ಆರ್.ಟಿ.ವಿಠಲಮೂರ್ತಿ

ಜನಸೇವೆ ಮಾಡುವ ಆತ್ಮವಿಶ್ವಾಸ ಕಳೆದುಕೊಂಡ ರಾಜ್ಯ ರಾಜಕಾರಣ

ಬೆಂಗಳೂರು ಡೈರಿ
ಆರ್.ಟಿ.ವಿಠಲಮೂರ್ತಿ

ಸಜ್ಜನ ನಾಯಕ ಎಂ.ಪಿ.ಪ್ರಕಾಶ್ ಅವರು ಜನತಾ ದಳ ಸರ್ಕಾರದಲ್ಲಿದ್ದಾಗ ನಡೆದ ಘಟನೆ ಇದು. ಆ ಸಂದರ್ಭದಲ್ಲಿ ಕುಮಾರ ಪಾರ್ಕ್ ಹಿಂಭಾಗದಲ್ಲಿದ್ದ ಸರ್ಕಾರಿ ಬಂಗಲೆಯಲ್ಲಿದ್ದ ಪ್ರಕಾಶ್ ಅವರನ್ನು ಶಿವಮೊಗ್ಗದ ಒಂದು ನಿಯೋಗ ಭೇಟಿ ಮಾಡಿತು.

ಹೀಗೆ ತಮ್ಮನ್ನು ಭೇಟಿ ಮಾಡಿದ ನಿಯೋಗದ ಪ್ರಮುಖರ ಜತೆ ಚರ್ಚೆಗಿಳಿದ ಪ್ರಕಾಶ್ ಅವರ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ನಿಯೋಗದ ಮುಖ್ಯಸ್ಥರಾಗಿದ್ದವರು: ‘ಸಾರ್, ನಾವು ದಶಕಗಳ ಕಾಲದಿಂದ ಜಿಲ್ಲೆಯಲ್ಲಿ ಜನತಾ ದಳ ಪಕ್ಷವನ್ನು ಕಟ್ಟಿದವರು. ಆದರೆ ಜಿಲ್ಲೆಯಲ್ಲಿ ನಮ್ಮ ಹಿತಾಸಕ್ತಿಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ಅದನ್ನು ಸರಿಪಡಿಸಬೇಕು’ ಎಂದು ಕೋರಿದರು.

‘ಯಾವ ವಿಷಯ ನಿಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ?’ ಎಂದು ಪ್ರಕಾಶ್ ಅವರು ಕೇಳಿದರೆ, ನಿಯೋಗದ ಮುಖ್ಯಸ್ಥರಾಗಿದ್ದವರು ಮಾಜಿ ಮುಖ್ಯಮಂತ್ರಿ ಸಾರಕೊಪ್ಪ ಬಂಗಾರಪ್ಪ ಅವರ ಬಗ್ಗೆ ದೂರ ತೊಡಗಿದರು.

‘ಸಾರ್, ಇವತ್ತು ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಸೊರಬ ಕ್ಷೇತ್ರದಲ್ಲಿ ನಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಳ್ಳಲು ಆಗುತ್ತಿಲ್ಲ. ಏನೇ ಪ್ರಯತ್ನಿಸಿದರೂ ಬಂಗಾರಪ್ಪ ನಮಗೆ ವಿರೋಧ ಮಾಡುತ್ತಾರೆ. ಸರ್ಕಾರವೂ ಅವರು ಹೇಳಿದಂತೆ ಕೇಳುತ್ತಿದೆ. ಹೀಗೆ ನಮ್ಮ ಸರ್ಕಾರದ ಅವಧಿಯಲ್ಲೇ ನಮ್ಮ ಕೆಲಸವಾಗದಿದ್ದರೆ ನಾವು ಪಕ್ಷ ಸಂಘಟಿಸೋದು ಹೇಗೆ?’ ಎಂದು ಪ್ರಶ್ನಿಸಿದರು.

ಅವರು ಹೇಳಿದ್ದನ್ನು ಸಾವಧಾನವಾಗಿ ಕೇಳಿಸಿಕೊಂಡ ಎಂ.ಪಿ.ಪ್ರಕಾಶ್ ಅವರು: ‘ಯೇ ತಮ್ಮಾ, ನಿಮಗೆಲ್ಲ ಒಂದು ವಿಷಯ ಗೊತ್ತಿರಲಿ. ನಾವು ಜನತಾ ದಳದವರೋ, ಕಾಂಗ್ರೆಸ್‌ನವರೋ ಯಾರೇ ಸರ್ಕಾರ ರಚಿಸಲಿ. ಆದರೆ ಎಲ್ಲರೂ ಸೇರಿ ಪ್ರಜಾಪ್ರಭುತ್ವದ ರಥ ಎಳೆಯುತ್ತಿರುತ್ತೇವೆ. ಇವತ್ತು ಈ ರಥಕ್ಕೆ ಸರ್ಕಾರ ಒಂದು ಚಕ್ರವಾದರೆ ಪ್ರತಿಪಕ್ಷಗಳು ಒಂದು ಚಕ್ರ. ಈ ಎರಡೂ ಚಕ್ರಗಳು ಸಮಾನಾಂತರವಾಗಿ ಚಲಿಸಿದರೆ ಮಾತ್ರ ಪ್ರಜಾಪ್ರಭುತ್ವದ ರಥ ಸರಿಯಾಗಿ ನಡೆಯುತ್ತದೆ. ಅಧಿಕಾರ ಇದೆ ಎಂದು ನಾವು ಒಂದು ಚಕ್ರಕ್ಕೆ ಜಾಸ್ತಿ ಕೀಲೆಣ್ಣೆ ಹಾಕಿ, ಮತ್ತೊಂದು ಚಕ್ರವನ್ನು ನಿರ್ಲಕ್ಷಿಸಿದರೆ ರಥದ ಓಟಕ್ಕೆ ಅಡ್ಡಿಯಾಗುತ್ತದೆ. ಇದನ್ನು ನಿಮಗೇಕೆ ಹೇಳಿದೆ ಎಂದರೆ ಇವತ್ತು ರಾಜಕೀಯ ಪಕ್ಷಗಳ ನಾಯಕರು ಅಂತ ಯಾರಿದ್ದಾರೆ ಇವರ ಕ್ಷೇತ್ರಗಳ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ನೀವೇನೇ ಹೇಳಿದರೂ ಅವರ ಕ್ಷೇತ್ರಕ್ಕೆ ಬಂಗಾರಪ್ಪಾವರೇ ಸುಪ್ರೀಂ. ಅಲ್ಲಿ ಅವರೇನು ಹೇಳುತ್ತಾರೋ ಅದನ್ನು ಸರ್ಕಾರ ಮಾಡಿಕೊಡುತ್ತದೆ. ಅದಕ್ಕೆ ಯಾವ ಅಡ್ಡಿಯನ್ನೂ ಮಾಡುವುದಿಲ್ಲ. ಈ ಸತ್ಯ ನಿಮಗೆ ಗೊತ್ತಿಲ್ಲದೆ ನೀವಿಲ್ಲಿ ದೂರು ತಂದಿದ್ದೀರಿ. ಇವತ್ತು ನಿಮಗೆ ಅರ್ಥವಾಗಿರಬೇಕಾದದ್ದು ಎಂದರೆ ನಿಮ್ಮವರ ಹಿತಾಸಕ್ತಿ ಕಾಪಾಡಲು ಬೇರೆ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂಬುದೇ ಹೊರತು ವಿರೋಧ ಪಕ್ಷಗಳ ನಾಯಕರ ಮೇಲೆ ದೂರು ತಂದರೆ ಸರ್ಕಾರ ಅದನ್ನು ಕೇಳುವುದಿಲ್ಲ ಎಂಬುದು’ ಎಂದರು.

ಸಚಿವ ಪ್ರಕಾಶ್ ಅವರಾಡಿದ ಈ ಮಾತುಗಳನ್ನು ಕೇಳಿದ ನಿಯೋಗದ ಮುಖ್ಯಸ್ಥ ಮಾತ್ರವಲ್ಲ, ಅಲ್ಲಿದ್ದವರೆಲ್ಲ ಬೆಕ್ಕಸಬೆರಗಾದರು.

ಇವತ್ತು ಈ ಬೆಳವಣಿಗೆಯನ್ನು ಗಮನಿಸಿದರೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಎಂಬ ರಥ ಏಕೆ ಡೋಲಾಯಮಾನ ಪರಿಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟವಾಗಿ ಬಿಡುತ್ತದೆ.

ಅರ್ಥಾತ್, ಇವತ್ತು ಏಕಕಾಲಕ್ಕೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳೆಂಬ ಪ್ರಜಾಪ್ರಭುತ್ವದ ಚಕ್ರಗಳು ಸಮಾನಾಂತರವಾಗಿ ಚಲಿಸುವ ಶಕ್ತಿಯನ್ನು ಕಳೆದುಕೊಂಡಿವೆ. ಇದಕ್ಕೆ ಪರಸ್ಪರರ ಮೇಲಿನ ಅಪನಂಬಿಕೆಯೇ ಮುಖ್ಯ ಕಾರಣ. ಪರಿಣಾಮ ಮುಡಾ ಪ್ರಕರಣವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸುತ್ತಿವೆ. ಮತ್ತದೇ ಕಾಲಕ್ಕೆ ವಿಧಾನಸಭೆಯ ವಿರೋಧ ಪಕದ ನಾಯಕ ಆರ್.ಅಶೋಕ್ ಸೇರಿದಂತೆ ಹಲ ವಿಪಕ್ಷ ನಾಯಕರು ಹಗರಣಗಳ ಆರೋಪ ಹೊತ್ತುಕೊಂಡಿದ್ದಾರೆ.

ನೋಡುತ್ತಾ ಹೋದರೆ ಆಡಳಿತ ಪಕ್ಷದ ಹಲವು ನಾಯಕರ ಮೇಲೆ ಮತ್ತು ವಿರೋಧ ಪಕ್ಷಗಳ ಹಲವು ನಾಯಕರ ಮೇಲೆ ಆರೋಪಗಳು ಕೇಳಿ ಬರುತ್ತಿವೆ. ಅಂದ ಹಾಗೆ ತಪ್ಪುಗಳಾದರೆ ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸಹಜ ಕ್ರಮ. ಆದರೆ ಇವತ್ತು ಪರಿಸ್ಥಿತಿ ಅಷ್ಟಕ್ಕೆ ನಿಂತಿಲ್ಲ. ಬದಲಿಗೆ ಒಬ್ಬರನ್ನು ಒಬ್ಬರು ರಾಜಕೀಯವಾಗಿ ಮುಗಿಸಲು ಹವಣಿಸುತ್ತಿದ್ದಾರೆ. ಇದರ ಪರಿಣಾಮವೇನಾಗಿದೆ ಎಂದರೆ ಸರ್ಕಾರದ ಕೆಲಸಗಳೂ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಅದು ಪರಿಣಾಮಕಾರಿಯಾಗಿ ನಡೆಯಲು ಪ್ರತಿಪಕ್ಷಗಳೂ ಬಿಡುತ್ತಿಲ್ಲ.

ವಸ್ತುಸ್ಥಿತಿ ಎಂದರೆ ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿರುವವರೆಗೆ ಕರ್ನಾಟಕದ ರಾಜಕಾರಣ ಒಂದು ಹದವಾದ ನೆಲದ ಮೇಲೆ ಓಡುತ್ತಿತ್ತು. ನಿಜಲಿಂಗಪ್ಪ, ಬಿ.ಡಿ.ಜತ್ತಿ ಸೇರಿದಂತೆ ಹಲವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರತಿಪಕ್ಷದ ಸಾಲಿನಲ್ಲಿ ಕುಳಿತಿದ್ದ ಶಾಂತವೇರಿ ಗೋಪಾಲಗೌಡರಂತಹ ನಾಯಕ ಮಾತನಾಡಿದರೆ, ಸರ್ಕಾರ ಅದನ್ನು ಗಂಭೀರವಾಗಿ ಆಲಿಸುತ್ತಿತ್ತು. ಅಷ್ಟೇ ಅಲ್ಲ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅವರು ಆಡಿದ ಮಾತುಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗುತ್ತಿತು. ಒಬ್ಬ ಶಾಂತವೇರಿ ಗೋಪಾಲಗೌಡರು ಅಂತಲ್ಲ, ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತಿದ್ದವರ ಮಾತುಗಳನ್ನು ಆಲಿಸಲು ವಿಶೇಷ ಆದ್ಯತೆ ನೀಡುತ್ತಿದ್ದ ಸರ್ಕಾರಗಳು ಅದಕ್ಕೆ ಪರಿಹಾರವನ್ನು ಕಂಡು ಹಿಡಿಯುವ ಯತ್ನವನ್ನೂ ಮಾಡುತ್ತಿದ್ದವು.

ಇದೇ ರೀತಿ ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತಿದ್ದವರೂ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ಕೊಟ್ಟುಕೊಳ್ಳುವುದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಹಿತಾಸಕ್ತಿಯನ್ನೇ ಮುಖ್ಯವಾಗಿಟ್ಟುಕೊಂಡಿರುತ್ತಿದ್ದರು. ಆದರೆ ಇವತ್ತೇನಾಗಿದೆ? ಆಳುವ ಪಕ್ಷದ ಸಾಲಿನಲ್ಲೇ ಇರಲಿ, ಪ್ರತಿಪಕ್ಷಗಳ ಸಾಲಿನಲ್ಲೇ ಇರಲಿ, ಜನರಿಗಿಂತ ಮುಖ್ಯವಾಗಿ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಟೊಂಕ ಕಟ್ಟಿ ನಿಂತಿರುತ್ತಾರೆ. ಹೀಗಾಗಿ ಇವತ್ತು ಪ್ರಜಾತಂತ್ರದ ರಥ ಎಳೆಯಲು ಪೂರಕವಾದ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಲ್ಲಿ ನಿಜವಾದ ಜನಸೇವಕರಿಗಿಂತ ಧನಸೇವಕರ ಪಡೆ ರಾರಾಜಿಸುತ್ತಿದೆ.ಹೀಗೆ ಜನಸೇವೆಗಿಂತ ಧನಸೇವೆಯೇ ಮುಖ್ಯವಾದಾಗ ವಿಧಾನಸಭೆಯಲ್ಲಾಗಲೀ, ವಿಧಾನಪರಿಷತ್ತಿನಲ್ಲಾಗಲೀ ಜನರ ಸಮಸ್ಯೆಗಳ ಬಗ್ಗೆ ಮೌಲಿಕ ಚರ್ಚೆ ನಡೆಯುವುದಾದರೂ ಹೇಗೆ?

ಈ ಅಂಶವೇ ಇವತ್ತು ಕರ್ನಾಟಕದ ರಾಜಕಾರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದರಿಂದ ಸರ್ಕಾರದ ಸಾಲಿನಲ್ಲಿರುವವರಿಗೆ ಮತ್ತು ಪ್ರತಿಪಕ್ಷಗಳ ಸಾಲಿನಲ್ಲಿರುವವರಿಗೆ ಪರಸ್ಪರ ಗೌರವ, ನಂಬಿಕೆ ಎಂಬುದು ಉಳಿದಿಲ್ಲ. ಪರಿಣಾಮ ಒಬ್ಬರು ಮಾಡುವ ಕೆಲಸ ಮತ್ತೊಬ್ಬರಿಗೆ ಅಪರಾಧವಾಗಿ ಕಾಣುತ್ತಾ, ಒಬ್ಬರ ಮೇಲೊಬ್ಬರು ದೋಷಾರೋಪ ಹೊರಿಸುಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ.

ಅರ್ಥಾತ್, ಪ್ರಜಾಪ್ರಭುತ್ವದ ರಥವನ್ನು ಎಳೆಯುತ್ತಿರುವ ಎರಡೂ ಚಕ್ರಗಳಿಗೆ ತಾಳಮೇಳ ಹೊಂದಿಕೆಯಾಗುತ್ತಿಲ್ಲ. ಪರಿಣಾಮ ಕರ್ನಾಟಕದ ರಾಜಕಾರಣ ಎಂಬುದು ಅಪನಂಬಿಕೆ, ಅಗೌರವಗಳಿಂದ ನರಳುತ್ತಿದೆಯಲ್ಲದೆ ಜನಸೇವೆ ಮಾಡುವ ಆತ್ಮವಿಶ್ವಾಸವನ್ನೇ ಕಳೆದುಕೊಂಡು ನಿಶ್ಯಕ್ತವಾಗಿದೆ. ಇದಕ್ಕಿಂತ ದುರಂತ ಬೇರೇನಿದೆ?

ಇವತ್ತು ಏಕಕಾಲಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳೆಂಬ ಪ್ರಜಾಪ್ರಭುತ್ವದ ಚಕ್ರಗಳು ಸಮಾನಾಂತರವಾಗಿ ಚಲಿಸುವ ಶಕ್ತಿಯನ್ನು ಕಳೆದುಕೊಂಡಿವೆ. ಇದಕ್ಕೆ ಪರಸ್ಪರರ ಮೇಲಿನ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸುತ್ತಿವೆ. ಮತ್ತದೇ ಕಾಲಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲ ವಿಪಕ್ಷ ನಾಯಕರು ಹಗರಣಗಳ ಆರೋಪ ಹೊತ್ತುಕೊಂಡಿದ್ದಾರೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

27 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

1 hour ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

4 hours ago