ಮೈಸೂರು ನಗರ

ಎಸ್‌ಸಿ, ಎಸ್‌ಟಿಗಳ ಹಕ್ಕು ರಕ್ಷಣೆಗೆ ಕ್ರಮ : ಡಾ.ಮೂರ್ತಿ

ಮೈಸೂರು : ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೈಸೂರು ಭಾಗದಲ್ಲಿ ದಾಖಲಾಗಿರುವ 134 ಪೋಕ್ಸೊ ಪ್ರಕರಣಗಳು ಗಂಭೀರ ಕಳವಳಕ್ಕೆ ಕಾರಣವಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಕ್ಕುಗಳ ರಕ್ಷಣೆ, ತಾರತಮ್ಯ ನಿವಾರಣೆ ಹಾಗೂ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ಒದಗಿಸುವುದು ರಾಜ್ಯ ಆಯೋಗದ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್ ಹೇಳಿದರು.

ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಿಂದ ಆಯೋಗಕ್ಕೆ 150 ಪ್ರಕರಣಗಳು ದಾಖಲಾಗಿದ್ದು, 48 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಆಯೋಗಕ್ಕೆ 4,250ಕ್ಕೂ ಹೆಚ್ಚು ಪ್ರಕರಣಗಳು ಮತ್ತು 2,360 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರತಿವಾರ ಎರಡು ದಿನಗಳ ಕಾಲ ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಮೈಸೂರು ಭಾಗದಲ್ಲಿ 134 ಪೋಕ್ಸೊ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಕ್ಕಳ ರಕ್ಷಣೆ ಮತ್ತು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಹೆಚ್ಚಿನ ಜಾಗೃತಿ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವೊಮ್ಮೆ ಪ್ರತೀಕಾರದ ಉದ್ದೇಶದಿಂದ ಕೌಂಟರ್ ಪ್ರಕರಣಗಳನ್ನು ದಾಖಲಿಸಲಾಗುತ್ತಿರುವ ಬಗ್ಗೆ ಆಯೋಗ ಪರಿಶೀಲನೆ ನಡೆಸಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹಾಗೂ ನೌಕರರು ತಾರತಮ್ಯ ಮತ್ತು ಅಶೃಶ್ಯತೆ ಎದುರಿಸುತ್ತಿರುವ ದೂರುಗಳು ಬಂದಿವೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳು, ವಿದ್ಯಾರ್ಥಿವೇತನ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದು ತಿಳಿಸಿದರು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ನಡೆಯುತ್ತಿರುವ ಆರೋಪಗಳೂ ಕೇಳಿಬಂದಿವೆ ಎಂದರು.

ಬಡಗ ಜಂಗಮ ಹಾಗೂ ಬೇಡ ಜಂಗಮ ಸಮುದಾಯಗಳ ಜಾತಿ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುಳ್ಳು ಜಾತಿ ಪ್ರಮಾಣ ಪತ್ರಗಳ ಮೂಲಕ ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಿರುವ 152 ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂಜನಗೂಡು ಹಾಗೂ ಎಚ್.ಡಿ.ಕೋಟೆ ಭಾಗಗಳಲ್ಲಿ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು. ಅವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ವಿಶೇಷ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರಿತ ನೇಮಕಾತಿಗಳಲ್ಲಿ ನಿಯಮ ಉಲ್ಲಂಘನೆ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಾದ ಅನುದಾನದ ಸಮರ್ಪಕ ಬಳಕೆ ಆಗದಿರುವುದು, ದಲಿತ ಸಮುದಾಯಗಳಿಗೆ ಸ್ಮಶಾನಗಳ ಕೊರತೆ, ಹುಣಸೂರಿನ ಅಂಬೇಡ್ಕರ್ ನಗರ ನಿವಾಸಿಗಳಿಗೆ ಸ್ಮಶಾನ ವ್ಯವಸ್ಥೆ ಕಲ್ಪಿಸುವುದು, ಭೂಮಿ ಮಂಜೂರಾದರೂ ಹಕ್ಕುಪತ್ರ ವಿತರಣೆ ಆಗದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಕೆಲವೆಡೆ ಪರಿಶಿಷ್ಟ ಪಂಗಡದ ಜನರ ಸಾಮಾಜಿಕ ಬಹಿಷ್ಕಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಅಮಾನವೀಯ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸ್ಥಾಪಿಸಲು ಆಯೋಗ ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಆಯೋಗದ ಸದಸ್ಯರಾದ ದಿವಾಕರ್, ಗೀತಾ ತಾಮೋಷಿ ಹಾಗೂ ಎಂ. ತುಂಬಯ್ಯ, ಕಾರ್ಯದರ್ಶಿ ಡಾ. ಹೆಚ್.ಎನ್. ಶಿವರಾಮ್, ಜಿಲ್ಲಾಧೀಕಾರಿ ಜಿ. ಲಕ್ಷ್ತ್ರ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ನೀರ್ ಆಸಿಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

5 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

5 hours ago

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…

5 hours ago

ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ  ಯಾವುದೇ ನಾಗರಿಕನು ತನ್ನ…

5 hours ago

ಗಾಲಿಕುರ್ಚಿಯಲ್ಲಿ ಕುಳಿತೇ ಯಶಸ್ವೀ ಲೇಖಕಿಯಾದ ಹಿಮಾಂಶಿಕಾ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ದೈಹಿಕ ನ್ಯೂನತೆ ನಡುವೆ ಆರ್ಥಿಕ ಪ್ರಗತಿಯ ಮೆಟ್ಟಿಲೇರಿದ ಮಹಿಳೆ ಹರ‍್ಯಾಣದ ಅಂಬಾಲಾದ ಹಿಮಾಂಶಿಕಾ ಶರ್ಮಾರಿಗೆ…

5 hours ago

ಇ-ಕೆವೈಸಿಗೆ ಮುಗಿಬಿದ್ದ ಫಲಾನುಭವಿಗಳು

ಕೆ.ಬಿ.ರಮೇಶನಾಯಕ ರಾಜ್ಯ ಸರ್ಕಾರದ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ಇಲಾಖೆ ಕಸರತ್ತು.  ಮೈಸೂರು: ನಕಲಿ ಫಲಾನುಭವಿಗಳನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ…

5 hours ago