Andolana originals

ನೋಟು ಅಮಾನ್ಯೀಕರಣದ ದಶಕ; ಭ್ರಮೆ ಮತ್ತು ಆರ್ಥಿಕ ವಾಸ್ತವ

ಟಿ.ಎಸ್.ವೇಣುಗೋಪಾಲ್

ಇತಿಹಾಸದಲ್ಲಿ ಒಂದು ಎಚ್ಚರಿಕೆಯ ಪಾಠವಾಗಿದೆ

ನವೆಂಬರ್ ೮, ೨೦೧೬ ರಂದು ರಾತ್ರಿ ೮ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರದರ್ಶನದಲ್ಲಿ ಮಾಡಿದ ಭಾಷಣ ಭಾರತದ ಆರ್ಥಿಕ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಪ್ರಯೋಗಕ್ಕೆ ನಾಂದಿ ಹಾಡಿತು. ಯಾವುದೇ ಪ್ರಾಯೋಗಿಕ ಪರೀಕ್ಷೆ, ಪೂರ್ವಸಿದ್ಧತೆ ಅಥವಾ ಸಾಂಸ್ಥಿಕ ಸಮಾಲೋಚನೆಗಳಿಲ್ಲದೆ, ದೇಶದ ಚಲಾವಣೆಯಲ್ಲಿದ್ದ ಶೇ. ೮೬ ರಷ್ಟು ಭೌತಿಕ ನಗದನ್ನು-ಅಂದರೆ ರೂ.೫೦೦ ಮತ್ತು ರೂ.೧೦೦೦ ಮುಖಬೆಲೆಯ ನೋಟುಗಳನ್ನು ದಿಢೀರನೆ ರದ್ದುಗೊಳಿಸಲಾಯಿತು. ಕಪ್ಪುಹಣವನ್ನು ನಿರ್ಮೂಲನೆ ಮಾಡುವುದು, ನಕಲಿ

ನೋಟುಗಳ ಜಲವನ್ನು ಮಟ್ಟಹಾಕುವುದು, ಭಯೋತ್ಪಾದನೆಗೆ ಹರಿದು ಬರುವ ಹಣವನ್ನು ನಿಲ್ಲಿಸುವುದು ಮತ್ತು ಭಾರತವನ್ನು ‘ನಗದು ರಹಿತ’ (ಕ್ಯಾಷ್‌ಲೆಸ್) ಆರ್ಥಿಕತೆಯನ್ನಾಗಿ ಪರಿವರ್ತಿಸುವುದು ಈ ನಿರ್ಧಾರದ ಘೋಷಿತ ಉದ್ದೇಶಗಳಾಗಿದ್ದವು.

ಆದರೆ, ಈ ಐತಿಹಾಸಿಕ ನಿರ್ಧಾರಕ್ಕೆ ಹತ್ತು ವರ್ಷಗಳು (೨೦೧೬-೨೦೨೬) ತುಂಬಿರುವ ಈ ಸಂದರ್ಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಬಜೆಟ್ ದಾಖಲೆಗಳು, ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮತ್ತು ಸುಪ್ರೀಂ ಕೋರ್ಟ್‌ನ ಅಽಕೃತ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಬೇರೆಯದೇ ಆದ ಕಟು ಸತ್ಯ ಅನಾವರಣಗೊಳ್ಳುತ್ತದೆ. ಈ ನಿರ್ಧಾರವು ಘೋಷಿತ ಗುರಿಗಳನ್ನು ತಲುಪುವಲ್ಲಿ ವಿ-ಲವಾದದ್ದಲ್ಲದೆ, ದೇಶದ ಆರ್ಥಿಕತೆಗೆ ಭಾರಿ ಬೆಲೆ ತೆರುವಂತೆ ಮಾಡಿತು.

೧ ತಾತ್ವಿಕ ಪ್ರಮಾದ ಮತ್ತು ಜನಸಾಮಾನ್ಯರು ತೆತ್ತ ಮಾನವೀಯ ಬೆಲೆ: ನೋಟು ಅಮಾನ್ಯೀಕರಣ ಕ್ರಮ ಒಂದು ದೊಡ್ಡ ಆರ್ಥಿಕ ತಪ್ಪು ಕಲ್ಪನೆಯ ಮೇಲೆ ನಿಂತಿದೆ. ಎಲ್ಲ ನಗದೂ ಕಪ್ಪುಹಣವಲ್ಲ, ಮತ್ತು ಎಲ್ಲಾ ಕಪ್ಪುಹಣವೂ ನಗದು ರೂಪದಲ್ಲಿರುವುದಿಲ್ಲ ಎಂಬ ಸರಳ ಸತ್ಯವನ್ನು ಅದು ನಿರ್ಲಕ್ಷಿಸಿದೆ. ಅರ್ಥಶಾಸಜ್ಞರ ಪ್ರಕಾರ, ದೇಶದ ಒಟ್ಟು ಕಪ್ಪುಹಣದ ಶೇ. ೫ ರಿಂದ ೬ ರಷ್ಟು ಮಾತ್ರ ನಗದು ರೂಪದಲ್ಲಿರುತ್ತದೆ; ಉಳಿದ ಬಹುಪಾಲು ಸಂಪತ್ತು ಚಿನ್ನ, ರಿಯಲ್ ಎಸ್ಟೇಟ, ಬೇನಾಮಿ ಆಸ್ತಿ ಮತ್ತು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಅಡಗಿರುತ್ತದೆ. ಹೀಗಿರುವಾಗ, ನಗದನ್ನು ರದ್ದುಗೊಳಿಸುವ ಮೂಲಕ ಕಪ್ಪುಹಣವನ್ನು ಹಿಡಿಯಲು ಹೊರಟಿದ್ದು ಬಲೆಯಿಲ್ಲದೆ ಮೀನು ಹಿಡಿಯಲು ಮಾಡಿದ ಪ್ರಯತ್ನದಂತಾಗಿದೆ.

ಈ ದಿಢೀರ್ ನಿರ್ಧಾರಕ್ಕೆ ಜನಸಾಮಾನ್ಯರು ತೆತ್ತ ಮಾನವೀಯ ಬೆಲೆ ಅತ್ಯಂತ ಘೋರವಾಗಿತ್ತು. ಬ್ಯಾಂಕ್‌ಗಳ ಮುಂದೆ ಹಣ ಬದಲಾಯಿಸಿಕೊಳ್ಳಲು ಗಂಟೆಗಟ್ಟಲೆ ಸಾಲುಗಳಲ್ಲಿ ನಿಂತು ಬಳಲಿ ಹಾಗೂ ಖಾಸಗಿ ಆಸ್ಪತ್ರೆಗಳು ಹಳೆಯ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಚಿಕಿತ್ಸೆ ಸಿಗದೆ ೧೦೦ ಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡರು ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿಗಳು ದಾಖಲಿಸಿವೆ. ನಗದು ಆಧಾರಿತ ಆರ್ಥಿಕತೆಯನ್ನೇ ನಂಬಿದ್ದ ಕೋಟ್ಯಂತರ ದಿನಗೂಲಿ ಕಾರ್ಮಿಕರು ತಮ್ಮ ಎರಡು ವಾರಗಳ ಆದಾಯವನ್ನು ಕಳೆದುಕೊಂಡರು. ಹಿಂಗಾರು ಬಿತ್ತನೆ ಸಮಯದ ಬೀಜ ಮತ್ತು ಗೊಬ್ಬರ ಖರೀದಿಸಲು ನಗದು ಇಲ್ಲದೆ ಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಈ ತೀವ್ರ ನೋವನ್ನು ದೀರ್ಘಕಾಲೀನ ಲಾಭಕ್ಕಾಗಿ ಸಹಿಸಿಕೊಳ್ಳಬೇಕಾದ ಅಲ್ಪಾವಧಿಯ ತ್ಯಾಗ ಎಂದು ಬಿಂಬಿಸಲಾಯಿತು. ಜನ ಅದನ್ನು ನಂಬಿದ್ದರು ಕೂಡ.

೨ ಪ್ರಮುಖ ಭರವಸೆಗಳು ಮತ್ತು ಹತ್ತು ವರ್ಷಗಳ ವಾಸ್ತವಿಕ ದತ್ತಾಂಶಗಳು ಕಪ್ಪು ಹಣದ ನಾಶ: ನೋಟು ಅಮಾನ್ಯೀಕರಣದ ನಂತರ ಭ್ರಷ್ಟರು ಹೆದರಿ ತಮ್ಮ ಬಳಿಯಿರುವ ಅಕ್ರಮ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡದೆ ಸುಟ್ಟುಹಾಕುತ್ತಾರೆ, ನದಿಗೆ ಎಸೆಯುತ್ತಾರೆ ಅಥವಾ ಇನ್ಯಾವುದೋ ವಿಧದಲ್ಲಿ ನಾಶಮಾಡುತ್ತಾರೆ. ಇದರಿಂದ ಸುಮಾರು ೪ ರಿಂದ ೫ ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಶಾಶ್ವತವಾಗಿ ವ್ಯವಸ್ಥೆಯಿಂದ ಹೊರಹೋಗುತ್ತದೆ ಎಂದು ಅಂದಿನ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದ್ದರು. ಆದರೆ ಆರ್‌ಬಿಐ ರದ್ದಾದ ನೋಟುಗಳ ಎಣಿಕೆ ಪೂರ್ಣಗೊಳಿಸಿದಾಗ ಹೊರಬಿದ್ದ ಸತ್ಯವೇ ಬೇರೆ. ಚಲಾವಣೆಯಲ್ಲಿದ್ದ ಒಟ್ಟು ರೂ.೧೫.೪೧ ಲಕ್ಷ ಕೋಟಿ ಮೌಲ್ಯದ ನೋಟುಗಳಲ್ಲಿ ಶೇ. ೯೯.೩ ರಷ್ಟು ಹಣ ಮತ್ತೆ ಬ್ಯಾಂಕ್‌ಗಳಿಗೆ ವಾಪಸಾಯಿತು. ಬ್ಯಾಂಕ್‌ಗೆ ಬಾರದೆ ಉಳಿದದ್ದು ಕೇವಲ ರೂ.೧೦,೭೨೦ ಕೋಟಿ (ಶೇ. ೧ ಕ್ಕಿಂತ ಕಡಿಮೆ). ಸ್ವತಂತ್ರ ಆರ್ಥಿಕ ವಿಶ್ಲೇಷಣೆಗಳು ತೋರಿಸಿದಂತೆ, ಬ್ಯಾಂಕ್‌ಗೆ ವಾಪಸಾಗದ ಆ ಅಲ್ಪ ಮೊತ್ತವೂ ಭ್ರಷ್ಟರು ಬಚ್ಚಿಟ್ಟಿದ್ದ ಕಪ್ಪುಹಣವಾಗಿರಲಿಲ್ಲ; ಬದಲಾಗಿ ಬ್ಯಾಂಕ್‌ಗಳಿಗೆ ತಲುಪಲು ಸಾಧ್ಯವಾಗದ ಬಡವರು, ವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಮಹಿಳೆಯರು ತುರ್ತು ಸಂದರ್ಭಕ್ಕಾಗಿ ಮನೆಯಲ್ಲಿ ಕೂಡಿಟ್ಟಿದ್ದ ಸಣ್ಣ ಉಳಿತಾಯವಾಗಿತ್ತು.

ನಕಲಿ ನೋಟುಗಳ ತಡೆ: ನಕಲಿ ನೋಟುಗಳು ರಾಷ್ಟ್ರೀಯ ಭದ್ರತೆಗೆ ಮಾರಕವಾಗಿವೆ ಎಂದು ಹೇಳಿದ್ದ ಸರ್ಕಾರ, ಹೊಸ ರೂ.೫೦೦ ಮತ್ತು ರೂ.೨೦೦೦ ನೋಟುಗಳಲ್ಲಿ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳಿದ್ದು, ಅವುಗಳನ್ನು ನಕಲು ಮಾಡುವುದು ಅಸಾಧ್ಯ ಎಂದು ಭರವಸೆ ನೀಡಿತ್ತು. ಅದರಲ್ಲಿ ಚಿಪ್ಪುಗಳನ್ನು ಅಡಗಿಸಿಡಲಾಗಿದೆ ಎಂಬ ಸುದ್ದಿಯೂ ಪ್ರಚಾರದಲ್ಲಿತ್ತು. ಆದರೆ ಎರಡೇ ವರ್ಷಗಳಲ್ಲಿ ನಕಲಿ ನೋಟು ಜಲಗಳು ಹೊಸ ನೋಟುಗಳನ್ನೂ ನಕಲು ಮಾಡಿದವು. ಆರ್‌ಬಿಐ ದತ್ತಾಂಶದ ಪ್ರಕಾರ, ೨೦೨೧ ಕ್ಕೆ ಹೋಲಿಸಿದರೆ ೨೦೨೨ ರಲ್ಲಿ ಪತ್ತೆಯಾದ ನಕಲಿ ರೂ.೫೦೦ ನೋಟುಗಳ ಸಂಖ್ಯೆಯಲ್ಲಿ ಶೇ. ೧೦೨ ರಷ್ಟು ಹೆಚ್ಚಳವಾಯಿತು. ವಾಸ್ತವದಲ್ಲಿ, ನೋಟು ಅಮಾನ್ಯೀಕರಣಕ್ಕೂ ಮುನ್ನ (೨೦೧೫-೧೬) ಬ್ಯಾಂಕ್‌ಗಳು ಪತ್ತೆಹಚ್ಚಿದ ನಕಲಿ ನೋಟುಗಳ ಒಟ್ಟು ಮೌಲ್ಯ ಕೇವಲ ರೂ.೩೦ ಕೋಟಿಯಷ್ಟಿತ್ತು; ಅಂದರೆ ಒಟ್ಟು ಚಲಾವಣೆಯಲ್ಲಿದ್ದ ರೂ.೧೬.೪೧ ಲಕ್ಷ ಕೋಟಿ ಹಣದ ಕೇವಲ ಶೇ. ೦.೦೦೧೮ ರಷ್ಟು ಮಾತ್ರ. ಇಷ್ಟು ಸಣ್ಣ ಪ್ರಮಾಣದ ನಕಲಿ ನೋಟುಗಳನ್ನು ತಡೆಯಲು ಇಡೀ ದೇಶದ ಶೇ. ೮೬ ರಷ್ಟು ನಗದನ್ನು ರದ್ದುಗೊಳಿಸಿದ್ದು ಆರ್ಥಿಕವಾಗಿ ಅವಿವೇಕದ ನಿರ್ಧಾರವಾಗಿತ್ತು.

ನಗದು ರಹಿತ ಆರ್ಥಿಕತೆ ಮತ್ತು ನಗದು ಚಲಾವಣೆ: ಕಪ್ಪುಹಣ ಮತ್ತು ನಕಲಿ ನೋಟುಗಳ ವಾದಗಳು ವಿಫಲವಾಗುತ್ತಿದ್ದಂತೆ, ಸರ್ಕಾರ ತನ್ನ ಗುರಿಯನ್ನು ಬದಲಿಸಿ ‘ಕಡಿಮೆ ನಗದು ಬಳಸುವ ಸಮಾಜ’ (ಲೆಸ್ ಕ್ಯಾಷ್ ಸೊಸೈಟಿ) ನಿರ್ಮಿಸುವ ಹೊಸ ವಾದವನ್ನು ಮುಂದಿಟ್ಟಿತು. ಕಳೆದ ದಶಕದಲ್ಲಿ ಯುಪಿಐ ಡಿಜಿಟಲ್ ಪಾವತಿಗಳು ಅಭೂತಪೂರ್ವವಾಗಿ ಬೆಳೆದಿರುವುದು ನಿಜ. ಆದರೆ, ಡಿಜಿಟಲ್ ಪಾವತಿ ಹೆಚ್ಚಾದ ಮಾತ್ರಕ್ಕೆ ದೇಶದಲ್ಲಿ ನಗದು ಬಳಕೆ ಕಡಿಮೆಯಾಗಿಲ್ಲ. ನೋಟು ಅಮಾನ್ಯೀಕರಣದ ರಾತ್ರಿ ರೂ.೧೮ ಲಕ್ಷ ಕೋಟಿಯಷ್ಟಿದ್ದ ನಗದು ಚಲಾವಣೆ, ಇಂದು ದ್ವಿಗುಣಗೊಂಡು ರೂ.೪೧.೨ ಲಕ್ಷ ಕೋಟಿ ದಾಟಿದೆ. ಬ್ಯಾಂಕ್ -ರ್ ಇಂಟರ್‌ನ್ಯಾಷನಲ್ ಸೆಟಲ್ಮೆಂಟ್ಸ್ ದತ್ತಾಂಶದ ಪ್ರಕಾರ, ಭಾರತದ ನಗದು ಮತ್ತು ಜಿಡಿಪಿ ಅನುಪಾತವು (ಕ್ಯಾಷ್ ಟು ಜಿಡಿಪಿ ರೇಷಿಯೋ) ೨೦೧೫ ರಲ್ಲಿ ಶೇ. ೧೨.೧ ರಷ್ಟಿದ್ದರೆ, ಇಂದಿಗೂ ಶೇ. ೧೧.೩ ರ ಆಸುಪಾಸಿನ ಇದೆ. ಇದರ ಜೊತೆಗೆ, ರೂ.೨,೦೦೦ ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ಯುಪಿಐ ವಹಿವಾಟುಗಳ ಮೇಲೆ ಶೇ. ೧.೧ ರಷ್ಟು ಶುಲ್ಕ ವಿಧಿಸಿರುವುದರಿಂದ ಸಣ್ಣ ವ್ಯಾಪಾರಿಗಳು ಮತ್ತೆ ನಗದು ವ್ಯವಹಾರಕ್ಕೆ ಮರಳುವ ಸೂಚನೆಗಳು ಕಾಣಿಸುತ್ತಿವೆ. ಜೊತೆಗೆ ಡಿಜಿಟಲ್ ಪಾವತಿ ಹೆಚ್ಚಿರುವುದಕ್ಕೆ ನಗದು ಅಮಾನ್ಯೀಕರಣ ಕಾರಣ ಅಂತ ಹೇಳುವುದಕ್ಕೂ ಕಷ್ಟ.

ಆರ್ಥಿಕ ಅಪರಾಧಗಳು ಮತ್ತು ಅಸಂಘಟಿತ ವಲಯದ ಕುಸಿತ: ಅಕ್ರಮ ಹಣ ವರ್ಗಾವಣೆ (ಮನಿ ಲಾಂಡ್ರಿಂಗ್) ಮತ್ತು ಆರ್ಥಿಕ ಅಪರಾಧಗಳನ್ನು ತಡೆಯುವ ಸಾಮರ್ಥ್ಯದ ಜಗತಿಕ ಸೂಚ್ಯಂಕದಲ್ಲಿ ಭಾರತವು ೨೦೧೫ ರಲ್ಲಿ ೭೫ ನೇ ಸ್ಥಾನದಲ್ಲಿತ್ತು; ಆದರೆ ೨೦೨೫ ರ ವೇಳೆಗೆ ೬೦ ನೇ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೆಡೆ, ನೋಟು ಅಮಾನ್ಯೀಕರಣದಿಂದ ಅಸಂಘಟಿತ ಸಣ್ಣ ಉದ್ಯಮಗಳು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಬರುತ್ತವೆ ಎಂದು ನೀತಿ ಆಯೋಗದ ಅಂದಿನ ಸಿಇಒ ಅಮಿತಾಭ್ ಕಾಂತ್ ವಾದಿಸಿದ್ದರು. ಆದರೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎ-ಎಸ್) ವರದಿಗಳು ತೋರಿಸುವಂತೆ, ದೇಶದಲ್ಲಿ ಅಸಂಘಟಿತ ಉದ್ಯೋಗದ ಪ್ರಮಾಣ ಕಡಿಮೆಯಾಗಿಲ್ಲ; ಬದಲಾಗಿ ನಗದು ಕೊರತೆಯಿಂದಾಗಿ ಲಕ್ಷಾಂತರ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು (ಎಂಎಸ್‌ಎಂಇ) ಬಾಗಿಲು ಮುಚ್ಚಿ, ಗ್ರಾಮೀಣ ಮತ್ತು ಅಸಂಘಟಿತ ಆರ್ಥಿಕತೆಯ ಬೆನ್ನೆಲುಬೇ ಮುರಿದು ಹೋಯಿತು. ೩ಸಾಂಸ್ಥಿಕ ಸ್ವಾಯತ್ತತೆಯ ಸವೆತ ಮತ್ತು ಆರ್‌ಬಿಐ ಮೇಲಾದ ಆರ್ಥಿಕ ಹೊರೆ ನೋಟು ಅಮಾನ್ಯೀಕರಣವು ಭಾರತೀಯ ರಿಸರ್ವ್ ಬ್ಯಾಂಕ್‌ನ ಶಿಫಾರಸಿನ ಮೇರೆಗೆ ತೆಗೆದುಕೊಂಡ ಸ್ವತಂತ್ರ ನಿರ್ಧಾರ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ಆದರೆ ೨೦೨೩ ರಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಈ ನಿರ್ಧಾರದ ಸಿಂಧುತ್ವವನ್ನು ಪರಿಶೀಲಿಸಿದಾಗ, ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ತಮ್ಮ ಭಿನ್ನಮತದ ತೀರ್ಪಿನಲ್ಲಿ ಮಹತ್ವದ ಸಾಂಸ್ಥಿಕ ಸತ್ಯವನ್ನು ಬಯಲು ಮಾಡಿದರು. ಅಧಿಕೃತ ದಾಖಲೆಗಳ ಪ್ರಕಾರ, ನವೆಂಬರ್ ೭, ೨೦೧೬ ರ ಸಂಜೆ ಕೇಂದ್ರ ಸರ್ಕಾರವೇ ಈ ಪ್ರಸ್ತಾವನೆಯನ್ನು ಆರ್‌ಬಿಐಗೆ ಕಳುಹಿಸಿತ್ತು ಮತ್ತು ಆರ್‌ಬಿಐ ಮಂಡಳಿಯು ೨೪ ಗಂಟೆಗಳ ಒಳಗಾಗಿ, ಆರ್ಥಿಕ ಪರಿಣಾಮಗಳ ಬಗ್ಗೆ ಯಾವುದೇ ವಿಶ್ಲೇಷಣೆ ನಡೆಸದೆ ಅಥವಾ ಸಾಕಷ್ಟು ಬದಲಿ ನೋಟುಗಳು ಲಭ್ಯವಿವೆಯೇ ಎಂದು ಪರಿಶೀಲಿಸದೆ ಅದಕ್ಕೆ ಮುದ್ರೆ ಒತ್ತಿತ್ತು. ಇದು ಕೇಂದ್ರ ಬ್ಯಾಂಕ್‌ನ ಸ್ವಾಯತ್ತತೆಯ ಮೇಲಾದ ದೊಡ್ಡ ಪ್ರಹಾರವಾಗಿತ್ತು.

ಇದರ ಜೊತೆಗೆ, ಬ್ಯಾಂಕ್‌ಗೆ ವಾಪಸಾಗದ ನೋಟುಗಳಿಂದ ಆರ್‌ಬಿಐನ ಹೊಣೆಗಾರಿಕೆ ಕಡಿಮೆಯಾಗಿ, ಸರ್ಕಾರಕ್ಕೆ ಬೃಹತ್ ಲಾಭಾಂಶ (ವಿಂಡ್ಫಾಲ್ ಡಿವಿಡೆಂಡ್) ಸಿಗಲಿದೆ ಎಂಬ ಸರ್ಕಾರಿ ಪರ ಆರ್ಥಿಕ ವಿಶ್ಲೇಷಕರ ನಿರೀಕ್ಷೆಯೂ ತಲೆಕೆಳಗಾಯಿತು. ಶೇ. ೯೯.೩ ರಷ್ಟು ಹಣ ವಾಪಸಾದ ಕಾರಣ ಯಾವುದೇ ಲಾಭವಾಗಲಿಲ್ಲ; ಬದಲಾಗಿ ಹೊಸ ನೋಟುಗಳನ್ನು ಮುದ್ರಿಸಲು ಆರ್‌ಬಿಐ ಮಾಡಿದ ವೆಚ್ಚ ರೂ.೩,೪೨೧ ಕೋಟಿಯಿಂದ ರೂ.೭,೯೬೫ ಕೋಟಿಗೆ ಏರಿತು. ಅಂದರೆ ದ್ವಿಗುಣಗೊಂಡಿತು. ಅಲ್ಲದೆ, ೫೦ ದಿನಗಳ ಅವಧಿಯಲ್ಲಿ ಬ್ಯಾಂಕ್ಗಳಲ್ಲಿ ಜಮೆಯಾದ ಹೆಚ್ಚುವರಿ ಹಣವನ್ನು ನಿರ್ವಹಿಸಲು ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಗೆ ಬಡ್ಡಿ ಪಾವತಿಸಬೇಕಾಯಿತು. ಪರಿಣಾಮವಾಗಿ, ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ನೀಡುವ ವಾರ್ಷಿಕ ಲಾಭಾಂಶವು ಶೇ. ೫೩ ರಷ್ಟು ಕುಸಿಯಿತು (ರೂ.೬೬,೦೦೦ ಕೋಟಿಯಿಂದ ರೂ.೩೦,೬೫೯ ಕೋಟಿಗೆ ಇಳಿಯಿತು). ಹತ್ತು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, ಒಂದು ‘ಮಾಸ್ಟರ್ ಸ್ಟ್ರೋಕ್’ ಎಂದು ವೈಭವೀಕರಿಸಲಾದ ನೋಟು ಅಮಾನ್ಯೀಕರಣವು ವಾಸ್ತವ ದಲ್ಲಿ ಯಾವುದೇ ಆರ್ಥಿಕ ತರ್ಕವಿಲ್ಲದ, ದುಡುಕಿನ ನಿರ್ಧಾರವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರಯೋಗವು ಭ್ರಷ್ಟರನ್ನು ಶಿಕ್ಷಿಸಲಿಲ್ಲ, ನಗದು ಬಳಕೆಯನ್ನು ಕೊನೆಗೊಳಿಸಲಿಲ್ಲ, ನಕಲಿ ನೋಟುಗಳ ಹಾವಳಿಯನ್ನೂ ತಡೆಯಲಿಲ್ಲ. ಬದಲಾಗಿ, ಯಾವುದೇ ತಪ್ಪು ಮಾಡದ ಕೋಟ್ಯಂತರ ಬಡವರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಬದುಕನ್ನು ಅಸ್ತವ್ಯಸ್ತಗೊಳಿಸಿ, ಭಾರತದ ಆರ್ಥಿಕ ಬೆಳವಣಿಗೆಯ ವೇಗವನ್ನು ಕುಂಠಿತಗೊಳಿಸಿತು. ಆರ್ಥಿಕ ನೀತಿಗಳನ್ನು ರಾಜಕೀಯ ಪ್ರಚಾರದ ಸಾಧನಗಳನ್ನಾಗಿ ಬಳಸಿದಾಗ ದೇಶವೊಂದು ಎಂತಹ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ನೋಟು ಅಮಾನ್ಯೀಕರಣವು ಇತಿಹಾಸದಲ್ಲಿ ಒಂದು ಎಚ್ಚರಿಕೆಯ ಪಾಠವಾಗಿ ಉಳಿದಿದೆ. ಸರ್ಕಾರಕ್ಕೂ ಇದು ಗೊತ್ತಿದೆ. ದಶಕದ ಸಂಭ್ರಮ ಆಚರಿಸುವುದಿರಲಿ ಆ ಬಗ್ಗೆ ಸರ್ಕಾರ ಉಲ್ಲೇಖವನ್ನೂ ಮಾಡುತ್ತಿಲ್ಲ.

” ಹತ್ತು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, ಒಂದು ‘ಮಾಸ್ಟರ್ ಸ್ಟ್ರೋಕ್’ ಎಂದು ವೈಭವೀಕರಿಸಲಾದ ನೋಟು ಅಮಾನ್ಯೀಕರಣವು ವಾಸ್ತವದಲ್ಲಿ ಯಾವುದೇ ಆರ್ಥಿಕ ತರ್ಕವಿಲ್ಲದ, ದುಡುಕಿನ ನಿರ್ಧಾರವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೂಲ ವಿನ್ಯಾಸಕ್ಕೆ ಧಕ್ಕೆ ಆಗಬಾರದು

ಮೈಸೂರಿನ ವಿವೇಕಾನಂದ ನಗರದಲ್ಲಿ ನಿರ್ಮಾಣ ಆಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ, ಮಂಟಪ, ವೃತ್ತ ಮೂಲವಿನ್ಯಾಸದಂತೆ ಇರದಿರುವುದು ಬೇಸರದ ಸಂಗತಿ. ಚಿತ್ರ…

2 mins ago

ಓದುಗರ ಪತ್ರ: ನೇಮಕಾತಿ ಪರೀಕ್ಷೆ: ಕನ್ನಡ- ಇಂಗ್ಲಿಷ್‌ಗೆ ಸಮಾನ ಅಂಕ ಏಕೆ?

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೆಲವೇ ತಿಂಗಳ ಹಿಂದೆ ಹೊರಡಿಸಿದ ಕರಡು ನಿಯಮಗಳಲ್ಲಿ ಗ್ರೂಪ್ ಸಿ ವೃಂದದ ರಾಜ್ಯ…

5 mins ago

ಪೊಲೀಸ್ ಪತ್ತೆದಾರಿ ಹೆ(ಎ)ಮ್ಮೆಯ ಸುದ್ದಿ ಬಿಬಿಸಿಯಲ್ಲಿ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ‘ಎಮ್ಮೆ ಇನ್ವೆಸ್ಟಿಗೇಷನ್ ಟೀಮ್’ ಅಂತ ಅಡ್ಡ ಹೆಸರೂ ಬಂತು…

22 mins ago

ಎಚ್‌ಡಿಕೆಯಿಂದ ಅಂತರ, ಕೈ ನಾಯಕರಿಗೆ ಹತ್ತಿರ!

ಕೆ.ಬಿ.ರಮೇಶನಾಯಕ ಜಿಪಂ, ತಾಪಂ ಚುನಾವಣೆ ಸನಿಹದಲ್ಲೇ ಕುತೂಹಲ ಮೂಡಿಸಿದ ಶಾಸಕ ಜಿ.ಟಿ.ದೇವೇಗೌಡರ ನಡೆ  ಮೈಸೂರು: ದಳಪತಿಗಳೊಂದಿಗೆ ಮುನಿದು ಪಕ್ಷದ ನಾಯಕತ್ವ,…

33 mins ago

ಮೂರು ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ಗೆ ನಟ ಧನ್ವೀರ್‌!

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅವಾಚ್ಯ…

19 hours ago