ಎಸ್‌ಸಿಪಿ-ಟಿಎಸ್‌ಪಿ ಹಣ ಗ್ಯಾರಂಟಿಗಳಿಗೆ ಬಳಕೆ: ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯ – ಬಿ.ವೈ. ವಿಜಯೇಂದ್ರ
ಮಸ್ಕಿ : ಕಾಂಗ್ರೆಸ್ ಸರ್ಕಾರ ದಲಿತರು, ಹಿಂದುಳಿದವರು ಹಾಗೂ ಶೋಷಿತ-ಪೀಡಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ತನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಬಿಜೆಪಿ ವತಿಯಿಂದ ನಡೆಯುತ್ತಿರುವ ಪಾದಯಾತ್ರೆಯ ಸಂದರ್ಭದಲ್ಲಿ ದಲಿತ ಮುಖಂಡರು ಹಾಗೂ ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸಿದ ಅವರು, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸುತ್ತಿರುವ ಬಗ್ಗೆ ಗಂಭೀರವಾಗಿ ಪ್ರಶ್ನಿಸಬೇಕಾಗಿದೆ ಎಂದರು.
ಕಾಂಗ್ರೆಸ್ ನಾಯಕರು ಐದು ಗ್ಯಾರಂಟಿಗಳನ್ನು ದೇಶಕ್ಕೆ ಮಾದರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಗ್ಯಾರಂಟಿಗಳಿಗೆ ಹಣ ಖರ್ಚು ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಆ ಹಣವನ್ನು ಯಾರ ಹಣದಿಂದ ನೀಡಲಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸುವುದು ಯಾವ ನ್ಯಾಯ?” ಎಂದು ವಿಜಯೇಂದ್ರ ಪ್ರಶ್ನಿಸಿದರು.
ದಲಿತ ಕುಟುಂಬಗಳ ಮಕ್ಕಳ ವಿದ್ಯಾರ್ಥಿವೇತನ, ಉನ್ನತ ಶಿಕ್ಷಣ, ವಿದೇಶಿ ಶಿಕ್ಷಣ, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ, ಮನೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬೇಕಿದ್ದ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಎಸ್‌ಸಿಪಿ-ಟಿಎಸ್‌ಪಿ ಅನುದಾನದ ಸುಮಾರು ₹52 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಭಿವೃದ್ಧಿ ನಿಗಮಗಳಿಗೂ ಅನುದಾನ ಕಡಿತ
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಚೌಡಯ್ಯ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಿಗೆ ಗಣನೀಯ ಪ್ರಮಾಣದಲ್ಲಿ ಅನುದಾನ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ನಿಗಮಗಳಿಗೆ ಅಗತ್ಯ ಪ್ರಮಾಣದ ಅನುದಾನ ನೀಡದೆ, ಘೋಷಿಸಿದ ಹಣದಲ್ಲೂ ಸಂಪೂರ್ಣವಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ವಿಜಯೇಂದ್ರ ದೂರಿದರು.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ₹700-800 ಕೋಟಿ ಅನುದಾನ ನೀಡಲಾಗುತ್ತಿದ್ದರೆ, ಕಾಂಗ್ರೆಸ್ ಸರ್ಕಾರ ಅದೇ ಮಟ್ಟದ ಅನುದಾನ ನೀಡದೆ ಕಡಿತ ಮಾಡಿದೆ. ಬಜೆಟ್‌ನಲ್ಲಿ ಘೋಷಿಸಿದ ಹಣವೂ ಸಂಪೂರ್ಣವಾಗಿ ಬಿಡುಗಡೆಯಾಗುತ್ತಿಲ್ಲ. ಗ್ಯಾರಂಟಿಗಳಿಗೆ ಹಣ ಬೇಕೆಂಬ ಕಾರಣಕ್ಕೆ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಡಿತ ಮಾಡುವುದು ಅಥವಾ ಬೇರೆಡೆಗೆ ಬಳಸುವುದು ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಮಾಡುವ ಅನ್ಯಾಯ,” ಎಂದರು.
ಮೀಸಲಾತಿ ವಿಚಾರದಲ್ಲೂ ಸರ್ಕಾರ ವಿಫಲ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಸಮುದಾಯಗಳಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ವಿಜಯೇಂದ್ರ ಹೇಳಿದರು.
“ಮೀಸಲಾತಿ ವಿಚಾರದಲ್ಲಿ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕಿತ್ತು. ಆದರೆ ಎರಡು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳುವುದರಿಂದ ಮಾತ್ರ ಯುವಕರಿಗೆ ನ್ಯಾಯ ಸಿಗುವುದಿಲ್ಲ. ಉದ್ಯೋಗಾಕಾಂಕ್ಷಿಗಳ ಭವಿಷ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು,” ಎಂದು ಅವರು ಆಗ್ರಹಿಸಿದರು.
ವಾಲ್ಮೀಕಿ ನಿಗಮದ ಹಣ ವಾಪಸ್ ಬರಬೇಕು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಸಂಪೂರ್ಣವಾಗಿ ನಿಗಮಕ್ಕೆ ವಾಪಸ್ ತಂದು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಬಳಸಬೇಕು. ರೈತರು, ಯುವಕರು, ದಲಿತರು, ಹಿಂದುಳಿದವರು ಸೇರಿದಂತೆ ಶೋಷಿತ-ಪೀಡಿತ ಸಮುದಾಯಗಳ ಪರವಾಗಿ ಬಿಜೆಪಿ ನಿರಂತರವಾಗಿ ಧ್ವನಿ ಎತ್ತಲಿದೆ ಎಂದು ವಿಜಯೇಂದ್ರ ಹೇಳಿದರು.
“ನಮ್ಮ ಹೋರಾಟ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ರೈತರ ಸಮಸ್ಯೆ, ಯುವಕರ ಉದ್ಯೋಗ, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಹಕ್ಕುಗಳು ಸೇರಿದಂತೆ ಶೋಷಿತ-ಪೀಡಿತ ಸಮುದಾಯಗಳ ಧ್ವನಿಯಾಗಿ ಈ ಪಾದಯಾತ್ರೆ ನಡೆಯುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ,” ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ
ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನಿಜವಾದ ಆದ್ಯತೆ ನೀಡಿದ್ದು ಬಿಜೆಪಿ ಸರ್ಕಾರ ಎಂದು ವಿಜಯೇಂದ್ರ ಹೇಳಿದರು.
“ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರಗಳು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಕಾಂಗ್ರೆಸ್ ಪಕ್ಷ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ನಿಜವಾದ ಸಾಮಾಜಿಕ ನ್ಯಾಯ ನೀಡುವ ಕೆಲಸ ಮಾಡಬೇಕು,” ಎಂದು ಅವರು ಹೇಳಿದರು.
ಪಾದಯಾತ್ರೆಯಿಂದ ಸರ್ಕಾರಕ್ಕೆ ಭಯ ಶುರುವಾಗಿದೆ
ಬಿಜೆಪಿ ಪಾದಯಾತ್ರೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಭಯ ಶುರುವಾಗಿದೆ. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದ ಸರ್ಕಾರ ಈಗ ಜನರ ಧ್ವನಿಗೆ ಸ್ಪಂದಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಿಜಯೇಂದ್ರ ಹೇಳಿದರು.
“ಉತ್ತರ ಕರ್ನಾಟಕ ಎಲ್ಲಿದೆ ಎಂಬುದನ್ನೇ ಮರೆತಿದ್ದ ಸರ್ಕಾರ, ನಮ್ಮ ಪಾದಯಾತ್ರೆಯ ನಂತರ ಬರ ಪರಿಸ್ಥಿತಿ ಹಾಗೂ ತಾಲೂಕುಗಳ ಘೋಷಣೆ ಕುರಿತು ಮಾತನಾಡುವಂತಾಗಿದೆ. ಇದು ಜನರ ಹೋರಾಟದ ಪರಿಣಾಮ. ನಮ್ಮ ಪಾದಯಾತ್ರೆ ಸರ್ಕಾರದ ಕಿವಿ ಹಿಂಡುವ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸುವ ಹೋರಾಟ,” ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರ ಯಾವ ಯಾವ ನಿಗಮಗಳಿಗೆ ಎಷ್ಟೆಷ್ಟು ಜಣ ಬಿಡುಗಡೆ ಅಗಿದೆ ಅನ್ನೋ ದಾಖಲೆಗಳನ್ನು ಬಿಡುಗಡೆ ಮಾಡಿದರು
ಈ ಸಂದರ್ಭದಲ್ಲಿ ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು, ದಲಿತ ಸಮುದಾಯದ ಪ್ರಮುಖರು ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಉಪಸ್ಥಿತರಿದ್ದರು.
ಆಡಳಿತ ಪಕ್ಷದ ಶಾಸಕರೇ ಕಮೀಷನ್ ವಿರುದ್ಧ ಸಿಎಂಗೆ ಪತ್ರ ಬರೆಯುವ ಸ್ಥಿತಿ : ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ…
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮ ಪಂಚಾಯಿತಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಜಿಲ್ಲಾಧಿಕಾರಿ…
ಮೈಸೂರು : ಪೂಜಾ ಕುಣಿತ, ಡೊಳ್ಳು ಕುಣಿತ, ಜಡೆ ಕೋಲಾಟ ಸೇರಿದಂತೆ ನಾನಾ ಜಾನಪದ ಕಲಾ ತಂಡಗಳು ಮಾನಸಗಂಗೋತ್ರಿ ಆವರಣದಲ್ಲಿ…
ಎಂಎಲ್‌ಸಿ ಕೆ.ಶಿವಕುಮಾರ್ ಮನವಿಗೆ ಸ್ಪಂದಿಸಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಟಿ.ರಘುಮೂರ್ತಿ ಮೈಸೂರು : ಬುಡಕಟ್ಟು ಕುಟುಂಬಗಳಿಗೆ ಸರ್ಕಾರದಿಂದ…
ಮೈಸೂರು : ಅಕ್ರಮ ದಾಸ್ತಾನು, ಗ್ರಾಹಕರಿಗೆ ವಂಚನೆ ಇನ್ನಿತರ ಅಕ್ರಮಗಳ ಬಗ್ಗೆ ಆಹಾರ ಮತ್ತು ಕಾನೂನು ಮಾಪನ ಶಾಸ ಇಲಾಖೆ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿರುವ 14ನೇ ಆರೋಪಿ ಪ್ರದೋಷ್ ಹೇಳಿಕೆ ದಾಖಲಿಸುವ…