ಆಂದೋಲನ ದಿನ ಪತ್ರಿಕೆಯ ಹಿತೈಷಿ ಅಭಿಮಾನಿ ಬಳಗದಲ್ಲಿ ನಾನು ಒಬ್ಬ. ಕಳೆದ 50 ವರ್ಷಗಳಿಂದ ನಾನು ‘ಆಂದೋಲನದ’ ಓದುಗನಾಗಿದ್ದೇನೆ. ಮತ್ತು ಅದರ ಒಡನಾಟದಲ್ಲಿದ್ದೇನೆ. ಈ 50 ವರ್ಷಗಳಲ್ಲಿ ಆಂದೋಲನ ಬೆಳೆದು ಬಂದ ಹಾದಿ ಅಷ್ಟು ಸುಗಮವಾಗಿಯೇನೂ ಇರಲಿಲ್ಲ. ಅದು ಅನೇಕ ಏಳು-ಬೀಳು, ಕಷ್ಟ-ಸುಖ ಅನುಭವಿಸಿದೆ. ಬಹಳ ಕಷ್ಟದ ದಿನಗಳಲ್ಲೂ ರಾಜಶೇಖರ ಕೋಟಿಯವರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಅದನ್ನು ಮುನ್ನಡೆಸಿಕೊಂಡು ಬಂದ ರೀತಿ ಒಂದು ರೋಚಕ ಇತಿಹಾಸವೇ ಸರಿ.
ರಾಜಶೇಖರ ಕೋಟಿ ಅವರು ಮೂಲತಃ ಒಬ್ಬ ಸಮಾಜವಾದಿ ಚಿಂತಕ, ಪಾಟೀಲ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ದುಡಿದು ಅನುಭವಿಯಾದರು. ಮೈಸೂರಿನ ಸಮಾಜವಾದಿ ಸಮಾನ ಮನಸ್ಕ ಗೆಳೆಯರಾದ ಪ್ರೊ ಎಂ.ಡಿ ನಂಜುಂಡಸ್ವಾಮಿ, ಡಾ. ಯು. ಆರ್ ಅನಂತಮೂರ್ತಿ, ದೇವನೂರು ಮಹಾದೇವ, ಪ್ರೊ.ಜಿ.ಹೆಚ್.ನಾಯಕ್, ಪ.ಮಲ್ಲೇಶ್, ಕಾಳೇಗೌಡ ನಾಗವರ, ಆಲನಹಳ್ಳಿ ಕೃಷ್ಣ, ಕೆ ರಾಮದಾಸ್ ಮುಂತಾದವರ ಸಂಪರ್ಕದಿಂದ ಕೋಟಿ ಅವರು ಮೈಸೂರಿಗೆ ಬಂದು ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯ ಆಂದೋಲನ ಪತ್ರಿಕೆಯನ್ನು ತರುವಂತಾಯಿತು.
‘ಆಂದೋಲನ’ ಪ್ರಾರಂಭದ ದಿನಗಳಲ್ಲಿ ರಾಜಶೇಖರ ಕೋಟಿ ಅವರು ಪಟ್ಟ ಪಾಡನ್ನು ನೆನೆಸಿಕೊಂಡರೆ ಈಗಲೂ ಕರುಳು ಚುರ್ರ್ ಎನ್ನುತ್ತದೆ. ಕೆಜಿಕೊಪ್ಪಲಿನಲ್ಲಿ ಒಂದು ಸಣ್ಣ ಮಳಿಗೆ, ಪ್ರೆಸ್ಸು ಕಚೇರಿ ಎಲ್ಲ ಅಲ್ಲಿಯೇ. ಸ್ವತಃ ರಾಜಶೇಖರ ಕೋಟಿ ಅವರೇ ಮೊಳೆಜೋಡಿಸಿ ಕಂಪೋಸ್ ಮಾಡಿ, ಕಾಲಿಂದ ಒತ್ತುವ ಮುದ್ರಣ ಯಂತ್ರದಲ್ಲಿ ಪತ್ರಿಕೆಯ ಮುದ್ರಣ ಕಾರ್ಯ ಪೂರೈಸುತ್ತಿದ್ದರು. ಅನಂತರ ಬೀದಿ ಬೀದಿ ಸುತ್ತಿ ಅವರೇ ಪತ್ರಿಕೆ ವಿತರಣೆಯ ಕೆಲಸವನ್ನೂ ಮಾಡುತ್ತಿದ್ದರು.ಅವರ ಅವಿರತ ದುಡಿಮೆಯ ಫಲವಾಗಿ ಪತ್ರಿಕೆ ತಳವೂರಿ ನಿಲ್ಲುವಂತಾಯಿತು.
ವಿಕ್ರಾಂತ್ ಟಯರ್ಸ್ ಲಿಮಿಟೆಡ್ ನ ನೌಕರ ಸತ್ಯದೇವ್ ಈಜು ಕೊಳವೊಂದರಲ್ಲಿ ಕೊಲೆಯಾದರು. ಅಂದಿನ ಡಿಸಿಪಿ ಸೋಮಶೇಖರ್ ಮೇಲೆ ಕೊಲೆ ಆರೋಪ ಬಂದಿತು. ಆಗ ರಾಜಶೇಖರ ಕೋಟಿಯವರು ಸ್ವತಃ ಶ್ರಮವಹಿಸಿ ಅನ್ವೇಷಣೆ ನಡೆಸಿ ತನಿಖಾ ಪತ್ರಿಕೋದ್ಯಮಕ್ಕೆ ಮಾದರಿ ಎಂಬಂತೆ ವರದಿ ಪ್ರಕಟಿಸಿದರು. ದಂತ ಚೋರ ವೀರಪ್ಪನ್ ಸಹಚರರ ಚಲನ ವಲನಗಳನ್ನು ಸ್ವತಃ ರಾಜಶೇಖರ ಕೋಟಿ ಅವರು ಫೀಲ್ಡ್ ವರ್ಕ್ ಮಾಡಿ ವರದಿ ಮಾಡುತ್ತಿದ್ದರು. ಪ್ರಾಯಶಃ ಈ ಎರಡೂ ವರದಿಗಳಲ್ಲಿಯ ಪ್ರಾಮಾಣಿಕತನವನ್ನು ಕಂಡು ಮೈಸೂರು ಭಾಗದ ಓದುಗರು ಆಂದೋಲನದ ಹಿಂದೆ ಬಿದ್ದರೇನಬಹುದು. ಪತ್ರಿಕೆಯ ಬೆಳವಣಿಗೆಗೆ ಈ ರೀತಿಯ ಆಕರ್ಷಕ ಮತ್ತು ಗುಣಾತ್ಮಕ ವರದಿಗಳು ಮುಖ್ಯ ಕಾರಣವೆಂದು ಹೇಳಬಹುದು.
‘ಆದೋಲನ’ ಪತ್ರಿಕೆ ನಡೆಸುತ್ತಿದ್ದ ‘ಆಂದೋಲನ ಭವನ’ವನ್ನು ಬ್ಯಾಂಕ್ ಸಾಲದ ಹೊರೆಯಿಂದ ಕೋಟಿಯವರು ಮಾರಾಟ ಮಾಡಬೇಕಾಗಿ ಬಂದಿತು. ಆಗ ಅವರು “ವಿಶ್ವೇಶ್ವರ ನಗರದಲ್ಲಿರುವ ಆದಿಕರ್ನಾಟಕ ಮಹಾಸಂಸ್ಥೆಗೆ ಸೇರಿದ ನಿವೇಶನದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ಆಧಾರದಲ್ಲಿ ಕೆಲದಿವಸ ಪ್ರೆಸ್ ನಡೆಸಲು ವ್ಯವಸ್ಥ ಮಾಡಿಕೊಳ್ಳುವೆ. ಆದರೆ ಒಂದು ಷರತ್ತು ಏನೆಂದರೆ ಅದು ದಲಿತಬಾಂಧವರ ಆಸ್ತಿಯಾದುದರಿಂದ ಒಂದು ಆಕ್ಷೇಪಣೆ ಬಂದರೂ ನನಗದು ಬೇಡ” ಎಂದರು. ನಾನು ಅವರ ವಿಚಾರ ಒಪ್ಪಿ ಕರ್ನಾಟಕ ಮಹಾಸಂಸ್ಥೆಯ ಸರ್ವ ಸದಸ್ಯರ ಸಭೆ ಕರೆದು ವಿಷಯ ಪ್ರಸ್ತಾಪಿಸಿದೆ. ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಆಂದೋಲನ ನಮ್ಮ ಪತ್ರಿಕೆ ಅದನ್ನು ಬಳಸಿಕೊಳ್ಳಲು ನಮ್ಮ ಯಾವುದೇ ತಕರಾರು ಇಲ್ಲ ಎಂದರೆ. ಆ ಸಭೆಯಲ್ಲಿ ರಾಜಶೇಖರ ಕೋಟಿ ಅವರೂ ಇದ್ದರು. ಇನ್ನೇನು ಅಲ್ಲಿ ಪ್ರೆಸ್ ಹಾಕಲು ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುತ್ತಿರುವಾಗ ಅಶೋಕಪುರಂನಿಂದ ತಕರಾರಿನ ಧಾಟಿಯಲ್ಲಿ ಅನಾಮಧೇಯ ಪತ್ರವೊಂದು ಕೋಟಿ ಅವರಿಗೆ ಹೋಗಿತ್ತು. ಅದನ್ನು ಕಂಡ ಕೋಟಿ ಅವರ ತಮ್ಮ ತೀರ್ಮಾನ ಬದಲಿಸಿದರು. ನಾವು ಎಷ್ಟೇ ಬಲವಂತ ಮಾಡಿದರೂ ಅವರು ಒಪ್ಪಲಿಲ್ಲ. ರಾಜಶೇಖರ ಕೋಟಿ ಅವರು ಅಷ್ಟು ಸೂಕ್ಮ ಮತ್ತು ಸಂವೇದನಾಶೀಲರಾಗಿದ್ದರು.
ಪ್ರಾಯಶಃ ಒಂದು ಜಿಲ್ಲಾ ಪತ್ರಿಕೆ ಇಷ್ಟು ಪ್ರಮಾಣದಲ್ಲಿ ಪ್ರಸಾರ ಕಂಡ ಉದಾಹರಣೆ ಇನ್ನೊಂದಿರಲಾರದು. ಅವಿಭಜಿತ ಮೖೆಸೂರು ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ‘ಆಂದೋಲನ’ದ ಓದುಗ ವರ್ಗ ನಿರ್ಮಾಣವಾಯಿತು.
ರಾಜಶೇಖರ ಕೋಟಿ ಅವರ ಮತ್ತು ನನ್ನ ಸಂಬಂಧ ಹೆಚ್ಚಾಗಿ ಬೆಳೆದಿದ್ದು ಜೆ.ಪಿ ಅವರ ಸಮಗ್ರಕ್ರಾಂತಿ ಚಳುವಳಿಯ ಸಂದರ್ಭದಲ್ಲಿ.ಅಂದು ದೇಶದಲ್ಲಿ ತುರ್ತು ಪರಿಸ್ಛಿತಿ ಜಾರಿಯಲ್ಲಿದ್ದ ಕಾಲ. ನಾವಿಬ್ಬರೂ ಸಕ್ರಿಯವಾಗಿ ಈ ಚಳುವಳಿಯಲ್ಲಿ ಭಾಗವಹಿಸಿದ್ದೆವು.ಅನಂತರ ನಾನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆಗ ನಮ್ಮ ಸಂಬಂಧ ಮತ್ತಷ್ಟು ಗಾಢವಾಯಿತು.
ನಾನು ಸಂಸದನಾಗಿ ದೆಹಲಿಯಲ್ಲಿದ್ದಾಗ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಾಹೀರಾತನ್ನು ‘ಆಂದೋಲನ’ ಕ್ಕೂ ಕೊಡಿಸಲು ಓಡಾಡಿದೆ. ದೆಹಲಿಗೆ ಬಂದಾಗ ರಾಜಶೇಖರ ಕೋಟಿ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು.
ಬದನವಾಳು ಕೋಮು ಗಲಭೆಯಲ್ಲಿ ಪತ್ರಕರ್ತರಾಗಿ ರಾಜಶೇಖರ ಕೋಟಿ ನನಗೆ ಬೆಂಬಲವಾಗಿ ನಿಂತರು. ಈ ದಿನದಲ್ಲಿ ಧಾರ್ಮಿಕ ಮುಖಂಡರು ಇಡೀ ವೀರಶೈವ ಸಮಾಜ ಕಾರಣವಲ್ಲ: ಕೆಲವು ಕಿಡಿಗೇಡಿಗಳು ಮಾತ್ರ ಕಾರಣ ಎಂಬ ನನ್ನ ವಿಚಾರಗಳನ್ನು ಮುಖಪುಟದಲ್ಲಿ ಹಾಕಿಸಿದ್ದರು. ಮುಂದೆ ಉಮ್ಮತ್ತೂರು ಗಲಬೆಯಲ್ಲಿ ಪೂರ್ವಗ್ರಹದಿಂದ ಕೆಲವು ಜನ ರಾಜಶೇಖರ ಕೋಟಿ ಅವರ ಮೇಲೆ ತಿರುಗಿ ಬಿದ್ದು ಅವರಿಗೆ ಬೆದರಿಕೆ ಹಾಕಿದರು. ಆದರೆ ಅವರು ಅಂಜಲಿಲ್ಲ ಮತ್ತು ತಮ್ಮ ಪತ್ರಿಕಾ ಧರ್ಮವನ್ನು ಬಿಡಲಿಲ್ಲ.
ರಾಜಶೇಖರ ಕೋಟಿ ಅವರು ಈ ದೇಶದಲ್ಲಿ ನೂರಾರು ವರ್ಷಗಳಿಂದ ರೂಢಿಯಲ್ಲಿರುವ ಅಸ್ಪೃಶ್ಯತೆ ಆಚರಣೆ ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೆ ನೊಂದಿದ್ದರು. ಅವರು ಆಗಾಗ ಹೇಳುತ್ತಿದ್ದ “ನಾನು ದಲಿತನಲ್ಲದಿದ್ದರೂ ಅಸ್ಪೃಶ್ಯತೆಯ ಆಚರಣೆ ಮತ್ತು ದಲಿತರ ವೇತನ ಕಂಡಾಗ ನನ್ನ ರಕ್ತ ಕುದಿಯುತ್ತದೆ.” ನಿಮ್ಮ ಮಾತು ಅವರಲ್ಲಿದ್ದ ಸಮಾನತಾ ಮನೋಧರ್ಮವನ್ನು ಆರೋಗ್ಯಕರ ಮನಸ್ಥಿತಿಯನ್ನು ಸೂಚಿಸುತ್ತದೆ.
“ನೀನು ಏನಾದರೂ ಆಗು, ಆದರೆ ಸಿದ್ಧಾಂತದ ಜೊತೆ ರಾಜಿಯಾಗಬೇಡ” ಎಂಬ ರಾಮ ಮನೋಹರ ಲೋಹಿಯಾ ಅವರ ಮಾತಿಗೆ ರಾಜಶೇಖರ ಕೋಟಿ ಅವರ ಬದುಕು ಒಂದು ಉಜ್ವಲವಾದ ನಿದರ್ಶನವಾಗಿತ್ತು. ರಾಜಶೇಖರ ಕೋಟಿ ಅತ್ಯುತ್ತಮ ಮಾನವೀಯ ಗುಣವುಳ್ಳವರಾಗಿದ್ದರು.( he is an excellent human being) ಈಗ ಅವರು ಭೌತಿಕವಾಗಿ ನಮ್ಮೊಡನಿಲ್ಲ. ಆದರೆ ಪ್ರತಿದಿನ ಬೆಳಿಗ್ಗೆ ‘ಆಂದೋಲನ’ ಪತ್ರಿಕೆ ನೋಡುತ್ತಿದ್ದಂತೆ ಅವರ ವ್ಯಕ್ತಿತ್ವ ನಮ್ಮ ಮನುಭೂಮಿಕೆಯಲ್ಲಿ ಮೂಡುತ್ತದೆ.ಈ ಹಿನ್ನೆಲೆಯಲ್ಲಿ ರಾಜಶೇಖರ ಕೋಟಿ ಅಮರರೆಂದೇ ಹೇಳಬೇಕು.
50 ವರ್ಷಗಳು ಆಗಿರುವ ಈ ಸಂದರ್ಭದಲ್ಲಿ ಆಂದೋಲನ ದಿನ ಪತ್ರಿಕೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ: ಪತ್ರಿಕೆ ಹೀಗೆಯೇ ಸಮಾಜಮುಖಿಯಾಗಿ ನೂರು ವರ್ಷ ಸಾಗಲೆಂದು ಆಶಿಸುವೆ.
ವಿ. ಶ್ರೀನಿವಾಸಪ್ರಸಾದ್
ಲೋಕಸಭಾ ಸದಸ್ಯರು,
ಚಾಮರಾಜನಗರ ಲೋಕಸಭಾ ಕ್ಷೇತ್ರ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…