ಆಂದೋಲನ 50

ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ನಡುಗಿದ್ದ ಏಳುಮಲೆ

ಏಳು ಮಲೆಗಳ ಅಚ್ಚ ಹಸುರಿನ ನಡುವಿನ ಕುಗ್ರಾಮದಲ್ಲಿ ಜನಿಸಿದ ವೀರಪ್ಪನ್, ಹೊಟ್ಟೆಪಾಡಿಗೆಂದು ಶ್ರೀಗಂಧ ಮರಗಳ ಕಳುವು ಶುರು ಮಾಡಿದ್ದ. ನಂತರ ಗಜಹಂತಕನಾಗಿ ದಂತಚೋರನೆನಿಸಿಕೊಂಡ. ಕರ್ನಾಟಕ, ತಮಿಳುನಾಡು ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಹಲವು ಪೊಲೀಸ್ ಅಧಿಕಾರಿಗಳು, ಅಮಾಯಕರ ಜೀವತೆಗೆದು ನರಹಂತಕನಾಗಿ ಕುಖ್ಯಾತಿ ಪಡೆದ. ಕೊನೆಗೆ ಪೊಲೀಸ್ ಗುಂಡಿನಿಂದಲೇ ಹತನಾದ. ಈಗ ಇದೊಂದು ರೋಚಕ ಕ್ರೈಮ್ ಸ್ಟೋರಿಯಂತೆ ಕಂಡರೂ, ವೀರಪ್ಪನ್ ಅಟಾಟೋಪಕ್ಕೆ ಈ ಸಾಲು ಬೆಟ್ಟಗಳ ಊರುಗಳ ಜನರು ನಲುಗಿ ಹೋಗಿದ್ದರು, ಅದೆಷ್ಟೋ ಕುಟುಂಬಗಳು ನಶಿಸಿಹೋಗಿದ್ದವು. ಈ ನರಹಂತಕನ ಬೇಟೆಯೂ ಅತ್ಯಂತ ಕುತೂಹಲಕಾರಿಯಾಗಿತ್ತು. ಆ ದಿನಗಳಲ್ಲಿ ವೀರಪ್ಪನ್ ಶಿಕಾರಿಗಾಗಿ ಪೊಲೀಸರು ಜೀವವನ್ನು ಪಣಕ್ಕಿಟ್ಟು ನಡೆಸಿದ ಕಾರ್ಯಾಚರಣೆ ‘ಆಂದೋಲನ’ದಲ್ಲಿ ವಿಶಿಷ್ಟ, ವಿಶೇಷವಾಗಿ ಪ್ರತಿದಿನವೂ ಮೂಡಿ ಬರುತ್ತಿತ್ತು.

 

ವೀರಪ್ಪನಿಲ್ಲದ ಗೋಪಿನಾಥಂ

ಪ್ರಸಾದ್ ಲಕ್ಕೂರು
ಒಂದು ಕಡೆ ಕಾಡುಗಳ್ಳ ನರಹಂತಕ ವೀರಪ್ಪನ್, ಇನ್ನೊಂದು ಕಡೆ ಕಾಡು ಕಾಯುವ ಫಾರೆಸ್ಟು ಡಿಪಾರ್ಟ್ಮೆಂಟು ಮತ್ತು ಕಾನೂನು ಕಾಯಲು ಬಂದ ಪೋಲೀಸು ಡಿಪಾರ್ಟ್ಮೆಂಟು ಮತ್ತು ಈ ಮೂರೂ ದೈತ್ಯ ಗೂಳಿಗಳ ನಡುವೆ ಸಿಲುಕಿ ನಲುಗಿಹೋಗಿದ್ದ ನಯನ ಮನೋಹರ ಗೋಪೀನಾಥಂ ಎಂಬ ಗ್ರಾಮ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಾ ತನ್ನ ಹಳೆಯ ಗಾಯಗಳನ್ನು ನೆಕ್ಕಿಕೊಳ್ಳುತ್ತಿದೆ.
ಪೋಲೀಸರ ಬೂಟಿನ ಸದ್ದು, ಫಾರೆಸ್ಟು ಜೀಪುಗಳ ಸದ್ದಿನ ಜಾಗದಲ್ಲಿ ಈಗ ಮಿಸ್ಟರಿ ಟ್ರಯಲ್ಸ್ ಜಂಗಲ್ ಲಾಡ್ಜಿಗೆ ಲಗ್ಗೆಯಿಡುವ ಪ್ರವಾಸಿಗಳ ಕೇಕೆ ಕೇಳಿಸುತ್ತಿದೆ. ವೀರಪ್ಪನ್ ಹೋದರೂ, ಪ್ರವಾಸಿಗಳು ಬಂದರೂ ಬದಲಾಗದ ತಮ್ಮ ಹಣೆಯ ಬರಹಕ್ಕೆ ಒಂದಿನಿತೂ ಬೇಜಾರು ಮಾಡಿಕೊಳ್ಳದ ಗೋಪಿನಾಥಂನ ಜೀವಗಳು ಕಾಲನ ಎಲ್ಲಾ ಲೀಲಾವಿಲಾಸಗಳ ನಡುವೆ ತಮ್ಮ ಎಂದಿನ ಬದುಕನ್ನು ಬದುಕುತ್ತಿದ್ದಾರೆ.


ಒಂದು ಕಡೆ ಸದ್ದಿಲ್ಲದ ಚೆಲುವೆಯ ಹಾಗೆ ಬಳುಕದೇ ಹರಿಯುವ ಕಾವೇರಿ, ಇನ್ನೊಂದು ಕಡೆ ದೂರಕ್ಕೆ ಕಾಣುವ ಮಲೆಮಹದೇಶ್ವರ ಬೆಟ್ಟ , ನಾಗಮಲೆ, ಗುಲಗಂಜಿ ಮಲೆಗಳು, ಪಕ್ಕದಲ್ಲೇ ಹರಿಯದೆ ನಿಂತುಕೊಂಡಿರುವ ಸಿರಿಗನ್ನಡಿಯ ಹಾಗಿರುವ ಸರೋವರ ಇಷ್ಟೆಲ್ಲ ಬದಲಾಗಿದ್ದರೂ ಇಲ್ಲಿ ಏನೂ ಆಗಿಯೇ ಇಲ್ಲವೆಂಬಂತೆ ಸುಮ್ಮನೆ ನಿಂತುಕೊಂಡಿವೆ. ಪ್ರತಿ ವರ್ಷ ಹಾರಿ ಬರುವ ವಲಸೆ ಹಕ್ಕಿಗಳು ಮಳೆಗಾಲಕ್ಕೂ ಮೊದಲು ಮತ್ತೆ ಮರಳಿ ಹೋಗುತ್ತವೆ.
ಕಾವೇರಿ ವನ್ಯಜೀವಿಧಾಮದ ಗೋಪಿನಾಥಂ ವಲಯಕ್ಕೆ ಸೇರಿದ ಹಾಗೂ ಹನೂರು ತಾಲೂಕಿನ ಈ ಗ್ರಾಮದಲ್ಲಿ ವೀರಪ್ಪನ್ ಈಗ ನೆನಪು ಮಾತ್ರ. ಆತನ ಪತ್ನಿ ಮುತ್ತುಲಕ್ಷ್ಮೀ ಹಾಗೂ ಇಬ್ಬರು ಹೆಣ್ಣು ಮಕ್ಕಳು ಚೆನ್ನೈ ನಗರವನ್ನು ಸೇರಿಕೊಂಡಿದ್ದಾರೆ. ಆತನ ಚಿಕ್ಕಪ್ಪನ ಮಕ್ಕಳಾದ ಮಾಧು, ಗೋವಿಂದನ್ , ಶ್ರೀನಿವಾಸನ್ ಮಾತ್ರ ಗ್ರಾಮದಲ್ಲಿದ್ದಾರೆ. ವೀರಪ್ಪನ್ ಸಂಬಂಧಿಕರು ಎಂಬ ಕಾರಣದಿಂದ ಹತ್ತಾರು ವರ್ಷ ಸೆರೆವಾಸ ಅನುಭವಿಸಿ ಬಂದಿದ್ದಾರೆ.
೮೦ ಮತ್ತು ೯೦ರ ದಶಕದ ಮಧ್ಯಭಾಗದ ತನಕ ಗೋಪಿನಾಥಂ ಗ್ರಾಮದ ಜನರು ಜೀವ ಕೈಲಿಡಿದುಕೊಂಡು ಬದುಕುತ್ತಿದ್ದರು. ಒಂದು ಕಡೆ ವೀರಪ್ಪನ್‌ಗೆ ಸಹಕಾರ ನೀಡುತ್ತಿದ್ದೀರಿ ಎಂದು ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಮತ್ತೊಂದು ಕಡೆ ನನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೀರಾ ಎಂದು ವೀರಪ್ಪನ್ ಬೆದರಿಕೆ ಹಾಕಿ ಹಲ್ಲೆ ಮಾಡಿಸುತ್ತಿದ್ದ. ಇಲ್ಲಿಯ ಜನರ ಬದುಕು ಕತ್ತರಿಯ ಅಲುಗುಗಳ ನಡುವೆ ಸಿಲುಕಿದ ಸ್ಥಿತಿಯಂತಾಗಿತ್ತು.
ಪೊಲೀಸರಿಗೆ ನನ್ನ ಬಗ್ಗೆ ಮಾಹಿತಿ ನೀಡಿದ್ದಾರೆಂದು ಕೆರಳಿದ್ದ ವೀರಪ್ಪನ್ ಗ್ರಾಮದ ಮಾದಯ್ಯ, ತಂಗವೇಲು, ಅಯ್ಯದೊರೆ, ಗುಣಶೇಖರ, ಮುತ್ತುಕುರ್ಮಾ, ಅಯ್ಯನ್ ಎಂಬುವರನ್ನು ಗ್ರಾಮದ ಬಳಿಯೇ ಇರುವ ಗುಡ್ಡಕ್ಕೆ ಎಳೆದೊಯ್ದು ಗುಂಡಿಕ್ಕಿ ಹತ್ಯೆ ಮಾಡಿದ್ದ. ನಂತರ ಆತ ಗ್ರಾಮದತ್ತ ಬರುವುದನ್ನು ನಿಲ್ಲಿಸಿ ಆನೆದಂತ, ಗಂಧ, ತೇಗ ಮರಗಳ ಕಳ್ಳತನ ಮಾಡಿಕೊಂಡು ಕಳ್ಳ ಸಾಗಾಣಿಕೆದಾರನಾದ ಎಂದು ಗ್ರಾಮಸ್ಥರು ಹೇಳುತ್ತಾರೆ.
ವೀರಪ್ಪನ್ ಗ್ರಾಮದ ೬ ಜನರನ್ನು ನಿರ್ದಯವಾಗಿ ಕೊಂದು ಹಾಕಿದ ನಂತರ ಗ್ರಾಮದ ವಯಸ್ಕರು ಹುಟ್ಟೂರನ್ನೇ ತೊರೆದು ಸಂಬಂಧಿಕರ ಮನೆ ಸೇರಿಕೊಂಡಿದ್ದರು. ಉದ್ಯೋಗ ಅರಸಿ ತಮಿಳುನಾಡಿನ ಕೊಯಮತ್ತೂರು, ಸೇಲಂ, ತಿರುಪ್ಪೂರು, ಈರೋಡ್, ಮೈಸೂರು, ಬೆಂಗಳೂರು, ಆಂಧ್ರಪ್ರದೇಶದತ್ತ ಹೊರಟು ಹೋಗಿದ್ದರು.
ಗೋಪಿನಾಥಂ ಗ್ರಾಮದ ವನ್ನೀರ್ ಕ್ಷತ್ರೀಯ ಕುಲದಲ್ಲಿ ಹುಟ್ಟಿದ್ದ ವೀರಪ್ಪನ್ ಬೇಟೆಗಾರನಾಗಿ ಗುರುತಿಸಿಕೊಂಡು ನಂತರ ಶ್ರೀಗಂಧ, ತೇಗ ಮರಗಳ ಕಳ್ಳಸಾಗಣೆದಾರನಾಗಿ ಅರಣ್ಯ ಮತ್ತು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ. ತನ್ನ ಕುಕೃತ್ಯಗಳಿಗೆ ಎದುರಾಗಿ ಬಂದಂತಹ ತನ್ನೂರಿನ ಜನರು, ಅರಣ್ಯಾಧಿಕಾರಿಗಳು, ಪೊಲೀಸರನ್ನು ಕೊಂದುಹಾಕಿದ್ದ.
ಸಾಲದೆಂಬಂತೆ ವರನಟ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ. ಮಾಜಿ ಸಚಿವ ಎಚ್.ನಾಗಪ್ಪ ಅವರನ್ನು ಅಪಹರಿಸಿ ಹತ್ಯೆ ಮಾಡಿದ್ದ. ಪರಿಸರ ತಜ್ಞರಾದ ಕೃಪಾಕರ ಮತ್ತು ಸೇನಾನಿ ಅವರನ್ನು ಕಿಡ್ನಾಪ್ ಮಾಡಿ ಕುಖ್ಯಾತನಾಗಿ ದೇಶ, ವಿದೇಶ ಮಟ್ಟದಲ್ಲಿ ಗುರುತಿಸಿಕೊಂಡಿದ್ದ. ಕರ್ನಾಟಕ ಸರ್ಕಾರಕ್ಕೆ ತಲೆ ನೋವಾಗಿ ಬಿಟ್ಟಿದ್ದ.
೨೦೦೪ರಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ವೀರಪ್ಪನ್ ಹತನಾದ ನಂತರ ಗ್ರಾಮದಲ್ಲಿ ಅಭಿವೃದ್ಧಿ ಶಕೆ ಆರಂಭವಾಯಿತು. ಸುಮಾರು ೬೦೦ ಕುಟುಂಬಗಳಿದ್ದು ವನ್ನಿಕುಲ ಕ್ಷತ್ರೀಯ, ಲಂಬಾಣಿ, ೨೪ ಮನೆ ತೆಲಗುಶೆಟ್ಟರು, ಬೋವಿ, ಪರಿಶಿಷ್ಟ ಪಂಗಡದ ಜನರು ವಾಸವಿದ್ದಾರೆ.
ವೀರಪ್ಪನ್ ಇದ್ದಾಗ ಭಯದ ನೆರಳಿನಲ್ಲಿ ಬದುಕುತ್ತಿದ್ದ ಜನರು ಈಗ ಪಶುಪಾಲನೆ, ವ್ಯಾಪಾರ, ಖಾಸಗಿ ಉದ್ಯೋಗ, ಕೃಷಿಗಳಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯಾವಂತರು ತಮಿಳುನಾಡಿನ ತಿರುಪ್ಪೂರು, ಸೇಲಂ, ಈರೋಡ್ ನಗರಗಳಿಗೆ ತೆರಳಿ ಕಾರ್ಖಾನೆ, ವಾಣಿಜ್ಯ ಮಳಿಗೆಗಳಲ್ಲಿ ದುಡಿಯುತ್ತಿದ್ದಾರೆ.
ಗ್ರಾಮದ ಒಂದು ಕಿ.ಮೀ. ದೂರದಲ್ಲೇ ಜೀವನದಿ ಕಾವೇರಿ ಹರಿಯುತ್ತಾಳೆ. ಕಾವೇರಿ ವನ್ಯಧಾಮದೊಳಗಿನ ಈ ಗ್ರಾಮದ ಸುತ್ತಮುತ್ತ ಬೋರ್‌ವೆಲ್ ಕೊರೆದರೆ ೧೦೦ ಅಡಿಗೆ ಅಂತರ್ಜಲ ಸಿಗುತ್ತದೆ. ಜಮೀನು ಇರುವವರು ಪಂಪ್ ಸೆಟ್ ಕೃಷಿ ಮಾಡಿಕೊಂಡು ಕಬ್ಬು, ಅರಿಶಿಣ, ಮುಸುಕಿನ ಜೋಳ, ತರಕಾರಿ ಬೆಳೆಯುತ್ತಾರೆ.
ಕೃಷಿ ಉತ್ಪನ್ನಗಳನ್ನು ೧೬ ಕಿ.ಮೀ. ದೂರದಲ್ಲಿರುವ ತಮಿಳುನಾಡಿನ ತಾಲೂಕು ಕೇಂದ್ರವಾದ ಕೊಳತ್ತೂರು ಪಟ್ಟಣದಲ್ಲಿ ಮಾರಾಟ ಮಾಡುತ್ತಾರೆ. ಗೋಪಿನಾಥಂನಿಂದ ೩-೪ ಕಿ.ಮೀ. ದೂರದಲ್ಲೇ ಹೊಗೇನಕಲ್ ಜಲಪಾತವಿದೆ. ಇಲ್ಲಿ ಕಾವೇರಿ ನದಿ ಧುಮ್ಮಿಕ್ಕುವುದು ಮತ್ತು ವಯ್ಯಾರದಿಂದ ಸಾಗಿ ಪಾಲಾರ್ ಬಳಿ ತಮಿಳುನಾಡಿನತ್ತ ಸಾಗುವ ನೋಟ ನಯನ ಮನೋಹರ.
ಕಾವೇರಿ ನದಿ ಗ್ರಾಮದ ಪಕ್ಕದಲ್ಲೇ ಹರಿಯುವುದರಿಂದ ಮೀನುಗಾರಿಕೆ ನಡೆಸುತ್ತಿದ್ದಾರೆ. ಇನ್ನು ಕೆಲವರು ಹೋಟೆಲ್ ಇಟ್ಟುಕೊಂಡಿದ್ದಾರೆ. ಹೊಗೇನಕಲ್ ಜಲಪಾತಕ್ಕೆ ಬಂದು ಹೋಗುವ ಪ್ರವಾಸಿಗರಿಗೆ ಇಲ್ಲಿ ಊಟ, ತಿಂಡಿ ಸಿಗುತ್ತದೆ.
೩೦ ವರ್ಷಗಳ ಕಾಲ ವೀರಪ್ಪನ್ ಅಟ್ಟಹಾಸಗೈದಿದ್ದ. ಆ ಕಾಲದಲ್ಲಿ ಗುಡಿಸಲಿನಲ್ಲಿ ವಾಸ. ಕಾವೇರಿ ನೀರು ನಮಗೆ ಜೀವನಾಧಾರ. ಆತನ ಮರಣಾನಂತರ ಹೊರಗೆ ಹೋಗಿದ್ದವರು ಗ್ರಾಮಕ್ಕೆ ಆಗಮಿಸಿ ದುಡಿದು ಬದುಕು ಕಟ್ಟಿಕೊಂಡಿದ್ದಾರೆ. ಮಹಡಿ ಮನೆಗಳು ತಲೆಎತ್ತಿ ನಿಂತಿವೆ. ಪ್ರತಿಯೊಂದು ಮನೆಯಲ್ಲೂ ಬೈಕ್‌ಗಳಿವೆ. ಅದು ಅನಿವಾರ್ಯವಾಗಿ ಬಿಟ್ಟಿದೆ.
ಒಂದರಿಂದ ಹತ್ತನೇ ತರಗತಿ ತನಕ ಸರ್ಕಾರಿ ಶಾಲೆಯಿದೆ. ಎರಡು ಕೆಎಸ್ಸಾರ್ಟಿಸಿ ಬಸ್‌ಗಳು ಬಂದು ಹೋಗುತ್ತವೆ. ಹಟ್ಸನ್ ಹೆಸರಿನ ಖಾಸಗಿ ಹಾಲಿನ ಡೇರಿಯಿದೆ. ಬಸ್ ನಿಲ್ದಾಣವಿದೆ. ಅಂದಿನ ಡಿಸಿಎಫ್ ಶ್ರೀನಿವಾಸ್ ಅವರು ಕಟ್ಟಿಸಿಕೊಟ್ಟ ಸತ್ತಿ ಮಾರಿಯಮ್ಮ ದೇವಾಲಯವಿದೆ.

ಯಾವುದೇ ಸಹಾಯ ಮಾಡಲಿಲ್ಲ
ವೀರಪ್ಪನ್ ಉಪಟಳ, ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ಕಾಟದ ಬಗ್ಗೆ ಗ್ರಾಮದ ಹಿರಿಯರನ್ನು ಮಾತನಾಡಿಸಿದರೆ ಬೆಚ್ಚಿ ಬೀಳುತ್ತಾರೆ. ಆತ ಗ್ರಾಮಸ್ಥರಿಗೆ ಹಾಗೂ ತನ್ನ ಸಂಬಂಧಿಕರಿಗೆ ಯಾವ ಸಹಾಯವನ್ನು ಮಾಡಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಹಣಕ್ಕಾಗಿ ಡಾ.ರಾಜಕುಮಾರ್, ಎಚ್.ನಾಗಪ್ಪ ಅವರನ್ನು ಅಪಹರಿಸಿದ್ದ. ರಾಜಕುಮಾರ್ ಅವರನ್ನು ಹೇಗೆ ಬಿಡುಗಡೆ ಮಾಡಿದ. ನಾಗಪ್ಪ ಏಕೆ ಕೊಲೆಯಾದರು ಎಂಬುದು ಇನ್ನು ನಿಗೂಢವಾಗಿ ಉಳಿದಿದೆ. ವೀರಪ್ಪನ್ ಸೆರೆ ಕಾರ್ಯಾಚರಣೆ ನಡೆಸಿದ ಎಸ್ಟಿಎಫ್ ಸಿಬ್ಬಂದಿ ಗೋಪಿನಾಥಂ ಹಾಗೂ ಸುತ್ತಲಿನ ಗ್ರಾಮಗಳ ಜನರ ಮೇಲೆ ಮಾಡಿದ ದೌರ್ಜನ್ಯ ಅಷ್ಟಿಷ್ಟಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

 

ದೇವಾಲಯ ಕಟ್ಟಿಸಿದ್ದ ಡಿಸಿಎಫ್
ವೀರಪ್ಪನ್ ಕಾಡುಗಳ್ಳನಾಗಿ ಬದಲಾದಾಗ ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರು ವೀರಪ್ಪನ್ ಸಹವಾಸ ಮಾಡಬೇಡಿ, ಆತನಿಗೆ ಸಹಕಾರ ನೀಡಬೇಡಿ ಎಂದು ಜನರ ಮನವೊಲಿಸಿದ್ದರು.
ಅಲ್ಲದೆ ಗ್ರಾಮದ ನಡುವೆ ಸತ್ತಿ ಮಾರಿಯಮ್ಮ ದೇವಾಲಯವನ್ನು ಕಟ್ಟಿಸಿಕೊಟ್ಟಿದ್ದರು. ಇದನ್ನೆಲ್ಲ ಅರಿತಿದ್ದ ವೀರಪ್ಪನ್ ಶರಣಾಗುವುದಾಗಿ ನಂಬಿಸಿ ಕಾಡಿನ ಯರಕೆಹಳ್ಳ ಪ್ರದೇಶಕ್ಕೆ ಶ್ರೀನಿವಾಸ್ ಅವರನ್ನು ಬರಮಾಡಿಕೊಂಡು ಗುಂಡಿಕ್ಕಿ ಹತ್ಯೆ ಮಾಡಿದ್ದ. ನಂತರ ಶ್ರೀನಿವಾಸ್ ಅವರ ರುಂಡ ಮತ್ತು ಮುಂಡನ್ನು ಬೇರ್ಪಡಿಸಿ ರಣಕೇಕೆ ಹಾಕಿದ್ದ ಎಂದು ಗ್ರಾಮಸ್ಥರು ಕಣ್ಣೀರಿಡುತ್ತಾರೆ. ಶ್ರೀನಿವಾಸ್ ಕಟ್ಟಿಸಿಕೊಟ್ಟ ದೇವಾಲಯದಲ್ಲಿ ಪ್ರತಿವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.

ಏನೂ ಇಲ್ಲದ ಕಾಡಿನೊಳಗೆ
ಐದು ವರ್ಷಗಳ ಹಿಂದೆ ಅಂದರೆ ಹನೂರು ಹೊಸ ತಾಲೂಕಾಗಿ ಘೋಷಣೆಯಾಗುವ ಮೊದಲು ಗ್ರಾಮದ ಜನರು ಕಂದಾಯ ದಾಖಲೆಗಳನ್ನು ಪಡೆಯಲು ೧೨೦ ಕಿ.ಮೀ.ದೂರದ ಕೊಳ್ಳೇಗಾಲ ಪಟ್ಟಣಕ್ಕೆ ಬರಬೇಕಿತ್ತು. ಈಗ ೭೫ ಕಿ.ಮೀ.ದೂರದ ಹನೂರಿನಲ್ಲೇ ದಾಖಲೆಗಳು ಸಿಗುತ್ತವೆ. ನ್ಯಾಯಾಲಯದ ವ್ಯಾಜ್ಯಗಳಾದರೆ ಕೊಳ್ಳೇಗಾಲಕ್ಕೆ ಹೋಗಬೇಕಿದೆ.
ಗ್ರಾಮ ಪಂಚಾಯಿತಿ ಕೇಂದ್ರವಾದ ಈ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವಿಲ್ಲ. ಬಿಎಸ್‌ಎನ್‌ಎಲ್ ಬಿಟ್ಟರೆ ಬೇರೆ ಯಾವುದೇ ಸಂಪರ್ಕವಿಲ್ಲ. ಸಾಕಷ್ಟು ಬಸ್ ವ್ಯವಸ್ಥೆಯಿಲ್ಲ. ಆಸ್ಪತ್ರೆಯ ಸೌಕರ್ಯವಿಲ್ಲ . ಅನಾರೋಗ್ಯಕ್ಕೆ ಈಡಾದವರನ್ನು ತಮಿಳುನಾಡಿನ ಕೊಳತ್ತೂರು, ಈರೋಡ್, ಮೆಟ್ಟೂರು ಪಟ್ಟಣಗಳಿಗೆ ಕರೆದೊಯ್ಯಬೇಕು.
ಗೋಪಿನಾಥಂ ಗ್ರಾಪಂಗೆ ಆಲಂಬಾಡಿ, ಮಾರಿಕೊಟ್ಟಾಯಂ, ಜಾಂಬೂರಪಟ್ಟಿ, ಅಪ್ಪುಗಾಂಪಟ್ಟಿ, ಕೋಟೆಯೂರು, ಪುದೂರು, ಆತೂರು ಗ್ರಾಮಗಳು ಸೇರುತ್ತವೆ. ಅರಣ್ಯದೊಳಗೆ ಇರುವ ಈ ಗ್ರಾಮಗಳ ಜನರಿಗೆ ಸಂಪರ್ಕ, ಸಾರಿಗೆ, ಆರೋಗ್ಯ ಸಮಸ್ಯೆ ಕಾಡುತ್ತಿದೆ.

ದೋಸೆ ಹುಯ್ಯುವ ಕಲ್ಲು ಅನಾಥವಾಗಿದೆ..
ವೀರಪ್ಪನ್ ಕಾಲದಲ್ಲಿ ಪೋಲೀಸರಿಗೆ, ಫಾರೆಸ್ಟು ಡಿಪಾರ್ಟ್ ಮೆಂಟಿನವರಿಗೆ ದೋಸೆ, ಇಡ್ಲಿ ಮಾರಿ ಬದುಕುತ್ತಿದ್ದೆ. ಅವನು ಹೋದ ಮೇಲೆ ದೋಸೆ ಹುಯ್ಯುವ ಕಲ್ಲು ಅನಾಥವಾಗಿದೆ. ಇಡ್ಲಿ ಪಾತ್ರೆಯೂ ತೂತು ಬಿದ್ದಿದೆ ಎನ್ನುತ್ತಾಳೆ ಗೋಪೀನಾಥಂ ನಲ್ಲಿ ಇಡ್ಲಿ ದೋಸೆ ಮಾರಿ ಬದುಕುತ್ತಿದ್ದ ಅಯ್ಯಮ್ಮ.

ನೂಲಿನೆಳೆ ಅಂತರದಲ್ಲಿ ತಪ್ಪಿತ್ತು ಸಾವು…

(ಮಾಹಿತಿ: ಹನೂರು ವೆಂಕಟೇಗೌಡ)

ನಿರೂಪಣೆ: ಜಿ.ಶಿವಪ್ರಸಾದ್
ಕಾಡಿನ ಮಧ್ಯೆ ಢಮಾರ್ ಸದ್ದಿನ ಹಿಂದೆೆುೀಂ ತೂರಿ ಹೋದ ಗುಂಡಿನ ರೂಪದಲ್ಲಿ ಮುಖದ ಮುಂದೆ ಸಾವು ಹಾದುಹೋಗಿತ್ತು… ಜಂಘಾಬಲವೇ ಉಡುಗಿ ಹೋಗಿತ್ತು. ನೂಲಿನ ಎಳೆ ಅಂತರದಲ್ಲಿ ತಪ್ಪಿತ್ತು ಮೃತ್ಯು. ಬುಲೆಟ್ ಸವಾರಿಯಲ್ಲಿದ್ದ ನನ್ನ ಜೀವ ಕೈಗೆ ಬಂದಿತ್ತು… ನನ್ನ ಹಿಂದೆ ಇದ್ದ ಹಲವು ಕಾರುಗಳು ಯೂಟರ್ನ್ ತೆಗೆದುಕೊಂಡವು…
೧೯೯೦ರ ದಶಕದಲ್ಲಿ ಆನೆಗಳ ಹತ್ಯೆ, ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ಕಗ್ಗೊಲೆ, ಶ್ರೀಗಂಧದ ಮರಗಳ ಅಕ್ರಮ ಸಾಗಣೆ ಇತ್ಯಾದಿ ಕಾನೂನು ವಿರೋಧಿ ಕೃತ್ಯಗಳ ಮೂಲಕ ವೀರಪ್ಪನ್ ಇಡೀ ದೇಶದಲ್ಲೇ ತಲ್ಲಣ ಉಂಟು ಮಾಡಿದ್ದ. ಆತನನ್ನು ಸೆರೆ ಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಬೆವರು ಹರಿಸುತ್ತಿದ್ದರು. ಅವರ ಹಿಂದೆ ಮಾಧ್ಯಮಗಳು ಪ್ರತಿ ಕ್ಷಣದ ಬೆಳವಣಿಗೆಗಳನ್ನು ಪತ್ರಿಕೆಗಳ ಓದುಗರಿಗೆ ತಲುಪಿಸಲು ಪೈಪೋಟಿ ನಡೆಸಿದ್ದರು. ಅವುಗಳ ಪೈಕಿ ‘ಆಂದೋಲನ’ ದಿನಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳ ವರದಿಗಾರರು, ಛಾಯಾಗ್ರಾಹಕರು ಇದ್ದರು.
‘ಆಂದೋಲನ’ದಿಂದ ಹನೂರು ವರದಿಗಾರ ವೆಂಕಟೇಗೌಡ, ಪತ್ರಿಕಾ ಛಾಯಾಗ್ರಾಹಕ ನೇತ್ರರಾಜು ಕೂಡ ನೇರ ವರದಿ ಮತ್ತು ಫೋಟೊಗಾಗಿ ಕಾಡಿನ ನಡುವೆ ಅಲೆಯುವುದನ್ನು ರೂಢಿಗತ ಮಾಡಿಕೊಂಡಿದ್ದರು. ೧೯೯೨, ಆ.೧೪ರಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಹರಿಕೃಷ್ಣ, ಪೊಲೀಸ್ ಇನ್‌ಸ್ಪೆಕ್ಟರ್ ಶಕೀಲ್ ಅಹಮ್ಮದ್ ಸೇರಿದಂತೆ ಹಲವು ಪೊಲೀಸರನ್ನು ಮೀಣ್ಯಂ ಬಳಿ ವೀರಪ್ಪನ್ ಮತ್ತು ಆತನ ತಂಡ ಶೂಟ್ ಮಾಡಿದ್ದರು.
ಈ ದುರಂತ ಇಡೀ ರಾಜ್ಯವನ್ನೇ ನಡುಗಿಸಿತ್ತು ಎನ್ನಬಹುದು. ಮಾರನೇ ದಿನ ಬೆಳಿಗ್ಗೆ ಮೈಸೂರು ಭಾಗದ ಪತ್ರಕರ್ತರು ಘಟನೆ ನಡೆದ ಸ್ಥಳಕ್ಕೆ ತೆರಳಿ ಸಾಕ್ಷಾತ್ ವರದಿ ನೀಡುವ ಉಮೇದಿನಲ್ಲಿ ಮೀಣ್ಯಂಗೆ ಹೊರಟಿದ್ದರು. ಎಲ್ಲರಿಗೂ ಮುಂದೆ ಪೊಲೀಸ್ ಪೈಲಟ್ ರೀತಿಯಲ್ಲಿ ವೆಂಕಟೇಗೌಡ ಕಣ್ಣಿಗೆ ರೆಬಾನ್ ಗ್ಲಾಸ್, ದೇಹಕ್ಕೆ ಹಸಿರು ಬಣ್ಣದ ಲಾಂಗ್ ಜರ್ಕಿನ್ ಧರಿಸಿ, ತಮ್ಮ ಬುಲೆಟ್‌ನಲ್ಲಿ ತೆರಳುತ್ತಿದ್ದರು. ಅವರನ್ನು ನಾಲ್ಕೆ ದು ಕಾರಿನಲ್ಲಿ ವರದಿಗಾರರು, ನೇತ್ರರಾಜು ಅವರು ಸೇರಿದಂತೆ ಪತ್ರಿಕಾ ಛಾಯಾಗ್ರಾಹಕರು ಅನುಸರಿಸುತ್ತಿದ್ದರು.
ಮಾರಳ್ಳಿ, ದಿನ್ನಳ್ಳಿ ಮಾರ್ಗವಾಗಿ ಈ ತಂಡಗಳು ಮೀಣ್ಯಂ ಕಡೆಗೆ ತೆರಳುತ್ತಿದ್ದವು. ಪೂರ್ತಿ ಕಚ್ಚಾ ರಸ್ತೆ, ಜೊತೆಗೆ ಅಲ್ಲಲ್ಲಿ ಜಲ್ಲಿಕಲ್ಲು, ಬೋರ್ಡರ್‌ಗಳ ರಾಶಿ, ಹಟ ಬಿಡದೆ ಆ ರಸ್ತೆಯಲ್ಲೇ ಎಲ್ಲರೂ ಹೊರಟಿದ್ದರು. ವೆಂಕಟೇಗೌಡ ಅವರಿಗೆ ಪರಿಚಯವಿದ್ದ ಸ್ಥಳೀಯರು, ಮುಂದೆ ಹೋಗಬೇಡಿ ಅಪಾಯ ಎಂದು ಎಚ್ಚರಿಸಿದರು. ಅದನ್ನು ಕಿವಿಗೇ ಹಾಕಿಕೊಳ್ಳದೇ ಪತ್ರಕರ್ತರೆಲ್ಲರೂ ಮುಂದೆ ಸಾಗಿದ್ದರು. ಇನ್ನೇನು ಹರಿಕೃಷ್ಣ ಮತ್ತಿತರ ಪೊಲೀಸರನ್ನು ಹತ್ಯೆ ಮಾಡಲಾಗಿದ್ದ ಮೀಣ್ಯಂಗೆ ತಲುಪುವುದರಲ್ಲಿದ್ದರು. ಎಲ್ಲರಿಗೂ ಮಾರ್ಗದರ್ಶಕರಂತೆ ಸಾಗುತ್ತಿದ್ದ ವೆಂಕಟೇಗೌಡರು ಏನೋ ಕಾರಣಕ್ಕೆ ತಮ್ಮ ಕುತ್ತಿಗೆಯನ್ನು ಸ್ವಲ್ಪ ವಾಲಿಸಿ, ಮತ್ತೆ ನೇರ್ಪುಗೊಳಿಸಿದರು… ಅಷ್ಟೇ, ಢಮಾರ್ ಎಂಬ ಶಬ್ದದ ಜತೆಗೇ ಗುಂಡೊಂದು ಅವರ ಮುಖದ ಮುಂದೆ ಗಾಳಿಯನ್ನು ಸೀಳಿಕೊಂಡು ಮುಂದೆ ಹೋಗಿಬಿಟ್ಟಿತು! ಒಂದು ಕ್ಷಣ ಎಲ್ಲರೂ ಸ್ತಂಭೀಭೂತರಾಗಿಬಿಟ್ಟರು.
ಮರುಕ್ಷಣವೇ ಎಚ್ಚೆತ್ತುಕೊಂಡ ಪತ್ರಕರ್ತರೆಲ್ಲರೂ ಎದ್ದೆವೋ ಬಿದ್ದೆವೋ ಎಂದು ಬೈಕ್, ಕಾರುಗಳನ್ನು ಹಿಂದಿರುಗಿಸಿಕೊಂಡು ಸಾಧ್ಯವಾದಷ್ಟು ವೇಗವಾಗಿ ಸ್ವಸ್ಥಾನಕ್ಕೆ ಮರಳಿದರು. ವೆಂಕಟೇಗೌಡ ಅವರು ಹಸಿರು ಬಣ್ಣದ ಲಾಂಗ್ ಜರ್ಕಿನ್ ಧರಿಸಿದ್ದರಿಂದ ಪೊಲೀಸರು ಇರಬೇಕು ಎಂದು ಪರಿಭಾವಿಸಿ ವೀರಪ್ಪನ್ ಅಥವಾ ಆತನ ತಂಡ, ಗುಂಡು ಹಾರಿಸಿರಬಹುದು!

ವೀರಪ್ಪನ್ ಅಪಹೃತರನ್ನು ಬಿಡುಗಡೆ ಮಾಡಿಸಿತ್ತು ‘ಆಂದೋಲನ’

ಎ.ಎಚ್.ಗೋವಿಂದ
೧೯೯೬ರಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡುಗಳ್ಳ ವೀರಪ್ಪನ್ ಆರ್ಭಟದ ದಿನಗಳು ಅವು. ಡಿಸಿಎಫ್ ಶ್ರೀನಿವಾಸ್ ಅವರನ್ನು ವೀರಪ್ಪನ್ ಕಗ್ಗೊಲೆ ಮಾಡಿ ಅಂದಾಜು ೨ ತಿಂಗಳುಗಳು ಕಳೆದಿದ್ದವು. ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರ ರಾಜಶೇಖರ ಕೋಟಿ ಅವರು ಸ್ವತಃ ಕೊಳ್ಳೇಗಾಲಕ್ಕೆ ಆಗಮಿಸಿ, ವೀರಪ್ಪನ್‌ಗೆ ಸಂಬಂಧಿಸಿದ ಪ್ರತಿ ಸುದ್ದಿಗಳನ್ನೂ ಇಂಚಿಂಚೂ ಬಿಡದೆ ಓದುಗರಿಗೆ ತಲುಪಿಸಲು ಶ್ರಮವಹಿಸಿದ್ದರು. ವೀರಪ್ಪನ್ ಹಣಕ್ಕಾಗಿ ಸಿರಿವಂತರನ್ನು ಅಪಹರಿಸುವ ಯತ್ನ ಮಾಡುತ್ತಿದ್ದ. ಇದೇ ಉದ್ದೇಶದಿಂದ ಕೊಳ್ಳೇಗಾಲ ತಾಲ್ಲೂಕಿನ ಗುಂಡಲ್ ಜಲಾಶಯ ಸಮೀಪದಲ್ಲಿ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ವೇಲಾಯುಧನ್, ಅಂದಾನಿ ಸೇರಿದಂತೆ ಏಳು ಮಂದಿ ಅರಣ್ಯ ಸಿಬ್ಬಂದಿಯನ್ನು ಅಪಹರಿಸಿದ್ದ ವೀರಪ್ಪನ್ ಪಡೆ, ಹಣಕ್ಕಾಗಿ ಬೇಡಿಕೆ ಇಟ್ಟಿತ್ತು. ಈ ಸುದ್ದಿಯನ್ನು ವಿಸ್ತೃತವಾಗಿ ‘ಆಂದೋಲನ’ ಪ್ರಕಟಿಸಿತ್ತು.
ಅಪಹೃತರಾಗಿದ್ದ ಅಷ್ಟೂ ಜನರ ಕುಟುಂಬಗಳು ಕಂಗಾಲಾಗಿದ್ದವು. ಅವರ ದುಃಖ ಅರಣ್ಯ ರೋದನವಾಗಿತ್ತು. ಅಪಹರಣ ನಡೆದು ಸುಮಾರು ಒಂದು ತಿಂಗಳಾದರೂ ವೀರಪ್ಪನ್ ಅವರನ್ನು ಬಿಡುಗಡೆ ಮಾಡುವ ಸೂಚನೆಗಳು ಕಾಣಲಿಲ್ಲ. ಇದರಿಂದ ಬಹಳ ನೊಂದುಕೊಂಡ ರಾಜಶೇಖರ ಕೋಟಿ ಅವರು, ವೀರಪ್ಪನ್ ಸುದ್ದಿಗಾಗಿ ಮೆಟ್ಟೂರು ಅಣೆಕಟ್ಟೆ ಬಳಿ ವಾಸ್ತವ್ಯ ಹೂಡಿದ್ದ ನಕ್ಕೀರನ್ ಪತ್ರಿಕೆಯ ವರದಿಗಾರ ಶಿವಸುಬ್ರಮಣ್ಯ ಅವರನ್ನು ಭೇಟಿಯಾಗಿ ಸಂತ್ರಸ್ತ ಕುಟುಂಬಗಳ ನೋವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಅಲ್ಲದೆ, ಆ ಕುಟುಂಬದವರನ್ನು ನಕ್ಕೀರನ್ ಪತ್ರಿಕೆಯ ಸಂಪಾದಕ ಗೋಪಾಲ್ ಅವರ ಬಳಿಗೆ ಕರೆದೊಯ್ದು ಪರಿಸ್ಥಿತಿಯನ್ನು ತಿಳಿಸುವಂತೆ ಮನವಿ ಮಾಡುತ್ತಾರೆ.
ಅದಕ್ಕೆ ಶಿವಸುಬ್ರಮಣ್ಯ ಸಮ್ಮತಿಸುತ್ತಾರೆ. ಅಲ್ಲದೆ, ಗೋಪಾಲ್ ಅವರ ಗಮನಕ್ಕೆ ಈ ವಿಷಯವನ್ನು ತರುತ್ತಾರೆ. ಗೋಪಾಲ್, ಆ ಕುಟುಂಬಗಳನ್ನು ಚೆನ್ನ್ತ್ಯೈಗೆ ಕರೆತರುವಂತೆ ಹೇಳುತ್ತಾರೆ. ನಂತರ ಕೋಟಿ ಅವರು, ಒಂದು ದಿನ ಎರಡು ಕಾರುಗಳಲ್ಲಿ ವೇಲಾಯುಧನ್ ಮತ್ತಿತರರ ಕುಟುಂಬಗಳನ್ನು ಮದ್ರಾಸ್ (ಚೆನ್ನ್ತ್ಯೈ)ಗೆ ಶಿವಸುಬ್ರಮಣ್ಯ ಮತ್ತು ‘ಆಂದೋಲನ’ ದಿನಪತ್ರಿಕೆಯ ಕೊಳ್ಳೇಗಾಲ ತಾಲ್ಲೂಕು ವರದಿಗಾರ ಎಚ್.ಗೋವಿಂದ ಅವರೊಂದಿಗೆ ಕಳುಹಿಸಿಕೊಡುತ್ತಾರೆ. ಅಲ್ಲಿ ಗೋಪಾಲ್ ಈ ಕುಟುಂಬಗಳ ಅಳಲು, ಸಂಕಷ್ಟವನ್ನು ವಿಡಿೋಂ ಮಾಡಿಸುತ್ತಾರೆ. ಇವರನ್ನು ಎರಡು ದಿನಗಳ ಕಾಲ ಚೆನ್ನ್ತ್ಯೈನಲ್ಲೇ ಇರಿಸಿಕೊಂಡಿರುತ್ತಾರೆ. ನಂತರ ವಾಪಸ್ ಗುಂಡಾಲ್ ಅಣೆಕಟ್ಟೆ ಪ್ರದೇಶಕ್ಕೆ ಕಳುಹಿಸುತ್ತಾರೆ. ಇದಾದ ೫ ದಿನಗಳ ಬಳಿಕ ವೀರಪ್ಪನ್ ಆ ಎಲ್ಲ ಏಳೂ ಮಂದಿಯನ್ನು ಬಿಡುಗಡೆ ಮಾಡುತ್ತಾನೆ. ಈ ಎಲ್ಲ ಸುದ್ದಿಗಳೂ ‘ಆಂದೋಲನ’ದಲ್ಲಿ ಸವಿಸ್ತಾರವಾಗಿ ಪ್ರಕಟಗೊಳ್ಳುತ್ತವೆ. ‘ಆಂದೋಲನ’ದ ಹಾದಿಯಲ್ಲಿ ಇದೊಂದು ಪ್ರಮುಖ ಘಟನೆ ಎಂಬುದು ಉಲ್ಲೇಖಾರ್ಹ.

ಬಿದರಿ ಗುಂಡಿನ ಬೆದರಿಕೆಗೆ ಜಗ್ಗದ ‘ಆಂದೋಲನ’

ವೀರಪ್ಪನ್ ಕಾರ್ಯಾಚರಣೆಯ ಇಂಚಿಂಚೂ ವರದಿಯನ್ನು ಪ್ರಕಟಿಸುವ ಮೂಲಕ ‘ಆಂದೋಲನ’ ಬದ್ಧತೆಯನ್ನು ಪ್ರದರ್ಶಿಸಿತ್ತು. ವೀರಪ್ಪನ್ ಅಟ್ಟಹಾಸವಾಗಲಿ, ಪೊಲೀಸರು ಸಾಮಾನ್ಯಜನರಿಗೆ ನೀಡುತ್ತಿದ್ದರೆನ್ನಲಾದ ತೊಂದರೆ ಬಗ್ಗೆಯಾಗಲಿ ವಸ್ತುನಿಷ್ಠ ವರದಿಯನ್ನು ದಾಖಲಿಸುತ್ತಿತ್ತು. ರಾಜ್ಯ ಎಸ್‌ಟಿಎಫ್ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಅವರಿಗೆ ಇರದ ಅಥವಾ ಅವರಿಂದ ದೊರೆಯದ ಹಲವು ಮಾಹಿತಿಗಳೂ ‘ಪತ್ರಿಕೆ’ಯಲ್ಲಿ ಬಹಿರಂಗವಾಗುತ್ತಿದ್ದವು. ಇದರಿಂದ ಬಿದರಿ ಹಲವು ಮುಜುಗರಕ್ಕೊಳಗಾಗಿದ್ದರು. ಪತ್ರಿಕೆ ಹನೂರು ವರದಿಗಾರರ ಕಾರ್ಯಕ್ಷಮತೆಯಿಂದ ‘ನಕಲಿ ಬಂಧಿತರಿಗೆ ಗುಂಡೇಟು’ ಇಂತಹ ವರದಿಗಳಿಂದ ಬಿದರಿ ಸಿಟ್ಟಾಗುತ್ತಿದ್ದರು. ಒಮ್ಮೆ ‘ಪತ್ರಿಕೆ’ಯ ಕಚೇರಿಗೆ ದೂರವಾಣಿ ಕರೆ ಮಾಡಿ ‘ನಿಮ್ಮ ಹನೂರು ವರದಿಗಾರರನ್ನು ಗುಂಡಿಕ್ಕಿ ಕೊಲ್ಲಿಸಿದರೆ ಏನು ಮಾಡುತ್ತೀರಿ?’ ಎಂದು ಸಂಪಾದಕರಾದ ರಾಜಶೇಖರ ಕೋಟಿ ಅವರಿಗೆ ಬೆದರಿಕೆ ಹಾಕಿದ್ದರು. ಆದರೆ, ಆಂದೋಲನ’ಕ್ಕೆ ಅಂತಹದ್ದೆಲ್ಲ ಸಹಜ. ಅದೊಂದು ರೀತಿಯಲ್ಲಿ ‘ಕ್ರಿೆುಂಗೆ ಪ್ರತಿಕ್ರಿೆುಂ’ ಎಂಬುದು ಗೊತ್ತಿತ್ತು. ಹಾಗಾಗಿ ಬಿದರಿ ಬೆದರಿಕೆಗೆ ಮಣಿಯದೆ ‘ಪತ್ರಿಕೆ’ ತನ್ನ ನಿಷ್ಪಕ್ಷಪಾತ ವರದಿಗಾರಿಕೆಯನ್ನು ಮುಂದುವರಿಸಿತ್ತು.

ಆಂದೋಲನದಲ್ಲಿ ಕೃಪಾಕರ-ಸೇನಾನಿ ಅನುಭವ ಕಥನ

ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ- ಸೇನಾನಿ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಇಬ್ಬರೂ ಆತನೊಂದಿಗೆ ೧೪ ದಿನಗಳು ಕಳೆದು, ನಂತರ ಬಿಡುಗಡೆಯಾಗಿದ್ದರು. ಸ್ವಲ್ಪ ದಿನಗಳ ನಂತರ ವೀರಪ್ಪನ್ ನೊಂದಿಗೆ ವನವಾಸ ಅನುಭವಿಸಿದ್ದ ಘಟನೆಗಳನ್ನು ದಾಖಲಿಸಲು ಇಬ್ಬರೂ ಆಸಕ್ತಿ ಹೊಂದಿದ್ದರು. ಅದಕ್ಕೆ :ಆಂದೋಲನ’ ದಿನಪತ್ರಿಕೆ ವೇದಿಕೆಯಾಯಿತು. ಅವರು ನಿರಂತರವಾಗಿ ೧೪ ದಿನಗಳು ತಾವಿಬ್ಬರೂ ವೀರಪ್ಪನ್ ಜೊತೆ ಇದ್ದಾಗ ಉಂಟಾದ ಅನುಭವಗಳನ್ನು ಅನಾವರಣಗೊಳಿಸಿದ್ದರು.

ಒಂದೇ ದಿನದಲ್ಲಿ ೨ ವಿಶೇಷ ಆವೃತ್ತಿ
ವೀರಪ್ಪನ್ ಪೊಲೀಸರ ಗುಂಡಿಗೆ ಬಲಿಯಾದ ದಿನ ‘ಆಂದೋಲನ’ ಹೆಚ್ಚುವರಿಯಾಗಿ ೨ ವಿಶೇಷ ಆವೃತ್ತಿಗಳನ್ನು ಹೊರತಂದಿದ್ದು ಗಮನಾರ್ಹ. ಹಿಂದಿನ ದಿನ ರಾತ್ರಿ ನಡೆದ ವೀರಪ್ಪನ್ ಕೊಲೆಯು ೨೦೦೪ರ, ಆ.೧೯ರಂದು ಬೆಳಗಿನ ಆವೃತ್ತಿಯಲ್ಲಿ ಪ್ರಕಟವಾಗಿದ್ದು, ಓದುಗರಿಂದ ಸಿಕ್ಕಿದ ಪ್ರತಿಕ್ರಿಯೆ, ಮತ್ತೆ ಮಧ್ಯಾಹ್ನ ೧೨ಕ್ಕೆ ಇನ್ನೊಂದು ಆವೃತ್ತಿಯನ್ನು ತರಲು ಉತ್ತೇಜಿಸಿತು. ಅದಕ್ಕೂ ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು.

ಪಕ್ಷಿ ನೋಟ….

ವೀರಪ್ಪನ್ ಅಟ್ಟಹಾಸ ವರ್ಸಸ್ ಪೊಲೀಸ್ ಆಪರೇಶನ್

೧೯೮೭: ತಮಿಳುನಾಡು ಅರಣ್ಯಾಧಿಕಾರಿ ಚಿದಂಬರಂ ಅಪಹರಣ ಮತ್ತು ಕೊಲೆ

೧೯೮೯: ಎದುರಾಳಿ ಗುಂಪಿನ ಐವರ ಕಗ್ಗೊಲೆ, ಕರ್ನಾಟಕದ ಫಾರೆಸ್ಟ್ ಗಾರ್ಡ್ ಮೋಹನಯ್ಯ ಹತ್ಯೆ. ಬೇಗೂರು ಅರಣ್ಯದಲ್ಲಿ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿ ಅಪಹರಣ, ಹತ್ಯೆ.

೧೯೯೦: ತಮಿಳುನಾಡು ಪೊಲೀಸರಿಂದ ವೀರಪ್ಪನ್ ತಂಡದ ಇಬ್ಬರ ಹತ್ಯೆ, ವೀರಪ್ಪನ್ ಹುಡುಕಾಟ ಆರಂಭ. ಸಿಲುವೇಕಲ್‌ನಲ್ಲಿ ವೀರಪ್ಪನ್‌ನ ಭಾರಿ ಶ್ರೀಗಂಧ ದಾಸ್ತಾನು ಪತ್ತೆ, ವಶ. ಕರ್ನಾಟಕ ಸರ್ಕಾರದಿಂದ ಕೆಎಸ್‌ಆರ್‌ಪಿ ಮುಖ್ಯಸ್ಥ ಕೆ.ಯು.ಶೆಟ್ಟಿ ನೇತೃತ್ವದಲ್ಲಿ ವಿಶೇಷ ಪಡೆ ರಚನೆ.

೧೯೯೧: ವೀರಪ್ಪನ್ ವಿರುದ್ಧ ವ್ಯಾಪಕ ಕಾರ್ಯಾಚರಣೆ. ನೂರಕ್ಕೂ ಹೆಚ್ಚು ವೀರಪ್ಪನ್ ಸಹಚರರ ಬಂಧನ. ವೀರಪ್ಪನ್‌ನಿಂದ ಪೊಲೀಸ್ ಮಾಹಿತಿದಾರ ಕೋಟೆ ನಾಯಕ್ ಹತ್ಯೆ. ಡಿಸಿಎಫ್ ಮತ್ತು ವಿಶೇಷ ಪಡೆಯ ಮುಖ್ಯಸ್ಥ ಪಿ.ಶ್ರೀನಿವಾಸ್ ಬರ್ಬರ ಹತ್ಯೆ, ರುಂಡ ಅಪಹರಣ.

೧೯೯೨: ಗಣಿ ಮಾಲೀಕ ಸಂಪಂಗಿ ರಾಮಯ್ಯನ ಮಗನ ಅಪಹರಣ, ೧೫ ಲಕ್ಷ ಒತ್ತೆ ಹಣ ಪಡೆದು ಬಿಡುಗಡೆ. ಕರ್ನಾಟಕ ವಿಶೇಷ ಪಡೆಯಿಂದ ವಿವಾದಗ್ರಸ್ತ ಕಾರ್ಯಾಚರಣೆಯಲ್ಲಿ ವೀರಪ್ಪನ್‌ನ ಕೆಲ ಬೆಂಬಲಿಗರ ಹತ್ಯೆ. ವೀರಪ್ಪನ್ ಪಡೆಯಿಂದ ಮೀಣ್ಯಂ ಬಳಿ ಬಾಂಬ್ ಸ್ಛೋಟಿಸಿ ವಿಶೇಷ ಪಡೆ ಎಸ್ಪಿ ಟಿ.ಹರಿಕೃಷ್ಣ, ಎಸ್‌ಐ ಶಕೀಲ್ ಅಹಮದ್ ಮತ್ತು ಇತರ ನಾಲ್ವರ ಹತ್ಯೆ.

೧೯೯೩: ವಿಶೇಷ ಪಡೆ ಮುಖ್ಯಸ್ಥರಾಗಿ ಡಿಐಜಿ ಶಂಕರ ಬಿದರಿ ಅಧಿಕಾರ ಸ್ವೀಕಾರ. ವೀರಪ್ಪನ್ ತಂಡದಿಂದ ಪಾಲಾರ್ ಬಳಿ ಬಸ್ ಸ್ಛೋಟಿಸಿ ೭ ಪೊಲೀಸ್ ಸಿಬ್ಬಂದಿ, ೧೫ ಪೊಲೀಸ್ ಮಾಹಿತಿದಾರರ ಮಾರಣ ಹೋಮ. ತಮಿಳುನಾಡು ಎಸ್‌ಟಿಎಫ್ ಎಸ್‌ಪಿ ರ್ಯಾಂಬೊ ಗೋಪಾಲಕೃಷ್ಣ ಮತ್ತು ಕರ್ನಾಟಕದ ನಾಲ್ವರು ಪೊಲೀಸರಿಗೆ ತೀವ್ರ ಗಾಯ. ವೀರಪ್ಪನ್‌ನಿಂದ ಮೊದಲ ಬಾರಿಗೆ ಜಿಲೆಟಿನ್ ಕಡ್ಡಿಗಳ ಬಳಕೆ. ಮಾಹಿತಿದಾರರಿಬ್ಬರ ಹತ್ಯೆ.

೧೯೯೪: ಕರ್ನಾಟಕ ವಿಶೇಷ ಪಡೆಯ ೬ ಸಿಬ್ಬಂದಿಗಳ ಹತ್ಯೆ. ಎಸ್‌ಪಿ ಗೋಪಾಲ್ ಹೊಸೂರ್ ಸೇರಿದಂತೆ ಮೂವರಿಗೆ ಗಾಯ, ಮರು ದಾಳಿಯಲ್ಲಿ ವೀರಪ್ಪನ್ ತಂಡದ ಆರು ಜನರ ಹತ್ಯೆ. ಕಾರ್ಯಾಚರಣೆಯಲ್ಲಿ ಭಾಗವಹಿಸಲು ಭದ್ರತಾಪಡೆಯ ೬ ತುಕಡಿಗಳ ಆಗಮನ. ಮಹದೇಶ್ವರ ಬೆಟ್ಟದ ದೇವಸ್ಥಾನದ ಧರ್ಮದರ್ಶಿ ಸೇರಿದಂತೆ ೧೩ ವೀರಪ್ಪನ್ ಬೆಂಬಲಿಗರು ಟಾಡಾದಡಿ ಬಂಧನ. ತಮಿಳುನಾಡು ವಿಶೇಷ ಪಡೆಯಿಂದ ತಪ್ಪಿಸಿಕೊಂಡ ವೀರಪ್ಪನ್ ಸಹಚರ ಕಾಮರಾಜನ್ ಹತ್ಯೆ.
ಮರಳ್ಳಿ ಗ್ರಾಮದ ಯುವಕನೊಬ್ಬನ ಅಪಹರಣ, ಕೋಟ್ಯಧೀಶ ಗಣಿ ಮಾಲೀಕ ಓಬಳ ಶೆಟ್ಟಿ ಸೇರಿದಂತೆ ೭ ಜನರ ಬಂಧನ. ಕಾರ್ಯಾಚರಣೆಯಲ್ಲಿ ಕರ್ನಾಟಕ ಪಡೆಯಿಂದ ವೀರಪ್ಪನ್ ೬ ಬೆಂಬಲಿಗರ ಹತ್ಯೆ. ನಂತರ ಇನ್ನೂ ಮೂವರು ಸಹಚರರ ಹತ್ಯೆ. ಮತ್ತೆ ಕೆಲದಿನಗಳಲ್ಲಿ ನಾಲ್ವರು ಸಹಚರರ ಹತ್ಯೆ. ಮತ್ತೆ ಕರ್ನಾಟಕ ಪಡೆಯಿಂದ ಮೂವರು, ತಮಿಳುನಾಡು ಪಡೆಯಿಂದ ಒಬ್ಬನ ಹತ್ಯೆ. ಒಂದೇ ತಿಂಗಳ ಅಂತರದಲ್ಲಿ ವೀರಪ್ಪನ್ ಪಡೆಯ ಇನ್ನೂ ೮ ಸದಸ್ಯರ ಹತ್ಯೆ. ಮತ್ತೊಂದು ತಿಂಗಳಲ್ಲಿ ಇನ್ನಿಬ್ಬರ ಹತ್ಯೆ.

೧೯೯೫: ನರಹಂತಕನ ಕಟ್ಟಾ ಬೆಂಬಲಿಗ ಕೊಳಂದೈ, ವಿಶೇಷ ಪಡೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಆತ್ಮಹತ್ಯೆಗೆ ಶರಣು. ಕಾರ್ಯಾಚರಣೆಯಲ್ಲಿ ಇನ್ನೊಬ್ಬ ಸದಸ್ಯ ಮತ್ತು ಒಬ್ಬ ಪೊಲೀಸ್ ಸಿಬ್ಬಂದಿ ಸಾವು, ವೀರಪ್ಪನ್‌ನ ಇಬ್ಬರು ಸಹಚರರ ಬಂಧನ. ಒಂದು ತಿಂಗಳ ಅಂತರದಲ್ಲಿ ವೀರಪ್ಪನ್ ತಂಡದ ಇಬ್ಬರು ಸದಸ್ಯರ ಹತ್ಯೆ. ಕೆಲವೇ ದಿನಗಳಲ್ಲಿ ಕೊಯಮತ್ತೂರಿನಲ್ಲಿ ವೀರಪ್ಪನ್‌ನ ಮೂವರು ಸಹಚರರ ಬಂಧನ.
ಡಿವೈಎಸ್ಪಿ ಚಿದಂಬರನಾಥ್ ಸೇರಿ ೬ ಮಂದಿಯನ್ನು ಅಪಹರಿಸಿದ ವೀರಪ್ಪನ್ ತಂಡ, ಮೂವರ ಬಿಡುಗಡೆ, ಉಳಿದ ಮೂವರು ಒತ್ತೆಯಾಳುಗಳು. ಮಾತುಕತೆಗಾಗಿ ಕೊಯಮತ್ತೂರು ಶಂಕರ್ ಅವರಿಂದ ಆಹ್ವಾನ. ಕ್ಯಾಸೆಟ್‌ಗಳ ಮೂಲಕ ಸಂಪರ್ಕ ಬೆಳೆಸಿದ ನರಹಂತಕ. ಬೇಬಿ ವೀರಪ್ಪನ್ ಮೊದಲ ಬಾರಿಗೆ ಬಹಿರಂಗ ಪ್ರದರ್ಶನ. ಸಂಧಾನಕ್ಕೆ ಬಂದ ನರಹಂತಕನ ಸಹೋದರ ಅರ್ಜುನನ್ ಪೊಲೀಸರಿಗೆ ಶರಣು. ಮಾತುಕತೆ ವಿಫಲ, ಡಿವೈಎಸ್ಪಿ ಚಿದಂಬರನಾಥಂ ಹಾಗೂ ಇತರ ಒತ್ತೆಯಾಳುಗಳು ಪಾರು. ವೀರಪ್ಪನ್ ತಂಡದ ನಾಲ್ವರು ಕಟ್ಟಾ ಬೆಂಬಲಿಗರ ಬಂಧನ. ಸ್ವಲ್ಪದರಲ್ಲಿ ತಪ್ಪಿಸಿಕೊಂಡ ವೀರಪ್ಪನ್.

೧೯೯೬: ವೀರಪ್ಪನ್ ಸಹಚರ ಸೆಲ್ವರಾಜ್ ಹತ್ಯೆ. ಎಸ್ಪಿ ಸೆಲ್ವನ್‌ಗೆ ಗಾಯ.

೧೯೯೭: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ್ ಸೇನಾನಿ ಸೇರಿ ೬ ಮಂದಿಯನ್ನು ಅಪಹರಿಸಿದ ವೀರಪ್ಪನ್. ಕೆಲ ದಿನಗಳ ನಂತರ ದಿಢೀರ್ ಬಿಡುಗಡೆ. ಮತ್ತೆ ೧೦ ಮಂದಿ ಅರಣ್ಯ ಸಿಬ್ಬಂದಿ ಅಪಹರಣ. ಜೀಪ್ ಚಾಲಕ ಬಸವರಾಜನ್ ಬಿಡುಗಡೆ. ಅಂದಿನ ಕರ್ನಾಟಕ ಸಿಎಂ ಜೆ.ಎಚ್.ಪಟೇಲ್ ಮತ್ತು ತಮಿಳುನಾಡು ಸಿಎಂ ಕರುಣಾನಿಧಿ ಅವರಿಗೆ ಕ್ಯಾಸೆಟ್ ರವಾನೆ. ಸಂಧಾನದ ಬಳಿಕ ಅರಣ್ಯ ಸಿಬ್ಬಂದಿ ಬಿಡುಗಡೆ.

೨೦೦೦: ಗಾಜನೂರಿನಿಂದ ವರನಟ ಡಾ.ರಾಜ್‌ಕುಮಾರ್ ಅವರನ್ನು ಅಪಹರಿಸಿದ ವೀರಪ್ಪನ್, ೧೦೮ ದಿನಗಳ ಬಳಿಕ ಬಿಡುಗಡೆ

೨೦೦೨: ಮಾಜಿ ಸಚಿವ ಎಚ್.ನಾಗಪ್ಪ ಅಪಹರಣ. ತಪ್ಪಿಸಿಕೊಳ್ಳುವ ಯತ್ನದಲ್ಲಿ ನಾಗಪ್ಪ ಹತ್ಯೆ.

೨೦೦೪: ಎಸ್‌ಟಿಎಫ್ ಗುಂಡಿಗೆ ವೀರಪ್ಪನ್ ಸೇರಿ ನಾಲ್ವರ ಹತ್ಯೆ.

 

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago