ದೇಶ- ವಿದೇಶ

ದೇಶದ ಕೃಷಿ ಉತ್ಪಾದನೆ ಕುಸಿತಕ್ಕೆ ಮೋದಿ ಸರ್ಕಾರದ ಮುನ್ನುಡಿ: ಸಿ.ಎಂ ಸಿದ್ದರಾಮಯ್ಯ ಆಕ್ರೋಶ

ಹೊಸದಿಲ್ಲಿ: ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ58 ರಷ್ಟು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದರಿಂದ ರೈತರು ಅಧಿಕ ಬಡ್ಡಿಗೆ ಸಾಲಕೊಡುವ ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ನೀಡುತ್ತಿದ್ದ ಸಬ್ಸಡಿ ಸಾಲ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಹಾರ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.

ರಾಜ್ಯದ ರೈತರಿಗೆ ಮಾತ್ರ ನಬಾರ್ಡ್ ಸಾಲದ ಪ್ರಮಾಣ ಕಡಿಮೆ ಮಾಡಿಲ್ಲ. ಇಡೀ ದೇಶದಲ್ಲಿ ಕಡಿತಗೊಳಿಸಲಾಗಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇದರಿಂದ ಇಡೀ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಇಡೀ ದೇಶದ ಕೃಷಿ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.

ನಬಾರ್ಡ್ 4.5% ಬಡ್ಡಿಗೆ ರೈತರ ಸಾಲದ ಹಣ ನೀಡುತ್ತಿತ್ತು. ನಾವು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಈ 4.5% ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ10 ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್ ಗಳಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಅನುಕೂಲ ಇಲ್ಲ ಎಂದರು.‌

15 ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆಯಿತು. ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಘೋಷಿಸಿ ಒಂದು ಪೈಸೆಯನ್ನೂ ಕೊಡಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆಗೂ ಕೊಡಲಿಲ್ಲ. ಇವೆಲ್ಲದರಿಂದ 11000 ಕೋಟಿ ರೂ ರಾಜ್ಯಕ್ಕೆ ನಷ್ಟವಾಗಿದ್ದನ್ನೂ ಪ್ರಧಾನಮಂತ್ರಿಯವರಿಗೆ ನೆನಪಿಸಿದ್ದೇವೆ. ಹೀಗಾಗಿ ಈ ಬಾರಿ ಮತ್ತೆ ನಬಾರ್ಡ್ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದೇವೆ ಎಂದರು.

ರಾಜ್ಯದ ಸಂಸದರು ಬಾಯಿ ಬಿಡಲ್ಲ: ಮಣ್ಣಿನ ಮಗ ಮಂತ್ರಿ ಏನು ಮಾಡುತ್ತಿದ್ದಾರೆ?

ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಮಹದಾಯಿ, ಮೇಕೆದಾಟುಗೆ ಅನುಮತಿ ನೀಡುತ್ತಿಲ್ಲ. ಇಷ್ಟಾದರೂ ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ. ಮಣ್ಣಿನ ಮಗ ಅಂದುಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರೂ ರಾಜ್ಯಕ್ಕೆ ಆಗುತ್ತಲೇ ಇರುವ ಅನ್ಯಾಯಗಳ ವಿರುದ್ಧ ಬಾಯಿ ಬಿಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮೈಸೂರು: ಕೆಆರ್‌ಎಸ್‌ ರಸ್ತೆಗೆ ಮರುನಾಮಕರಣ ಮಾಡದಂತೆ ಸಂಸದ ಯದುವೀರ್‌ ಆಗ್ರಹ

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆ ರಸ್ತೆಗೆ ಮರುನಾಮಕರಣ…

10 mins ago

ಕನ್ನಡಿಗರ ತೆರಿಗೆ ಹಣ ಬೆಳಗಾವಿ ಅಧಿವೇಶನದಲ್ಲಿ ಪೋಲು: ಜೆಡಿಎಸ್‌ ಕಿಡಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ, ತಮ್ಮ ವರಿಷ್ಠರನ್ನು ಮೆರೆಸಲು ಗುಲಾಮರಂತೆ ನಡೆದುಕೊಂಡು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡಿ ಬೆಳಗಾವಿ ಅಧಿವೇಶನ…

43 mins ago

ಕಾಂಗ್ರೆಸ್‌ ಸರ್ಕಾರ, ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ: ಅಶೋಕ್‌ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ, ಈಗಿನ ನಕಲಿ ಗಾಂಧಿ ಕುಟುಂಬಕ್ಕಾಗಿ ಮತ್ತು ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ…

1 hour ago

ಪ್ರತಾಪ್‌ ಸಿಂಹಗೆ ಅಭಿನಂದನೆ ಸಲ್ಲಿಸಿದ ಎಂ.ಲಕ್ಷ್ಮಣ್‌

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ ಮಾಡಿರುವುದಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಬೆಂಬಲ ಸೂಚಿಸಿರುವುದಕ್ಕೆ,…

2 hours ago

ಮಂಡ್ಯ | ಜಿಲ್ಲಾ ಪತ್ರಕರ್ತರ ಸಂಘದಿಂದ ಮಾದರಿ ಕೆಲಸ; ಎಚ್.ಡಿ ಕುಮಾರಸ್ವಾಮಿ

ಮಂಡ್ಯ:  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತನ್ನ ಸದಸ್ಯರ ಕಷ್ಟ- ಸುಖಗಳಿಗೆ ಸ್ಪಂದಿಸುವ ಮೂಲಕ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು…

2 hours ago

ಕೆಆರ್‌ಎಸ್‌ ರಸ್ತೆಗೆ ಎಸ್‌.ಎಂ.ಕೃಷ್ಣ ಹೆಸರಿಡಲು ಎಲ್‌.ನಾಗೇಂದ್ರ ಆಗ್ರಹ

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಬಿಜೆಪಿ ನಗರ ಜಿಲ್ಲಾಧ್ಯಕ್ಷ…

3 hours ago