ರಾಜ್ಯ

ಬೆಳಗಾವಿಯಲ್ಲಿ ತಾರಕಕ್ಕೇರಿದ ರೈತರ ಪ್ರತಿಭಟನೆ : ಸಂಪುಟ ಸಭೆ ಬಳಿಕ ಸಿಎಂ ಹೇಳಿದ್ದೇನು? ಇಲ್ಲಿದೆ ಹೈಲೈಟ್ಸ್…

ಬೆಂಗಳೂರು : ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತರುವ ಕಬ್ಬು ಬೆಳೆಗಾರರ ಪ್ರತಿಭಟನೆ ಗುರುವಾರ 8ನೇ ದಿನಕ್ಕೆ ಕಾಲಿಟ್ಟಿದೆ. ಹೀಗಾಗಿ ಪ್ರತಿಭಟನೆ ಸಹ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಈ ನಡುವೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸುದೀರ್ಘ ಮೂರು ಗಂಟೆಗಳ ಕಾಲ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಕ್ಕರೆ ರಫ್ತು ನಿಯಮದಲ್ಲಿ ಕೇಂದ್ರದ ನೀತಿ ಮತ್ತು FRP ನಿಗಧಿಯಲ್ಲಿ ಕೇಂದ್ರದ ತೀರ್ಮಾನದಿಂದ ಆಗಿರುವ ಅನಾಹುತದ ಕುರಿತು ಪ್ರಧಾನಿ ಜೊತೆ ಚರ್ಚಿಸಲು ನಿರ್ಣಯಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸಿಎಂ ನಡೆಸಿದ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಹೀಗಿದೆ….

ಕಳೆದ ಕೆಲವು ದಿನಗಳಿಂದ ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ನನಗೆ ಸ್ಪಷ್ಟ ಮಾಹಿತಿ ಇದೆ. ಹಾಗಾಗಿ ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿ ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸುವಂತೆ ಸೂಚಿಸಲಾಗಿತ್ತು.

ಅದರಂತೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿ ಶೇ. 11.25 ರಿಕವರಿ ಬಂದರೆ 3,200 ರೂ. ಹಾಗೂ ಶೇ.10.25 ರಿಕವರಿ ಬಂದರೆ 3100 ರೂ. ಗಳನ್ನು (ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) ಪಾವತಿಸುವಂತೆ ಕಾರ್ಖಾನೆಗಳ ಮಾಲೀಕರಿಗೆ ಮನವೊಲಿಸಿದ್ದಾರೆ. ಹಾಗೆಯೇ, ರೈತರಿಗೂ ಮನವೊಲಿಸುವ ಕೆಲಸ ಮಾಡಿದ್ದಾರೆ.

ಆದರೆ, ವಿರೋಧ ಪಕ್ಷಗಳವರು ಈ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವುದರಿಂದ ವಿಷಯ ತುಸು ಗೊಂದಲಕರವಾಗಿದೆ. ವಾಸ್ತವವಾಗಿ ನೋಡಿದರೆ, ಕಬ್ಬು ಮತ್ತು ಸಕ್ಕರೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಅತ್ಯಂತ ನಗಣ್ಯವಾಗಿದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ‍FRP (Fair and Remunerative Price) ಯನ್ನು ನಿಗದಿಪಡಿಸುತ್ತದೆ. ಅದರಂತೆ, ದಿನಾಂಕ:06.05.2025 ರಂದು ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಆದೇಶದ ಪ್ರಕಾರ.

ಈ ದರವನ್ನು ಕೇಂದ್ರ ಸರ್ಕಾರವೆ ನಿಗದಿ ಮಾಡಿದೆ. ಕೇಂದ್ರ ಸರ್ಕಾರವು ನಿಗದಿ ಮಾಡಿರುವ ದರ ರೈತರಿಗೆ ಲಭಿಸುತ್ತಿದೆಯೇ ಎಂದು ನೋಡಿಕೊಳ್ಳುವುದು ಹಾಗೂ ರೈತರಿಗೆ ತೂಕ, ಬೆಲೆ, ಹಾಗೂ ನಿಗದಿತ ಅವಧಿಯಲ್ಲಿ ಪಾವತಿ ಇತ್ಯಾದಿಗಳನ್ನು ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.

ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಹಾಗೂ ಕಬ್ಬು ನಿಯಂತ್ರಣಕ್ಕೆ ಸಂಬಂಧಪಟ್ಟ ಕಾಯ್ದೆಯಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ.

*FRP (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಯನ್ನು ನಿಗದಿಪಡಿಸುವುದಷ್ಟೆ ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ. ಸಕ್ಕರೆ ಮೇಲಿನ ನಿಯಂತ್ರಣವನ್ನು ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಹೊಂದಿರುತ್ತದೆ. ಹಿಂದೆ ಯುಪಿಎ ಸರ್ಕಾರದ ಅವಧಿಯಿಂದಲೂ 2017-18 ರವರೆಗೆ ರಿಕವರಿ ಪ್ರತಿ ಕ್ವಿಂಟಾಲಿಗೆ ಶೇ. 9.5 ರಷ್ಟನ್ನು ನಿಗದಿಪಡಿಸಲಾಗುತ್ತಿತ್ತು. 2018-19 ನಿಂದ 2021-22 ರವರೆಗೆ ಅದನ್ನು ಶೇ.10 ಕ್ಕೆ ಹೆಚ್ಚಿಸಲಾಯಿತು. 2022-23 ರಿಂದ ಈಚೆಗೆ ಎಫ್.ಆರ್.ಪಿ. ಯನ್ನು ಶೇ. 10.25 ಕ್ಕೆ ಏರಿಕೆ ಮಾಡಲಾಗಿದೆ. ಈ ವಿಚಾರದಲ್ಲೂ ನಮ್ಮ ರೈತರಿಗೆ ಅನ್ಯಾಯ ಮಾಡಲಾಗಿದೆ.

ಸಕ್ಕರೆಗೆ 2019 ರಲ್ಲಿ ಎಂ.ಎಸ್.ಪಿ ಯನ್ನು ಕಡೆಯದಾಗಿ ನಿಗದಿಪಡಿಸಲಾಯಿತು. ಆಗ, ಪ್ರತಿ ಕೆ.ಜಿ. ಗೆ 31 ರೂ. ನಿಗದಿ ಮಾಡಲಾಗಿತ್ತು. ಆನಂತರ ಎಂ.ಎಸ್.ಪಿ ಯನ್ನು ಪರಿಷ್ಕರಿಸಲಿಲ್ಲ. ಜೊತೆಗೆ, ಕಳೆದ ಕೆಲವು ವರ್ಷಗಳಿಂದಲೂ ಕೇಂದ್ರ ಸರ್ಕಾರವು ಸಕ್ಕರೆ ರಫ್ತನ್ನು ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ಕಾರಣದಿಂದಲೂ ರೈತರಿಗೆ ಸಮಸ್ಯೆಯಾಗುತ್ತಿದೆ.

ಇದನ್ನೂ ಓದಿ:-ಮೈಷುಗರ್‌ ಶಾಲೆ | ಕೇಂದ್ರ ಸಚಿವರ ವೇತನದಲ್ಲೇ ಶಿಕ್ಷಕರ ವೇತನ ಬಾಕಿ ಪಾವತಿ : ಎಚ್‌ಡಿಕೆ ಘೋಷಣೆ

ಇದಷ್ಟೆ ಅಲ್ಲದೆ, ಎಥನಾಲ್ ವಿಚಾರದಲ್ಲೂ ಸಹ ಕೇಂದ್ರ ಸರ್ಕಾರವು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್‌ ಉತ್ಪಾದನಾ ಸಾಮರ್ಥ್ಯ ಇದ್ದರೂ ಸಹ 2024-25 ರಲ್ಲಿ 47 ಕೋಟಿ ಲೀಟರ್‌ಗಳನ್ನು ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ.

ಇದು ಕೇಂದ್ರ ಸರ್ಕಾರವು ರಾಜ್ಯದ ರೈತರ ಬದುಕಿನೊಂದಿಗೆ ಆಡುತ್ತಿರುವ ಚೆಲ್ಲಾಟಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ತೂಕದಲ್ಲಿ ನಡೆಯುತ್ತಿದ್ದ ಮೋಸವನ್ನು ತಡೆಗಟ್ಟಲು ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲೂ ಡಿಜಿಟಲ್ ತೂಕ ಯಂತ್ರವನ್ನು ಅಳವಡಿಸಲಾಗಿದೆ. ಸರ್ಕಾರದ ವತಿಯಿಂದಲೇ 11 ಜಾಗಗಳಲ್ಲಿ ಡಿಜಿಟಲ್ ತೂಕ ಯಂತ್ರಗಳನ್ನು ಅಳವಡಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ.

ಇದರ ಜೊತೆಗೆ ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರವು ಉಚಿತವಾಗಿ ಎಪಿಎಂಸಿ ಗಳಲ್ಲಿ ಸ್ಥಾಪಿಸಿರುವ ತೂಕದ ಯಂತ್ರಗಳಲ್ಲಿ ಉಚಿತವಾಗಿ ತೂಕ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿದ್ದೇವೆ.

2024-25 ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 522 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದಿವೆ. ರೈತರಿಗೆ ಈ ಅವಧಿಯಲ್ಲಿ 18,221.88 ಕೋಟಿ ರೂ. ಗಳನ್ನು ಎಫ್.ಆರ್. ಪಿ. ದರದಂತೆ ಪಾವತಿಸಬೇಕಾಗಿತ್ತು. ಆದರೂ ಸಹ ಕೆಲವು ಕಡೆ ರಿಕವರಿ (ಸಕ್ಕರೆ ಇಳುವರಿ) ಹೆಚ್ಚು ಬಂದ ಕಾರಣ 19,569.15 ಕೊಟಿ ರೂ. ಗಳನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ.

ಇಷ್ಟೆಲ್ಲಾ ಮಾಡಿದ್ದರೂ ಸಹ, ರೈತರ ಮುಗ್ಧತೆಯನ್ನು ವಿರೋಧ ಪಕ್ಷದವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ಬಿ.ಜೆ.ಪಿ. ಯವರ ಮರಳು ಮಾತುಗಳಿಗೆ ಬಲಿಯಾಗಬಾರದು.

ನಮ್ಮ ಸರ್ಕಾರವು ಸಂವಾದದಲ್ಲಿ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ ಮತ್ತು ನಿರಂತರವಾಗಿ ರೈತ ಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾ ಬಂದಿದೆ.

ಆದ್ದರಿಂದ, ನಾಳೆ ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳ ಜೊತೆ ಹಾಗೂ ಮಧ್ಯಾಹ್ನ 1.00 ಗಂಟೆಗೆ ರೈತ ಮುಖಂಡರುಗಳ ಜೊತೆ ಚರ್ಚಿಸಲು ಸಭೆ ಕರೆದಿದ್ದೇವೆ. ಸದರಿ ಸಭೆಯಲ್ಲಿ ಎರಡೂ ಕಡೆಯ ಅಹವಾಲುಗಳನ್ನು ಆಲಿಸಿ ಸೂಕ್ತ ತೀರ್ಮಾನವನ್ನು ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ ತೀರ್ಮಾನವನ್ನು ಕೈಗೊಳ್ಳಲಿದೆ.

ರಾಜ್ಯದ ಕಬ್ಬು ಬೆಳೆಯುವ ರೈತರು ಸರ್ಕಾರದ ಮೇಲೆ ವಿಶ್ವಾಸವಿಡಬೇಕೆಂದು ಹಾಗೂ ವಿರೋಧ ಪಕ್ಷಗಳ ರಾಜಕಾರಣಕ್ಕೆ ಬಲಿಯಾಗಬಾರದೆಂದು ನಾನು ಮನವಿ ಮಾಡುತ್ತೇನೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ, ಪ್ರಧಾನ ಮಂತ್ರಿಗಳನ್ನು ಮಾನ್ಯ ಮುಖ್ಯಮಂತ್ರಿಗಳು ಭೇಟಿ ಮಾಡಿ ಕಬ್ಬು ಬೆಳೆಗಾರರ ವಿಚಾರದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಆದ್ದರಿಂದ ತುರ್ತಾಗಿ ಭೇಟಿಗೆ ಅವಕಾಶ ನೀಡಬೇಕೆಂದು ಪತ್ರ ಬರೆಯಲು ಹಾಗೂ ಪ್ರಧಾನ ಮಂತ್ರಿಗಳ ಕಛೇರಿಯನ್ನು ಸಂಪರ್ಕಿಸಲು ತೀರ್ಮಾನಿಸಲಾಯಿತು. ಕೂಡಲೇ ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ಮುಖ್ಯವಾಗಿ ರಿಕವರಿ ಪ್ರಮಾಣವನ್ನು ಇಳಿಸುವುದು, ಎಫ.ಆರ್.ಪಿ. ದರ ಪರಿಷ್ಕರಿಸುವುದು, ಸಕ್ಕರೆ ರಫ್ತು, ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಒತ್ತಾಯಿಸುವಂತೆ ಚರ್ಚಿಸಲಾಯಿತು ಎಂಬುದನ್ನು ರೈತ ಮುಖಂಡರುಗಳ ಗಮನಕ್ಕೆ ತರಬಯಸುತ್ತೇವೆ.

ಕೇಂದ್ರ ಸರ್ಕಾರವು ರಾಜ್ಯದ ವಿಚಾರದಲ್ಲಿ ನಡೆಸುತ್ತಿರುವ ಮಲತಾಯಿ ಧೋರಣೆಯು ರೈತರ ಅನ್ನದ ತಟ್ಟೆಯವರೆಗೂ, ರೈತರ ಭೂಮಿಯವರೆಗೂ ಬಂದಿದೆ. ಈ ವಿಚಾರದಲ್ಲಿ ನಾವು ಅಧಿಕಾರಕ್ಕೆ ಬಂದಾಗಿನಿಂದ ಧ್ವನಿ ಎತ್ತುತ್ತಿದ್ದೇವೆ. ಹಾಗಾಗಿ ನಮ್ಮ ಎಲ್ಲಾ ಪ್ರಯತ್ನಗಳ ಜೊತೆಯಲ್ಲಿ ತಾವೂ ಜೊತೆಗೂಡಬೇಕೆಂದು ಮನವಿ ಮಾಡುತ್ತೇನೆ.

ಎಷ್ಟು ಬಿಕ್ಕಟ್ಟುಗಳು ಬಂದರೂ ನಮ್ಮ ಸರ್ಕಾರವು ರೈತ ಪರವಾಗಿದೆ ಎಂಬುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇನೆ.

ಕೆಲವು ರೈತ ಮುಖಂಡರುಗಳು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಕುರಿತು ಪ್ರಸ್ತಾಪಿಸಿರುವುದು ಗಮನಕ್ಕೆ ಬಂದಿದೆ. ನನಗೆ ಮಾಹಿತಿ ಇರುವ ಹಾಗೆ ಮಹಾರಾಷ್ಟ್ರದಲ್ಲಿ ಸುಮಾರು 40 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಅಲ್ಲಿ 2515 ರೂ. ರಿಂದ 3635 ರೂ. ಗಳವರೆಗೆ ಕಬ್ಬಿಗೆ ಬೆಲೆಗಳನ್ನು ನೀಡುತ್ತಿವೆ. ನಾಳೆಯ ಸಭೆಯಲ್ಲಿ ಈ ವಿಚಾರವನ್ನು ಸಹ ಚರ್ಚಿಸಿ ತೀರ್ಮಾನಿಸಲಾಗುವುದು.

ಆಂದೋಲನ ಡೆಸ್ಕ್

Recent Posts

ದಸರಾ ಉನ್ನತ ಮಟ್ಟದ ಸಭೆ: ದಸರಾ ಪಾಸ್‌ಗಳನ್ನು ಸಂಪೂರ್ಣ ತಿರಸ್ಕರಿಸಿದ ಸಂಸದ ಯದುವೀರ್‌ ಒಡೆಯರ್‌

ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು…

13 hours ago

ಜೀಪಿನ ಮೇಲೆ ಬಿದ್ದ ಮರದ ಕೊಂಬೆ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…

14 hours ago

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಅ.11ಕ್ಕೆ ದಸರಾ ಉದ್ಘಾಟನೆ

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್.‌11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ…

14 hours ago

ಜನವಸತಿ ಪ್ರದೇಶದಲ್ಲಿ ಸಂಚರಿಸಿ ಆತಂಕ ಸೃಷ್ಟಿಸಿದ ಕಾಡಾನೆ

ಸುಂಟಿಕೊಪ್ಪ: ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಅತಂಕ ಮೂಡಿಸಿದ ಘಟನೆಯೊಂದು ವರದಿಯಾಗಿದೆ. ಕಾಡಾನೆಯೊಂದು…

15 hours ago

ವಯನಾಡು ಭೂಕುಸಿತ ದುರಂತ ಪ್ರಕರಣ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ವಯನಾಡು: ವಯನಾಡ್ ಭೂಕುಸಿತ ಸ್ಥಳದಲ್ಲಿ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಏಳಕ್ಕೆ ಏರಿದೆ…

16 hours ago

ಚೀನಾ ಪ್ರವಾಹದ ಮಧ್ಯೆ 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ನಾಪತ್ತೆ: ನೀರಿಗೆ ಇಳಿಯದಂತೆ ಜನತೆಗೆ ಸೂಚನೆ

ಬೀಜಿಂಗ್:‌ ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಪರಿಣಾಮ ಗುವಾಂಗ್ಕ್ಸಿ ಪ್ರದೇಶದಲ್ಲಿ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ.…

17 hours ago