ಭಾರ್ವಾಡ ಸಮುದಾಯದ ಸುಮಾರು 200 ಮಕ್ಕಳಿಗೆ ಶಿಕ್ಷಣ ಸೌಲಭ್ಯ
ಮಹಾರಾಷ್ಟ್ರದ ವಿದರ್ಭಾದ ಭಾರ್ವಾಡ ಎಂಬುದು ಒಂದು ಅರೆ ಅಲೆಮಾರಿ ಸಮುದಾಯ. ಇವರು ಪ್ರತಿವರ್ಷ ಕಾಡು ಅಥವಾ ಮೇವು ಸಿಗುವ ಹಸಿರು ಸ್ಥಳಗಳಿಗೆ ತಮ್ಮ ಜಾನುವಾರುಗಳನ್ನು ಮೇಯಿಸಲು ತಿಂಗಳುಗಳ ಕಾಲ ವಲಸೆ ಹೋಗುತ್ತಾರೆ. ಸಾಮಾನ್ಯವಾಗಿ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ವಲಸೆ ಹೋಗಿ ಜೂನ್ ತಿಂಗಳಲ್ಲಿ ಮೊದಲ ಮಳೆ ಬೀಳುವಾಗ ವಾಪಸ್ ಬರುತ್ತಾರೆ. ಇದು ಸಹಜವಾಗಿಯೇ ಭಾರ್ವಾಡ ಸಮುದಾಯದ ಮಕ್ಕಳ ಶಾಲಾ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ದೀರ್ಘ ಕಾಲ ಶಾಲೆಗೆ ಗೈರಾಗುವ ಭಾರ್ವಾಡ ಮಕ್ಕಳಲ್ಲಿ ಅನೇಕರು ಮುಂದೆ ಶಾಲಾ ಕಲಿಕೆಯನ್ನು ಶಾಶ್ವತವಾಗಿ ನಿಲ್ಲಿಸುತ್ತಾರೆ. ಈಗಿನ ಆಧುನಿಕ ಕಾಲದಲ್ಲೂ ಈ ದೇಶದಲ್ಲಿ ಹೀಗೆ ಜಾನುವಾರುಗಳನು ಮೇಯಿಸಲು ವಲಸೆ ಹೋಗುವ ಅನೇಕ ಜನ ಸಮುದಾಯಗಳಿವೆ. ಈ ಕಾರಣಕ್ಕಾಗಿ ಇಂತಹ ಸಮುದಾಯಗಳ ಮಕ್ಕಳು ಅರೆಬರೆ ಶಾಲಾ ಶಿಕ್ಷಣ ಪಡೆಯುತ್ತಾರೆ ಅಥವಾ ಸಂಪೂರ್ಣವಾಗಿ ಸೂಕ್ತ ವಿದ್ಯೆಯಿಂದ ವಂಚಿತವಾಗುತ್ತಾರೆ.
2019ರಲ್ಲಿ ರಾಮಾಜಿ ಜೋಗ್ರಾಣ ಎಂಬ ಭಾರ್ವಾಡ ಸಮುದಾಯದ ಹಿರಿಯ ವ್ಯಕ್ತಿಯೊಬ್ಬರು ಗಣೇಶ್ ಬಿರಾಜ್ದಾರ್ ಎಂಬವರನ್ನು ಭೇಟಿಯಾಗಿ ತಮ್ಮ ಸಮುದಾಯದ ಮಕ್ಕಳ ಶಾಲಾ ಶಿಕ್ಷಣ ಎದುರಿಸುತ್ತಿರುವ ತೊಂದರೆಯನ್ನು ಹೇಳಿಕೊಂಡು, ಅದರ ಪರಿಹಾರಕ್ಕಾಗಿ ಕೇಳಿಕೊಂಡರು. ಗಣೇಶ್ ಬಿರಾಜ್ದಾ ನಾಗ್ಪುರ ಮೂಲದ ‘ಲರ್ನಿಂಗ್ ಕಂಪ್ಯಾನಿಯನ್ಸ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕರು. ಅವರು ರಾಮಾಜಿಯ ಕೋರಿಕೆಯನ್ನು ಒಪ್ಪಿ, ಲರ್ನಿಂಗ್ ಕಂಪ್ಯಾನಿಯನ್ಸ್’ನ ಸ್ವಯಂಸೇವಕರಿಂದ ಭಾರ್ವಾಡ ಸಮುದಾಯದ ಮಕ್ಕಳ ಶಾಲಾ ಕಲಿಕೆಗಾಗಿ ವಿಶೇಷ ರೀತಿಯ ಒಂದು ‘ಕರಿಕುಲಮ್’ ತಯಾರಿಸಿದರು. ಅದರ ಪ್ರಕಾರ, ಸಾಮಾನ್ಯವಾಗಿ ಶಾಲೆಗಳಲ್ಲಿ ಕಲಿಸುವ ಹಲವು ವಿಷಯಗಳ ಬದಲು ಭಾಷೆ ಮತ್ತು ಗಣಿತ ಎರಡು ವಿಷಯಗಳಿಗೆ ಮಾತ್ರವೇ ಒತ್ತು ಕೊಟ್ಟು ಕಲಿಸುವ ಕ್ರಮವೊಂದನ್ನು ರೂಪಿಸಿದರು.
ಲರ್ನಿಂಗ್ ಕಂಪ್ಯಾನಿಯನ್ಸ್’ ಭಾರ್ವಾಡ ಮಕ್ಕಳಿಗಾಗಿ ಅಸೋಲಾ, ಸೊಣ್ಣಾಂಬ್, ತಾಂತಾನ್, ಬೊತಾಲಿ ಮತ್ತು ಚಕ್ರಿಘಾಟ್ ಎಂಬಲ್ಲಿ ಐದು ಕಲಿಕಾ ಕೇಂದ್ರಗಳನ್ನು ತೆರೆಯಿತು. ಈ ಐದು ಕೇಂದ್ರಗಳಲ್ಲಿ ಭಾರ್ವಾಡ ಸಮುದಾಯದ ಸುಮಾರು 200 ಮಕ್ಕಳು ಕಲಿಯುತ್ತಾರೆ.
ಶಾಲೆಗೆ ಹೋಗದ ಚಿಕ್ಕ ಪ್ರಾಯದ ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೆ ತಮಗೆ ಇವುಗಳಲ್ಲಿ ಹತ್ತಿರದಲ್ಲಿರುವ ಯಾವುದಾದರೂ ಕಲಿಕಾ ಕೇಂದ್ರಕ್ಕೆ ಹೋಗಿ ಆಡುತ್ತ, ನಲಿಯುತ್ತ ಕಲಿಯುತ್ತಾರೆ. ಶಾಲೆಗಳಿಗೆ ಹೋಗುವ ದೊಡ್ಡ ಮಕ್ಕಳು ಸಂಜೆ ಶಾಲೆ ಬಿಟ್ಟ ನಂತರ ಈ ಕೇಂದ್ರಗಳಿಗೆ ಬರುತ್ತಾರೆ. ಆಗ ಎಲ್ಲಾ ಮಕ್ಕಳು ಒಟ್ಟು ಸೇರಿ ಕಲಿತು, ಪತ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಂಜೆಯಾಗುತ್ತಲೇ ತಮ್ಮ ತಮ್ಮ ಬಿಡಾರಗಳಿಗೆ ವಾಪಸಾಗುತ್ತಾರೆ. ನಡು ಸಂಜೆಯಾಗುತ್ತಲೇ ತಮ್ಮ ತಮ್ಮ ಬಿಡಾರಗಳಿಗೆ ವಾಪಸಾಗುತ್ತಾರೆ. ನಡು ನಡುವೆ ಪುಸ್ತಕ ಪ್ರದರ್ಶನ, ವಸ್ತು ಸಂಗ್ರಹಾಲಯ, ಪ್ಲಾನೆಟೋರಿಯಂ, ಮೃಗಾಲಯ, ಕಲಾ ಕಾರ್ಯಾಗಾರ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಮೊದಲಾದ ಕಡೆಗಳಿಗೆ ಆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಗೆ ಹೊರ ಪ್ರಪಂಚದ ಅರಿವು ಮೂಡಿಸಲಾಗುತ್ತದೆ.
ವಲಸೆ ಹೋಗುವ ಸಮುದಾಯಗಳು ಸಾಮಾನ್ಯವಾಗಿ ಜಾನುವಾರುಗಳಿಗೆ ಸುಲಭದಲ್ಲಿ ಹಸಿರು ಮೇವು ಹಾಗೂ ನೀರು ಸಿಗುವ ಮತ್ತು ತಮ್ಮ ಜಾನುವಾರುಗಳ ಹಾಲು ಮಾರಲು ಸನಿಹದಲ್ಲಿ ಮಾರುಕಟ್ಟೆಗಳು ಇರುವ ಪ್ರದೇಶವನ್ನು ವಲಸೆಗೆ ಆಯ್ಕೆ ಮಾಡಿಕೊಳ್ಳುತ್ತವೆ. ಇಂತಹ ಪ್ರದೇಶಗಳು ನಗರಗಳ ಹೊರ ಭಾಗದಲ್ಲಿ ಮಾತ್ರವೇ ಲಭಿಸುವಂತಹವು. ಭಾರ್ವಾಡ ಸಮುದಾಯ ವಲಸೆ ಪ್ರಾರಂಭಿಸಿದಾಗ ಲರ್ನಿಂಗ್ ಕಂಪ್ಯಾನಿಯನ್ಸ್’ ಸ್ವಯಂ ಸೇವಕರು ಅವರು ಯಾವ ಪ್ರದೇಶದಲ್ಲಿ ಬಿಡಾರ ಹೂಡುತ್ತಾರೆ ಎಂಬುದನ್ನು ತಿಳಿದುಕೊಂಡು ಕಲಿಕಾ ಸಾಮಗ್ರಿಗಳ ಸಮೇತ ಅವರನ್ನು ಹಿಂಬಾಲಿಸುತ್ತಾರೆ. ಫೋನ್ ಮತ್ತು ವಾಟ್ಸಾಪ್ ಮೂಲಕ ಸಂಪರ್ಕವನ್ನು ಏರ್ಪಡಿಸಿಕೊಂಡು ಭಾರ್ವಾಡ ಸಮುದಾಯದ ಮಕ್ಕಳ ಶಾಲಾ ಕಲಿಕೆಗೆ ಎಲ್ಲಿಯೂ ತಡೆ ಬಾರದಂತೆ ನೋಡಿಕೊಂಡು ಅವರ ಶಿಕ್ಷಣವನ್ನು ಮುಂದುವರಿಸುತ್ತಾರೆ.
ಹದಿಮೂರು ವರ್ಷದ ವಿಜಯ್ ಜೋಗರಣ ಹಿಂದೆ ತನ್ನ ಹೆತ್ತವರೊಂದಿಗೆ ವಲಸೆ ಹೋಗುತ್ತಿದ್ದ ಸಮಯದಲ್ಲಿ ತಾನು ಕಲಿತಿದ್ದನ್ನೆಲ್ಲ ಮರೆಯುತ್ತಿದ್ದ. ಆದರೆ, ಈಗ ಅವನು ತನ್ನ ಶಾಲಾ ಸಾಮಗ್ರಿಗಳನ್ನು ಜತೆಯಲ್ಲೇ ಒಯ್ದು, ‘ಲರ್ನಿಂಗ್ ಕಂಪ್ಯಾನಿಯನ್ಸ್’ ಸ್ವಯಂ ಸೇವಕರ ಸಹಾಯದಿಂದ ಯಾವುದೇ ಅಡೆತಡೆಯಿಲ್ಲದೆ ಕಲಿಕೆಯನ್ನು ಮುಂದುವರಿಸುತ್ತಿದ್ದಾನೆ. ಹಾಗೆಯೇ, ಅವನು ತಾನೀಗ ಸೈಕಲ್ ಸವಾರಿ ಮಾಡಲು ಕಲಿತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ. ವಿಜಯನ ಅಣ್ಣ ಮೇಹುಲ್ ಶಾಲೆಗೇ ಹೋಗಿರಲಿಲ್ಲ. ‘ಲರ್ನಿಂಗ್ ಕಂಪ್ಯಾನಿಯನ್ಸ್’ ಸ್ವಯಂ ಸೇವಕರು ಅವನಿಗೆ ತಮ್ಮ ಕೇಂದ್ರದಲ್ಲಿ ಓದು ಬರಹ ಕಲಿಸಿ, ನಂತರ ಅವನು ಒಂದು ಸರ್ಕಾರಿ ಶಾಲೆಯಲ್ಲಿ ನೇರವಾಗಿ ನಾಲ್ಕನೇ ತರಗತಿಗೆ ಸೇರಿಕೊಳ್ಳಲು ವ್ಯವಸ್ಥೆ ಮಾಡಿದರು. ಮೇಹುಲ್ ಈಗ ಹತ್ತನೇ ತರಗತಿಯಲ್ಲಿದ್ದಾನೆ. ಹಿಂದೆ ಶಾಲೆಗೇ ಹೋಗದವನು ಈಗ ಚೆನ್ನಾಗಿ ಇಂಗ್ಲಿಷ್ ಓದಬಲ್ಲ ಹಾಗೂ ಬರೆಯಬಲ್ಲವನಾಗಿದ್ದಾನೆ.
ವಿಜಯ್ ಮತ್ತು ಮೇಹುಲ್‌ನ ತಾಯಿ ರತನ್ ಜೋಗರಣ ಲರ್ನಿಂಗ್ ಕಂಪ್ಯಾನಿಯನ್ಸ್’ ಸ್ವಯಂ ಸೇವಕರು ವರ್ಷದ ಆರು ತಿಂಗಳುಗಳ ಕಾಲ ವಲಸೆ ಸಮಯ ದಲ್ಲಿ ತಮ್ಮನ್ನು ಹಿಂಬಾಲಿಸಿ ತಮ್ಮ ಮಕ್ಕಳ ಶಿಕ್ಷಣ ನಿರಾಂತಂಕವಾಗಿ ನಡೆಯುವಂತೆ ನೋಡಿಕೊಳ್ಳುವುದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಈ ಸಮಾಜದಲ್ಲಿ ತಮ್ಮಂತಹ ಒಂದು ನಿರ್ಲಕ್ಷಿತ ಜನ ಸಮುದಾಯದ ಬಗ್ಗೆ ಕಾಳಜಿ ತೋರುವವರು ಇನ್ನೂ ಇದ್ದಾರೆ ಎಂಬುದು ಆಕೆಗೆ ಬಹಳ ಸಮಾಧಾನ ನೀಡುವ ಸಂಗತಿ.
ಕೊಡಗಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶ ; ಬಜೆಟ್‌ನಲ್ಲಿ ಅನುದಾನದ ಭರವಸೆ -ನವೀನ್ ಡಿಸೋಜ ಮಡಿಕೇರಿ : ಕೊಡಗಿನಲ್ಲಿ…
ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಸಚಿವರು ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿ, ಅಧ್ಯಕ್ಷ ಪೀಠದಿಂದ ಹೊರನಡೆದ…
ಮಾ.18ರಿಂದ ಏ.2ರ ವರೆಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆಯ…
ಚುನಾವಣೆ ನಡೆಯುವ ತನಕ ಹಾಲಿ ಆಡಳಿತ ಮಂಡಳಿ ಮುಂದುವರಿಕೆ ಕೆ.ಬಿ.ರಮೇಶನಾಯಕ ಮೈಸೂರು: ಐದು ವರ್ಷಗಳ ಅವಧಿ ಮುಗಿದ ಮೈಸೂರು ಜಿಲ್ಲಾ…
ಗುಂಡ್ಲುಪೇಟೆ : ತಾಲ್ಲೂಕಿನ ಚಿಕ್ಕತುಪ್ಪೂರು ಗೇಟ್ ಬಳಿ ಶಾಲಾ ಮಕ್ಕಳನ್ನು ಕರೆದೋಯ್ಯುತಿದ್ದ ಟಾಟಾ ಏಸ್ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ…
ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…