ಬೆಂಗಳೂರು : ಮಕ್ಕಳಲ್ಲಿ ಕುತೂಹಲ ಕೆರಳಿಸುವುದು, ಮಕ್ಕಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಮತ್ತು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ಅವರೊಳಗಿನ ಸೃಜನಶೀಲತೆ ಅರಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಪ್ರೆಸ್ ಕ್ಲಬ್ ಮತ್ತು ಬಾಲ ಭವನ ಆಯೋಜಿಸಿದ್ದ ಚಿಣ್ಣರ ಜಾಗೃತಿ-ಪ್ರಶಸ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.
ಪ್ರತಿ ಮಗುವೂ ಹುಟ್ಟುತ್ತಲೇ ಪ್ರತಿಭೆಗಳ ಕಣಜ ಆಗಿರುತ್ತದೆ. ಆ ಮಗುವಿನ ಮನಸ್ಸಿನ, ಆಲೋಚನೆಯ ಕಿಟಕಿ ತೆರೆದಾಗ ಪ್ರತಿಭೆ ಹೊರಗೆ ಬರುತ್ತದೆ. ಆದ್ದರಿಂದ ಮಕ್ಕಳನ್ನು ಯಾರೂ ಪ್ರತಿಭಾವಂತರನ್ನಾಗಿ ಮಾಡುವ ಅಗತ್ಯವಿಲ್ಲ. ಪ್ರತಿಭೆ ಅರಳಲು ಅಗತ್ಯವಾದ ವಾತಾವರಣ ಕಲ್ಪಿಸಿದರೆ ಸಾಕು ಎಂದರು.
ಮಕ್ಕಳ ಬೆನ್ನು ತಟ್ಟುವುದು, ಪ್ರತಿಭೆ ಗುರುತಿಸುವುದು ಎಂದರೆ, ಗಾಡಿ ಚಕ್ರಕ್ಕೆ ಕೀಲೆಣ್ಣೆ ಹಾಕಿದಂತೆ. ಕೀಲೆಣ್ಣೆ ಹಾಕಿದರೆ ಚಕ್ರ ಚನ್ನಾಗಿ ಚಲಿಸುತ್ತದೆ. ಹಾಗೆಯೇ ಪ್ರೋತ್ಸಾಹ, ಪುರಸ್ಕಾರ ಸಿಕ್ಕರೆ ಮಕ್ಕಳ ಪ್ರತಿಭೆ ಅರಳುತ್ತದೆ.
ಇಂದು ಪುರಸ್ಕಾರಗೊಂಡ ಮಕ್ಕಳಿಗೆ ನಾನೊಂದು ಕಿವಿಮಾತು ಹೇಳಲು ಬಯಸುತ್ತೇನೆ. ನೀವುಗಳು ಕಲಿಕೆಯ ಕುತೂಹಲ ಮತ್ತು ಅಧ್ಯಯನಶೀಲತೆಯನ್ನು ಯಾವತ್ತೂ ಕಳೆದುಕೊಳ್ಳಬಾರದು. ಇಲ್ಲದಿದ್ದರೆ ನಿಮ್ಮೊಳಗಿನ ಪ್ರತಿಭೆ ಬಾಡುತ್ತದೆ. ಮೊಬೈಲ್, ಟ್ಯಾಬ್ ಗಳ ಗೀಳು ನಿಮ್ಮೊಳಗಿನ ಸೃಜನಶೀಲತೆಯನ್ನು ಕೊಂದು ಪ್ರತಿಭಾಶೂನ್ಯರನ್ನಾಗಿಸುತ್ತದೆ. ವೀಡಿಯೊ ಗೇಮ್ ಗಳು ಕೇವಲ kill, target, fight ಅನ್ನುವ ಆಕ್ರಮಣಕಾರಿ ವರ್ತನೆಯನ್ನೇ ಬೆಳೆಸುತ್ತವೆ. ಹೀಗಾಗಿ ಮೊಬೈಲ್ ಬಿಡಿ-ಪುಸ್ತಕ ಹಿಡಿ-ಮೈದಾನದ ಕಡೆ ನಡಿ ಎನ್ನುವುದನ್ನು ಮಕ್ಕಳು ಪಾಲಿಸುತ್ತಾ, ಕಲಿಕೆಯ ಕುತೂಹಲ, ಅಧ್ಯಯನಶೀಲತೆಯನ್ನು ಬದುಕಿನ ಕೊನೆ ಕ್ಷಣದವರೆಗೂ ಪಾಲಿಸಿ ಎಂದು ಕರೆ ನೀಡಿದರು.
ಮಕ್ಕಳ ದೃಷ್ಟಿಕೋನದಲ್ಲಿ ಭವಿಷ್ಯದ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದ ಜವಾಹರಲಾಲ್ ನೆಹರೂ ಅವರ ಗುರಿಯ ಭಾಗವಾಗಿಯೇ ಬಾಲಭವನ ಸ್ಥಾಪನೆಯಾಗಿದೆ. ಅದಕ್ಕೇ “ಜವಾಹರ ಬಾಲ ಭವನ” ಅಂತಲೇ ಹೆಸರಿಡಲಾಗಿದೆ ಎಂದರು.
ಇದನ್ನು ಓದಿ: ದ್ವಿದಳ ಧಾನ್ಯ ಬೆಳೆಯಲು 35 ಸಾವಿರ ಕೋಟಿ ಕೇಂದ್ರ ಅನುದಾನ : ಎಚ್‌ಡಿಕೆ
ಮಕ್ಕಳು ಮಣ್ಣಿನಿಂದ ಬೇರ್ಪಟ್ಟು, ನೆಲದ ಆಟ ಪಾಠಗಳಿಂದ ದೂರ ಆಗಿದ್ದಾರೆ. ಅಜ್ಜ-ಅಜ್ಜಿ ಕತೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಅದಕ್ಕೇ ತಮ್ಮ ಆಟದ ಸಾಮಾನುಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆಯೂ ಕಾಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿರು.
ಕತೆಗಳನ್ನು ಕೇಳುವ ಮೂಲಕ ಮಕ್ಕಳ ಕಲ್ಪನಾ ಜಗತ್ತು ವಿಪರೀತ ವಿಕಾಸಗೊಳ್ಳುತ್ತಿತ್ತು.
ಇದನ್ನು ಜವಾಹರಲಾಲ್ ನೆಹರೂ ಅವರು ಮನಗಂಡಿದ್ದರು. ಮಕ್ಕಳ ದೃಷ್ಟಿಕೋನದಲ್ಲಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ನೀಲನಕ್ಷೆ ನೆಹರೂ ಅವರು ಸಿದ್ದಪಡಿಸಿದ್ದರು ಎಂದು ಸ್ಮರಿಸಿದರು.
ನೆಹರೂ ಅವರು, “ಮಕ್ಕಳು ತೋಟದಲ್ಲಿರುವ ಮೊಗ್ಗುಗಳಂತೆ, ಈ ಮೊಗ್ಗುಗಳನ್ನು ಎಚ್ಚರಿಕೆಯಿಂದ ಪ್ರೀತಿಯಿಂದ ಪೋಷಿಸಬೇಕು, ಆಗಷ್ಟೆ ಜವಾಬ್ದಾರಿಯುತ ನಾಗರಿಕರು ರೂಪುಗೊಳ್ಳುತ್ತಾರೆ” ಎನ್ನುವ ಸ್ಪಷ್ಟವಾದ ವೈಜ್ಞಾನಿಕ ತಿಳಿವಳಿಕೆ ಮತ್ತು ದೂರ ದೃಷ್ಟಿ ಹೊಂದಿದ್ದರು.
ಈ ದೂರದೃಷ್ಟಿಯಿಂದ ಬಾಲಭವನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಬಾಲ ಭವನದ ಜೊತೆಗೆ ಪ್ರೆಸ್ ಕ್ಲಬ್ ಕೂಡ ಕೈ ಜೋಡಿಸಿ ಪತ್ರಕರ್ತರ ಮಕ್ಕಳಿಗೆ ಅವರೊಳಗಿನ ಕ್ರಿಯಾಶೀಲತೆ ಅರಳಲು, ಮನೋಲೋಕ ವಿಸ್ತಾರಗೊಳ್ಳಲು ಮುಂದಾಗಿರುವುದು ಆರೋಗ್ಯಕಾರಿ ಬೆಳವಣಿಗೆ ಎಂದು ಶ್ಲಾಘಿಸಿದರು.
ಬಿಡಿಎ ಅಧ್ಯಕ್ಷರಾದ ಎನ್.ಎ.ಹ್ಯಾರಿಸ್, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್, ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ , ಬಾಲ ಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹೇಶ್, ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ನಟರಾಜ್, ಜನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್, ಗಾಯಕ ಅಕ್ಬರ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ…
ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಜನವರಿ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ನರೇಗಾ ಯೋಜನೆ ಹೆಸರು ಬದಲಾವಣೆ ಆಕ್ಷೇಪಿಸಿ ಕರೆದಿರುವ…
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…
ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…
ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…