Andolana originals

150 ವರ್ಷಕ್ಕೆ ಸಾಕ್ಷಿಯಾದ ಸರ್ಕಾರಿ ಶಾಲೆ!

ಹೇಮಂತ್‌ಕುಮಾರ್

ಮಂಡ್ಯ: ಜಿಲ್ಲೆಯ ಮೇಲುಕೋಟೆ ಪ್ರಖ್ಯಾತ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿದ್ದು, ಹತ್ತಾರು ಶತಮಾನಗಳ ವಿಶೇಷತೆಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ ೧೫೦ ವಸಂತಗಳನ್ನು ಪೂರೈಸಿದ ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯೂ ಸೇರಿದೆ.

ನವೋದಯ ಕನ್ನಡದ ಸಾಹಿತ್ಯ ಪ್ರಕಾರದ ರತ್ನತ್ರಯರಲ್ಲಿ ಒಬ್ಬರಾದ ಪದ್ಮಶ್ರೀ ಡಾ.ಪು.ತಿ.ನ (ಇನ್ನಿಬ್ಬರು ಕುವೆಂಪು, ದ.ರಾ.ಬೇಂದ್ರೆ) ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ, ರಾಮಾಯಣವನ್ನು ಸಂಸ್ಕೃತದಿಂದ ಕನ್ನಡಕ್ಕೆ ಪ್ರಪ್ರಥ ಮವಾಗಿ ಭಾಷಾನುವಾದ ಮಾಡಿದ ದೇವಶಿಖಾಮಣಿ ಅಳಸಿಂಗಾಚಾರ್ ಮುಂತಾದ ಮಹನೀಯರು ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ.

ಕವಿ ಪು.ತಿ.ನರಿಗಿಂತ ೩೦-೪೦ ವರ್ಷ ಹಿರಿಯರಾದ ೪ನೇ ಸ್ಥಾನಿಕರಾದ ಶ್ರೀನಿವಾಸ ನರಸಿಂಹಾಚಾರ್, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದ ಬಾ.ವಂ.ನರಸಿಂಹಾಚಾರ್ ಅವರು ಕೂಡ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಮಾಹಿತಿ ಇದೆ. ಮೇಲುಕೋಟೆ ಪುರಸಭೆ ಮತ್ತು ಕಂದಾಯ ಇಲಾಖೆಯ ಸರ್ವೆ ನಂಬರ್‌ಗಳಲ್ಲಿ ಆಸ್ತಿ ದಾಖಲಾಗಿರುವ ಆಧಾರದಲ್ಲಿ ಶಾಲೆ ೧೮೭೫ರಲ್ಲಿ ಆರಂಭವಾಗಿದೆ ಎಂಬುದನ್ನು ಹಿಂದೆ ಇದ್ದ ಮುಖ್ಯ ಶಿಕ್ಷಕರು ದಾಖಲೆಗಳಲ್ಲಿ ನಮೂದಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದ ಕೂಲಿಮಠ, ೧೮೭೫ರಲ್ಲಿ ಶಾಲೆಯಾಗಿ ಪರಿವರ್ತನೆ ಯಾಯಿತು. ನಂತರ ಹಲವಾರು ಸ್ವಾತಂತ್ರ್ಯ ಹೋರಾಟ ಗಾರರನ್ನೂ ಕೊಡುಗೆಯಾಗಿ ನೀಡಿದ ಹಿರಿಮೆ ಈ ಶಾಲೆಯದ್ದಾಗಿದೆ. ಈ ಶಾಲೆಯಲ್ಲಿ ಕಲಿತ ಐದು ಮಂದಿ ವಿದ್ಯಾರ್ಥಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬುದು ಉಲ್ಲೇಖಾರ್ಹ.

ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು ೯೨ ವಿದ್ಯಾರ್ಥಿಗಳಿದ್ದಾರೆ. ೧ರಿಂದ ೪ನೇ ತರಗತಿವರೆಗೆ ೬೨ ಮಕ್ಕಳು, ೫ರಿಂದ ೭ನೇ ತರಗತಿವರೆಗೆ ೩೦ ಮಂದಿ ಕಲಿಯುತ್ತಿದ್ದಾರೆ. ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕ ಸೇರಿ ಒಟ್ಟು ನಾಲ್ವರು ಖಾಯಂ ಶಿಕ್ಷಕರಿದ್ದು, ಒಬ್ಬರು ಅತಿಥಿ ಶಿಕ್ಷಕ, ಇನ್ನೊಬ್ಬರು ಮಕ್ಕಳ ಮನೆಯ ಶಿಕ್ಷಕರಿದ್ದಾರೆ.

೧೯೮೬ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಾಲೆಯ ವಿಸ್ತೃತ ಕಟ್ಟಡವನ್ನು ಉದ್ಘಾಟಿಸಿದರು. ಇಡೀ ಕಟ್ಟಡಕ್ಕೆ ರೀಪ್ಲಾಸ್ಟಿಂಗ್, ಹೊಸಬಣ್ಣ, ಅಡುಗೆ ಮನೆ, ಊಟದ ಹಾಲ್ ನಿರ್ಮಾಣ, ಕೊಠಡಿಗಳ ನಿರ್ಮಾಣ, ಹಳೆಯ ಕಟ್ಟಡಕ್ಕೆ ಭದ್ರತೆ ನೀಡುವ ಕಾರ್ಯ ತುರ್ತಾಗಿ ಆಗಬೇಕಾಗಿದೆ.

ಶಾಲೆಗೆ ಚೈತನ್ಯ ಮುಖ್ಯ ಶಿಕ್ಷಕ: ಶಾಲೆಯು ೨೦೧೧- ೧೨ನೇ ಸಾಲಿನಲ್ಲಿ ೩೨ ವಿದ್ಯಾರ್ಥಿಗಳ ಹಾಜರಾತಿ ಯೊಂದಿಗೆ ಅಳಿವಿನ ಅಂಚಿನಲ್ಲಿದ್ದಾಗ ಸಂತಾನರಾಮನ್ ಪ್ರಭಾರ ಮುಖ್ಯ ಶಿಕ್ಷಕರಾಗಿ ಬಂದರು. ವಿದ್ಯಾರ್ಥಿಗಳ ಸಂಖ್ಯೆಯನ್ನು ೧೦೦ರ ಗಡಿದಾಟಿಸಲು ಶಕ್ತಿಮೀರಿ ಪ್ರಯತ್ನ ಮಾಡಿದ್ದಾರೆ. ಪೀಠೋಪಕರಣ, ಪಾಠೋಪಕರಣ, ಸಣ್ಣಪುಟ್ಟ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ, ಮುಖ್ಯ ಶಿಕ್ಷಕರ ಕೊಠಡಿ, ಕಾಂಪೌಂಡ್ ನಿರ್ಮಾಣ, ಕೋಟ್ಯಂತರ ರೂ. ಮೌಲ್ಯದ ಶಾಲಾ ಜಮೀನು ರಕ್ಷಣೆ… ಹೀಗೆ ಹಲವು ರೀತಿಯ ಸಾರ್ಥಕ ಕೆಲಸವನ್ನು ಮುಖ್ಯ ಶಿಕ್ಷಕರು ಮಾಡಿದ್ದಾರೆ.

ಮೊದಲೆ ರಡು ವರ್ಷ ಸ್ವತಃ ಮುಖ್ಯ ಶಿಕ್ಷಕರೇ ವಾರ್ಷಿಕ ಐವತ್ತು ಸಾವಿರ ರೂ. ನೀಡಿದ ಪರಿಣಾಮ ವಿವಿಧ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವ್ಯಾನ್ ಮಾಡಿಕೊಳ್ಳಲು ಪೋಷಕರಿಗೆ ಧನಸಹಾಯ ಮಾಡಿದ ಕಾರಣ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುವಂತಾಯಿತು.

ಶತಮಾನದ ಶಾಲೆಯಲ್ಲಿ ಎಲ್ಲವೂ ಉಚಿತ:  ೧೨ ವರ್ಷಗಳಿಂದ ಮೇಲುಕೋಟೆಯ ಶತಮಾನದ ಶಾಲೆಗೆ ಕಲಿಯಲು ದೂರದ ಕೆಲವು ಹಳ್ಳಿಗಳಿಂದ ಮಕ್ಕಳು ಬಂದು ಹೋಗಲು ಪೋಷಕರು ಮಾಡಿಕೊಳ್ಳುವ ವಾಹನ ವ್ಯವಸ್ಥೆಗೆ ವಾರ್ಷಿಕ ೧.೫೦ ಲಕ್ಷ ರೂ. ಕೊಡುಗೆ, ವರ್ಷದಲ್ಲಿ ೪ ದಿನಗಳ ಉಚಿತ ಶೈಕ್ಷಣಿಕ ಪ್ರವಾಸ, ಹೆಚ್ಚುವರಿ ಸ್ವಯಂ ಸೇವಕ ಶಿಕ್ಷಕರ ನೇಮಕ, ಪ್ರತಿ ವರ್ಷ ಬ್ಯಾಗ್, ಲೇಖನ ಸಾಮಗ್ರಿಗಳ ವಿತರಣೆ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆ, ಕ್ರೀಡಾಕೂಟ, ಪ್ರತಿಭಾ ಕಾರಂಜಿ ಮತ್ತಿತರ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವ … ಹೀಗೆ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನದಿಂದ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ದಾನಿಗಳ ಕೊಡುಗೆ:  ಬೆಂಗಳೂರು ಸೌಜನ್ಯ ಸೇವಾಶ್ರಮದ ಶ್ರೀರಂಗರಾಜನ್ ತಂಡ, ಶಿಕ್ಷಣ ಪ್ರೇಮಿ ವಕೀಲ ಅರವಿಂದ ರಾಘವನ್, ಬೆಂಗಳೂರು ಮಧು, ಮೈಸೂರಿನ ರೋಟರಿ ಕ್ಲಬ್… ಹೀಗೆ ಹಲವರು ಶಾಲಾಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ದಾನಿಗಳ ಸಹಕಾರ, ಮುಖ್ಯ ಶಿಕ್ಷಕರ ಕೊಡುಗೆಯಿಂದ ೨೦೨೫-೨೬ನೇ ಸಾಲಿನಲ್ಲಿ ಆರಂಭವಾದ ಮಕ್ಕಳ ಮನೆ ತಾಲ್ಲೂಕಿನ ಗಮನ ಸೆಳೆದಿದೆ.

ಶಾಲೆಯಲ್ಲಿರುವ ಸೌಲಭ್ಯಗಳು:  ಸ್ಮಾರ್ಟ ಕ್ಲಾಸ್/ ಪ್ರೊಜೆಕ್ಟರ್:  ವ್ಯವಸ್ಥಿತ ಗ್ರಂಥಾಲಯ ಕ್ರೀಡಾ ಕೊಠಡಿ, ವಿಜ್ಞಾನ ಪ್ರಯೋಗಾಲಯ ಮಕ್ಕಳ ಸುರಕ್ಷತೆಗೆ ಸಿಸಿ ಕ್ಯಾಮೆರಾ ಸ್ಪೋಕನ್ ಇಂಗ್ಲಿಷ್ ತರಬೇತಿ/ ರಂಗ ತರಬೇತಿ ದ್ವಿಭಾಷಾ ಆಂಗ್ಲಮಾಧ್ಯಮ ತರಗತಿಗಳು ಆಕರ್ಷಕ ಪರಿಸರ ಶಾಲೆಯ ಸುತ್ತ ಗಿಡಮರಗಳು

” ಶತಮಾನದ ಶಾಲೆಯಲ್ಲಿ ವ್ಯಾಸಂಗ ಮಾಡಿ ಪ್ರಭಾರ ಮುಖ್ಯಶಿಕ್ಷಕನಾಗಿ ಸೇವೆ ಸಲ್ಲಿಸಿ ಮೇಲುಕೋಟೆ ಶತಮಾನದ ಸರ್ಕಾರಿ ಶಾಲೆ ಬಲವರ್ಧನೆ ಮಾಡುತ್ತಾ ಮಾದರಿ ಶಾಲೆಯಾಗಿ ರೂಪಿಸಲು ಶ್ರಮಿಸುತ್ತಿದ್ದೇನೆ. ಇಲ್ಲೇ ಸರ್ಕಾರಿ ಪ್ರೌಢಶಾಲೆಯನ್ನು ಆರಂಭಿಸುವ ಪ್ರಯತ್ನ ನಡೆದಿದೆ.”

-ಎಸ್.ಎನ್.ಸಂತಾನರಾಮನ್, ಪ್ರಭಾರ ಮುಖ್ಯ ಶಿಕ್ಷಕ

” ಶತಮಾನದ ಶಾಲೆಯ ಬಲವರ್ಧನೆಗೆ ಮುಖ್ಯ ಶಿಕ್ಷಕರು ಸಾಕಷ್ಟು ಶ್ರಮವಹಿಸಿದ್ದಾರೆ. ಶಾಲೆಯಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆ ಹಾಗೂ ದಾನಿಗಳ ಪ್ರೋತ್ಸಾಹ ಶಾಲೆಗಿದೆ. ಪೋಷಕರು ಸರ್ಕಾರಿ ಶಾಲಾ ಸೌಲಭ್ಯಗಳನ್ನು ಬಳಸಿಕೊಂಡು ಉಚಿತವಾಗಿ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಬೇಕು.”

-ಬೆಟ್ಟಸ್ವಾಮಿಗೌಡ, ಸಿಆರ್‌ಪಿ, ಮೇಲುಕೋಟೆ

” ಶತಮಾನದ ಶಾಲೆಯಲ್ಲಿ ಎಲ್ಲಾ ಸೌಕರ್ಯಗಳು ಇವೆ. ಪೋಷಕರು ಖಾಸಗಿ ವಿದ್ಯಾಸಂಸ್ಥೆಗಳ ವ್ಯಾಮೋಹ ಬಿಟ್ಟು ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಶಾಲೆ ೧೫೦ ವರ್ಷಗಳನ್ನು ಪೂರೈಸಿದ್ದು ಐತಿಹಾಸಿಕ ಸಮಾರಂಭ ಆಯೋಜಿಸಿ ಶಾಲೆಯನ್ನು ಜಿಲ್ಲೆಗೇ ಮಾದರಿಯಾಗಿ ರೂಪಿಸುವ ಯೋಜನೆ ಹೊಂದಿದ್ದೇವೆ. ಈ ಮಹತ್ಕಾರ್ಯಕ್ಕೆ ಹಳೆಯವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡಬೇಕು.”

-ಮಹೇಶ್, ಅಧ್ಯಕ್ಷ, ಎಸ್‌ಡಿಎಂಸಿ

 

 

ಆಂದೋಲನ ಡೆಸ್ಕ್

Recent Posts

ಬಿಸಿಲ ಝಳಕ್ಕೆ ನೀರಿಗಿಳಿಯುವ ಮುನ್ನಇರಲಿ ಎಚ್ಚರ..!

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಇವೆ ಅಪಾಯಕಾರಿ ಸ್ಥಳಗಳು; ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ಮಡಿಕೇರಿ:ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು…

50 mins ago

ಹಾಲಿ-ಮಾಜಿ ಶಾಸಕರಿಗೆ ಕ್ಷೇತ್ರ ಪುನರ್‌ವಿಂಗಡಣೆ ಗುಮ್ಮ!

ಕೆ.ಬಿ.ರಮೇಶನಾಯಕ ಶೇ.೩೩ ಮಹಿಳಾ ಮೀಸಲು ಜಾರಿಯಾದರೆ ಐದು ಸ್ಥಾನ ಮೀಸಲು  ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಕೆಲ ಭಾಗಗಳನ್ನು ಬೇರ್ಪಡಿಸಿ…

55 mins ago

ಸರಸ್ವತಿಪುರಂ ಕಲ್ಯಾಣಿಗೆ ಪುನಶ್ಚೇತನ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಅರಸ, ದೇಶ ಸ್ವತಂತ್ರಗೊಂಡ ನಂತರ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಜಯಚಾಮರಾಜ ಒಡೆಯರ್…

1 hour ago

ದ್ರಾವಿಡ ಚಳವಳಿಗಾರ ಡಾ.ಕೆ.ವೀರಮಣಿ ಅವರಿಗೆ ಬೋಧಿ ವೃಕ್ಷ ಪ್ರಶಸ್ತಿ

ದ್ರಾವಿಡ ಚಳವಳಿಗಾರ ಡಾ.ಕೆ.ವೀರಮಣಿ ಅವರಿಗೆ ಬೋಧಿ ವೃಕ್ಷ ಪ್ರಶಸ್ತಿ   ಪೆರಿಯಾರ್ ರಾಮಸ್ವಾಮಿ ಅವರ ಸೈದ್ಧಾಂತಿಕ ಉತ್ತರಾಧಿಕಾರಿ ಬೆಂಗಳೂರು: ಮೌಢ್ಯ…

1 hour ago

ಮಂಗಳಮುಖಿ ವೇಷ; ಲೈಂಗಿಕ ಪಾಶ

೫ ತಿಂಗಳ ಹಿಂದೆ ಯುವಕನನ್ನು ಮೈಸೂರಿನಿಂದ ಅಪಹರಿಸಿ ಕರೆದೊಯ್ದಿದ್ದ ತಂಡ ಮಂಗಳೂರಿನಿಂದ ತಪ್ಪಿಸಿಕೊಂಡು ಬಂದು ಲಷ್ಕರ್‌ ಠಾಣೆಗೆ ದೂರು  ಮೈಸೂರು:…

1 hour ago