ ನಿರೀಕ್ಷೆ ಇಲ್ಲದೆ ಹೋದರೂ, ಮುಖ್ಯವಾಗಿ ಹಾಡುಗಾರಿಕೆಯಲ್ಲಿ ಬಳಸುತ್ತಿರುವ ತಂತ್ರಾಂಶಗಳ ತಂತ್ರ ಏನೇ ಇದ್ದರೂ ಸರಿಯೇ, ಕೇಳುಗರಂತೂ ಕಡಿಮೆ ಆಗಿಲ್ಲ ಎಂದು ಯಾವುದೇ ಅನುಮಾನ ಇಲ್ಲದೇ ಹೇಳಬಹುದು. ಇದರ ಅರ್ಥ, ಕೇಳುಗರಿಗೆ ಅಂತಿಮವಾಗಿ ಕಿವಿಗೆ ಕೇಳಿಸುವ ಹಾಡು ಮನಸ್ಸನ್ನು ರಂಜಿಸಬೇಕು ಅಷ್ಟೆ ಎಂಬುದಾಗಿದೆ. ಯಾವ ತಂಡಗಳಾದರೇನೂ ಎಂಬುದರಲ್ಲಿ ಕೇಳುಗರ ಹಣಕಾಸಿನ ಲೆಕ್ಕಚಾರವೂ ಹೆಚ್ಚಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕಾಗಿದೆ. ಸಾಮಾನ್ಯ ಜನರು ಯಾವುದೇ ನಿರೀಕ್ಷೆ ಇಲ್ಲದೆ, ತಮ್ಮ ಕೈಯಲ್ಲಿದ್ದ ಕಾಸಿಗೆ ಸಿಗುವ ಆರ್ಕೆಸ್ಟ್ರಾ ತಂಡವನ್ನು ಒಪ್ಪಿಕೊಳ್ಳುತ್ತಿ ರುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಜೊತೆಗೆ ಕೇಳುಗರ ಲೆಕ್ಕಾಚಾರವು ಆರ್ಕೆಸ್ಟ್ರಾ ತಂಡಗಳಿಗೂ ಚೆನ್ನಾಗಿ ತಿಳಿದಿರುವ ಕಾರಣ, ಇತರ ತಂಡಗಳ ಪೈಪೋಟಿ ಕಾರಣಕ್ಕೂ ಬೇರೆ ದಾರಿ ಇಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ. ಬಹುಪಾಲು ಆರ್ಕೆಸ್ಟ್ರಾ ತಂಡಗಳು ಕರೋಕೆ ತಂತ್ರಾಂಶ ಬಳಸಿ ಹಾಡುತ್ತಿವೆ. ಇದಕ್ಕೆ ಕಾರಣ ಬದುಕಿನ ದುಡಿಮೆಯ ಮಾರ್ಗವೂ ಆಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹವಾಗಿದೆ.

ವರಹಳ್ಳಿ ಆನಂದ
ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿ.ವಿ

ಆಂದೋಲನ ಡೆಸ್ಕ್

Recent Posts

ಪಂಜು ಗಂಗೊಳ್ಳಿ ಅವರ ವಾರದ ಅಂಕಣ : ಮಾನವ್‌ ಸೋನಿ ಎಂಬ ಮಾನವೀಯ ಕಳಕಳಿಯ ಮನಸ್ಸು

ʼಫನ್‌ ಸ್ಮಾರ್ಟ್‌ ನಾಲೆಡ್ಜ್‌ ಸಲ್ಯೂಶನ್‌ ಫೌಂಡೇಶನ್‌ʼ ಮೂಲಕ ಮಾನವೀಯ ಸೇವೆ   ೨೬ ವರ್ಷ ಪ್ರಾಯದ, ಕೊಲ್ಕೊತ್ತಾದ ಮಾನವ್ ಸೋನಿ…

2 hours ago

ಮಹಪಂಚ್‌ ಕಾರ್ಟೂನ್‌

ಮಹಪಂಚ್‌ ಕಾರ್ಟೂನ್‌ |ಜುಲೈ 8 ಬುಧವಾರ  

4 hours ago

ಮಲೆನಾಡಿನಲ್ಲಿ ಮಳೆಯ ಅಬ್ಬರ: ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಶಿವಮೊಗ್ಗದಲ್ಲಿ ಭಾರೀ…

20 hours ago

ಕೊಡಗು ಜಿಲ್ಲೆಯ ಮಳೆ ವಿವರ

ಕೊಡಗು: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ. ಜಿಲ್ಲೆಯ ಮಳೆಯ ವಿವರ ಈ…

21 hours ago

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮಡಿಕೇರಿ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆಗೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇದರ ಭಾಗವಾಗಿ…

22 hours ago

ವಯನಾಡಿನಲ್ಲಿ ಮೇಘಸ್ಫೋಟ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ: 30 ಮಂದಿ ನಾಪತ್ತೆ

ತಿರುವನಂತಪುರಂ: ವಯನಾಡಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮೆಪ್ಪಾಡಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ವಯನಾಡಿನ ಸುರಂಗ ನಿರ್ಮಾಣ ಪ್ರದೇಶದ ಮೀನಾಕ್ಷಿ…

22 hours ago