ನಾ.ದಿವಾಕರ

ಕುಸಿಯುತ್ತಿರುವ ಮೌಲ್ಯಗಳ ನಡುವೆ ಗಾಂಧಿ ಪ್ರಸ್ತುತತೆ

ನಾ.ದಿವಾಕರ
ಜನರ ಚಿಂತನೆ, ಬೌದ್ಧಿಕತೆಯಲ್ಲಿ ಸ್ವಚ್ಛತೆ ಬಯಸಿದ್ದ ಅಹಿಂಸಾ ಪ್ರತಿಪಾದಕ

ವಸಾಹತುಶಾಹಿಯ ದಾಸ್ಯದಿಂದ ವಿಮೋಚನೆ ಪಡೆದ ಭಾರತ 77 ವರ್ಷಗಳ ಸ್ವತಂತ್ರ ಆಳ್ವಿಕೆಯನ್ನು ಪೂರೈಸಿದೆ. 74 ವರ್ಷಗಳ ಗಣತಂತ್ರ ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾಪಾಡಿಕೊಂಡು ಬಂದಿದೆ. ಭಾರತದ ವಿಮೋಚನೆಯ ಹಿಂದೆ ಇದ್ದಂತಹ ಧೀಮಂತ ಚಿಂತಕರು ಮತ್ತು ಹೋರಾಟಗಾರರ ನಡುವೆ ಎದ್ದು ಕಾಣುವ, ಸದಾ ಕಾಡುವ ಹಾಗೂ ವಿಭಿನ್ನ ಕಾರಣಗಳಿಗಾಗಿ ತನ್ನ ಪ್ರಸ್ತುತ ತೆಯನ್ನು ಇಂದಿಗೂ ಕಾಪಾಡಿಕೊಂಡಿರುವ ವ್ಯಕ್ತಿಗಳಲ್ಲಿ ಗಾಂಧೀಜಿಯವರೂ ಒಬ್ಬರು. ರಾಜಕೀಯವಾಗಿ ಗಾಂಧಿ ಎಂಬ ಒಂದು ಶಕ್ತಿ, ಪ್ರಸ್ತುತ ರಾಜಕಾರಣದಲ್ಲಿ ವಿರೋಧಾಭಾಸವಾಗಿಯೇ ಕಾಣುತ್ತದೆ.

ಮತ್ತೊಂದೆಡೆ ಗಾಂಧೀಜಿ ಅವರು ಅನುಸರಿಸಿದ ಮತ್ತು ಪ್ರತಿಪಾದಿಸಿದ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯನ್ನು ಎಂದೋ ಮರೆತುಹೋಗಿರುವ ಭಾರತದ ಅಧಿಕಾರ ರಾಜಕಾರಣದಲ್ಲಿ ಆಡಳಿತಾರೂಢ ಪಕ್ಷಗಳ ವಿರುದ್ಧ ಅಥವಾ ರಾಜಕೀಯ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗಲೆಲ್ಲಾ, ತಮ್ಮ ಪ್ರಾಮಾಣಿಕತೆಯ ದನಿಗೆ ಒಂದು ಸಾರ್ಥಕತೆಯನ್ನು ಪಡೆದುಕೊಳ್ಳುವ ಸಲುವಾಗಿ ರಾಜಕೀಯ ಪಕ್ಷಗಳು ಗಾಂಧಿ ಪ್ರತಿಮೆಯ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತವೆ. ಈ ಸಾಂಕೇತಿಕ ಮಾನ್ಯತೆಯ ಹೊರತಾಗಿ, ತಾತ್ವಿಕ ನೆಲೆಯಲ್ಲಿ ಗಾಂಧಿ, ವರ್ತಮಾನದ ಅಧಿಕಾರ ರಾಜಕಾರಣದ ಅಂಗಳದಲ್ಲಿ ಎಷ್ಟರ ಮಟ್ಟಿಗೆ ಪ್ರಸ್ತುತ ಅನಿಸಿಕೊಳ್ಳುತ್ತಾರೆ?

ವಿರೋಧಾಭಾಸಗಳ ನಡುವೆ ಗಾಂಧಿ: ನವ ಉದಾರವಾದ ಮತ್ತು ಬಂಡವಾಳಶಾಹಿ ಆರ್ಥಿಕತೆಯಲ್ಲಿ ಕಾರ್ಪೊರೇಟ್ ಮಾರುಕಟ್ಟೆ ಭಾರತದ ಆರ್ಥಿಕತೆಯ ಸಾರಥ್ಯ ವಹಿಸಿರುವ ಸಂದರ್ಭದಲ್ಲಿ, ಬಹುಸಂಖ್ಯಾತವಾದ-ಹಿಂದೂ ರಾಷ್ಟ್ರೀಯತೆಯ ನೆಲೆಯಲ್ಲಿ ಬಲಪಂಥೀಯ ರಾಜಕಾರಣ ದೇಶದ ಸಾಮಾಜಿಕ-ಸಾಂಸ್ಕೃತಿಕ ರಥವನ್ನು ಎಳೆಯುತ್ತಿರುವ ಸನ್ನಿವೇಶದಲ್ಲಿ, ಗಾಂಧಿ ಒಂದು ಪ್ರತಿಮೆಯಾಗಿ ಕಂಗೊಳಿ ಸುವುದು ವಿಡಂಬನೆಯಾಗಿಯೇ ಕಾಣಲು ಸಾಧ್ಯ. ಏಕೆಂದರೆ ಗಾಂಧಿ ಕನಸಿನ ಗ್ರಾಮ ಭಾರತವಾಗಲೀ ಅಥವಾ ಸಾರ್ವಜನಿಕ ಜೀವನದಲ್ಲಿ ಮಹಾತ್ಮರು ಕಟ್ಟಿದ ಸಾಂಸ್ಕೃತಿಕ ಕೋಟೆಯನ್ನಾಗಲೀ, ಡಿಜಿಟಲ್ ಭಾರತದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕತೆಯು ಗ್ರಾಮ ಭಾರತವನ್ನು ಸಾಮಾಜಿಕವಾಗಿ ಭಂಗಗೊಳಿಸಿರುವುದೇ ಅಲ್ಲದೆ, ಆರ್ಥಿಕ ವಾಗಿಯೂ ಶಾಶ್ವತ ಪರಾವಲಂಬಿಯನ್ನಾಗಿ ಮಾಡುತ್ತಿದೆ. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳದ ಗ್ರಾಮೀಣ ಜನಜೀವನವು ತನ್ನ ಸಾಂಪ್ರದಾಯಿಕ ಸಂಕೋಲೆಗಳಿಂದ ಬಿಡಿಸಿಕೊಳ್ಳಲಾಗದೆ ಪ್ರಾಚೀನ ಮನಸ್ಥಿತಿಗೆ ಅಂಟಿಕೊಂಡಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಗಾಂಧಿ ಭಾರತದ ಗ್ರಾಮೀಣ ಜನಜೀವನದಲ್ಲೇ ದೇಶದ ಭವಿಷ್ಯವನ್ನು ಕಂಡಿದ್ದರು. ಅಂಬೇಡ್ಕರ್ ಅವರನ್ನು ಕಾಡಿದ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯಗಳು ಗಾಂಧಿಯವರನ್ನು ಕಾಡಲಿಲ್ಲ. ಬದಲಾಗಿ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ತನ್ನ ಸಾಂಪ್ರದಾಯಿಕ ನೆಲೆಯಲ್ಲಿ ಭದ್ರವಾಗಿ ಕಾಪಾಡುವ ಒಂದು ಶಕ್ತಿಯಾಗಿ ಗಾಂಧಿ, ಗ್ರಾಮ ಭಾರತವನ್ನು ಕಂಡಿದ್ದರು. ಅವರು ಕಂಡ ಗ್ರಾಮದ ಕನಸನ್ನು ವರ್ತಮಾನದಲ್ಲಿ ನಿಂತು ಭೇದಿಸಿದಾಗ ಕಾಣುವುದೇನು?

ಸಮಾಜ-ಸಂಸ್ಕೃತಿಗಳ ನಡುವೆ ಗಾಂಧಿ:
ಭಾರತೀಯ ಸಮಾಜದಮೇಲ್ವಾತಿವರ್ಗಗಳು, ಸುಶಿಕ್ಷಿತ ಜನಸಮೂಹಗಳು ತಮ್ಮ ಸಾಂಪ್ರದಾಯಿಕ-ಪ್ರಾಚೀನ ಮನಸ್ಥಿತಿಯನ್ನು ಕಳಚಿ ರೂಪಾಂತರ ಗೊಳ್ಳುವ ಮೂಲಕ, ಆಧುನಿಕ ಭಾರತಕ್ಕೆ ಹೊಸ ಮಾನವೀಯ ಸ್ಪರ್ಶ ನೀಡುತ್ತವೆ ಎಂಬ ಗಾಂಧಿಯವರ ಭ್ರಮೆ, ವರ್ತಮಾನದಲ್ಲಿ ನಿಂತು ನೋಡಿದಾಗ, ಅತಿರೇಕದ ಭ್ರಾಂತಿ ಅನಿಸಿಬಿಡುತ್ತದೆ. ಇಲ್ಲಿ ತಾತ್ವಿಕವಾಗಿ ಅಂಬೇಡ್ಕರ್ ಗೆಲ್ಲುತ್ತಾರೆ. ಗ್ರಾಮೀಣ ಭಾರತದ ಸಾಂಸ್ಕೃತಿಕ ಸಮನ್ವಯತೆ ಮತ್ತು ಸಾಮಾಜಿಕ ಸೌಹಾರ್ದತೆಗಳ ಎಲ್ಲ ನೆಲೆಗಳನ್ನೂ ಭ್ರಷ್ಟಗೊಳಿಸಿರುವ ಕೋಮುವಾದ, ಮತೀಯವಾದ ಮತ್ತು ಜಾತಿ ಶ್ರೇಷ್ಠತೆಯ ಕಲ್ಪನೆಗಳು, ಗ್ರಾಮ ಭಾರತವನ್ನು ಬಲಪಂಥೀಯ ಬಹುಸಂಖ್ಯಾವಾದದ ಕೋಶಗಳನ್ನಾಗಿ ರೂಪಾಂತರಗೊಳಿಸಿವೆ.

ಮನುಷ್ಯ ನಾಗರಿಕತೆಯಲ್ಲಿ ಮುನ್ನಡೆದಂತೆಲ್ಲಾ ತನ್ನ ಪ್ರಾಚೀನತೆಯನ್ನು ಕಳಚಿಕೊಳ್ಳುತ್ತಾ ವಿಕಾಸದತ್ತ ಸಾಗಬೇಕು ಎನ್ನುವುದು ಎಲ್ಲ ಚಿಂತಕರ ಆಶಯ ಮತ್ತು ಕನಸು. ಗಾಂಧೀಜಿ ಅವರು ಇದೇ ಕನಸನ್ನು ಕಂಡವರು; ಕಟ್ಟಿದವರು. ಗಾಂಧಿ ಅವರು ಬಯಸಿದ ಸಾಮಾಜಿಕ ಸೌಹಾರ್ದತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಚಿಂತನೆಗಳು ಮುಖ್ಯವಾಗಿದ್ದವು. ಹಾಗಾಗಿಯೇ 21ನೆಯ ಶತಮಾನದಲ್ಲೂ ಈ ಸೌಹಾರ್ದತೆ ಮತ್ತು ಸಮನ್ವಯತೆಯನ್ನು ವಿರೋಧಿಸುವ ಶಕ್ತಿಗಳೇ ಗಾಂಧೀಜಿ ಪ್ರತಿಮೆಗೆ ಸಾಂಕೇತಿಕವಾಗಿ ಬಂದೂಕು ಹಿಡಿಯುತ್ತವೆ.

ಅಧಿಕಾರ ರಾಜಕಾರಣ ಮತ್ತು ಗಾಂಧಿ: ಈ ದ್ವಂದ್ವಗಳಾಗಲೀ, ತಾತ್ವಿಕ ಸಂದಿಗ್ಧತೆಗಳಾಗಲೀ ಅಧಿಕಾರ ರಾಜಕಾರಣದ ವಾರಸುದಾರರಿಗೆ ಅಷ್ಟಾಗಿ ಕಾಡುವುದಿಲ್ಲ. ಏಕೆಂದರೆ ಗಾಂಧಿ ಅವರು ಭಾರತೀಯ ಸಮಾಜದ ಒಂದು ಪ್ರಬಲ ವರ್ಗಗಳ ದೃಷ್ಟಿಯಲ್ಲಿ ಎಷ್ಟೇ ತಿರಸ್ಕೃ ತರಾಗಿ, ಅಪ್ರಸ್ತುತವಾಗಿ ಕಂಡುಬಂದರೂ, ಅವರ ಸಮಾಜ ಸುಧಾರಣೆಯ ಧ್ವನಿ ಸಾಂಕೇತಿಕವಾಗಿಯಾದರೂ ರಾಜಕೀಯ ಬಂಡವಾಳವಾಗಿ ಪರಿಣ ಮಿಸುತ್ತದೆ.

ದೇಶದ ವಿಭಜನೆಯ ಸಂದರ್ಭದಲ್ಲಾಗಲೀ ತಮ್ಮ ರಾಜಕೀಯ ನಡಿಗೆ ಯಲ್ಲಾಗಲೀ ಗಾಂಧೀಜಿ ಅವರು ಪೊರಕೆ ಹಿಡಿದದ್ದು ರಸ್ತೆ ಬದಿಯ ತ್ಯಾಜ್ಯವನ್ನು ಗುಡಿಸಿ ಹಾಕಲು ಅಥವಾ ಶೌಚವನ್ನು ತೆಗೆದುಹಾಕಲೂ ಅಲ್ಲ. ಅವರು ಸ್ವಚ್ಛತೆಯನ್ನು ಬಯಸಿದ್ದು ಭಾರತೀಯರ ಹೃದಯದಲ್ಲಿ, ಚಿಂತನೆಗಳಲ್ಲಿ ಹಾಗೂ ಬೌದ್ಧಿಕತೆಯಲ್ಲಿ. ನೋಖಾಲಿಯಲ್ಲಿ ಗಾಂಧಿ ಸ್ವಚ್ಛಗೊಳಿಸಲು ಮುಂದಾಗಿದ್ದು ಮತಾಂಧತೆ, ಮತೀಯ ದ್ವೇಷ ಮತ್ತು ಕೋಮುದ್ವೇಷ ಉಕ್ಕಿಸಿದ ಮಾನವ ಸಮಾಜದ ನೆತ್ತರನ್ನು, ಮಾನವ ಸಮಾಜದಲ್ಲಿ ಮುಸುಕಿದ್ದ ಅಮಾನುಷತೆ, ಕ್ರೌರ್ಯ ಮತ್ತು ಹಿಂಸೆಯನ್ನು. ಈ ನೆತ್ತರಿನ ಕೋಡಿ ಇಂದು ಕಾಣುತ್ತಿಲ್ಲವಾದರೂ, ಮತೀಯ ದ್ವೇಷದಿಂದ, ಜಾತಿ ದ್ವೇಷದಿಂದ ನೆತ್ತರು ಹರಿಸುವ ಮನಸ್ಥಿತಿ ಇಂದಿಗೂ ಎದ್ದು ಕಾಣುತ್ತಿದೆ. ಅಂದು ಮತಾಂಧರ ಬಾಯಲ್ಲಿ ಬರುತ್ತಿದ್ದ ಹಿಂಸಾತ್ಮಕ ಮಾತುಗಳು ಇಂದು ಚುನಾಯಿತ ಜನಪ್ರತಿನಿಧಿಗಳ ಬಾಯಲ್ಲೂ ಬರುತ್ತಿದೆ. ಗಾಂಧಿ ಮಹಿಳೆಯರ ಘನತೆ ಗೌರವವನ್ನು ಎತ್ತಿಹಿಡಿದಿದ್ದರು. ತಳಸಮಾಜದ ಘನತೆಯನ್ನು ಕಾಪಾಡಲು ಶ್ರಮಿಸಿದ್ದರು. ಆದರೆ ಇಂದು ಗಾಂಧಿ ಸ್ಮರಣೆಯ ನಡುವೆಯೇ ಈ ಎಲ್ಲ ಅಮಾನುಷತೆಯೂ ಭಾರತವನ್ನು ಕಾಡುತ್ತಲೇ ಇದೆ.

ಈ ನೆಲೆಯಲ್ಲಿ ಭಾರತೀಯ ಸಮಾಜದಲ್ಲಿ ಬೌದ್ಧಿಕ ಸ್ವಚ್ಛತೆಯನ್ನು ಬಯಸಿದ್ದ ಗಾಂಧಿಯವರನ್ನು ಕೇವಲ ಪ್ರತಿಮೆಗಳಲ್ಲಿ ಕುಳ್ಳಿರಿಸಿ, ವರ್ಷಕ್ಕೊಮ್ಮೆ ನಮಿಸುತ್ತಾ ಗಾಂಧಿ ಕೃತಿಯನ್ನು ಪಠಿಸುತ್ತಿರುವ ಭಾರತದ ರಾಜಕೀಯ ನಾಯಕತ್ವ ಮತ್ತು ಸಮಾಜ, ಅವರುಬಯಸಿದಮಾನವೀಯ ಸಮಾಜವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೋತಿದೆ. ಆದರೂ ದೇಶಾದ್ಯಂತ ಅಕ್ಟೋಬರ್ 2ರಂದು ‘ವೈಷ್ಣವ ಜನತೋ…’ ಪಠಿಸುವ ಮೂಲಕ ಗಾಂಧಿಯವರನ್ನು ಜನಮಾನಸದ ಮಧ್ಯೆ ನಿಲ್ಲಿಸುವ ಪ್ರಯತ್ನ ನಿರಂತರವಾಗಿದೆ.

ಮುಂದಿನ ತಲೆಮಾರಿಗೆ ಗಾಂಧಿ ಮತ್ತು ಅವರ ಚಿಂತನೆಗಳನ್ನು ದಾಟಿಸಬೇಕಾದರೆ, ಅಂಬೇಡ್ಕರ್ ಅವರೊಡನೆ ಅನುಸಂಧಾನ ಮಾಡುತ್ತಲೇ, ಮಾರ್ಕ್ಸವಾದದೊಡನೆ ಮುಖಾಮುಖಿಯಾಗುತ್ತಲೇ ಅವರ ಬೌದ್ಧಿಕ ಔದಾತ್ಯಗಳನ್ನು ಸಮಚಿತ್ತದಿಂದ ರವಾನಿಸುವ ನೈತಿಕ ಕರ್ತವ್ಯ ಇಂದಿನ ಭಾರತದ ಮೇಲಿದೆ. ಇದು ಸಾಧ್ಯವಾಗುವುದಾದರೆ ಅಕ್ಟೋಬರ್ 2ರ ಗಾಂಧಿ ಜಯಂತಿ ಸಾರ್ಥಕತೆ ಪಡೆಯುತ್ತದೆ.

ಅಕ್ಟೋಬರ್ 2ರಂದು ಗಾಂಧಿ ಪ್ರತಿಮೆಗೆ ಹಾರ ಹಾಕುವ ಮುನ್ನ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಗಾಂಧಿ ಪ್ರತಿಮೆಯ ಮುಂದೆ ಕೂರುವ ಮುನ್ನ, ಗಾಂಧಿ ಸಮಾಧಿಯ ಮುಂದೆ ವಿನಮ್ರವಾಗಿ ತಲೆಬಾಗುವ ಮುನ್ನ, ಆರ್ಥಿಕವಾಗಿ ವಿಕಸಿತ ಭಾರತವಾಗುವತ್ತ ಸಾಗಿರುವ ಡಿಜಿಟಲ್ ಇಂಡಿಯಾ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ವರ್ತಮಾನ ಭಾರತದ ಆದ್ಯತೆಯಾಗಬೇಕಿದೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ

ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್…

11 mins ago

ಶಂಕರ್ ಎಂಬ ನೆಲದ ಹೂ

ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…

13 mins ago

ಊರೊಳಗೆ ಬೆರೆತು ಜನರ ಬಣ್ಣವೇ ಆದ ಕೆ.ಟಿ.ಶಿವಪ್ರಸಾದ್

ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…

18 mins ago

ಅಮೆರಿಕ ಎಂಬ ಪ್ರಯೋಗಕ್ಕೆ ಇನ್ನೂರೈವತ್ತು ವಸಂತಗಳು

ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…

25 mins ago

ಓದುಗರ ಪತ್ರ: ಎಸ್‌ಐಆರ್: ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ

ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್‌ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ…

4 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳ ಬೇಕೇ?

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಾಡಹಬ್ಬ ದಸರಾ ೧೬೧೦ ರಲ್ಲಿ ಪ್ರಾರಂಭವಾಗಿ, ಇಲ್ಲಿನ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಇತ್ತೀಚಿನ…

4 hours ago