ಆರ್.ಟಿ.ವಿಠಲಮೂರ್ತಿ

ಆರ್.ಟಿ.ವಿಠಲಮೂರ್ತಿ ಅವರ ಬೆಂಗಳೂರು ಡೈರಿ ; ಸಂಪುಟ ಪುನರಚನೆಗೆ ಸಜ್ಜಾದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನರಚನೆಗೆ ತಯಾರಿ ಆರಂಭಿಸಿದ್ದಾರೆ. ಬಜೆಟ್ ಅಧಿವೇಶನ ಮುಗಿದ ನಂತರ ದಿಲ್ಲಿಗೆ ತೆರಳಲಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನರಚನೆಯ ಬೇಡಿಕೆಯನ್ನು ಮುಂದಿಡಲಿದ್ದಾರೆ. ಅಂದ ಹಾಗೆ ಸಂಪುಟ ಪುನರಚನೆಯ ವಿಷಯದಲ್ಲಿ ಸಿದ್ದರಾಮಯ್ಯ ಇದುವರೆಗೆ ಆಸಕ್ತರಾಗಿರಲಿಲ್ಲ ಎಂದಲ್ಲ. ಸರ್ಕಾರಕ್ಕೆ ಎರಡು ವರ್ಷ ಭರ್ತಿಯಾದ ಸಂದರ್ಭದಲ್ಲೇ ಅವರು ಸಂಪುಟ ಪುನರಚನೆಯ ಪ್ರಸ್ತಾಪವನ್ನು ವರಿಷ್ಠರ ಮುಂದಿಟ್ಟಿದ್ದರು.

ಆದರೆ ಅವರು ವರಿಷ್ಠರ ಮುಂದೆ ಬೇಡಿಕೆ ಇಡುವ ಕಾಲಕ್ಕೆ ಸರಿಯಾಗಿ ಅವರ ಆಪ್ತರು ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾಗಲಿ. ಅರ್ಥಾತ್, ಸರ್ಕಾರದ ಅರ್ಧ ಅವಧಿ ಮುಗಿಯಲಿ, ಒಂದು ವೇಳೆ ಹಾಗೆ ಮಾಡದೆ ಈಗಲೇ ಸಂಪುಟ ಪುನರಚನೆಗೆ ಕೈ ಹಾಕಿದರೆ ಮಂತ್ರಿಗಿರಿ ಕಳೆದುಕೊಳ್ಳುವವರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಚಿವ ಸಂಪುಟದಿಂದ ಹೊರಬಿದ್ದ ಸಚಿವರ ಕಾರ್ಯವೈಖರಿ ನೆಟ್ಟಗಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಇವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಿದರು ಎಂಬ ಸಂದೇಶ ರವಾನೆಯಾಗುತ್ತದೆ. ಆದರೆ ಹೀಗೆ ಮಾಡುವುದರಿಂದ ಸರ್ಕಾರಕ್ಕಿಂತ ಪಕ್ಷಕ್ಕೆ ಹೆಚ್ಚು ಡ್ಯಾಮೇಜ್ ಆಗುತ್ತದೆ ಎಂದು ಈ ಆಪ್ತರು ಹೇಳಿದಾಗ ಸಿದ್ದರಾಮಯ್ಯ ಅವರು ಒಪ್ಪಿಕೊಂಡರಂತೆ.

ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಖುದ್ದು ರಾಹುಲ್ ಗಾಂಧಿಯವರೇ ಸಂದೇಶ ರವಾನಿಸಿ ಈ ಮಂತ್ರಿಯನ್ನು ಕಿತ್ತು ಹಾಕಿ ಎಂದಾಗ ಕೂಡ ಸಿದ್ದರಾಮಯ್ಯ ಅವರ ಆಪ್ತರು ಹೇಳಿದ್ದು ಒಂದೇ ಮಾತು: ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾಗಲಿ, ಆನಂತರ ಸಂಪುಟದಿಂದ ಹಲವರನ್ನು ಕಿತ್ತು ಹಾಕುವಾಗ ಈ ಮಂತ್ರಿಗಳೂ ಸಂಪುಟದಿಂದ ಹೊರಬೀಳಲಿ. ಇಲ್ಲದಿದ್ದರೆ ವ್ಯತಿರಿಕ್ತ ಸಂದೇಶ ರವಾನೆಯಾಗುತ್ತದೆ.

ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಈ ಮಾತನ್ನು ಒಪ್ಪಿಕೊಂಡರು. ಆದರೆ ಯಾವಾಗ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾಯಿತೋ ಇದಾದ ನಂತರ ಅವರು ರಾಹುಲ್ ಗಾಂಧಿಯವರ ಜತೆ ಮಾತನಾಡಿ ಸಂಪುಟ ಪುನರಚನೆಗೆ ಒಪ್ಪಿಗೆ ಕೇಳಿದ್ದಾರೆ.

ಸಚಿವ ಸಂಪುಟವನ್ನು ಪುನರಚಿಸುವ ಅವರ ಪ್ರಸ್ತಾಪಕ್ಕೆ ರಾಹುಲ್ ಗಾಂಧಿಯವರು ಕೂಡ ಒಪ್ಪಿಗೆ ನೀಡಿದ್ದಾರೆ. ಯಾವಾಗ ರಾಹುಲ್ ಗಾಂಧಿಯವರು ಒಪ್ಪಿಗೆ ನೀಡಿದರೋ ಇದಾದ ನಂತರ ಸಿದ್ದರಾಮಯ್ಯನವರು ಕರ್ನಾಟಕಕ್ಕೆ ಮರಳಿ ಸಂಪುಟ ಪುನರಚನೆಗೆ ಅಗತ್ಯವಾದ ಕಸರತ್ತನ್ನು ಆರಂಭಿಸಿದ್ದಾರೆ. ಆದರೆ ಯಾವಾಗ ಅವರು ಕಸರತ್ತು ಆರಂಭಿಸಿದರೋ ಇದಾದ ನಂತರ ಇದ್ದಕ್ಕಿದ್ದಂತೆ ಅವರಿಗೆ ರಾಹುಲ್ ಗಾಂಧಿಯವರಿಂದ ಸಂದೇಶ ಬಂದಿದೆ. ಸಂಪುಟ ಪುನರಚನೆ ಕಾರ್ಯವನ್ನು ಕೆಲ ಕಾಲ ಮುಂದೂಡಿ ಮುಂದಿನ ಸೂಚನೆ ಬರುವವರೆಗೆ ಸಂಪುಟ ಪುನರಚನೆ ಬೇಡ ಎಂಬುದು ಅವರ ಸಂದೇಶ. ಅಂದ ಹಾಗೆ ರಾಹುಲ್ ಗಾಂಧಿಯವರಿಂದ ಇಂತಹ ಸಂದೇಶ ಬರಲು ಮುಖ್ಯ ಕಾರಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬುದು ರಹಸ್ಯವೇನಲ್ಲ. ಕಾರಣ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದ ನಂತರ ಎರಡನೇ ಕಂತಿನಲ್ಲಿ ತಾವು ಸಿಎಂ ಆಗಬೇಕಿತ್ತು. ಆದರೆ ಸಿದ್ದರಾಮಯ್ಯ ಅವರು ಇನ್ನೂ ಸಿಎಂ ಹುದ್ದೆ ಬಿಟ್ಟುಕೊಡದೆ ಇರುವುದರಿಂದ ಸಂಪುಟ ಪುನರಚನೆಗೂ ಅವಕಾಶ ಕೊಡಬೇಡಿ. ಹಾಗೊಂದು ವೇಳೆ ಕೊಟ್ಟರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಡಿ.ಕೆ.ಶಿವಕುಮಾರ್ ಅವರ ಮಾತು.

ಗಮನಿಸಬೇಕಾದ ಸಂಗತಿ ಎಂದರೆ ರಾಹುಲ್ ಗಾಂಧಿಯವರು ಅವತ್ತು ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಮನ್ನಣೆ ನೀಡಿದರು. ಅದಕ್ಕಿಂತ ಮುಖ್ಯವಾಗಿ ಅವರು ಇಂತಹ ಗೌರವ ನೀಡುವಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ರಣದೀಪ್ ಸಿಂಗ್ ಸುರ್ಜೇವಾಲ ಅವರು ನೋಡಿಕೊಂಡರು.

ಮೂಲಗಳ ಪ್ರಕಾರ ಖರ್ಗೆಯವರಿಗಾಗಲಿ, ರಣದೀಪ್ ಸಿಂಗ್ ಸುರ್ಜೇವಾಲರವರಿಗೇ ಆಗಲಿ, ಡಿ.ಕೆ.ಶಿವಕುಮಾರ್ ಅವರನ್ನು ದುರ್ಬಲಗೊಳಿಸುವುದು ಬೇಕಿರಲಿಲ್ಲ. ಏಕೆಂದರೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರು ವರ್ಚಸ್ಸು ಹೇಗೆ ಕಾರಣವೋ ಅದೇ ರೀತಿ ಡಿ.ಕೆ.ಶಿವಕುಮಾರ್ಅವರ ರಣತಂತ್ರವೂ ಕಾರಣ ಎಂಬುದು ಈ ಇಬ್ಬರೂ ನಾಯಕರ ಲೆಕ್ಕಾಚಾರ.

ಪರಿಣಾಮ ರಾಜ್ಯ ಸಚಿವ ಸಂಪುಟ ಪುನರಚನೆ ಕಾರ್ಯ ಮುಂದಕ್ಕೆ ಹೋಯಿತು. ಇದಾದ ನಂತರ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಮೇಲೆ ತೀರಾ ಒತ್ತಡ ಹೇರಲಿಲ್ಲವಾದರೂ ಈಗ ಸುಮ್ಮನಿರಲು ಅವರು ತಯಾರಿಲ್ಲ.
ಏಕೆಂದರೆ ಸಂಪುಟ ಪುನರಚನೆ ಕಾರ್ಯ ಮುಂದಕ್ಕೆ ಹೋದಾಗಲೆಲ್ಲ ಡಿ.ಕೆ.ಶಿವಕುಮಾರ್ಅವರ ಹೆಸರು ಪ್ರಸ್ತಾಪವಾಗುತ್ತಿದೆ. ತಾವು ಸಿಎಂ ಆಗುವವರೆಗೆ ಮಂತ್ರಿ ಮಂಡಲ ಪುನರಚನೆಯಾಗಬಾರದು ಎಂಬ ಅವರ ವಾದದ ಮೇಲೆ ಕಣ್ಣಿದೆ.

ಹೀಗಾಗಿ ಈ ಬಾರಿಯ ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಸಿದ್ದರಾಮಯ್ಯ ಅವರು ದಿಲ್ಲಿಗೆ ತೆರಳಲಿದ್ದಾರಲ್ಲದೆ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸಂಪುಟ ಪುನರಚನೆಗೆ ಅನುಮತಿ ನೀಡಲೇಬೇಕು ಹಕ್ಕೊತ್ತಾಯ ಮಂಡಿಸಲಿದ್ದಾರೆ.

ಸಂಪುಟ ಪುನರಚನೆಯನ್ನು ಪದೇ ಪದೇ ಮುಂದೂಡುತ್ತಿದ್ದರೆ ಅದರಿಂದ ರವಾನೆಯಾಗುವ ಸಂದೇಶ ತಮ್ಮ ನಾಯಕತ್ವದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂಬುದು ಅವರ ಯೋಚನೆ. ಹೀಗಾಗಿ ಈ ಬಾರಿ ದಿಲ್ಲಿಗೆ ಹೋದಾಗ ಹಿಂದೆಂದಿಗಿಂತ ಪ್ರಬಲವಾಗಿ ಅವರು ಸಂಪುಟ ಪುನರಚನೆಯ ಪ್ರಸ್ತಾಪವನ್ನು ಮಂಡಿಸಲಿದ್ದಾರೆ.

ಅಂದ ಹಾಗೆ ಹೀಗೆ ಸಂಪುಟ ಪುನರಚನೆಗೆ ಸಿದ್ದರಾಮಯ್ಯನವರು ಅನುಮತಿ ನೀಡಿದರೂ ಮೇ ಮೊದಲ ವಾರದವರೆಗೆ ಸಂಪುಟ ಪುನರಚನೆ ಮಾಡುವುದು ಕಷ್ಟ. ಏಕೆಂದರೆ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ಘೋಷಣೆಯಾಗಿರುವುದರಿಂದ ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂಪುಟ ಪುನರಚನೆಯಾಗುವುದು ಕಷ್ಟ. ಆದರೆ ಮೇ20ರಂದುಸರ್ಕಾರಕ್ಕೆ ಮೂರು ವರ್ಷ ಭರ್ತಿಯಾಗಲಿದ್ದು, ಈಸಂದರ್ಭದಲ್ಲಿ ಸಂಪುಟಪುನರಚನೆಮಾಡಲುಸಿದ್ದರಾಮಯ್ಯನವರಿಗೆ ಅನುಮತಿ ನೀಡುವ ಸಾಧ್ಯತೆ ಜಾಸ್ತಿ. ಹಾಗೊಂದು ವೇಳೆ ಸಂಪುಟ ಪುನರಚನೆಗೆ ಅನುಮತಿ ಸಿಗದೇ ಹೋದರೆ ಸಿದ್ದರಾಮಯ್ಯ ಅವರು ಅಸಮಾಧಾನಗೊಳ್ಳುವುದು ಸ್ಪಷ್ಟ.

ಗಮನಿಸಬೇಕಾದ ಸಂಗತಿ ಎಂದರೆ ಡಿಕೆಶಿ ಕ್ಯಾಂಪಿನ ಪ್ರಮುಖರು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ವರಿಷ್ಠರು ಹೊಸ ಸೂತ್ರ ರಚಿಸಿದ್ದು, ಅದರ ಪ್ರಕಾರ ಸಿದ್ದರಾಮಯ್ಯ ಮೂರು ವರ್ಷ ಸಿಎಂ ಆಗಿರಲಿ, ನಂತರದ ಎರಡು ವರ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಸಂದೇಶವನ್ನು ರವಾನಿಸಲಿದ್ದಾರೆ.

ಅಂದ ಹಾಗೆ ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾದ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೂ ಅವರು ಸುಮ್ಮನೆ ಕೂರುವಂತೆ ಹೈಕಮಾಂಡ್ ಮಾಡುವುದಿಲ್ಲ. ಬದಲಿಗೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದಿನಂತೆ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರೇ ನೇತೃತ್ವ ವಹಿಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲಿ, ಆಗ ಯಥಾ ಪ್ರಕಾರ ಮತ್ತೊಮ್ಮೆ ಎರಡೂವರೆ ವರ್ಷಗಳ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿ, ತದ ನಂತರದ ಎರಡೂವರೆ ವರ್ಷಗಳ ಅವಧಿಗೆ ಡಿಕೆಶಿ ಸಿಎಂ ಆಗಲಿ ಎಂಬ ಪ್ರಪೋಸಲ್ಲನ್ನು ಮಂಡಿಸಲಿದ್ದಾರೆ ಎಂದು ಪಿಸುಗುಟ್ಟುತ್ತಿದ್ದಾರೆ.

ಆದರೆ ಅವರು ಹೀಗೆ ಏನೇ ಪಿಸುಗುಟ್ಟಲಿ, ಸಿದ್ದರಾಮಯ್ಯನವರು ಮಾತ್ರ ತಮಗೆ ಅಡ್ಡಿಯಾಗಿರುವ ಮಾತ್ರ ತಮಗೆ ಅಡ್ಡಿಯಾಗಿರುವ ಡಿಕೆಶಿಯನ್ನು ಬದಿಗೆ ಸರಿಸಲು ಸಜ್ಜಾಗಿರುವುದು ಮಾತ್ರ ನಿಜ. ಬಜೆಟ್ ಅಧಿವೇಶನದ ನಂತರ ದಿಲ್ಲಿಗೆ ಹೋಗಲಿರುವ ಅವರು ಈ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ ಎಂಬುದು ಅವರ ಪಾಳೆಯದ ಮಾತು. ಮುಂದೇನಾಗುತ್ತದೋ ಕಾದು ನೋಡಬೇಕು.
Ph: 9448090990 Email: rtv1967@gmail.com

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮಾಂದಲಪಟ್ಟಿಯಲ್ಲಿ ಮುಂದುವರಿದ ರಸ್ತೆ ದುರಸ್ತಿ ಕಾರ್ಯ

ಬೃಹತ್ ಯಂತ್ರ ಬಳಸದೆ ಕೆಲಸ; ಇನ್ನೂ 10-15 ದಿನ ಪ್ರವಾಸಿಗರ ಪ್ರವೇಶಕ್ಕಿಲ್ಲ ಅವಕಾಶ ನವೀನ್ ಡಿಸೋಜ ಮಡಿಕೇರಿ : ಕೊಡಗಿನ…

7 mins ago

ಜಿಲ್ಲೆಯಲ್ಲಿ ಜಾನುವಾರುಗಳ ಮೇವು-ನೀರಿಗಿಲ್ಲ ಬರ!

ಮುಂದಿನ 34 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು; ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯೂ ದೂರ ಕೆ.ಬಿ.ರಮೇಶ ನಾಯಕ ಮೈಸೂರು :…

25 mins ago

ಮಾಗುಡಿಲು ಗ್ರಾಮಕ್ಕೆ ಸಂಜೆಯ ನಂತರ ಬಸ್‌ ಇಲ್ಲದೆ ತೊಂದರೆ

ಸರಗೂರು ಕಡೆಯಿಂದ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ ದಾಸೇಗೌಡ ಸರಗೂರು : ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಪ್ರತಿದಿನ ಕೆಎಸ್ಆರ್‌ಟಿಸಿ…

1 hour ago

ಬಾವಿ ನೀರಿಗಾಗಿ ಅನಸೂಯ ಅವಿಸ್ಮರಣೀಯ ಹೋರಾಟ

ಆನಂದ್ ತೇಲ್ತುಂಬ್ಡೆ ಅಮ್ಮನೂ ಹೋರಾಟಗಾರರು! ವಿ.ಎಲ್.ನರಸಿಂಹಮೂರ್ತಿ ಹೆಸರಾಂತ ಚಿಂತಕ, ಮಾನವ ಮಾನವ ಹಕ್ಕುಗಳ 'ಹೋರಾಟ ಗಾರ ಡಾ.ಆನಂದ್ ತೇಲ್ತುಂಬ್ಡೆಯವರ ತಾಯಿ…

3 hours ago

ಆಂದೋಲನ ಸಂಪಾದಕೀಯ | ರೈಲ್ವೆ ಇಲಾಖೆಗೆ ಕನ್ನಡ, ಕನ್ನಡಿಗರ ಬಗ್ಗೆ ತಾತ್ಸಾರ ಸಲ್ಲದು

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬುದು ಇಂದು ನಿನ್ನೆಯ ಆರೋಪವಲ್ಲ. ಮೊದಲಿನಿಂದಲೂ ಈ ಆರೋಪ ಇದೆ. ರೈಲ್ವೆಯಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ…

3 hours ago

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ರಾಮನಗರ : ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ…

4 hours ago