ಬೆಂಗಳೂರು- ವಿವೇಕ ಯೋಜನೆಯಡಿ ನೂತನವಾಗಿ ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಹಾಗೂ ಪದವಿಪೂರ್ವ ಕಾಲೇಜು ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ತೀವ್ರ ವಿವಾದ ಸೃಷ್ಟಿಸಿದೆ.
ರಾಜ್ಯ ಸರ್ಕಾರದ ಈ ಕ್ರಮವನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್, ಪ್ರಗತಿಪರರು, ಬುದ್ದಿಜೀವಿಗಳು, ಚಿಂತಕರು, ಶಿಕ್ಷಣ ತಜ್ಞರು ತೀವ್ರವಾಗಿ ವಿರೋಧಿಸಿ ಇದು ಬಿಜೆಪಿಯ ಕೇಸರೀಕರಣದ ಮುಂದುವರೆದ ಭಾಗ ಎಂದು ಕಟುವಾಗಿ ಟೀಕಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಇದನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಮೂಲಕ 7601 ಶಾಲಾ ಮತ್ತು ಪದವಿಪೂರ್ವ ಕಾಲೇಜುಗಳ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದೆ.
ನೂತನವಾಗಿ ನಿರ್ಮಾಣವಾಗುತ್ತಿರುವ ಈ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಬಿಜೆಪಿಯ ಹಿಡನ್ ಅಜೆಂಡಾ ಎಂದು ಪ್ರತಿಪಕ್ಷಗಳು ಟೀಕಿಸಿದ್ದರೆ, ಸರ್ಕಾರ ಮಾತ್ರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಈ ಕುರಿತು ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಸರಿ ಹಿಂದೂ ಧರ್ಮದ ಸಂಕೇತ. ಶ್ರೇಷ್ಠ ಸಂತರಾದ ಸ್ವಾಮಿ ವಿವೇಕಾನಂದರು ಕೂಡ ಇದೇ ಬಣ್ಣದ ಬಟ್ಟೆಯನ್ನು ಧರಿಸುತ್ತಿದ್ದರು.
ವಿವೇಕ ಎಂದರೆ ಬುದ್ದಿವಂತಿಕೆ. ಕೇಸರಿ ಬಣ್ಣ ರಾಷ್ಟ್ರ ಧ್ವಜದಲ್ಲೇ ಇದೆ. ಅಷ್ಟಕ್ಕೂ ಪ್ರತಿಪಕ್ಷದವರಿಗೆ ಈ ಬಣ್ಣವನ್ನು ಕಂಡರೆ ಹೊಟ್ಟೆಯುರಿ ಏಕೆ ಎಂದು ಪ್ರಶ್ನೆ ಮಾಡಿದರು. ಕಲಬುರಗಿಯಲ್ಲೂ ಕೂಡ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ
ಅವರು ಪಠ್ಯ ಪುಸ್ತಕದಲ್ಲಾಗಲಿ ಇಲ್ಲವೇ ಶಾಲಾ ಕೊಠಡಿಗಳನ್ನು ಕೇಸರೀಕರಣ ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ತಪ್ಪೇನು?:
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿ ಕೊಠಡಿಗಳಿಗೆ ಕೇಸರಿಬಣ್ಣ ಹೊಡೆದರೆ ಪ್ರತಿಪಕ್ಷಗಳು ಏಕೆ ಆಕ್ಷೇಪಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಾವು ಪಾಲನೆ ಮಾಡಬೇಕೆ ವಿನಃ ಎಲ್ಲವನ್ನು ಹಳದಿಗಣ್ಣಿನಿಂದ ನೋಡಬಾರದು ಎಂದು ಕಿಡಿಕಾರಿದರು.
ಅತ್ತ ಕಾಂಗ್ರೆಸ್ ಈ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಸರ್ಕಾರ ಜವಾಬ್ದಾರಿ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಬೇಕು,ಮನಸ್ಸಿನಲ್ಲಿ ಕೇಸರೀಕರಣ ತುಂಬುವುದು ಸರಿಯಲ್ಲ ಎಂದು ಗುಡುಗಿದೆ.
ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಳೆದ ಮೂರು ವರ್ಷಗಳಿಂದ ಇದೇ ಕೆಲಸ ಬಿಜೆಪಿ ಮಾಡುತ್ತಿದೆ. ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಶಾಲೆಗಳಿಗೆ ಬೇಕಿರುವ ಕೊಠಡಿ, ಪಠ್ಯಪುಸ್ತಕ, ಸೈಕಲ್ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ. ಸರ್ಕಾರದ ಜವಾಬ್ದಾರಿ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಬೇಕು, ಆದರೆ ಇದಕ್ಕೆ ಬದಲಾಗಿ ಪ್ರತಿ ಹಂತದಲ್ಲಿ ಕೇಸರೀಕರಣ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಗೆ ಕೇಸರಿ ಬಣ್ಣದ ಬಗ್ಗೆ ಭಯ ಇಲ್ಲ, ಗೌರವ ಇದೆ. ಆದರೆ ಮಕ್ಕಳ ಮನಸ್ಸಿನಲ್ಲಿ ಕೇಸರೀಕರಣದ ಹುನ್ನಾರದ ಬಗ್ಗೆ ಮಾತ್ರ ನಮ್ಮ ಆಕ್ಷೇಪ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರು ಇವರಿಗೆ ಅಕಾರ ಕೊಟ್ಟಿರುವ ಆಡಳಿತ ನಡೆಸಲು. ಬದಲಿಗೆ ಶಿಕ್ಷಣದಲ್ಲೂ ಕೇಸರೀಕರಣ ಮಾಡಲು ಹೊರಟ್ಟಿದ್ದಾರೆ. ಎಷ್ಟೇ ಆಗಲಿ ಇವರು ಜನಾದೇಶ ಪಡೆದು ಅದಿಕಾರಕ್ಕೆ ಬಂದವರಲ್ಲ. ವಾಮಮಾರ್ಗದ ಮೂಲಕ ಅಕಾರಕ್ಕೆ ಬಂದವರು. ಇಂಥವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೇ ಎಂದು ಬಿಜೆಪಿ ವಿರುದ್ದ ಕೆಂಡ ಕಾರಿದರು.
ಇದೇ ರೀತಿ ಸರ್ಕಾರದ ಈ ಕ್ರಮವನ್ನು ಅನೇಕರು ತೀವ್ರವಾಗಿ ಖಂಡಿಸಿ ತಕ್ಷಣವೇ ಇದನ್ನು ಕೈಬಿಡಬೇಕು. ಇದು ಕೇಸರಿ ಬಣ್ಣವನ್ನೇ ಹೋಲುವಂತಿದ್ದು, ಶಾಲಾ ಕೊಠಡಿಗಳಿಗೆ ಕೇವಲ ಒಂದು ಬಣ್ಣವನ್ನು ಹೊಡೆಯದೇ ಮೂರು ಬಣ್ಣ ಹೊಡೆಯಬೇಕೆಂದು ಒತ್ತಾಯ ಮಾಡಿವೆ.
ಸರ್ಕಾರದ ಈ ತೀರ್ಮಾನಕ್ಕೆ ಪ್ರಗತಿಪರರು, ಚಿಂತಕರು, ಶಿಕ್ಷಣ ತಜ್ಞರು ಮತ್ತಿತರರು ಆಕ್ಷೇಪಿಸಿದ್ದಾರೆ. ಶಾಂತಿಯ ಸಂಕೇತವಾಗಿರುವ ಬಿಳಿ ಬಣ್ಣ ಇಲ್ಲವೇ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳನ್ನು ಹಚ್ಚಬೇಕೆಂದು ಒತ್ತಾಯಿಸಿದ್ದಾರೆ.
ಏನಿದು ವಿವಾದ?
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಕಟ್ಟಿಸಲಾಗುತ್ತಿರುವ ಸುಮಾರು 8 ಸಾವಿರ ಶಾಲಾ ಕೊಠಡಿಗಳಿಗೆ ವಿವೇಕ ಎಂದು ಹೆಸರಿಡುವುದರೊಂದಿಗೆ, ಕೇಸರಿ ಬಣ್ಣ ಹಚ್ಚಲು ಸರ್ಕಾರ ನಿರ್ಧರಿಸಿದೆ.
ಕೇಸರಿ ಕೂಡ ಬಣ್ಣವಲ್ಲವೇ? ಆ ಬಣ್ಣ ಚೆನ್ನಾಗಿರುತ್ತದೆ ಎಂದು ಆರ್ಕಿಟೆಕ್ಟ್ ಹೇಳಿದರೆ ಶಾಲೆ ಗೋಡೆಗಳಿಗೆ ಕೇಸರಿ ಬಣ್ಣವನ್ನೇ ಬಳಿಯಲಾಗುತ್ತದೆ. ಬಣ್ಣ, ಕಿಟಕಿ, ಬಾಗಿಲುಗಳ ವಿನ್ಯಾಸದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಸಚಿವ ನಾಗೇಶ್ ಸಮರ್ಥಿಸಿಕೊಂಡಿದ್ದಾರೆ.
ಹಾಸನ: ಸೈಕಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಸಂಪ್‌ಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾಸನದ ಅಣಚಿಹಳ್ಳಿ…
ಬೆಂಗಳೂರು: ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತೊಮ್ಮೆ ಗಂಭೀರ ಸಂಕಷ್ಟದ ಅಂಚಿಗೆ ತಲುಪಿದೆ. ನಾಲ್ಕು ನಿಗಮಗಳ ಸಾರಿಗೆ ನೌಕರರು ಮತ್ತೆ…
ಮೈಸೂರು: ಮಳವಳ್ಳಿಯಲ್ಲಿ ನಡೆಯಲಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ಮೈಸೂರಿಗೆ ಆಗಮಿಸಿದರು. ಮೈಸೂರಿನ…
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ವತಿಯಿಂದ ಇಂದು ಬೀದಿ ನಾಯಿಗಳನ್ನು ದತ್ತು ನೀಡುವ ಕಾರ್ಯಕ್ರಮವನ್ನು…
ಮೈಸೂರು: ರಾಜ್ಯ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ 2800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.…
ಮೈಸೂರು: ಆರ್‌ಸಿಬಿ ಅಭಿಮಾನಿಗಳಿಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಗುಡ್‌ನ್ಯೂಸ್ ನೀಡಿದ್ದು, ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ…