ರಾಜ್ಯ

ಜಾತಿ ಗಣತಿ ವರದಿ ಹಿಂಪಡೆಗೆ ಅಶೋಕ ಆಗ್ರಹ

ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ

ಬೆಂಗಳೂರು : ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಮಾಡಿಸಿದ್ದಾರೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿ ಅತಿ ದೊಡ್ಡ ಜಾತಿ ಲಿಂಗಾಯತರು, ಎರಡನೇ ಅತಿ ದೊಡ್ಡ ಜಾತಿ ಒಕ್ಕಲಿಗರು ಹಾಗೂ ಮೂರನೆಯವರು ದಲಿತರು ಎಂದಿತ್ತು. ಆದರೆ ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ. ಮುಸ್ಲಿಮರಲ್ಲೇ ವಿವಿಧ ಜಾತಿಗಳಿದ್ದು, ಅದನ್ನು ಬೇರೆ ಮಾಡಿಲ್ಲ. ಒಕ್ಕಲಿಗರಲ್ಲೇ ಕೆಲವು ಜಾತಿಗಳನ್ನು ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಗೆ ಹೆಚ್ಚು ಮತ ನೀಡುವವರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗಿದೆ. ಒಕ್ಕಲಿಗರಿಗೆ, ಲಿಂಗಾಯತರಿಗೆ, ದಲಿತರಿಗೆ ನಾಮ ಹಾಕಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಪ್ರಾಯೋಜಿತವಾದ ಈ ವರದಿ ಅವೈಜ್ಞಾನಿಕ. ಲಕ್ಷಾಂತರ ಜನರ ಮನೆಗೆ ಹೋಗದೆ ವರದಿ ಬರೆಯಲಾಗಿದೆ. ಕರ್ನಾಟಕ ತಂತ್ರಜ್ಞಾನದಲ್ಲೇ ನಂ.1 ಆಗಿದೆ. ಇದನ್ನು ಬಳಸಿಕೊಂಡು ವರದಿ ಮಾಡಬಹುದಿತ್ತು. ಆದರೂ ತಮಗೆ ಬೇಕಾದಂತೆ ವರದಿ ಬರೆಸಿದ್ದಾರೆ ಎಂದರು.

ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದು ಹಳೆ ಕಾಂಗ್ರೆಸ್. ಈಗಿನ ಕಾಂಗ್ರೆಸ್ ನಲ್ಲಿ ಹಳಬರು ಇಲ್ಲ‌. ಈ ಕಾಂಗ್ರೆಸ್ ಒಕ್ಕಲಿಗರು, ಲಿಂಗಾಯತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ‌. ಈಗಲೂ ಸಮಯವಿದೆ. ಆರು ತಿಂಗಳು ತಡವಾದರೂ ಪರವಾಗಿಲ್ಲ‌‌. ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವರದಿಯನ್ನು ಮತ್ತೆ ರೂಪಿಸಲಿ ಎಂದು ಆಗ್ರಹಿಸಿದರು.

ಈ ವರದಿಗೆ 150 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ಅಧಿಕಾರಿ ಕಾಂತರಾಜು ಅವರನ್ನು ಮನೆಗೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಡಿಕ್ಟೇಶನ್ ಮಾಡಿಸಿ ವರದಿ ಬರೆಸಿದ್ದಾರೆ. ಬಳಿಕ ಕಾಂತರಾಜು ಸಹಿ ಹಾಕದೆ ಓಡಿದ್ದಾರೆ. ಈ ಹಣವನ್ನು ಯಾರು ತಿಂದಿದ್ದಾರೆ ಎಂದು ತನಿಖೆ ಮಾಡಬೇಕಿದೆ. ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ವರದಿ ಮಾಡಲಾಗಿದೆ ಎಂದರು.

ಹಳ್ಳಿಕಾರ್, ಕುಂಚಿಟಿಗರನ್ನು ಬೇರೆ ಮಾಡಲಾಗಿದೆ. ರೆಡ್ಡಿ ಲಿಂಗಾಯತರನ್ನು ಪ್ರತ್ಯೇಕ ಮಾಡಲಾಗಿದೆ. ಇಂತಹ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದನ್ನು ಸಚಿವರು ಒಪ್ಪಿದರೆ ಆಯಾ ಸಮುದಾಯದ ಜನರು ಅವರನ್ನು ಒಪ್ಪುವುದಿಲ್ಲ. ಈ ವರದಿಯಿಂದಾಗಿ ಕಾಂಗ್ರೆಸ್ ನಲ್ಲೇ ದಂಗೆ ಆರಂಭವಾಗಲಿದೆ. ಸಮುದಾಯಗಳ ಜನರು ಮುಂದಿನ ಚುನಾವಣೆಯಲ್ಲಿ ಇವರನ್ನು ಹತ್ತಿರ ಸೇರಿಸುವುದಿಲ್ಲ. ಒಕ್ಕಲಿಗ ಸ್ವಾಮೀಜಿಯವರು ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇದೇ ರೀತಿ ಬೇರೆ ಸಮುದಾಯದವರೂ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗೆ ಮೀಸಲಾತಿ ನೀಡಿದ್ದಾರೆ. ಆದರೆ ಮುಸ್ಲಿಮರಿಗೆ ಮೀಸಲಾತಿ ನೀಡಲು ರಾಜ್ಯಕ್ಕೆ ಅಧಿಕಾರವಿಲ್ಲ‌. ಜೊತೆಗೆ ಒಟ್ಟು ಮೀಸಲಾತಿ 50% ಗಿಂತ ಹೆಚ್ಚು ಮಾಡಲು ಸಾಧ್ಯವಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡಿದೆ. ಹೆಚ್ಚಿನ ಮೀಸಲಾತಿಯನ್ನು ಯಾವ ಕಾನೂನಿನಡಿ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಲಿ. ಬಿಜೆಪಿ ಇದ್ದಾಗ ಮುಸ್ಲಿಮರಿಗಿದ್ದ ಮೀಸಲಾತಿಯನ್ನು ತೆಗೆದು ಬೇರೆಯವರಿಗೆ ನೀಡಲಾಗಿತ್ತು ಎಂದರು‌.

ಬಿಜೆಪಿ-ಜೆಡಿಎಸ್ ಪ್ರತಿಭಟನೆಗೆ ವಿರುದ್ಧವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ. ಹಾಲಿನ ದರ, ಡೀಸೆಲ್, ವಿದ್ಯುತ್ ಮೊದಲಾದ ದರಗಳನ್ನು ಕಾಂಗ್ರೆಸ್ ಏರಿಸಿದೆ. ಕಾಂಗ್ರೆಸ್ ಎಲ್ಲೂ ದರ ಇಳಿಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಪಾರ್ಕಿಂಗ್, ಕಸ ಶುಲ್ಕ ಮಾಡಲಾಗಿದೆ. ಬೆಂಗಳೂರಿನ ಜನರನ್ನು ತೆರಿಗೆಯಿಂದಲೇ ಹಿಂಡುತ್ತಿದ್ದಾರೆ ಎಂದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಲೋಕಾ ಪೊಲೀಸ್‌ ಕಸ್ಟಡಿಗೆ : ಕೋರ್ಟ್‌ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್‌…

2 hours ago

ಅನಾರೋಗ್ಯ ಹಿನ್ನಲೆ ದುಬಾರೆ ಸಾಕಾನೆ ʻತಕ್ಷʼ ಸಾವು

ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…

4 hours ago

ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕು ಇರಿತ

ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…

5 hours ago

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

5 hours ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

5 hours ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

5 hours ago