ರಾಜ್ಯ

ಆನೆ–ಮಾನವ ಸಂಘರ್ಷ ತಗ್ಗಿಸಲು ತಂತ್ರಜ್ಞಾನದ ಬಳಕೆ: ಈಶ್ವರ ಖಂಡ್ರೆ

ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷದ ಸಮಸ್ಯೆಯನ್ನು ಪರಿಹರಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನ ಗಾಂಧೀಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ,ಕೆ.)ದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ವಿಶ್ವ ಆನೆ ದಿನದ ಅಂಗವಾಗಿ ಸೋಮವಾರ (ಆ.12) ಆಯೋಜಿಸಿದ್ದ ಆನೆ- ಮಾನವ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಖಾತ್ರಿಪಡಿಸಲು ತಮ್ಮ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.

ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಆನೆಗಳು ನಾಡಿಗೆ ಬಂದು ಹಾನಿ ಮಾಡುವುದನ್ನು ನಿಯಂತ್ರಿಸಲು ಕರ್ನಾಟಕ ರಾಜ್ಯವು ಶ್ರಮಿಸುತ್ತಿದ್ದು, ಈ ಸವಾಲು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಮಾನವ- ವನ್ಯಜೀವಿ ಸಂಘರ್ಷ ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ ಬದಲಾಗಿ ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ ಎಂದರು.

ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದು ತಾವು ಭಾವಿಸುವುದಾಗಿ ತಿಳಿಸಿದರು.

ಆದಿವಾಸಿಗಳ ಕೊಡುಗೆ ಅಪಾರ: ರಾಜ್ಯದ ಅರಣ್ಯವನ್ನು ಜೀವನ ಮತ್ತು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳೂ ಇದ್ದು, ಅರಣ್ಯ ಸಂರಕ್ಷಣೆಯಲ್ಲಿ ಇವರ ಪಾತ್ರ ಮಹತ್ವದ್ದು ಎಂದರು. ಕಾಡು ಎಂದರೆ ಕೇವಲ ಮರ, ಗಿಡ, ಪ್ರಾಣಿ, ಪಕ್ಷ ಅಷ್ಟೇ ಅಲ್ಲ. ಕಾಡು ಈ ಭೂ ಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು. ನಮಗೆ ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ ಎಂದು ಪ್ರತಿಪಾದಿಸಿದರು.

ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿದ್ದು, ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ ಇಂದು ರಾಜ್ಯಕ್ಕೆ ಹೆಮ್ಮೆಯ ಸಂಗತಿ ಎಂದು ಅರಣ್ಯ ಸಚಿವರು ಹೇಳಿದರು.

ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿರುವುದು ನೋವಿನ ಸಂಗತಿ ಎಂದು ಹೇಳಿದ ಅವರು, ಈ ಸಮ್ಮೇಳನದಲ್ಲಿ ನಡೆಯುವ ಚಿಂತನ ಮಂಥನದ ಫಲವಾಗಿ, ಮಾನವ- ಆನೆಗಳ ಸಂಘರ್ಷ ನಿರ್ವಹಣೆಗೆ ಸೂಕ್ತ ಪರಿಹಾರ ಹೊರಹೊಮ್ಮಲಿ ಎಂದು ಆಶಿಸಿದರು.

ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದಾರೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಅರಣ್ಯ ಇಲಾಖೆಯ ಸುರಕ್ಷತಾ ಕಾರ್ಯಗಳಿಗೆ ಮತ್ತು ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರಿಗೂ ಅರಣ್ಯ ಇಲಾಖೆಯ ಪರವಾಗಿ ಧನ್ಯವಾದ ಅರ್ಪಿಸಿದರು.

ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಿಮಗೆಲ್ಲ ಆಶ್ಚರ್ಯ ಆಗಬಹುದು ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿದೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಬೆಳೆಯುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಕಳೆದ ವರ್ಷ 3395.73 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಎಂದು ಘೋಷಿಸಿದೆ. ಜೊತೆಗೆ 2500 ಎಕರೆಗೂ ಹೆಚ್ಚು ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿದೆ.

ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆಯನ್ನು ತರಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ದೂರ ಸಂವೇದಿ ತಂತ್ರಜ್ಞಾನ ಉಪಗ್ರಹಗಳ ನೆರವಿನಿಂದ ಮಾಹಿತಿ ಲಭಿಸುತ್ತದೆ. ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್ ಎಸ್‍ಸಿ)ಕ್ಕೆ ಬಂದು, ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎಫ್‍ಎಸ್‍ಐ)ಗೆ ಬರುತ್ತಿತ್ತು. ನಂತರ ಅವರು ಆಯಾ ರಾಜ್ಯಗಳಿಗೆ ಮಾಹಿತಿ ತಲುಪಿಸುತ್ತಿದ್ದರು. ಈಗ ನೇರವಾಗಿ ನಾಸಾದಿಂದ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್ ಎಸ್‍ಸಿ)ಕ್ಕೆ ಬಂದು ಅಲ್ಲಿಂದ ಕರ್ನಾಟಕ ದೂರ ಸಂವೇದಿ ಸಂಸ್ಥೆಗೆ (ಕೆಎಸ್‍ಆರ್ ಎಸ್‍ಸಿ) ಬರುತ್ತದೆ. ಆ ಮಾಹಿತಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆ ಆಗುತ್ತದೆ. ಇದರಿಂದ ತಕ್ಷಣವೇ ಸ್ಪಂದಿಸಲು, ಬೆಂಕಿ ನಂದಿಸಲು ಸಾಧ್ಯವಾಗಲಿದ್ದು, ಇದು ಹೆಚ್ಚಿನ ಅರಣ್ಯ ನಾಶ ತಡೆಯುತ್ತದೆ ಎಂದರು.

ತಂತ್ರಜ್ಞಾನದ ಅಳವಡಿಕೆ: ಇದೇ ತಂತ್ರಜ್ಞಾನವನ್ನು ಅರಣ್ಯ ಒತ್ತುವರಿ ತಡೆಗೂ ಅಳವಡಿಸಲು ಈಗ ನಾವು ಮುಂದಾಗಿದ್ದೇವೆ. ಯಾವುದೇ ಅರಣ್ಯ ಪ್ರದೇಶದಲ್ಲಿ ಮರ ಕಡಿದು ಒತ್ತುವರಿ ಮಾಡಿದರೆ, ಸಕಾಲಿಕವಾಗಿ ಎಚ್ಚರಿಕೆ ನೀಡುವ ಉಪಗ್ರಹ ಆಧಾರಿತ ವ್ಯವಸ್ಥೆಯನ್ನೂ ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಈ ನಿಟ್ಟಿನಲ್ಲಿ ನಮ್ಮ ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಬಲವಾದ ಸಹಕಾರವನ್ನು ಬೆಳೆಸುವುದು ನಮ್ಮ ಪ್ರಮುಖ ಕಾರ್ಯತಂತ್ರಗಳಲ್ಲಿ ಒಂದಾಗಿದೆ. ರಾಜ್ಯ ಗಡಿಗಳಲ್ಲಿ ಮಾನವ-ಆನೆ ಸಂಘರ್ಷವನ್ನು ಪರಿಹರಿಸಲು ಮತ್ತು ನೀಲಗಿರಿ ತಪ್ಪಲಿನಲ್ಲಿ ಸಂರಕ್ಷಿತ ಕಾನನದೊಳಗೆ ಆನೆಗಳ ಸುರಕ್ಷಿತ ಸಂಚಾರ ಉತ್ತೇಜಿಸಲು ನಾವು ಒಟ್ಟಾಗಿ ಅಂತಾರಾಜ್ಯ ಸಮನ್ವಯ ಸಮಿತಿಯನ್ನು (ಐಸಿಸಿ) ರಚಿಸಿದ್ದೇವೆ ಮತ್ತು ಆ ಸಂಬಂಧ ಚಾರ್ಟರ್ ಗೆ ಸಹಿ ಹಾಕಿದ್ದೇವೆ. ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಿದ್ಧಪಡಿಸಿದ “ಬಂಡೀಪುರ ಚಾರ್ಟರ್” ಒಡಂಬಡಿಕೆ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ಸಂರಕ್ಷಣೆ ಮತ್ತು ಸಂಘರ್ಷ ಪರಿಹಾರಕ್ಕೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಮಾನವ-ಆನೆ ಸಂಘರ್ಷದಿಂದ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ತಕ್ಷಣವೇ ಆರ್ಥಿಕ ಪರಿಹಾರ ಮತ್ತು ನೆರವು ನೀಡುತ್ತಿದ್ದೇವೆ, ಬೆಳೆ ಪರಿಹಾರವನ್ನು ತ್ವರಿತವಾಗಿ ವಿತರಿಸುತ್ತಿದ್ದೇವೆ. ಜೊತೆಗೆ ಕರ್ನಾಟಕ ಸರ್ಕಾರವು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಲು ಮತ್ತು ಜನರ ಜೀವ ಉಳಿಸಲು ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಲು ಸಬ್ಸಿಡಿ ನೀಡುತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸಲು ನಾವು ಪ್ರತ್ಯೇಕ ಬಜೆಟ್ ಅನ್ನು ನಿಗದಿಪಡಿಸಿದ್ದೇವೆ, ರೈಲ್ವೆ ಬ್ಯಾರಿಕೇಡ್ ಗಳು, ಸೌರ ತಂತಿ ಬೇಲಿ ಅಳವಡಿಕೆ, ಆನೆ-ನಿಗ್ರಹ ಕಂದಕಗಳ ನಿರ್ಮಾಣಕ್ಕಾಗಿ ವಾರ್ಷಿಕವಾಗಿ 150 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ ಎಂದು ತಿಳಿಸಿದರು.

ಮಾನವ -ವನ್ಯಜೀವಿ ಸಂಘರ್ಷದಿಂದ ಹೆಚ್ಚಿನ ಸಾವುಗಳು ಸಂಭವಿಸುವ ಕಡೆಗಳಲ್ಲಿ, ವನ್ಯಜೀವಿ ಪ್ರದೇಶಗಳಲ್ಲಿ ದಣಿವರಿಯದೆ ಕೆಲಸ ಮಾಡುವ ನಮ್ಮ ಮುಂಚೂಣಿ ಸಿಬ್ಬಂದಿಯ ಕಲ್ಯಾಣವು ನಮಗೆ ಅತ್ಯಂತ ಮಹತ್ವದ್ದಾಗಿದೆ. ಗುತ್ತಿಗೆ ನೌಕರರು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ನಾವು “ಕಷ್ಟಕರ ಸನ್ನಿವೇಶದ ಕಾರ್ಯ ನಿರ್ವಹಣಾ ಭತ್ಯೆ” ಯನ್ನು ನೀಡುತ್ತಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ರೇಡಿಯೋ ಕಾಲರ್ ಅಳವಡಿಕೆ: ನಾವು ಇಂದು ಇಲ್ಲಿ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಚಿಂತನ ಮಂಥನ ನಡೆಸಲು ಸೇರುತ್ತಿರುವ ಸಂದರ್ಭದಲ್ಲಿ, ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಹಲವಾರು ಸುಧಾರಿತ ತಾಂತ್ರಿಕ ಅನುಷ್ಠಾನ ಕುರಿತಂತೆ ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ರೇಡಿಯೋ ಕಾಲರ್ ಅಳವಡಿಸುವ ಕಾರ್ಯವನ್ನೂ ರಾಜ್ಯ ಸರ್ಕಾರ ಮಾಡುತ್ತಿದೆ. ಜಿಎಸ್ಎಂ ಆಧಾರಿತ ಕ್ಯಾಮೆರಾ ಟ್ರ್ಯಾಪ್ ಗಳು ಮತ್ತು ಗರುಡ ಇ- ನಿಗಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ವನ್ಯಜೀವಿಗಳು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಮೇ 2023 ರಲ್ಲಿ ದಕ್ಷಿಣ ಭಾರತದಾದ್ಯಂತ ನಡೆಸಿದ ಸಂಯೋಜಿತ ಆನೆಗಳ ಜನಸಂಖ್ಯೆಯ ಅಂದಾಜು ವಿಜ್ಞಾನ ಆಧಾರಿತ ನಿರ್ವಹಣೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ರೂಢಿಗಳಿಂದ ಸಂಗ್ರಹಿಸಿದ ದತ್ತಾಂಶವು ಅಮೂಲ್ಯವಾಗಿದೆ, ಭವಿಷ್ಯದ ಸಂರಕ್ಷಣಾ ತಂತ್ರಗಳನ್ನು ಯೋಜಿಸಲು ನಿರ್ಣಾಯಕ ಒಳನೋಟಗಳನ್ನು ಒದಗಿಸುತ್ತದೆ. ಇದು ಪ್ರಾದೇಶಿಕ ಸಹಕಾರಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದರು.

ಮಾನವ- ವನ್ಯಜೀವಿ ಸಂಘರ್ಷ ತಗ್ಗಿಸಲು ಮತ್ತು ಜನರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ರಾಜ್ಯಗಳು ಹೇಗೆ ಸಂಘಟಿತ ಪ್ರಯತ್ನ ಮಾಡಬಹುದು ಎಂಬ ವರದಿಯನ್ನು ಇಂದು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಈ ಅಂತಾರಾಷ್ಟ್ರೀಯ ಸಮ್ಮೇಳನವು ವಿಚಾರಗಳು, ಅನುಭವಗಳು ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಈ ಚರ್ಚೆಗಳಲ್ಲಿ ಮುಕ್ತತೆ ಮತ್ತು ನಾವೀನ್ಯತೆಯ ಮನೋಭಾವದಿಂದ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.

ನಾವು ಈ ಸಮಾವೇಶದಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸೋಣ, ಪರಸ್ಪರರ ಯಶಸ್ಸು ಮತ್ತು ವೈಫಲ್ಯಗಳಿಂದ ಕಲಿಯೋಣ ಮತ್ತು ಸುಸ್ಥಿರ, ಮಾನವೀಯ ಮತ್ತು ಅಂತರ್ಗತ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವತ್ತ ಶ್ರಮಿಸೋಣ ಎಂದು ಕರೆ ನೀಡಿದರು.

ಈ ಸಮಾವೇಶದಲ್ಲಿ ಹೊರಹೊಮ್ಮುವ ಅಭಿಪ್ರಾಯಗಳು, ಚಿಂತನೆಗಳು, ನಮಗೆ ಮಾರ್ಗದರ್ಶನ ನೀಡಲಿ, ಈ ಸಮಾವೇಶದ ಫಲಶ್ರುತಿ ಫಲಪ್ರದವಾಗಿರಲಿ ಎಂದು ಆಶಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ತಾವು ಆನೆ – ಮಾನವ ಸಂಘರ್ಷ ಇರುವ ಪ್ರದೇಶದಿಂದ ಬಂದಿದ್ದು, ನಿತ್ಯ ಜನರ ಅಳಲು ಕೇಳುತ್ತೇನೆ. ಆನೆ ದಾಳಿಯಿಂದ ಒಂದೇ ಒಂದು ಸಾವೂ ಸಂಭವಿಸದ ರೀತಿಯಲ್ಲಿ ಕ್ರಮ ವಹಿಸುವ ಅಗತ್ಯವಿದೆ ಎಂದರು.

ಹಸಿರು ಎಲ್ಲರಿಗೂ ಅಗತ್ಯ. ಇಂದು ಮನೆಗಳಲ್ಲಿ ಹಸಿರು ಇರಲಿ ಎಂದು ಪ್ಲಾಸ್ಟಿಕ್ ಹೂವು, ಬಳ್ಳಿ ತಂದು ಅಲಂಕರಿಸುವ ಸ್ಥಿತಿ ಬಂದಿದೆ. ನಾವು ಹಸಿರು ಉಳಿಸಲು ಸಂಕಲ್ಪ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆ, ಆನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು ಮತ್ತು ಆನೆಗಳ ಆರೈಕೆ ಹಾಗೂ ಪರಿಸರ ಜಾಗೃತಿ ಮೂಡಿಸುವಲ್ಲಿ ಗಣನೀಯ್ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ, ಜಾರ್ಖಂಡ್ ನ ಅರಣ್ಯ ಸಚಿವ ಬೈದ್ಯನಾಥ್ ರಾಮ್, ತಮಿಳುನಾಡು ಅರಣ್ಯ ಸಚಿವ ಎಂ. ಮಥಿವೆಂಥನ್, ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ, ಕೇರಳ ಅರಣ್ಯ ಸಚಿವ ಸಸೀಂದ್ರನ್ ಪಾಲ್ಗೊಂಡಿದ್ದರು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ತಾ.ಪಂ.–ಜಿ.ಪಂ. ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ಚುನಾವಣೆ ಸಾಧ್ಯತೆ ಎಂದ ಖಂಡ್ರೆ!

ಬೆಂಗಳೂರು: ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟವಾಗಿದೆ ಎಂದು ಸಚಿವ…

12 hours ago

ಚೀರನಹಳ್ಳಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ: ಸಾ.ರಾ.ಮಹೇಶ್ ಸಮ್ಮುಖದಲ್ಲಿ 10 ಕುಟುಂಬಗಳು ಜೆಡಿಎಸ್‌ಗೆ ಸೇರ್ಪಡೆ

ಕೆ.ಆರ್.ನಗರ : ಚೀರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಬದಲು ಇಲ್ಲಿನ ಕಾಂಗ್ರೆಸ್ ಮುಖಂಡರ ಮನೆ ಅಭಿವೃದ್ಧಿ ಆಗಿದೆ ಗ್ರಾಮದಲ್ಲಿ ಚರಂಡಿ ಕೂಡ…

13 hours ago

ಆನೆ–ಮಾನವ ಸಂಘರ್ಷಕ್ಕೆ ಆನೆಧಾಮ ಪರಿಹಾರ: ಈಶ್ವರ್‌ ಖಂಡ್ರೆ ಅಭಿಪ್ರಾಯ!

ಬೆಂಗಳೂರು: ಕಾಡಿನಂಚಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷಕ್ಕೆ ಆನೆಧಾಮ ಸ್ಥಾಪನೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ಈಶ್ವರ್‌ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.…

13 hours ago

ಕೆಆರ್‌ಎಸ್‌ನಿಂದ ಹೆಚ್ಚಿದ ನೀರು ಬಿಡುಗಡೆ: ಕುಡಿಯುವ ನೀರಿನ ಕೊರತೆ ಆತಂಕದಲ್ಲಿ ರೈತರು!

ಬೆಂಗಳೂರು: ಕೆಆರ್‌ಎಸ್‌ ಜಲಾಶಯದ ಒಳಹರಿವು ಕ್ಷೀಣಿಸಿರುವ ನಡುವೆಯೇ ಹೊರಹರಿವು ಹೆಚ್ಚಳವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ತಮಿಳುನಾಡಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ…

16 hours ago

ದೇವರ ದರ್ಶನಕ್ಕೆ ಹೊರಟವರ ಬಾಳಲ್ಲಿ ದುರಂತ: ದಶಪಥ ಹೆದ್ದಾರಿ ಅಪಘಾತದಲ್ಲಿ ಬಾಲಕಿ ಸೇರಿ ಇಬ್ಬರು ಬಲಿ!

ಶ್ರೀರಂಗಪಟ್ಟಣ: ನಂಜನಗೂಡಿನ ದೇವಸ್ಥಾನಕ್ಕೆ ಹೊರಟಿದ್ದ ಎರಡು ಕುಟುಂಬಗಳ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಮೈಸೂರು–ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಸರಕು…

16 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎರಡನೇ ಬಾರಿ ಜಾಮೀನಿಗಾಗಿ ಹೈಕೋರ್ಟ್‌ ಮೊರೆಹೋದ ಪವಿತ್ರಾ ಗೌಡ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತೆ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ ಈ…

17 hours ago