ಆರೋಗ್ಯ

ಮೆದುಳು ಜ್ವರ ನಿಯಂತ್ರಣಕ್ಕೆ ಡಿ. 5 ರಿಂದ ವಿಶೇಷ ಲಸಿಕಾ ಅಭಿಯಾನ : ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು : ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ (ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕಾಗಿ ಡಿಸೆಂಬರ್ 5 ( ಇಂದಿನಿಂದ) ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ.  ಈ ಅಭಿಯಾನದಡಿ 1-15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಜೆಇ ಮೆದುಳು ಜ್ವರ   ಪ್ಲೇವಿವೈರಸ್’ ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕಾಡಿನ ಪಕ್ಷಿಗಳಲ್ಲಿರುವ ಈ ವೈರಾಣುವಿಗೆ ಮಾನವರು ಕಟ್ಟಕಡೆಯ ಹೋಸ್ಟ್ ಆಗಿರುತ್ತಾರೆ. ಜೆಇ ಲಸಿಕಾ ಅಭಿಯಾನ ಕುರಿತು ಮಾಹಿತಿ ನೀಡಿದ ಸಚಿವರು, ಡಿಸೆಂಬರ್ ಮೊದಲನೇ ವಾರದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದೆ ಎಂದರು.

ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ಪಿಡುಗು ಗುರುತಿಸಲಾಗಿದೆ. ಭಾರತವೂ ಸೇರಿದಂತೆ ಏಷ್ಯಾದ 11 ಏಷ್ಯಾ ರಾಷ್ಟ್ರಗಳು ಈ ಪಟ್ಟಿಯಲ್ಲಿದೆ. ಪ್ರತಿ ವರ್ಷ ಸರಾಸರಿ 68,000 ಪ್ರಕರಣಗಳು ವರದಿಯಾಗುತ್ತಿದ್ದು, ಮರಣ ಪ್ರಮಾಣ ಶೇ.20 ರಿಂದ ಶೇ.30 ರಷ್ಟಿದೆ. ಗುಣಮುಖರಾದ ಶೇ.30 ರಿಂದ ಶೇ.50 ರಷ್ಟು ಪ್ರಕರಣಗಳಲ್ಲಿ ನರದೌರ್ಬಲ್ಯ, ಬುದ್ಧಿ ಮಾಂದ್ಯತೆ  ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟಾಗಿವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಜೆಇ ಮೆದುಳು ಜ್ವರದ ಮೊದಲ ಪ್ರಕರಣ 1955 ರಲ್ಲಿ ತಮಿಳುನಾಡಿನ ವೆಲ್ಲೂರ್ ನಲ್ಲಿ ವರದಿಯಾಗಿತ್ತು. ಕರ್ನಾಟಕದಲ್ಲಿ 1978 ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಹೆಚ್ಚಿನ ಪ್ರಕರಣಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದೆ. 2016 ರಲ್ಲಿ 11 ಪ್ರಕರಣಗಳು, 2017 ರಲ್ಲಿ 23 ಪ್ರಕರಣಗಳು, 2018 ರಲ್ಲಿ 35 ಪ್ರಕರಣಗಳು, 2019 ರಲ್ಲಿ 33 ಪ್ರಕರಣಗಳು, 2020 ರಲ್ಲಿ 19 ಪ್ರಕರಣಗಳು, 2021 ರಲ್ಲಿ 25 ಪ್ರಕರಣಗಳು, 2022 ರಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ. ರೋಗ ಪತ್ತೆ ಮಾಡಲು ರಾಜ್ಯದಲ್ಲಿ ಸೆಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ (ಎಸ್‍ಎಸ್‍ಎಲ್‍) ಗಳನ್ನು ಸಜ್ಜುಗೊಳಿಸಲಾಗಿದೆ. ನಿಮ್ಹಾನ್ಸ್ -ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್-ಬಳ್ಳಾರಿ, ಕಿಮ್ಸ್-ಹುಬ್ಬಳ್ಳಿ, ಡಿಪಿಎಚ್‍ಎಲ್-ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್-ಉಡುಪಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‍ಐವಿ)-ಬೆಂಗಳೂರು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

10 ಜಿಲ್ಲೆಗಳಲ್ಲಿ ಲಸಿಕಾಕರಣ

ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು 10 ಜೆಇ ಎಂಡೆಮಿಕ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲನೇ ಡೋಸ್ ಮತ್ತು 1.5 ವರ್ಷದ ವಯಸ್ಸಿನಲ್ಲಿ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಹೆಚ್ಚುವರಿಯಾಗಿ ಬಾಗಲಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲಬುರಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೆಇ ಹರಡದ ಅವಧಿಯಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಈ ಅಭಿಯಾನದಲ್ಲಿ 1-15 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಡೋಸ್ ಲಸಿಕೆ ನೀಡಲಾಗುವುದು‌ ಎಂದು ಸಚಿವರು ವಿವರಿಸಿದರು. ನಾವೀಗ ಮೆದುಳು ಜ್ವರದ ವಿರುದ್ಧ ಯುದ್ಧ ಸಾರಬೇಕಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆಯು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

andolanait

Share
Published by
andolanait

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

33 mins ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

35 mins ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

38 mins ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

40 mins ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

45 mins ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

49 mins ago