ಕ್ರೀಡೆ

ವಿರಾಟ ಪ್ರದರ್ಶನ: ಲಂಕೆ ಎದುರು ಭಾರತಕ್ಕೆ ಭರ್ಜರಿ ಜಯ

  • ವರ್ಷದ ಮೊದಲ ಪಂದ್ಯದಲ್ಲಿ  ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ ಶತಕದಾಟ
  • ಗುವಾಹಟಿ: ಕಿಂಗ್‌ ವಿರಾಟ್‌ ಕೊಹ್ಲಿ ಅವರ ದಾಖಲೆಯ 45ನೇ ಶತಕದ ಬಲದಿಂದ ಭಾರತ ಗುವಾಹಟಿಯಲ್ಲಿ ನಡೆದ 2023ನೇ ವರ್ಷದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 67 ರನ್ ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.
    ಹೊಸ ವರುಷವನ್ನು ದಾಖಲೆ ಶತಕದೊಂದಿಗೆ ಆರಂಭಿಸಿರುವ ವಿರಾಟ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ವರ್ಷಗಳ ಕಾಲ ಎದುರಿಸಿದ್ದ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. ಜತೆಗೆ ತಮ್ಮ ದಾಖಲೆಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

    ಇಲ್ಲಿನ ಬಸ್ರಾಪರ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ತನ್ನ 50 ಓವರ್‌ಗಳಲ್ಲಿ 373/7 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ರೋಹಿತ್‌ ಶರ್ಮಾ (83) ಮತ್ತು ಶುಭಮನ್‌ ಗಿಲ್‌ (70) ಮೊದಲ ವಿಕೆಟ್‌ಗೆ 143 ರನ್‌ಗಳ ಜೊತೆಯಾಟವಾಡಿ ಭಾರತದ ಬೃಹತ್‌ ಮೊತ್ತಕ್ಕೆ ಬೇಕಾದ ಭದ್ರ ಅಡಿಪಾಯ ಹಾಕಿದರು.

    ಆರಂಭಿಕರ ನಿರ್ಗಮನದ ಬಳಿಕ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಡುವ ಜವಾಬ್ದಾರಿ ಹೊತ್ತು ಬ್ಯಾಟ್‌ ಬೀಸಿದ ವಿರಾಟ್‌ ಕೊಹ್ಲಿ, ಇನಿಂಗ್ಸ್‌ ಮಧ್ಯದಲ್ಲಿ ಸಿಕ್ಕ ಒಂದೆರಡು ಜೀವದಾನಗಳ ಸಂಪೂರ್ಣ ಲಾಭ ತೆಗೆದುಕೊಂಡು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿನ 73ನೇ ಶತಕ ಸಿಡಿಸಿದರು. ಏಕದಿನ ಕ್ರಿಕೆಟ್‌ ಒಂದರಲ್ಲೇ ಕೊಹ್ಲಿ ಬಾರಿಸಿದ 45ನೇ ಶತಕ ಇದಾಗಿದೆ. ಈ ಮೂಲಕ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿದ್ದ ಬಹುದೊಡ್ಡ ದಾಖಲೆಯನ್ನು ಸರಿಗಟ್ಟಿದರು.
    ಬಿರುಸಿನ ಬ್ಯಾಟಿಂಗ್‌ ನಡೆಸಿದ ಕೊಹ್ಲಿ, 87 ಎಸೆತಗಳಲ್ಲಿ 12 ಫೋರ್‌ ಮತ್ತು 1 ಸಿಕ್ಸರ್‌ಗಳೊಂದಿಗೆ 113 ರನ್‌ ಸಿಡಿಸಿ 49ನೇ ಓವರ್‌ನಲ್ಲಿ ಔಟಾದರು.
    ಏಕದಿನ ಕ್ರಿಕೆಟ್‌ನಲ್ಲಿ 8 ಶತಕಗಳೊಂದಿಗೆ ಶ್ರೀಲಂಕಾ ಎದುರು ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಸಚಿನ್‌ ತೆಂಡೂಲ್ಕರ್‌ ಹೊಂದಿದ್ದರು. ಈಗ ಈ ದಾಖಲೆ 9 ಶತಕ ಬಾರಿಸಿದ ಕಿಂಗ್‌ ಕೊಹ್ಲಿ ಪಾಲಾಗಿದೆ.
    2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ಎದುರು ಮಿಂಚಿನ ಶತಕ ಬಾರಿಸಿದ್ದ ವಿರಾಟ್‌, ಇದೀಗ ಶ್ರೀಲಂಕಾ ಎದುರು ಮೂರಂಕಿಯ ಸ್ಕೋರ್‌ ಮಾಡಿ ಒಡಿಐ ಕ್ರಿಕೆಟ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಶತಕದ ಸಾಧನೆ ಮೆರೆದಿದ್ದಾರೆ.

    ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿ 67 ರನ್‌ಗಳ ಸೋಲೊಪ್ಪಿಕೊಂಡಿತು. ನಾಯಕ ದಸುನ್ ಶನಕ 88 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು, ಸೋಲಿನಿಂದ ತಂಡವನ್ನು ಪಾರುಮಾಡಲಾಗಲಿಲ್ಲ.

    ಟಿ20 ಸರಣಿಯಿಂದ ವಿಶ್ರಾಂತಿ ಪಡೆದು ವಾಪಸಾದ ವಿರಾಟ್ ಕೊಹ್ಲಿ ಸಾಕಷ್ಟು ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಮಾಡಿದರು.
    ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ರಿಗಿಂತ ಕಡಿಮೆ ಇನ್ನಿಂಗ್ಸ್‌ನಲ್ಲಿ 12500 ರನ್ ಗಳಿಸುವ ಮೂಲಕ ವೇಗವಾಗಿ 12500 ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 73ನೇ ಶತಕವನ್ನು ಕೂಡ ಪೂರೈಸಿದ ಕೊಹ್ಲಿ, ಮೂರು ವರ್ಷಗಳ ಬಳಿಕ ಭಾರತದಲ್ಲಿ ಶತಕ ದಾಖಲಿಸಿದ ಸಾಧನೆ ಮಾಡಿದರು. ಅಂತಿಮವಾಗಿ 87 ಎಸೆತಗಳಲ್ಲಿ 113 ರನ್ ಗಳಿಸಿ ಔಟಾದರು.

    ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 373 ರನ್ ಗಳಿಸಿತು. ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 29 ಎಸೆತಗಳಲ್ಲಿ 39 ರನ್ ಗಳಿಸಿ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು.
    ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 14 ರನ್ ಗಳಿಸಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಅಕ್ಷರ್ ಪಟೇಲ್ 9 ರನ್ ಗಳಿಸಿ ಔಟಾದರು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಕ್ರಮವಾಗಿ ಅಜೇಯ 4 ಮತ್ತು 7 ರನ್ ಗಳಿಸಿದರು.
    ಶ್ರೀಲಂಕಾ ಪರವಾಗಿ ಕಸುನ್ ರಜಿತ 3 ವಿಕೆಟ್ ಪಡೆದು ಮಿಂಚಿದರು. ದಿಲ್ಷುನ್ ಮಧುಶಂಕ, ಚಮಿಕಾ ಕರುಣರತ್ನೆ, ದಸುನ್ ಶನಕ ಮತ್ತು ಧನಂಜಯ ಡಿಸಿಲ್ವ ತಲಾ ಒಂದು ವಿಕೆಟ್ ಪಡೆದರು.

    ಟೀಂ ಇಂಡಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭದಲ್ಲೇ ಆವಿಷ್ಕಾ ಫರ್ನಾಂಡೋ (5), ಕುಶಾಲ್ ಮೆಂಡಿಸ್ (0) ಔಟ್ ಮಾಡುವ ಮೂಲಕ ಮೊಹಮ್ಮದ್ ಸಿರಾಜ್‌ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದರು.
    ಪಾಥುಮ್ ನಿಸಾಂಕ 72 ರನ್ ಗಳಿಸಿ ಹೋರಾಟ ನೀಡಿದರು, ಉಮ್ರಾನ್ ಮಲಿಕ್‌ ಅವರನ್ನು ಔಟ್ ಮಾಡಿದರು. ಶ್ರೀಲಂಕಾ ನಾಯಕ ದಸುನ್ ಶನಕ ಶತಕ ಗಳಿಸಿದರೂ ಕೂಡ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. 88 ಎಸೆತಗಳಲ್ಲಿ 12 ಬೌಂಡರಿ 3 ಸಿಕ್ಸರ್ ಸಹಿತ 108 ರನ್ ಗಳಿಸಿದರು.
    ವೇಗಿ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

    ಪಂದ್ಯದ ಸಂಕ್ಷಿಪ್ತ ಸ್ಕೋರ್‌:
    ಟೀಮ್ ಇಂಡಿಯಾ: 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 373 ರನ್‌ (ರೋಹಿತ್‌ ಶರ್ಮಾ 83, ಶುಭಮನ್ ಗಿಲ್ 70, ವಿರಾಟ್‌ ಕೊಹ್ಲಿ 113, ಶ್ರೇಯಸ್‌ ಅಯ್ಯರ್ 28, ಕೆ.ಎಲ್ ರಾಹುಲ್ 39, ಹಾರ್ದಿಕ್ ಪಾಂಡ್ಯ 14; ಕಸುನ್‌ ರಜಿತ 88ಕ್ಕೆ 3, ಧನಂಜಯ ಡಿ’ಸಿಲ್ವಾ 33ಕ್ಕೆ 1, ದಸುನ್ ಶನಕ 22ಕ್ಕೆ 1).

     

lokesh

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

47 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

58 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago