ಈ ವಾರ ಶಿವರಾಜಕುಮಾರ್ ಅಭಿನಯದ ‘ವೇದ’ ಚಿತ್ರ ತೆರೆಗೆ ಬರುತ್ತಿದೆ. ಅದು ಅವರ ನಟನೆಯ ೧೨೫ನೇ ಚಿತ್ರ. ವಿಶೇಷ ಎಂದರೆ ಈ ಚಿತ್ರವನ್ನು ಅವರ ಪತ್ನಿ ಗೀತಾ ಶಿವರಾಜಕುಮಾರ್ ತಮ್ಮ ಗೀತಾ ಪಿಕ್ಚರ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವುದು. ನೂರನೇ ಚಿತ್ರವನ್ನು ತಮ್ಮ ಸಂಸ್ಥೆಯ ಮೂಲಕ ನಿರ್ಮಿಸಬೇಕು ಎಂದು ಬಯಸಿದ್ದರಂತೆ ಅವರು. ಆದರೆ, ರಕ್ಷಿತಾ ಪ್ರೇಮ್ ಬಯಸಿದ್ದರಿಂದ ಅವರಿಗೆ ಅವಕಾಶ ಮಾಡಿಕೊಟ್ಟರು.
ನೂರನೇ ಚಿತ್ರವನ್ನು ಬೇರೆಯವರು ನಿರ್ಮಿಸಿದರೂ, ಅದರ ನೆನಪಿನ ಅದ್ಧೂರಿ ಸಮಾರಂಭ ಗೀತಾ ಶಿವರಾಜಕುಮಾರ್ ಮೇಲುಸ್ತುವಾರಿಯಲ್ಲಿ ನಡೆದಿತ್ತು. ಅಲ್ಲಿಯವರೆಗೆ ಅವರ ಚಿತ್ರಗಳಲ್ಲಿ ಕೆಲಸ ಮಾಡಿದ ಸಹ ಕಲಾ ವಿದರು, ತಂತ್ರಜ್ಞರಾದಿಯಾಗಿ ಎಲ್ಲರಿಗೂ ಶಾಲು ಹೊದಿಸಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದ ಕಾರ್ಯಕ್ರಮವದು.
ಶಿವರಾಜಕುಮಾರ್ ಅವರ ಮೊದಲ ಚಿತ್ರವನ್ನು ದಾಕ್ಷಾಯಿಣಿ ಸಿನಿ ಕಂಬೈನ್ಸ್ ಮೂಲಕ ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ್ದರು. ಸಿಂಗೀತಂ ಶ್ರೀನಿವಾಸ್ ನಿರ್ದೇಶಕರು. ಅದಾಗಲೇ ಬಾಲನಟನಾಗಿ ಹೆಸರಾಗಿದ್ದ ಪುನೀತ್ ರಾಜಕುಮಾರ್ ಅವರ ಪರೋಕ್ಷ ಸ್ಛೂರ್ತಿಯೋ, ಇನ್ನೇನೋ, ಚಿತ್ರಗಳಲ್ಲಿ ನಟಿಸಬೇಕು ಎನ್ನುವ ತಮ್ಮ ಹಂಬಲವನ್ನು ತಾಯಿಯ ಬಳಿ ಹೇಳಿಕೊಳ್ಳುತ್ತಾರೆ ಶಿವಣ್ಣ.
‘ನಮಗೆ ಚಿತ್ರರಂಗಕ್ಕೆ ಬರಲು ರಂಗಭೂಮಿಯ ಅನುಭವ ನೆರವಾಯಿತು. ಈಗ ಅಭಿನಯ ತರಬೇತಿ ನೀಡುವ ಶಾಲೆಗಳಿವೆ. ತರಬೇತಿ ಪಡೆದು ಬರಲಿ’ ಎಂದು ಈ ವಿಷಯ ತಿಳಿಯುತ್ತಲೇ ರಾಜಕುಮಾರ್ ಅವರು ಹೇಳುತ್ತಾರೆ. ಅದರಂತೆ, ಮದರಾಸಿನಲ್ಲಿ (ಈಗ ಚೆನ್ನೈ) ಅಭಿನಯ ತರಬೇತಿ ಪಡೆದು ಬಂದ ಪುಟ್ಟಸ್ವಾಮಿ (ಅವರ ಮೊದಲ ಹೆಸರು ನಾಗರಾಜ ಶಿವ ಪುಟ್ಟಸ್ವಾಮಿ, ಮನೆಯಲ್ಲಿ ಪುಟ್ಟಸ್ವಾಮಿ), ಶಿವರಾಜಕುಮಾರ್ ಆಗಿ ‘ಆನಂದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ಮತ್ತೆ ಹಿಂತಿರುಗಿ ನೋಡಲಿಲ್ಲ.
ಮೊದಲ ಮೂರು ಚಿತ್ರಗಳು ರಜತೋತ್ಸವ ಆಚರಿಸುವುದರೊಂದಿಗೆ ‘ಹ್ಯಾಟ್ರಿಕ್ ಹೀರೋ’ ಅನಿಸಿಕೊಂಡ ಶಿವಣ್ಣ, ಅವರ ತಂದೆ ನಟಿಸಿದ ‘ಬೇಡರ ಕಣ್ಣಪ್ಪ’ ಮತ್ತು ‘ಗಂಧದ ಗುಡಿ’ ಚಿತ್ರಗಳ ಮರು ಆವೃತ್ತಿಗಳ ಮುಖ್ಯಪಾತ್ರದಲ್ಲಿ ನಟಿಸಿದರು.
ಚಿತ್ರಗಳ ಗಲ್ಲಾಪೆಟ್ಟಿಗೆಯ ಗಳಿಕೆ ಏನೇ ಇರಲಿ, ಕನ್ನಡ ಚಿತ್ರರಂಗದಲ್ಲಿ ಬಿಡುವಿಲ್ಲದ ನಟ ಶಿವರಾಜಕುಮಾರ್. ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದ ಮೂಲಕ ಹೊಸದೊಂದು ಪರಂಪರೆಗೆ ನಾಂದಿ ಹಾಡಿದ ಶಿವಣ್ಣ ಅವರ ‘ಜನುಮದ ಜೋಡಿ’ ಚಿತ್ರದ ಗಳಿಕೆ ದಾಖಲೆಯದು. ತಮ್ಮ ಓರಗೆಯ ಎಲ್ಲಾ ಪ್ರಮುಖ ನಟರೊಂದಿಗೆ ನಟಿಸಿರುವ ಶಿವರಾಜಕುಮಾರ್ ಮೊನ್ನೆ ತಮ್ಮ ಮನೆಯಲ್ಲೇ ‘ವೇದ’ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದರು.
೧೨೫ನೇ ಚಿತ್ರವಾದರೂ, ಮೊದಲ ಚಿತ್ರದ ಸಂದರ್ಭದಂತೆ, ಆತಂಕ, ಭಯ ಇದ್ದೇ ಇದೆ ಎಂದು ಶಿವಣ್ಣ ಹೇಳುತ್ತಿದ್ದರೆ, ಇದೇ ಮಾತನ್ನು ಇನ್ನೂರು ಚಿತ್ರಗಳನ್ನು ಪೂರೈಸಿದ ರಾಜಕುಮಾರ್ ಅವರು ಹೇಳುತ್ತಿದ್ದುದು ನೆನಪಾಯಿತು. ಪತ್ರಕರ್ತರ ಜೊತೆಗಿನ ತಮ್ಮ ಸಂಬಂಧವನ್ನು ಹೇಳುತ್ತಾ, ‘ನೀವು ನಮ್ಮ ಕುಟುಂಬದವರೇ. ನನ್ನ ಮೊದಲ ಚಿತ್ರದಿಂದ ಇಂದಿನವರೆಗೆ ಪ್ರತಿ ಸಿನಿಮಾವನ್ನೂ ಮೆಚ್ಚಿ, ತಿದ್ದಿ, ವಿಮರ್ಶೆ ಮಾಡಿ ನನ್ನನ್ನು ಬೆಳೆಸುತ್ತಾ ಬಂದಿದ್ದೀರಿ. ಪ್ರತಿ ಸಲ ಎದ್ದಾಗಲೂ, ಬಿದ್ದಾಗಲೂ ನನ್ನ ಕೈಹಿಡಿದು ನಡೆಸಿದ್ದೀರಿ. ‘ವೇದ’ ಚಿತ್ರಕ್ಕೂ ಎಂದಿನಂತೆ ನಿಮ್ಮ ಪ್ರೀತಿ ಹಾರೈಕೆ ನಮ್ಮ ಜೊತೆಗಿರಲಿ’ ಎಂದರು.
ಮೊದಲ ಚಿತ್ರವನ್ನು ಅಮ್ಮ ನಿರ್ಮಿಸಿದರೆ, ೧೨೫ನೇ ಚಿತ್ರವನ್ನು ನನ್ನ ಪತ್ನಿ ನಿರ್ಮಿಸಿದ್ದಾರೆ. ನಿರ್ಮಾಪಕಿಯಾಗಿ ಗೀತಾ ಅಮ್ಮನಂತೆಯೇ ಧಾರಾಳಿ. ಅಮ್ಮ ಮತ್ತು ಗೀತಾ ನನ್ನ ಎರಡು ಕಣ್ಣುಗಳಂತೆ ಎಂದ ಶಿವಣ್ಣ, ಈ ಚಿತ್ರ ನನ್ನೊಬ್ಬನದಲ್ಲ, ಎಲ್ಲಾ ಸಹಕಲಾವಿದರು, ತಂತ್ರಜ್ಞರು, ಕಾರ್ಮಿಕರ ಸಹಕಾರದಿಂದ ಈ ಚಿತ್ರ ಸಾಧ್ಯವಾಯಿತು ಎಂದರು.
ತಮ್ಮ ಅರವತ್ತನೇ ವಯಸ್ಸಿನಲ್ಲೂ ಇಂಗದ ಉತ್ಸಾಹದೊಂದಿಗೆ ಶಿವಣ್ಣ ‘ಈಗ ೧೨೫, ಇನ್ನೂರು ಆಗಲಿ ಮುನ್ನೂರು ಆಗಲಿ, ಸಾವಿರ ಆಗಲಿ…’ ಎಂದರು. ಈಗಿರುವಂತೆ ಬಹುಶಃ ಶಿವಣ್ಣನ ನಂತರದ ಪೀಳಿಗೆಯ ನಟರು ಶತಚಿತ್ರ ಪೂರೈಸುವುದೂ ಕಷ್ಟವಾಗಬಹುದೇನೋ.
ಇದರ ಜೊತೆಯಲ್ಲೇ ೨೦೨೨ ಕನ್ನಡ ಚಿತ್ರರಂಗ ಸಂಭ್ರಮಿಸಿದ ವರ್ಷ.ಸಮಾನಾಂತರ ಚಿತ್ರಪರಂಪರೆಯ ಮೂಲಕ ಕನ್ನಡ ಚಿತ್ರರಂಗ ಈ ಹಿಂದೆಯೇ ಸೀಮೋಲ್ಲಂಘನ ಮಾಡಿತ್ತು. ಆದರೆ ಗಳಿಕೆಯಲ್ಲಿ ಭಾರತದ ಇತರ ಭಾಷೆಗಳ ಚಿತ್ರಗಳಿಗೆ ಸರಿದೊರೆಯಾಗಿ, ಒಂದು ಕೈ ಮೇಲೆಯೇ ಎನ್ನುವಂತೆ ಸಂಭ್ರಮಿಸಲು ಸಾಧ್ಯವಾದ ವರ್ಷವಿದು. ಪ್ರಶಾಂತ್ ನೀಲ್ ಹೊಂಬಾಳೆ ಸಂಸ್ಥೆಗಾಗಿ ನಿರ್ದೇಶಿಸಿದ ‘ಕೆಜಿಎಫ್ ಚಾಪ್ಟರ್ ೨’ ಗಳಿಕೆ ಸಹಸ್ರ ಕೋಟಿಯನ್ನು ದಾಟಿದರೆ, ಅದರ ಪ್ರಚಾರದ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಅದೇ ಸಂಸ್ಥೆ ನಿರ್ಮಿಸಿ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿದ ‘ಕಾಂತಾರ’ದ ದಿಗ್ವಿಜಯ, ಗಲ್ಲಾಪೆಟ್ಟಿಗೆಯಲ್ಲಿ ಅದರ ಗಳಿಕೆ, ಅದಕ್ಕೆ ಬಂದ, ಸಂದ ಪ್ರತಿಕ್ರಿಯೆಗಳಿಗೆ ಸಾಟಿ ಇಲ್ಲ. ಕಿರಣ್‌ರಾಜ್ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ ತಮ್ಮ ಪರಂವಾ ಸ್ಟುಡಿಯೋ ಮೂಲಕ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ ‘೭೭೭ ಚಾರ್ಲಿ’ ಈ ವರ್ಷದ ಮತ್ತೊಂದು ಚಿತ್ರ. ಈ ಮೂರೂ ಚಿತ್ರಗಳು ಐಎಂಡಿಬಿ ಆಯ್ಕೆ ಮಾಡಿದ ದೇಶದ ಮೊದಲ ಹತ್ತು ಚಿತ್ರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಕನ್ನಡ ಚಿತ್ರರಂಗ ಕಂಡುಕೇಳರಿಯದ ದಾಖಲೆ.
೨೦೨೨ರ ಈ ಸಾಧನೆಯನ್ನು ಗಮನಿಸುತ್ತಿದ್ದಂತೆ ಐವತ್ತು ವರ್ಷಗಳ ಹಿಂದೆ, ೧೯೭೨ರಲ್ಲಿ ತೆರೆಕಂಡ ೨೪ ಚಿತ್ರಗಳಲ್ಲಿ ಸುವರ್ಣವರ್ಷದ ನಾಲ್ಕು ಚಿತ್ರಗಳು ನೆನಪು. ‘ವಂಶವೃಕ್ಷ’, ‘ಬಂಗಾರದ ಮನುಷ್ಯ’, ಕುಳ್ಳ ಏಜಂಟ್ ೦೦೦’, ‘ನಾಗರಹಾವು’ ಈ ನಾಲ್ಕು ಚಿತ್ರಗಳು. ಜಿ.ವಿ.ಅಯ್ಯರ್ ನಿರ್ಮಿಸಿ, ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತರು ನಿರ್ದೇಶಿಸಿದ ಚಿತ್ರ ‘ವಂಶವೃಕ್ಷ’ ಎಸ್.ಎಲ್.ಭೈರಪ್ಪನವರ ಅದೇ ಹೆಸರಿನ ಕಾದಂಬರಿ ಆಧರಿಸಿದ್ದು. ಅದಕ್ಕೂ ಎರಡು ವರ್ಷಗಳ ಹಿಂದೆ ‘ಸಂಸ್ಕಾರ’ ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕನ್ನಡ ಚಿತ್ರರಂಗದಲ್ಲಿ ‘ವಂಶವೃಕ್ಷ’ ಆ ದಾರಿಯಲ್ಲಿ ಮತ್ತೊಂದು ಚಿತ್ರವಾಯಿತು.
ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’, ಸಿದ್ದಲಿಂಗಯ್ಯನವರು ನಿರ್ದೇಶಿಸಿದ ಚಿತ್ರ. ಚಿತ್ರಮಂದಿರವೊಂದರಲ್ಲಿ ಎರಡು ವರ್ಷಗಳ ಕಾಲ ಸತತ ಪ್ರದರ್ಶನ ಕಂಡ ಚಿತ್ರ ಮಾತ್ರವಲ್ಲ, ಆ ಚಿತ್ರ ನೋಡಿದ ಕೆಲವು ಮಂದಿ ಪದವೀಧರ ಯುವಕರು ತಮ್ಮ ಹಳ್ಳಿಗಳಿಗೆ ತೆರಳಿ ವ್ಯವಸಾಯ ಮಾಡತೊಡಗಿದ್ದು ಈಗ ಇತಿಹಾಸ.
‘ನಾಗರಹಾವು’ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರ. ಈ ಚಿತ್ರದ ಮೂಲಕ ವಿಷ್ಣುವರ್ಧನ್ ಮತ್ತು ಅಂಬರೀಶ್ ಪರಿಚಯವಾಗುತ್ತಾರೆ. ಅವರಿಬ್ಬರೂ ಮುಂದೆ ಕನ್ನಡ ಚಿತ್ರರಂಗದಲ್ಲಿ ನಡೆದ ಹಾದಿ ಎಲ್ಲರಿಗೂ ತಿಳಿದೇ ಇದೆ. ಈ ಮೂರೂ ಚಿತ್ರಗಳೂ ಕಾದಂಬರಿಗಳನ್ನು ಆಧರಿಸಿದ್ದು ಎನ್ನುವುದು ಗಮನಿಸಬೇಕಾದ ಅಂಶ.
ಈ ಚಿತ್ರದ ಜೊತೆಯಲ್ಲಿಯೇ ‘ಕುಳ್ಳ ಏಜೆಂಟ್ ೦೦೦’ ಕೂಡ
ಸೇರುತ್ತದೆ. ದ್ವಾರಕೀಶ್ ಮುಖ್ಯಪಾತ್ರದ ಈ ಚಿತ್ರವನ್ನು ರವಿ ನಿರ್ದೇಶಿಸಿದ್ದರು. ‘ಎತ್ತರ ಇಲ್ಲ, ಬುದ್ಧಿ ಇಲ್ಲ, ಏನೂ ಇಲ್ಲ, ಎಲ್ಲ ಸೊನ್ನೆ ಎಂದುಕೊಂಡು ಬಂದ ದ್ವಾರಕೀಶ್ ಮುಂದೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹಾದಿಯನ್ನು ಕಂಡುಕೊಂಡರು.
ಕನ್ನಡ ಚಿತ್ರರಂಗದ ಈ ವರ್ಷದ ಸಂಭ್ರಮದ ಬೆನ್ನಲ್ಲೇ ‘ಕ್ರಾಂತಿ’ ಚಿತ್ರದ ಹಾಡೊಂದರ ಬಿಡುಗಡೆಯ ಸಂದರ್ಭದ ಘಟನೆ. ಘಟನೆಯನ್ನು ವೈಯಕ್ತಿಕವಾಗಿ ಎಲ್ಲರೂ ಖಂಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕಲಾವಿದರ ಸಂಘದ ಮೌನವನ್ನು ಪ್ರಶ್ನಿಸಲಾಗುತ್ತಿದೆ. ಅಂಬರೀಶ್ ನಿಧನಾನಂತರ ಕಲಾವಿದರ ಸಂಘದ ಚಟುವಟಿಕೆಗಳ ಕುರಿತಂತೆ ಯಾವುದೇ ಸುದ್ದಿ ಇಲ್ಲ. ಕಲಾವಿದರ ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಗಳು, ಆಡಿಯೋ ಬಿಡುಗಡೆ, ಚಿತ್ರಗಳ ಪ್ರದರ್ಶನ ನಡೆಯುತ್ತಿರುತ್ತದೆ. ಆದರೆ ಕಲಾವಿದರ ಸಂಘದ ಚಟುವಟಿಕೆಗಳು ಇಲ್ಲ. ಸಾಕಷ್ಟು ಮಂದಿ ಹೊಸ ಕಲಾವಿದರು ಬಂದಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಕಲಾವಿದರ ಸಂಘ ಅವರಿಗೆ ಒತ್ತಾಸೆಯಾಗಿ ನಿಲ್ಲುವ ಕೆಲಸ ಆಗಬೇಕು ಎನ್ನುವುದು ಹಿರಿಯ ಕಲಾವಿದರ ಆಗ್ರಹ.
ಜನಪ್ರಿಯ ಗೀತ ರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕರಾಗುತ್ತಿರುವ ಸುದ್ದಿ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಕೆಲವು ವರ್ಷಗಳ…
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘‘UI’ ಚಿತ್ರವು ಡಿ.20ರಂದು ಬಿಡಗುಡೆಯಾಗಿ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಚಿತ್ರವನ್ನು ಸಮಾಜದ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಿದ ಮೂರು ದಿನಗಳ ಅಕ್ಷರ ಜಾತ್ರೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಪ್ರತಿಯೊಬ್ಬರೂ ಪ್ರಾಮಾಣಿಕ ಹಾಗೂ…
ನವದೆಹಲಿ: ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ವಿವಿಧ ರಾಜ್ಯಗಳ 17 ಮಕ್ಕಳು ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 17…
ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವಂತೆ ಕೋರಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ…
ಬಳ್ಳಾರಿ: ನಮ್ಮನ್ನು ಅಪ್ಪಿಕೊಳ್ಳುವ ಸರ್ಕಾರವನ್ನು ಜಾರಿಗೆ ತಂದು ಮೀಸಲಾತಿ ಪಡೆದೇ ಪಡೆಯುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಈ ಪಂಚಮಸಾಲಿ…