ಎಡಿಟೋರಿಯಲ್

ನಿನ್ನೆ ಮೊನ್ನೆ ನಮ್ಮ ಜನ: ಗೇಲಿ ಮಾಡದೆ ಯಾರೊಬ್ಬರನ್ನೂ ಬಿಡದ ಚಂಪಾ

(ಭಾಗ-೨)

ಜೆಪಿ ಚಳವಳಿ ವೇಳೆ, 70ರ ದಶಕದಲ್ಲಿ ನಮ್ಮ ಯುವಕರ ಮಾತುಗಳಲ್ಲಿ ಅತಿ ಹೆಚ್ಚು ಪ್ರಸ್ತಾಪವಾಗುತ್ತಿದ್ದ ಹೆಸರೆಂದರೆ ಚಂಪಾ. ನಾವೆಲ್ಲಾ ಅವರ ಬರಹಕ್ಕಿಂತ ಮಾತಿನ ಮೋಡಿಗೆ ಮರುಳಾದದ್ದೇ ಹೆಚ್ಚು. ಗಂಭೀರ ಗೋಷ್ಠಿಗಳಲ್ಲಿ ಮಾತಾಡಿದರೂ ಅಲ್ಲೊಂದು ನಗೆ ಚಿಮ್ಮಿಸುವ ಜಾಣ್ಮೆ ಅವರಿಗಿತ್ತು. ರಣ ಗಂಭೀರ ಪ್ರೊ.ಎಂಡಿಎನ್ ಕೂಡ ಹಲ್ಲು ಬಿಟ್ಟಿದ್ದುಂಟು. ಅವರು ಆಡಿಕೊಳ್ಳದ, ಲೇವಡಿ ಮಾಡದ ವ್ಯಕ್ತಿ, ವಸ್ತುಗಳೇ ಇರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಅಡ್ಡೆಸರು ಇಡುತ್ತಿದ್ದ ಮಹಾನ್ ಜೋಯಿಸರು ಅವರು.

ಜೊತೆಗಾರ ಸಿದ್ದಲಿಂಗ ಪಟ್ಟಣಶೆಟ್ಟರನ್ನು ರೆಡಿಮೇಡ್ ಸಿಟಿ ಮರ್ಚೆಂಟ್ ಎಂದು ಕರೆದರೆ, ಅವರ ಪತ್ನಿ ಹೇಮಾರನ್ನು ಗೋಲ್ಡಿ ಎಂದರು. ಒಂದು ಕಾಲದ ಆಪ್ತ ಲಂಕೇಶರು ಲಂಕ, ಲಂಗೇಶ್. ಹಂಪನಾ: ಜಹಾಂಪನಾ, ಅನಂತಮೂರ್ತಿ: ಅನಂಗಮೂರ್ತಿ, ಅನುಕೂಲಮೂರ್ತಿ, ದಲಿತ ಕವಿ ಡಾ.ಸಿದ್ದಲಿಂಗಯ್ಯ: ದಡಕಾಸಿ, ಮೂರು ಸಾವಿರ ಮಠದ ಶ್ರೀಗಳು: ಥ್ರೀ ಥೌಜಂಡೇಶ್ವರ, ದ.ರಾ.ಬೇಂದ್ರೆ: ಅಂಬಾಪುತ್ರ, ತಮ್ಮನ್ನೂ ಸಹ ಚಂದಾಪಾಟೀಲ, ಚಂಪಾಂಜಿ ಎಂದೆಲ್ಲ ಕರೆದುಕೊಂಡರು. ಅವರೆಲ್ಲ ಕ್ರಾಂತಿಕಾರಿ ಬರಹಕ್ಕೆ ವೇದಿಕೆ ಒದಗಿಸಿದ್ದ ಆಂದೋಲನ ಪತ್ರಿಕೆಯ ರಾಜಶೇಖರ ಕೋಟಿಯವರನ್ನು ಏನೆಂದು ಕರೆಯುತ್ತಿದ್ದರೆಂದು ಹೇಳುವುದೇ ಬೇಕಿಲ್ಲ.

ಎಷ್ಟೇ ಗಂಭೀರ ವಸ್ತುವಿನ ಕವನ, ನಾಟಕ, ಅಂಕಣ ಬರೆಯಲಿ ಅದರಲ್ಲಿ ಕೀಟಲೆ, ವ್ಯಂಗ್ಯದ ಜೊತೆಗೆ ನಗೆಯನ್ನೂ ಹೊಳೆಯಿಸುವುದು ಚಂಪಾ ವೈಶಿಷ್ಟ್ಯ.

ಬೇಂದ್ರೆ ಅವರೊಡನೆ ಜಗಳ ಜಗತ್ಪ್ರಸಿದ್ದ.

ಹೋಗಿ ಬರ್ತೇನಜ್ಜಾ. ಹೋಗಿ ಬರ್ತೇನಿ. ನಿನ್ನ ಪಾದದ ದೂಳಿ ನನ್ನ ಹಣೆಯ ಮೇಲಿರಲಿ. ಕಣ್ಣೊಳಗೆ ಮಾತ್ರ ಅದು ಬೀಳದಿರಲಿ!

ಒಂದೇ ದಿನ ಮಂತ್ರಿಯಾದರೂ ಸಾಕು ಮಾಜಿ ಎಂಬ ನಾಮ ಕೊನೆ ತನಕ.

ಎಪ್ಪತ್ತರ ದಶಕದಲ್ಲಿ ಜೆಪಿ ಚಳವಳಿಗಾಗಿ ಪ್ರೊ.ಎಂಡಿಎನ್ ಕರೆ ಕೊಟ್ಟರೆ ಸಾಕು, ಎಲ್ಲಿದ್ದರೂ, ಹೇಗಿದ್ದರೂ, ಚಂಪಾ ಧಾವಿಸಿ ಬಂದು ಬಿಡುತ್ತಿದ್ದರು. ನಾವೋ? ನಿರುದ್ಯೋಗಿ ಕ್ರಾಂತಿಕಾರಿಗಳು. ಯಾವ ಊರಲ್ಲಿ ಮೀಟಿಂಗ್ ಕರೆಯಲಿ ನಮ್ಮ ಪಟಾಲಂ ಹಾಜರಿರುತ್ತಿತ್ತು. ನಮಗೆಲ್ಲಾ ಮುಖ್ಯ ಆಕರ್ಷಣೆಯೇ ಚಂಪಾ ಮತ್ತು ತೇಜಸ್ವಿ, ಎ.ವಿಶ್ವನಾಥ್‌ಅವರುಗಳು ಮಾತಾಡುತ್ತಿದ್ದರೆ ಮೈಯೆಲ್ಲಾ ಕಿವಿಯಾಗಿ ನಿಲ್ಲುತ್ತಿದ್ದೆವು.

ತುರ್ತು ಪರಿಸ್ಥಿತಿಯ ಕರಾಳ ಧೋರಣೆ ಖಂಡಿಸಿ ಜೈಲಿಗೆ ಹೋಗಿದ್ದ ಏಕೈಕ ಕನ್ನಡ ಸಾಹಿತಿ ಚಂಪಾ, ಸಾಹಿತ್ಯ ಸಮ್ಮೇಳನವನ್ನು ಕುರಿತು ಹಾಮಾನಾ ಬರೆದರು: ‘ಸಾಹಿತಿಗಳೆಲ್ಲರೂ ರಾಜಕಾರಣಿಗಳಾಗಿ ಮಾತಾಡಿದರೆ, ರಾಜಕಾರಣಿ ದೇವರಾಜ ಅರಸು ಸಾಹಿತಿಯಂತೆ ಮಾತಾಡಿದರು.’

ಪ್ರಶ್ನೆ : ‘ಇಂತಹ ಅರಸು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಯಾವುದು‘?

ಉತ್ತರ : ಚಂಪಾ ಅವರನ್ನು ಜೈಲಿಗೆ ಕಳಿಸಿದ್ದು

ಪ್ರಶ್ನೆ : ಅರಸು ಕನ್ನಡ ಸಾಹಿತ್ಯಕ್ಕೆ ಮಾಡಿದ ದೊಡ್ಡ ಹಾನಿ ಯಾವುದು?

ಉತ್ತರ : ಚಂಪಾರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು!

ಈ ಚಟಾಕಿಯನ್ನೂ ಚಂಪಾರೇ ಹಾರಿಸಿದ್ದರು.

1987ರ ಅದೊಂದು ರಾತ್ರಿ ಎರಡು ಗಂಟೆ ಸಮಯ ಮೀರಿತ್ತು. ರಾತ್ರಿ ಗಸ್ತಿನಲ್ಲಿದ್ದೆ, ಚಂಪಾ ಬಂದಿದ್ದಾರೆ. ಮಹಾರಾಜ ಕಾಲೇಜು ಹಾಸ್ಟೆಲಿನಲ್ಲಿ ಉಳಿದಿದ್ದಾರೆ ಎಂಬ ವಿಷಯ ತಿಳಿದಿತ್ತು. ಪೊಲೀಸರಿಗೆ ಬಿಡು ಬಿಸಿಲೇನು? ನಡು ರಾತ್ರಿಯೇನು? ಹೋದೆ. ಬಾಗಿಲು ತಟ್ಟಿ ಎಬ್ಬಿಸುವ ಪ್ರಮೇಯವೇ ಬರಲಿಲ್ಲ. ಅರೆ ತೆರೆದಿದ್ದ ಬಾಗಿಲು. ಒಳಹೋದೆ.

ಏನೋ ಬರೆಯುತ್ತಿದ್ದ ಚಂಪಾ ದಡಕ್ಕನೆದ್ದರು. ಗುರ್ತು ಸಿಕ್ಕಿ ‘ಏನ್ರೀ ಜೇಬರಾ?’ ಎಂದರು.

‘ಯಾಕೆ ಹೆದರಿಕೊಂಡ್ರಾ ಸಾರ್?‘ ‘ನಿಂ ಪೊಲೀಸ್ರು ಎಷ್ಟು ರೂಡ್ಯಾಗೌರೆ ಅಂದ್ರೆ ಹೆದ್ರಿಕೆನೇ ಆಗವೊಲ್ದು‘

‘ನಿದ್ದೆ ಬರಲಿಲ್ವಾ ಸಾರ್‘?

‘ಸಂಕ್ರಮಣ ಪ್ರೆಸ್ಸಿಗೆ ಹೋಗೂ ತಂಕಾ ನಿದ್ದೆ ಸುಳಿಯಾಂಗಿಲ್ಲ ನೋಡ್ರೀ. ಅದು ಟೈಂ ಬೌಂಡ್ ಕೆಲಸ. ನಿಗದಿಯಾದ ದಿನಕ್ಕೆ ಓದುಗರನ್ನು ಮುಟ್ಟಲೇಬೇಕು. ಕುತ್ತಿಗೆ ಪಟ್ಟಿ ಹಿಡದು ಚಂದಾ ವಸೂಲಿ ಮಾಡಿದ್ದೀನಿ. ನೆಂವಾ ಹೇಳಂಗಿಲ್ಲ. ಪತ್ರಿಕೆ ಟೈಮಿಗೆ ಸರಿಯಾಗಿ ಕೊಡಲೇ ಬೇಕು.’

‘ಬೆಳಗಿನ ಜಾವ ಟ್ರೇನಿಗೆ ಹೋಗ್ಬೇಕೂ ಅಂದ್ರಿ. ಸ್ವಲ್ಪ ರೆಸ್ಟ್ ಬೇಡವಾ ಸಾರ್’?

‘ಕೆಲಸಾ ಮಾಡಿಕೋತಾ ಹೋಗೋದೇ ರೆಸ್ಟು. ಅದೇ ಬೆಸ್ಟು. ತುರ್ತಿನ ತಳಮಳ ಇದ್ದಾಗಲೇ ಲೇಖಕ ಜೀವಂತ ಇರ್ತಾನಾ ನೋಡ್ರಿ. ಟ್ರೇನ್‌ನಲ್ಲಿ ಹೇಗೂ ಟೈಂ ಇರುತ್ತಲ್ಲಾ? ತೂಕಡಿಸೋದ್ಯಾಕೆ? ಗಡದ್ದು ನಿದ್ದಿ ಹೊಡೆದರಾಯ್ತು’

ಬರವಣಿಗೆ ಮುಗಿಸುವ ಧಾವಂತದಲ್ಲಿ ಅವರಿದ್ದರು. ಅವರೊಡನೆ ಇನ್ನಷ್ಟು ಮಾತಾಡುವ ಇರಾದೆ ನನಗಿತ್ತು. ನನ್ನ ವರಸೆ ನೋಡಿ ಇವನು ಏಳೋದಿಲ್ಲ ಅಂತ ಖಾತ್ರಿಯಾಯ್ತು.

‘ಇನ್ನೆರಡೇ ಗಂಟೆ ಇರೋದು. ಅಷ್ಟರಲ್ಲಿ ಈ ಕೆಲಸ ಮುಗಿಸಿ ಬಿಡ್ತೀನಿ. ನೀವಿಲ್ಲೇ ಕೂಡ್ರಿ. ಅಲ್ಲೀ ತಂಕಾ ಈ ಪುಸ್ತಕ ಓದ್ತಾ ಇರಿ. ಮತ್ತ ಬುಕ್ಕಿನ ದುಡ್ಡು, ಸಂಕ್ರಮಣದ ಚಂದಾ ಎರಡೂ ಕೊಡ್ರೀ!‘

ಇದಕ್ಕಿಂತ ಚೆನ್ನಾಗಿ ಗೆಟೌಟ್ ಅನ್ನಲು ಸಾಧ್ಯವಿರಲಿಲ್ಲ. ಪುಸ್ತಕದ ಬೆಲೆ ಮತ್ತು ಚಂದಾ ತೆತ್ತು ಜಾಗ ಖಾಲಿ ಮಾಡಿದೆ.

(ಮುಗಿಯಿತು)

andolanait

Recent Posts

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಲೋಕಾ ಪೊಲೀಸ್‌ ಕಸ್ಟಡಿಗೆ : ಕೋರ್ಟ್‌ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್‌…

6 hours ago

ಅನಾರೋಗ್ಯ ಹಿನ್ನಲೆ ದುಬಾರೆ ಸಾಕಾನೆ ʻತಕ್ಷʼ ಸಾವು

ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…

8 hours ago

ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕು ಇರಿತ

ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…

9 hours ago

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

9 hours ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

9 hours ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

9 hours ago