ರಾಜ್ಯ

ಹೊರರಾಜ್ಯದ ದನಕರುಗಳನ್ನು ಕಾಡಿನಲ್ಲಿ ಮೇಯಿಸುವುದಕ್ಕೆ ಮಾತ್ರ ನಿಷೇಧ : ಸ್ಥಳೀಯರಿಗೆ ಆತಂಕ ಬೇಡ ; ಈಶ್ವರ ಖಂಡ್ರೆ ಸ್ಪಷ್ಟನೆ

ಬೆಂಗಳೂರು : ಅರಣ್ಯ ಹಕ್ಕು ಕಾಯಿದೆ -2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ. ಆದರೆ ನೆರೆರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರು ತಂದು ಮೇಯಿಸುವುದಕ್ಕೆ ಮಾತ್ರ ಕಡಿವಾಣ ಹಾಕಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು, ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಡಿಯಲ್ಲಿ ಮೀಸಲು ಅರಣ್ಯ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಜನರ ಅತಿಕ್ರಮ ಪ್ರವೇಶಕ್ಕೆ ಮತ್ತು ಸಾಕುಪ್ರಾಣಿಗಳನ್ನು ಮೇಯಿಸಲು ಅವಕಾಶ ಇರುವುದಿಲ್ಲ. ಆದರೆ ರಾಜ್ಯದ ಕೆಲವು ಅರಣ್ಯ ಭಾಗದಲ್ಲಿ ಹಲವು ವರ್ಷದಿಂದ ಇಂತಹ ರೂಢಿ ಇದ್ದು, ಕಾಡಿನಂಚಿನ ಜನರಿಗೆ ಜಾಗೃತಿ ಮೂಡಿಸಿ, ಅವರಿಗೆ ಹೆಚ್ಚು ಹಾಲು ನೀಡುವ ಹಸುಗಳನ್ನು ಹೊಂದಲು ಅವಕಾಶ ಕಲ್ಪಿಸುವ ಮೂಲಕ ಮತ್ತು ತಮ್ಮ ಪಟ್ಟಾ ಜಮೀನಿನಲ್ಲಿ ಹಸಿ ಮೇವು ಬೆಳೆಸಲು ಪ್ರೋತ್ಸಾಹಿಸುವ ಮೂಲಕ ಹಂತ ಹಂತವಾಗಿ ಅರಣ್ಯದಲ್ಲಿ ಜಾನುವಾರುಗಳನ್ನು ಬಿಡದಂತೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಸುಮಾರು 33 ಸಾವಿರ ದನಕರುಗಳಿವೆ ಎಂದು ಪಶುಸಂಗೋಪನಾ ಇಲಾಖೆ ಅಂಕಿ ಅಂಶ ತಿಳಿಸುತ್ತದೆ. ಇಷ್ಟೊಂದು ದನಕರುಗಳನ್ನು ಒಟ್ಟಿಗೆ ಕಾಡಿಗೆ ತೆಗೆದುಕೊಂಡು ಹೋಗುವುದರಿಂದ ವನ್ಯಜೀವಿಗಳಾದ ಆನೆ, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ ಇತ್ಯಾದಿಗಳಿಗೆ ಮೇವಿನ ಕೊರತೆ, ನೀರಿನ ಕೊರತೆ ಎದುರಾಗುತ್ತಿದೆ.

ಕಾಲುಬಾಯಿ ರೋಗ, ಚರ್ಮಗಂಟು ಅಥವಾ ಬಾವು (ಲಿಂಪಿ ಸ್ಕಿನ್), ನೆರಡಿ (ಆಂಥರಾಕ್ಸ್) ಮೊದಲಾದ ಸಾಂಕ್ರಾಮಿಕ ಕಾಯಿಲೆಗಳು ವನ್ಯಜೀವಿಗಳಿಗೂ ಹಬ್ಬುವ ಅಪಾಯ ಇರುತ್ತದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸುವುದನ್ನು ನಿಷೇಧಿಸಲು ಸೂಚಿಸಲಾಗಿದೆ. ಆದರೆ ಸ್ಥಳೀಯರ ದನಕರುಗಳಿಗೆ ಮತ್ತು ಅರಣ್ಯಹಕ್ಕು ಕಾಯಿದೆಯಡಿ ಹಕ್ಕು ಪಡೆದವರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಈಗಾಗಲೇ ಅರಣ್ಯ ಇಲಾಖೆ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಬಳಸಿಕೊಂಡು 10-15 ರೈತರಿಗೆ ಹೆಚ್ಚು ಹಾಲು ನೀಡುವ ಹೈಬ್ರೀಡ್ ಹಸುಗಳನ್ನು ಕೊಡಿಸಿದ್ದಾರೆ. ಪ್ರಸ್ತುತ ಕಾಡಿನಲ್ಲಿ ದನ ಮೇಯಿಸುವ ಕಾಯಕವನ್ನೇ ಜೀವನೋಪಾಯ ಮಾಡಿಕೊಂಡಿರುವವರಿಗೆ ಇಂತಹ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಹಂತ ಹಂತವಾಗಿ ಕಾಡಿನಲ್ಲಿ ದನ, ಕರು, ಎಮ್ಮೆ, ಮೇಕೆ, ಕುರಿಗಳನ್ನು ಮೇಯಿಸದಂತೆ ಮನವೊಲಿಸಲಾಗುವುದು ಎಂದೂ ತಿಳಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ ನಲ್ಲಿ ಈ ಸಂಬಂಧ ಸುದೀರ್ಘ ವಾದ ಪ್ರತಿವಾದ ನಡೆದು, ಅಂತಿಮವಾಗಿ ತಮಿಳುನಾಡಿನ ಅರಣ್ಯಗಳಲ್ಲಿ ಜಾನುವಾರು ಮೇಯಿಸಲು ಅವಕಾಶ ಇರುವುದಿಲ್ಲ ಎಂಬ ತೀರ್ಪು ಬಂದಿದೆ. ಆ ತೀರ್ಪಿನ ಬಳಿಕ ರಾಜ್ಯಕ್ಕೆ ನೆರೆ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಜಾನುವಾರು ತಂದು ರಾಜ್ಯದ ಕಾಡಿನಲ್ಲಿ ಮೇಯಿಸಲಾಗುತ್ತಿದೆ.

ಹೀಗೆ ತಿಂಗಳುಗಟ್ಟಲೆ  ಕಾಡಿನಲ್ಲಿ ದನಕರು ಮೇಯಿಸುವುದರಿಂದ ಕಾಡಿನ ಹುಲ್ಲುಗಾವಲು ಬರಿದಾಗುತ್ತಿದೆ, ಸಸ್ಯಸಂವರ್ಧನೆಗೂ ಅಡ್ಡಿಯಾಗುತ್ತದೆ. ಜೊತೆಗೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದು ವನ್ಯಜೀವಿಗಳಿಗೆ ವಿಷ ಹಾಕುವ ಹಂತ ತಲುಪಿದ್ದ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಮತ್ತು ನಿಯಮಾನುಸಾರ ಕ್ರಮ ವಹಿಸಲು ಸೂಚಿಸಲಾಗಿತ್ತು ಎಂದೂ ತಿಳಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ..!

ಕೊಡಗಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶ ; ಬಜೆಟ್‌ನಲ್ಲಿ ಅನುದಾನದ ಭರವಸೆ -ನವೀನ್ ಡಿಸೋಜ ಮಡಿಕೇರಿ : ಕೊಡಗಿನಲ್ಲಿ…

8 mins ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ : ಅಲೆಮಾರಿ ಮಕ್ಕಳ ಶಿಕ್ಷಣ ಸಂಗಾತಿ ʻಲರ್ನಿಂಗ್ ಕಂಪ್ಯಾನಿಯನ್ಸ್’ ‌

ಭಾರ್ವಾಡ ಸಮುದಾಯದ ಸುಮಾರು 200 ಮಕ್ಕಳಿಗೆ ಶಿಕ್ಷಣ ಸೌಲಭ್ಯ ಮಹಾರಾಷ್ಟ್ರದ ವಿದರ್ಭಾದ ಭಾರ್ವಾಡ ಎಂಬುದು ಒಂದು ಅರೆ ಅಲೆಮಾರಿ ಸಮುದಾಯ.…

55 mins ago

ಓದುಗರ ಪತ್ರ | ಸ್ಪೀಕರ್ ಸಭಾತ್ಯಾಗ ಮಾಡುವ ಸ್ಥಿತಿ ಬಾರದಿರಲಿ

ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಸಚಿವರು ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿ, ಅಧ್ಯಕ್ಷ ಪೀಠದಿಂದ ಹೊರನಡೆದ…

1 hour ago

ಓದುಗರ ಪತ್ರ | ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸಂಭ್ರಮದಿಂದ ಬರೆಯಿರಿ

ಮಾ.18ರಿಂದ ಏ.2ರ ವರೆಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆಯ…

3 hours ago

ಮೈಮುಲ್ : ಆಡಳಿತಾಧಿಕಾರಿ ನೇಮಕಕ್ಕೆ ಹೈ ತಡೆ

ಚುನಾವಣೆ ನಡೆಯುವ ತನಕ ಹಾಲಿ ಆಡಳಿತ ಮಂಡಳಿ ಮುಂದುವರಿಕೆ ಕೆ.ಬಿ.ರಮೇಶನಾಯಕ ಮೈಸೂರು: ಐದು ವರ್ಷಗಳ ಅವಧಿ ಮುಗಿದ ಮೈಸೂರು ಜಿಲ್ಲಾ…

3 hours ago

ಶಾಲಾ ಮಕ್ಕಳಿದ್ದ ವಾಹನಕ್ಕೆ ಟಿಪ್ಪರ್‌ ಡಿಕ್ಕಿ : 9 ಮಕ್ಕಳಿಗೆ ಪೆಟ್ಟು

ಗುಂಡ್ಲುಪೇಟೆ : ತಾಲ್ಲೂಕಿನ ಚಿಕ್ಕತುಪ್ಪೂರು ಗೇಟ್ ಬಳಿ ಶಾಲಾ ಮಕ್ಕಳನ್ನು ಕರೆದೋಯ್ಯುತಿದ್ದ ಟಾಟಾ ಏಸ್ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ…

4 hours ago