ರಾಜ್ಯ

ಮಧುಗಿರಿಯಲ್ಲೂ ಪಾವಗಡ ಮಾದರಿ ಸೋಲಾರ್ ಪಾರ್ಕ್: ಕೆ.ಜೆ.ಜಾರ್ಜ್

ತುಮಕೂರು: ಪಾವಗಡ ಮಾದರಿಯಲ್ಲಿ ಮಧುಗಿರಿ ತಾಲೂಕಿನಲ್ಲೂ ಸೋಲಾರ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕುಸುಮ್ ಸಿ ಯೋಜನೆಯ ಅನುಷ್ಠಾನ ಕುರಿತಂತೆ ತಮ್ಮ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧುಗಿರಿ ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲು ಅಗತ್ಯ ಭೂಮಿ ಒದಗಿಸಿಕೊಡುವುದಾಗಿ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಕೆ.ಎನ್.ರಾಜಣ್ಣ ಅವರು ಭರವಸೆ ನೀಡಿದ್ದಾರೆ. ಅದರಂತೆ ಸೋಲಾರ್ ಪಾರ್ಕ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

“ಕೇಂದ್ರ ಸರ್ಕಾರಿ ಸ್ವಾಮ್ಯದ ತೆಹ್ರಿ ಹೈಡ್ರೋ ಡೆವಲಪ್ ಮೆಂಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ (THDCIL) ಜತೆ ಜಂಟಿ ಸಹಭಾಗಿತ್ವದಲ್ಲಿ ಪಾವಗಡ ಸೋಲಾರ್ ಪಾರ್ಕ್ ನಿರ್ಮಿಸಲಾಗುವುದು. ಒಂದು ಮೆ.ವ್ಯಾ ಸೌರ ವಿದ್ಯುತ್ ಉತ್ಪಾದನೆಗೆ 4-5 ಎಕರೆ ಜಮೀನು ಬೇಕಾಗುತ್ತದೆ. ಅದೇ ರೀತಿ 500 ಮೆ.ವ್ಯಾ ಉತ್ಪದಾನೆಗೆ 2 ರಿಂದ 2.5 ಸಾವಿರ ಎಕರೆ ಜಾಗದ ಅವಶ್ಯಕತೆ ಇದೆ. ಭೂಮಿಯ ಲಭ್ಯತೆ ಆಧರಿಸಿ ಈ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು” ಎಂದರು.

“ಪಾವಗಡದಲ್ಲಿ ನಿರ್ಮಿಸಿರುವ ಸೋಲಾರ್ ಪಾರ್ಕ್ 2,050 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಗುತ್ತಿಗೆಯನ್ನೂ ನೀಡಲಾಗಿದೆ” ಎಂದು ಸಚಿವರು ಹೇಳಿದರು.

“ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಗೆ ನೀಡುವ ಸಬ್ಸಿಡಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ರೈತರ ಪಂಪ್ ಸೆಟ್ ಗಳ ಅಕ್ರಮ-ಸಕ್ರಮಕ್ಕೂ ಒತ್ತು ನೀಡುತ್ತಿದ್ದೇವೆ. ಆದರೂ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ಅಕ್ರಮ ಪಂಪ್ ಸೆಟ್ ಗಳಿಂದಾಗಿ ಟ್ರಾನ್ಸ್ ಫಾರ್ಮರ್ ಗಳು ಸುಟ್ಟುಹೋಗಿ ವಿದ್ಯುತ್ ಪೂರೈಕೆ ವ್ಯತ್ಯಯವಾಗುವುದರ ಜತೆಗೆ ಇಲಾಖೆಗೂ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಲಾರ್ ಪಂಪ್ ಸೆಟ್ ಮತ್ತು ಜನರೇ ಸೋಲಾರ್ ವಿದ್ಯುತ್ ಉತ್ಪಾದಿಸುವ ಕುಸುಮ್ ಬಿ ಮತ್ತು ಕುಸುಮ್ ಸಿ ಯೋಜನೆಗಳಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ” ಎಂದು ತಿಳಿಸಿದರು.

“ಕುಸುಮ್ ಸಿ ಯೋಜನೆಯಡಿ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ 4-ರಿಂದ 5 ಎಕರೆ ಭೂಮಿ ಬೇಕು. ಇದಕ್ಕೆ ಸರ್ಕಾರಿ ಭೂಮಿಯಾದರೆ ಉಚಿತವಾಗಿ ನೀಡಲಾಗುತ್ತದೆ. ಅದನ್ನು ಗುತ್ತಿಗೆದಾರರಿಗೆ 25 ವರ್ಷ ಅವಧಿಗೆ ಗುತ್ತಿಗೆ ನೀಲಾಗುತ್ತದೆ. ಗುತ್ತಿಗೆ ಅವಧಿಯಲ್ಲಿ ಅವರು ಪ್ರತಿ ಎಕರೆಗೆ ವಾರ್ಷಿಕ 25 ಸಾವಿರ ರೂ. ಪಾವತಿಸಬೇಕು. ಈ ಮೊತ್ತವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿ ಅದರಿಂದ ಸ್ಥಳೀಯ ಅಂಗನವಾಡಿಗಳು, ಶಾಲೆಗಳು, ಪಂಚಾಯ್ತಿಗಳ ಅಭಿವೃದ್ಧಿಗೆ ವಿನಿಯೋಗ ಮಾಡಲಾಗುವುದು”, ಎಂದು ಮಾಹಿತಿ ನೀಡಿದರು.

ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, “ಕುಸುಮ್ ಸಿ ಅಡಿ ಫೀಡರ್ ಮಟ್ಟದ ಸೌರೀಕರಣಕ್ಕೆ ಒತ್ತು ನೀಡಲಾಗಿದ್ದು, ಅದಕ್ಕಾಗಿ ಸಬ್‌ಸ್ಟೆಷನ್‌ನ ಸುತ್ತಮುತ್ತಲಿನ‌ ಜಾಗ ಆಯ್ಕೆ ಮಾಡಿಕೊಳ್ಳುತ್ತೇವೆ. ಈಗಾಗಲೇ 27 ಸಬ್ ಸ್ಟೇಷನ್ ಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಮತ್ತೆ 12 ಸಬ್ ಸ್ಟೇಷನ್ ಗಳನ್ನು ಆಯ್ಕೆ ಮಾಡಲಾಗುವುದು. ಈಗಾಗಲೇ ಕೆಲವು ಸಬ್ ಸ್ಟೇಷನ್ ಗಳಲ್ಲಿ ಕೆಲಸ ಆರಂಭವಾಗಿದೆ. ಅದಕ್ಕಾಗಿ ಸರ್ವೇ ಕಾರ್ಯ ಕೂಡ ಆಗಿದ್ದು, ಒಟ್ಟಾರೆ, ಸ್ಥಳೀಯವಾಗಿ ಉತ್ಪಾದನೆ ಆಗುವ ವಿದ್ಯುತ್ ನಿಂದ ರೈತರಿಗೆ ಲಾಭ ವಾಗಬೇಕು ಎಂಬುದು ಇಲಾಖೆಯ ಉದ್ದೇಶ”, ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರೂ ಆಗಿರುವ ದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಕೆ.ಷಡಕ್ಷರಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯುತ್ ಉಪಸ್ಥಾವರ ಉದ್ಘಾಟನೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಿರುವ 12.62 ಕೋಟಿ ರು. ವೆಚ್ಚದ 2*8 ಎಂ.ವಿ.ಎ., 66/11 ಕೆ.ವಿ. ವಿದ್ಯುತ್ ಉಪಸ್ಥಾವರ ಹಾಗೂ ಸಂಕೇನಹಳ್ಳಿ (ಐ.ಕೆ.ಕಾಲೋನಿ) ಗ್ರಾಮದಲ್ಲಿ ನಿರ್ಮಿಸಿರುವ 14.33 ಕೋಟಿ ರೂ. ವೆಚ್ಚದ 2*8 ಎಂ.ವಿ.ಎ., 66/11 ಕೆ.ವಿ. ವಿದ್ಯುತ್ ಉಪಸ್ಥಾವರಗಳನ್ನು ಉದ್ಘಾಟಿಸಲಾಯಿತು. ಇಂಧನ ಸಚಿವ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಓದುಗರ ಪತ್ರ: ಯುವಜನರ ದಾರಿತಪ್ಪಿಸುವ ಸರ್ಕಾರದ ಕುಟಿಲ ನೀತಿ

ಹೊಸ ವರ್ಷದಂದು ಹಲವರು ಬಂಧು,ಬಳಗ, ಸ್ನೇಹಿತರ ಜತೆ ಸೇರಿ ಸಂಭ್ರಮಿಸಿದರು. ಆದರೆ ಸಾಂಸ್ಕ ತಿಕ ನಗರ ಮೈಸೂರಿನಲ್ಲಿ ದಾಖಲೆ ಮದ್ಯ…

3 hours ago

ಓದುಗರ ಪತ್ರ: ಸ್ವಾಗತಾರ್ಹ ನಡೆ!

ಸ್ವಾಗತಾರ್ಹ ನಡೆ! ಜಾತಿ ಮೀರಿ ಪ್ರೀತಿಸಿದರೆ ಕುಂದಲ್ಲವದು ಮರ್ಯಾದೆಗೆ ಬದಲಿಗೆ ಹೆಚ್ಚುವುದು ಮರ್ಯಾದೆ ಗೌರವ! ಜಾತಿ ಕಟ್ಟಳೆ ಮುರಿವ ಸಮತೆಯ…

3 hours ago

ಓದುಗರ ಪತ್ರ: ನಿರ್ಲಕ್ಷ್ಯಕ್ಕೆ ಒಳಗಾದ ಬ್ಯಾರಿಕೇಡ್‌ಗಳು

ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್‌ಗಳು ಬಳಕೆಯಾದ ನಂತರ ನಿರ್ಲಕ್ಷ್ಯಕ್ಕೆ ಒಳಪಡುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಒಂದೆಡೆ…

3 hours ago

ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಲೊಕ್ಕನಹಳ್ಳಿ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ  ಹನೂರು: ಒಂದೆಡೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು…

3 hours ago

ಕೊಡಗಿನಲ್ಲಿ ಶೇ.80ರಷ್ಟು ಭತ್ತ ಕಟಾವು ಕಾರ್ಯ ಪೂರ್ಣ

ನವೀನ್ ಡಿಸೋಜ ೧೮,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ರೈತರು; ಹವಾಮಾನ ವೈಪರೀತ್ಯದ ನಡುವೆಯೂ ಕಟಾವು ಕಾರ್ಯ ಚುರುಕು ಮಡಿಕೇರಿ:…

3 hours ago

ಮಳೆಯಿಂದ ತಗ್ಗಿದ ಚಳಿ, ಒಕ್ಕಣೆಗೆ ಪರದಾಟ!

ಚಾಮರಾಜನಗರ: ತೀವ್ರ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಕಳೆದ ೨-೩ ದಿನಗಳಿಂದ ಎದುರಾಗಿರುವ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ…

3 hours ago