ರಾಜ್ಯ

ಆನೆಧಾಮ ಕಾಮಗಾರಿ ಶೀಘ್ರ : ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ಹಾಸನ ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆಗಳಿಂದ ಸಂಭವಿಸುತ್ತಿರುವ ಜೀವಹಾನಿ, ಬೆಳೆ ಹಾನಿ ತಡೆಯಲು ಭದ್ರಾ ಅಭಯಾರಣ್ಯದಲ್ಲಿ ನಿರ್ಮಿಸಲುದ್ದೇಶಿಸಿರುವ ಸಾಫ್ಟ್ ರಿಲೀಸ್ ಸೆಂಟರ್ – ಆನೆ ಧಾಮದ ಕಾಮಗಾರಿ ಇನ್ನು ಒಂದೂವರೆ-ಎರಡು ತಿಂಗಳಲ್ಲಿ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿಂದು (ಏ.25) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದ್ದು, 53 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು, ಡಿಪಿಆರ್ ಸಿದ್ಧವಾಗುತ್ತಿದೆ ಎಂದರು.

ಪ್ರತಿ ವರ್ಷ ಸರಾಸರಿ 50-60 ಜನರು ವನ್ಯಜೀವಿ- ಮಾನವ ಸಂಘರ್ಷದಿಂದ ಮೃತಪಡುತ್ತಿದ್ದಾರೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜನರ ಜೀವ ರಕ್ಷಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು.

6225.31 ಎಕರೆ ಅರಣ್ಯ ಒತ್ತುವರಿ ತೆರವು
ರಾಜ್ಯದಲ್ಲಿ ಕಳೆದ 21 ತಿಂಗಳ ಅವಧಿಯಲ್ಲಿ 1203 ಪ್ರಕರಣಗಳಲ್ಲಿ 6225.31 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಲಾಗಿದೆ. ಇದರ ಜೊತೆಗೆ 15422 ಎಕರೆ ಜಮೀನನ್ನು ಅರಣ್ಯ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ಅರಣ್ಯದಂಚಿನಲ್ಲಿ ಬಿದಿರು ಬೆಳೆಸಿದರೆ ಅದು ಜೈವಿಕ ಮತ್ತು ಸ್ವಾಭಾವಿಕ ಬ್ಯಾರಿಕೇಡ್ ನಂತೆ ಕಾರ್ಯ ನಿರ್ವಹಿಸುತ್ತದೆ. ಅರಣ್ಯ ಒತ್ತುವರಿ ತಡೆಯುತ್ತದೆ. ಜೊತೆಗೆ ಆನೆಗಳಿಗೆ ಆಹಾರವೂ ಆಗುತ್ತದೆ. ಇದರಿಂದ ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಹಾಯವಾಗುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಿದಿರು ಬೆಳೆಸಲು ಸೂಚನೆ ನೀಡಲಾಗಿದೆ ಎಂದರು.

ರಾಜಧಾನಿಯಲ್ಲಿ ಹಸಿರು ಹೊದಿಕೆಯ ರಕ್ಷಣೆ
ಬೆಂಗಳೂರು ಮಹಾನಗರದ ಯಲಹಂಕ ಬಳಿಯ ಮಾದಪ್ಪನ ಹಳ್ಳಿಯಲ್ಲಿರುವ 153 ಎಕರೆ ಅರಣ್ಯ ಪ್ರದೇಶದಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೃಹತ್ ಸಸ್ಯೋದ್ಯಾನ ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಡಿಪಿಆರ್ ಸಿದ್ಧವಾಗುತ್ತಿದ್ದು, ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಬೆಂಗಳೂರು ನಗರದ ಹೆಸರುಘಟ್ಟ ಕೆರೆ ಸುತ್ತಮುತ್ತಲ್ಲಿರುವ ಅಪರೂಪದ ಹುಲ್ಲುಗಾವಲು ರಕ್ಷಣೆಗಾಗಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಇದಕ್ಕೆ ಸಂಪುಟದ ಅನುಮೋದನೆಯೂ ದೊರೆತಿದೆ. ಈ ಮೂಲಕ ಬೆಂಗಳೂರಿನಲ್ಲಿ ಹಸಿರು ವಲಯ ರಕ್ಷಣೆಗೆ ಕ್ರಮ ವಹಿಸಲಾಗಿದೆ ಎಂದರು.

ಎಚ್.ಎಂ.ಟಿ. ಪ್ರಕರಣ; ಮೇನಲ್ಲಿ ವಿಚಾರಣೆ
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 443 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ತಡೆಯಲಾಗಿದ್ದು, ಈ ಅರಣ್ಯ ಜಮೀನು ಹಿಂಪಡೆಯಲು ಕಾನೂನು ಹೋರಾಟ ಮಾಡಲಾಗುತ್ತಿದೆ. ಮುಂದಿನ ತಿಂಗಳು ಪ್ರಕರಣ ವಿಚಾರಣೆಗೆ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈಶ್ವರಖಂಡ್ರೆ ತಿಳಿಸಿದರು.

ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್ ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಕಳೆದ ವರ್ಷ ಡಿ.ಆರ್.ಎಫ್.ಓ. ಹಂತದವರೆಗಿನ ಅರಣ್ಯ ಸಿಬ್ಬಂದಿಯನ್ನು ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ವರ್ಗಾವಣೆ ಮಾಡಲಾಗಿದೆ. ಅರಣ್ಯ ಅಪರಾಧಗಳಿಗೆ ಆನ್ ಲೈನ್ ಎಫ್.ಐ.ಆರ್ ದಾಖಲಿಸಲು ಗರುಡಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗಿದೆ. ಒಟ್ಟಾರೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗುತ್ತಿದೆ ಎಂದೂ ತಿಳಿಸಿದರು.

ಬಡತನ ರೇಖೆಯಿಂದ ಹೊರಬಂದ 1 ಕೋಟಿ ಜನರು
ನಮ್ಮ ಸರ್ಕಾರ ಬಂದು 2 ವರ್ಷ ಪೂರೈಸುವ ಹೊಸ್ತಿಲಲ್ಲಿದೆ. ನಾವು 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೇವೆ. ಈ ಯೋಜನೆಗಳ ಫಲವಾಗಿ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಇಂತಹ ಸರ್ಕಾರದಲ್ಲಿ ಸಚಿವನಾಗಿದ್ದೇನೆ ಎಂಬ ಹೆಮ್ಮೆ ಸಂತೋಷ ನನಗಿದೆ ಎಂದರು.

ಸಾಮಾಜಿಕ ಶೈಕ್ಷಣಕ ಸಮೀಕ್ಷೆಯೇ ಹೊರತು ಜಾತಿ ಗಣತಿಯಲ್ಲ
ಕಾಂತರಾಜ್ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಸಲ್ಲಿಸಿದೆ ಇದು ಜಾತಿ ಗಣತಿಯಲ್ಲ. ಸಚಿವ ಸಂಪುಟದಲ್ಲಿ ವರದಿಯನ್ನು ಮಂಡಿಸಲಾಗಿದ್ದು, ಎಲ್ಲ ಸಚಿವರಿಗೂ ವರದಿಯಲ್ಲಿರುವ ಸಾರಾಂಶದ ಪ್ರತಿಯನ್ನು ನೀಡಿ, ಅದರ ಅಧ್ಯಯನ ಮಾಡುವಂತೆ ತಿಳಿಸಲಾಗಿದೆ. ನಾನೂ ಅಧ್ಯಯನ ಮಾಡುತ್ತಿದ್ದೇನೆ ಮತ್ತು ಸಚಿವ ಸಂಪುಟದ ಸಭೆಯಲ್ಲಿ ನಮ್ಮ ನಮ್ಮ ನಿಲುವು ತಿಳಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.

ಯಾವುದೇ ಜಾತಿ, ಜನಾಂಗದವರಿಗೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆ ನೀಡಿದರು.

ಆಂದೋಲನ ಡೆಸ್ಕ್

Recent Posts

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

19 hours ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

19 hours ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

20 hours ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

20 hours ago

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…

20 hours ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

20 hours ago