ಮೈಸೂರು ನಗರ

ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ ಆಯೋಜನೆಗೆ ಸಿದ್ಧತೆ: ಅಯೂಬ್ ಖಾನ್

ಅಕ್ಟೋಬರ್ 03 ರಂದು ದಸರಾ ವಸ್ತು ಪ್ರದರ್ಶನದ ಉದ್ಘಾಟನೆ

ಮೈಸೂರು: ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಹೇಳಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕರ ಕಚೇರಿ ಸಭಾಂಗಣದಲ್ಲಿ ವಸ್ತು ಪ್ರದರ್ಶನ ಆಯೋಜನೆ ಸಂಬಂಧ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಸ್ತು ಪ್ರದರ್ಶನವನ್ನು ವೀಕ್ಷಿಸಲು ಹಾಗೂ ಉತ್ಪನ್ನಗಳನ್ನು ಕೊಂಡುಕೊಳ್ಳಲು ಬರುವ ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಗಳ ಬದಲಾಗಿ ಬಟ್ಟೆ ಚೀಲಗಳನ್ನು ತಂದು ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನಕ್ಕೆ ಸಹಕಾರ ನೀಡಬೇಕು ಎಂದರು.

ಈ ನಿಟ್ಟಿನಲ್ಲಿ ವಸ್ತು ಪ್ರದರ್ಶನದ ಪ್ರಾಧಿಕಾರದ ಮುಂಭಾಗದಲ್ಲಿಯೇ ಸಾರ್ವಜನಿಕರಿಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತದೆ. ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗುವ ಸ್ಟಾಲ್ ಗಳು ಮತ್ತು ಹೋಟೆಲ್ ಗಳ ಮಾಲೀಕರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರವೇಶ ದರ ನಿಗದಿ

ಅಕ್ಟೋಬರ್ 03 ರಂದು ಸಂಜೆ 8 ಗಂಟೆಗೆ ದಸರಾ ವಸ್ತು ಪ್ರದರ್ಶನ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದ್ದು, ಅಂದೇ ಸರ್ಕಾರದ ವಿವಿಧ ಇಲಾಖೆಗಳ 30 ಸ್ಟಾಲ್ ಹಾಗೂ 153 ಖಾಸಗಿ ಸ್ಟಾಲ್ ಗಳು ಉದ್ಘಾಟನೆಯಾಗಲಿವೆ. ಪ್ರತಿಬಾರಿಯಂತೆ ಈ ಬಾರಿಯೂ ಮಕ್ಕಳಿಗೆ ಪ್ರವೇಶ ದರ 20 ರೂ. ಗಳಿದ್ದು, ವಯಸ್ಕರು ಹಾಗೂ ಇನ್ನಿತರರಿಗೆ 5 ರೂ. ಗಳನ್ನು ಹೆಚ್ಚಿಸಿ 25 ರೂ. ಟಿಕೆಟ್ ದರವನ್ನು ನಿಗಧಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಕ್ಕಳಿಗೆ ಮನರಂಜನೆ ನೀಡಲು ವರ್ಚುವಲ್‌ ಪಾರ್ಕ್‌ ನಿರ್ಮಾಣ

ಕಳೆದ ವರ್ಷಗಳಿಗಿಂತ ಈ ಬಾರಿಯ ದಸರಾ ವಸ್ತು ಪ್ರದರ್ಶನ ವಿಶೇಷವಾಗಿರಲಿದ್ದು, 90 ದಿನ ನಡೆಯುವ ಕಾರ್ಯಕ್ರಮದಲ್ಲಿ ಉತ್ಪನ್ನಗಳ ವೀಕ್ಷಣೆ ಮತ್ತು ಮಾರಾಟದ ಜೊತೆಗೆ ಅವುಗಳ ತಯಾರಿಕೆಯ ಪ್ರಕ್ರಿಯೆಯನ್ನು ಸಾರ್ವಜನಿಕರು ಕಾಣಬಹುದಾಗಿದೆ. ವಸ್ತು ಪ್ರದರ್ಶನಕ್ಕೆ ಬಂದಂತಹ ಮಕ್ಕಳಿಗೆ ಮನರಂಜನೆಯನ್ನು ನೀಡಲು ಇಂಟರಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನವನ್ನು ಒಳಗೊಂಡಿರುವ ವರ್ಚುವಲ್ ಪಾರ್ಕ್ ಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

 

ಪ್ರತಿ ಶನಿವಾರ, ಭಾನುವಾರ ಮನರಂಜನಾ ಕಾರ್ಯಕ್ರಮ

ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10 ರಿಂದ 15 ಸ್ಥಳಗಳಲ್ಲಿ ಏರ್ಪೋರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನವು 90 ದಿನಗಳ ಕಾಲ ನಡೆಯಲಿದ್ದು, ಪ್ರತಿ ಭಾನುವಾರ ಚಲನಚಿತ್ರ ಕಲಾವಿದರಿಂದ ಮನರಂಜನಾತ್ಮಕ ಕಾರ್ಯಕ್ರಮಗಳು ಹಾಗೂ ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅತಿ ಹೆಚ್ಚು ಸ್ಥಳೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು, ಈ ಬಾರಿ ವಸ್ತು ಪ್ರದರ್ಶನದಲ್ಲಿ ದೀಪಾಲಂಕಾರವನ್ನು ಹೆಚ್ಚಿಸಲಾಗಿದ್ದು, ಪ್ರತೀಕಾರದ ಮುಖ್ಯದ್ವಾರ ಮುಂಭಾಗ ಹಾಗೂ ಪ್ರಾಧಿಕಾರದ ಪ್ರಮುಖ ರಸ್ತೆಗಳಲ್ಲಿ ಮತ್ತು ಪ್ರಾಧಿಕಾರದ ವೃತ್ತಗಳಿಗೆ ವಿಶೇಷ ಮಾದರಿಯ ವಿದ್ಯುತ್ ದೀಪ ಬಣ್ಣದ ದೀಪಾಲಂಕಾರಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

 

80 ಎಕ್ಕರೆ ವಿಸ್ತೀರ್ಣದಲ್ಲಿ ನಡೆಯುವ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು ರಿಯಾಯಿತಿ ದರದಲ್ಲಿ 03 ಎಲೆಕ್ಟ್ರಾನಿಕ್ ಏಕೋ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟನ್ನು ನಿರ್ಮಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನದ ಪಾರ್ಕ್ ಗಳಲ್ಲಿ ಹೂಗಳಿಂದ ವಿವಿಧ ಆಕಾರದ ಹೂಗುಚ್ಛಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದು ಬಂದಂತಹ ಪ್ರವಾಸಿಗರು ಮತ್ತು ಮಕ್ಕಳಿಗೆ ವಿಶೇಷ ಅನುಭವವನ್ನು ನೀಡುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಸಿ.ಇ.ಒ ರುದ್ರೇಶ್, ಲಯನ್ಸ್ ಕ್ಲಬ್ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಗ್ಯಾರಂಟಿ ಪರಿಷ್ಕರಣೆ; ಅರ್ಹರಿಗೆ ಅನ್ಯಾಯ ಆಗಬಾರದು

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…

54 mins ago

ರಾಜ್ಯ ರಾಜಕಾರಣದ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ-ಜಾ.ದಳ ಮಿತ್ರಕೂಟ ಯತ್ನ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್‌ನ…

58 mins ago

ಕೊಡಗಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಭದ್ರತೆ

ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…

1 hour ago

ಮುಚ್ಚುವ ಆತಂಕದಲ್ಲಿ ಶತಮಾನ ಕಂಡ ಶಾಲೆ

ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…

1 hour ago

ಸರ್ಕಾರಿ ಕಚೇರಿ; ಮೂಲ ಸೌಕರ್ಯಗಳಿಗೆ ಗೋರಿ!

ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…

1 hour ago