ಆಂದೋಲನ 50

ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧವಾದ ಆಂದೋಲನ ; ಭಾಗ-2

ಚಳವಳಿಗಳ ಮಡಿಲಲ್ಲೇ ಬೆಳೆದ ‘ಆಂದೋಲನ’ಕ್ಕೆ ಸದಾ ಜನಪರ ಚಿಂತನೆಗಳಿಗೆ ಕಿವಿಯಾಗಿ, ನೋವುಗಳ ಪರಿಹಾರಕ್ಕೆ ಧ್ವನಿಯಾಗಿ ಮೌಲ್ಯಭರಿತ ಸುದ್ದಿಗಳನ್ನು ಪ್ರಕಟಿಸುವುದೇ ಏಕೈಕ ಗುರಿಯಾಗಿದೆ. ಅಷ್ಟೇ ಅಲ್ಲದೆ, ವ್ಯಕ್ತಿಗತ ಅನ್ಯಾಯವಾದರೂ, ಸಾಮೂಹಿಕವಾಗಿ ದೌರ್ಜನ್ಯ ನಡೆದರೂ ‘ಪತ್ರಿಕೆ’ ಸಂತ್ರಸ್ತರ ಪರವಾಗಿ ನಿಂತು ಚಿಕಿತ್ಸಕ ದೃಷ್ಟಿಯಿಂದ ಸುದ್ದಿಗಳನ್ನು ಬಿತ್ತರಿಸುತ್ತಿದೆ. ೫೦ ವರ್ಷಗಳ ಪಯಣದಲ್ಲಿ ಇಂತಹ ಅನೇಕ ಪ್ರಕರಣಗಳಿಗೆ ‘ಪತ್ರಿಕೆ’ ಸಾಕ್ಷಿಯಾಗಿದೆ. ನೊಂದವರಿಗೆ ನ್ಯಾಯ ಒದಗಿಸುವ ಹೋರಾಟಕ್ಕೆ ವೇದಿಕೆಯಾಗಿದೆ. ಅದರಲ್ಲಿಯೂ ಪ್ರಮುಖವಾಗಿ ವಿಕ್ರಾಂತ್ ಟೈರ್ಸ್‌ ಕಾರ್ಖಾನೆ ಕಾರ್ಮಿಕ ಸತ್ಯದೇವ್ ಕೊಲೆ ಪ್ರಕರಣ, ಹಂಗರಹಳ್ಳಿ ಜೀತಕ್ಕಿದ್ದವರಿಗೆ ಬಿಡುಗಡೆ ಸಿಕ್ಕಿದ್ದು ಮತ್ತು ಜಾತಿ ದಳ್ಳುರಿಯಿಂದ ಬೆಂದು ಹೋದ ಬದನವಾಳು ದುರಂತದ ಸಂದರ್ಭಗಳಲ್ಲಿ ಪ್ರಾದೇಶಿಕ ಪತ್ರಿಕೆಯಾಗಿಯೂ ‘ಆಂದೋಲನ’ ತಳೆದ ದಿಟ್ಟ ನಿಲುವು ಪತ್ರಿಕಾ ಕ್ಷೇತ್ರದಲ್ಲಿ ಅನುಕರಣೀಯ. ಸತ್ಯದೇವ್ ಕೊಲೆ ಪ್ರಕರಣ ಮುಚ್ಚಿಯೇ ಹೋಗಿತ್ತು. ಆರೋಪಿ ಮೈಸೂರಿನಲ್ಲೇ ಡಿಸಿಪಿಯಾಗಿದ್ದ ಸೋಮಶೇಖರ್! ಸತ್ಯಶೋಧನೆಗಾಗಿ ‘ಪತ್ರಿಕೆ’ ಅವರನ್ನೂ ಎದುರು ಹಾಕಿಕೊಂಡಿತ್ತು. ಹಂಗರಹಳ್ಳಿಯಲ್ಲಿ ಕಾಲುಗಳಿಗೆ ಸರಪಳಿ ಬಿಗಿಸಿಕೊಂಡಿದ್ದ ಕಾರ್ಮಿಕರ ಬಿಡುಗಡೆಗೆ ಶ್ರಮ ವಹಿಸಿದ ರೈತ ಸಂಘದ ಮುಖಂಡರಿಗೆ ಸಹಕಾರ ನೀಡಿದ್ದಲ್ಲದೆ, ಬದನವಾಳು ದುರಂತದಲ್ಲಿ ಸಂತ್ರಸ್ತರ ಪರ ನಿಲ್ಲುವ ಮೂಲಕ ‘ಪತ್ರಿಕೆ’, ಇನ್ನೊಂದು ಕೋಮಿನ ಬಹಿಷ್ಕಾರಕ್ಕೆ ಒಳಗಾಗುವ ಹಂತಕ್ಕೂ ಹೋಗಿತ್ತು.

ಹಂಗರಹಳ್ಳಿ ಜೀತ ಪ್ರಕರಣದ ಸಚಿತ್ರ ವರದಿ

ಎರಡು ದಶಕಗಳ ಹಿಂದೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿ ಜೀತ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಕಲ್ಲುಗಣಿಯಲ್ಲಿ ಕೆಲಸಕ್ಕೆ ಕರೆದುಕೊಂಡು ಬಂದವರನ್ನು ಕಾಲಿಗೆ ಕೋಳ ಹಾಕಿ ದುಡಿಸಿಕೊಳ್ಳುತ್ತಿದ್ದ ಅಮಾನವೀಯ ಘಟನೆಯಿದು. ೨೦೦೦ನೇ ಇಸವಿ ಜೂನ್ ೨೨ರಂದು ಈ ಪ್ರಕರಣ ಬೆಳಕಿಗೆ ಬರುವಲ್ಲಿ ಆಂದೋಲನದ ಪಾತ್ರವೂ ಇದೆ.

ಹಂಗರಹಳ್ಳಿಯ ಗಣಿಯಲ್ಲಿ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆ ರೈತಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರು ಕಾರ್ಯಕರ್ತರು ಮತ್ತು ಕೆಲವು ಪತ್ರಕರ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ಬಯಲು ಮಾಡಿದ್ದರು. ಸ್ಥಳಕ್ಕೆ ಹೋದಾಗ ಕಾರ್ಮಿಕರು ತಮ್ಮ ಮೇಲೆ ನಡೆಯುತ್ತಿದ್ದ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಮಾಲೀಕರಿಂದ ತಾವು ಪಡೆದಿದ್ದ ಸಾಲವನ್ನು ಕೊಡದೆ ಘಟಕದಿಂದ ಪರಾರಿಯಾಗುತ್ತೇವೆ ಎಂಬ ಅನುಮಾನದಿಂದ ಕಾಲುಗಳಿಗೆ ಸರಪಳಿ ಹಾಕಿದ್ದಾರೆ ಎಂದು ತಿಳಿಸಿದ್ದರು. ಅವರೊಂದಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೩೦-೩೫ ಜನರಿದ್ದರು. ಮಾಲೀಕ ಪುಟ್ಟಸ್ವಾಮಿಗೌಡ ಇರಲಿಲ್ಲ. ಸ್ಥಳದಲ್ಲಿದ್ದ ಆತನ ಪುತ್ರ ಅರುಣ್, ಅಳಿಯ ಶ್ರೀನಿವಾಸ್ ಮತ್ತಿತರರು ರೈತರೊಂದಿಗೆ ವಾಗ್ವಾದಕ್ಕಿಳಿದಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಐ ವೆಂಕಟಾಚಲಗೌಡ ಮತ್ತು ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದು, ಕಾಲುಗಳಿಗೆ ಸರಪಳಿ ಬಿಗಿದಿದ್ದ ಕಾರ್ಮಿಕರೂ ಸೇರಿ ಅಲ್ಲಿ ಕೆಲಸಕ್ಕಿದ್ದ ಎಲ್ಲರ ಹೇಳಿಕೆಗಳನ್ನೂ ಪಡೆದರು.

ಆಗ ಮುಖ್ಯಮಂತ್ರಿ ಆಗಿದ್ದ ಮಂಡ್ಯದವರೇ ಆದ ಎಸ್.ಎಂ.ಕೃಷ್ಣ ಅವರು ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಾಂಡವಪುರ ಎಸಿ, ಶ್ರೀರಂಗಪಟ್ಟಣ ತಹಸೀಲ್ದಾರ್ ಸಹಿತ ೮ ಮಂದಿಯನ್ನು ಅಮಾನತುಗೊಳಿಸಿದ್ದರು. ತಾವು ಖುದ್ದು ಊರಿಗೆ ಆಗಮಿಸಿ ಪರಿಶೀಲಿಸಿದ್ದರು. ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಕಾರ್ಮಿಕರ ಪರವಾಗಿ ವಾದಿಸುತ್ತಿದ್ದ ಸರ್ಕಾರಿ ವಕೀಲರು ಸಮರ್ಪಕವಾಗಿ ದಾಖಲೆಗಳನ್ನು ಸಲ್ಲಿಸುತ್ತಿರಲಿಲ್ಲ. ಕೊನೆಗೆ ಖ್ಯಾತ ವಕೀಲ ಸಿ.ಎಚ್.ಹನುಮಂತರಾಯ ಅವರು ಕಾರ್ಮಿಕರ ಪರ ವಾದ ಮಂಡಿಸಿದ್ದರು. ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.

ಹಂಗರಹಳ್ಳಿ ಜೀತದ ಚಿತ್ರಣವನ್ನು ಸಚಿತ್ರವಾಗಿ ತೋರಿಸಿದವರು ‘ಆಂದೋಲನ’ಕ್ಕೆ ಚಿತ್ರಗಳನ್ನು ನೀಡುತ್ತಿದ್ದ ಹವ್ಯಾಸಿ ಛಾಯಾಗ್ರಾಹಕ ನೇತ್ರರಾಜು ಅವರು. ರೈತಸಂಘದ ಕಾರ‌್ಯಕರ್ತರು ಕ್ವಾರಿ ಸ್ಥಳಕ್ಕೆ ಭೇಟಿ ನೀಡಿದಾಗ ನೇತ್ರರಾಜು ಜತೆಗಿದ್ದರು. ಅಂದು ಅವರು ತೆಗೆದ ಚಿತ್ರಗಳೇ ಪ್ರಕರಣದ ಪ್ರಮುಖ ಸಾಕ್ಷಿಯಾದವು. ನಂತರವೂ ಆಂದೋಲನ ದಿನಪತ್ರಿಕೆ ಪ್ರಕಟಿಸಿದ ಸರಣಿ ಸುದ್ದಿ, ವಿಶೇಷ ವರದಿಗಳು, ಛಾಯಾಚಿತ್ರಗಳು ಅಮಾನವೀಯತೆಯ ರೂಪವನ್ನು ತೆರೆದಿಟ್ಟಿದ್ದವು.

ಚಿತ್ರೀಕರಣಕ್ಕಾಗಿ ಕಾಲಿಗೆ ಸರಪಳಿ !

ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದಾಗ ಕ್ವಾರಿ ಮಾಲೀಕರು, ‘ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಕಾಲಿಗೆ ಸರಪಳಿ ಹಾಕಿದ್ದರು’ ಎಂದು ಸುಳ್ಳು ಹೇಳಿಕೆ ನೀಡುವಂತೆ ಕಾರ್ಮಿಕರನ್ನು ಬೆದರಿಸಿದ್ದರು. ಇದೆಲ್ಲವನ್ನೂ ಆಂದೋಲನ ವರದಿ ಮಾಡಿತ್ತು.


 

 

 

 

 

andolana

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

7 hours ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

7 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

8 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

8 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

8 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

8 hours ago