ಎಡಿಟೋರಿಯಲ್

ವೈಡ್ ಆಂಗಲ್ : ಶತಮಾನೋತ್ಸವದ ಹೊಸ್ತಿಲಲ್ಲಿ ವಿಶ್ವಖ್ಯಾತಿ ಪಡೆದ ಮೈಸೂರಿನ ಮೂವರು

ನವೆಂಬರ್ ೨೬ರಂದು ಸಿನಿಮಾ ಛಾಯಾಗ್ರಾಹಕರಾಗಿ ಹೆಸರಾಗಿ, ಫಾಲ್ಕೆ ಪ್ರಶಸ್ತಿಗೆ ಭಾಜನರಾದ ವಿ.ಕೆ.ಮೂರ್ತಿ ನೂರನೇ ವರ್ಷಕ್ಕೆ ಕಾಲಿಟ್ಟರೆ, ನಿನ್ನೆ (ಡಿ.೮) ಸಾಕ್ಷ ಚಿತ್ರಗಳ ಪಿತಾಮಹ ಎಂ.ವಿ.ಕೃಷ್ಣಸ್ವಾಮಿ ಅವರ ನೂರನೇ ಜನ್ಮದಿನ. ಜನವರಿ ತಿಂಗಳ ೨೭ರಂದು, ಹಾಲಿವುಡ್‌ನಲ್ಲಿ ಮಿಂಚಿದ ಮೊದಲ ಭಾರತೀಯ, ಮೈಸೂರಿನ ಸಾಬು ಜನ್ಮದಿನ. ಕಾಕತಾಳೀಯವೆಂದರೆ, ಮೂವರೂ ಕನ್ನಡನಾಡಿನ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರಾದ ಮೈಸೂರಿನವರು. ಮೂವರ ಜನ್ಮಶತಮಾನೋತ್ಸವವೂ ಒಂದೇ ವರ್ಷದಲ್ಲಿ ಬರುತ್ತಿದ್ದು, ಮೂವರೂ ಚಲನಚಿತ್ರ ಕ್ಷೇತ್ರದಲ್ಲಿ ಖ್ಯಾತನಾಮರಾಗಿ ಮೆರೆದವರು.

ಮೈಸೂರಿನ ಅರಮನೆಯ ಗಜಲಾಯದ ಹುಡುಗನೊಬ್ಬ ಹಾಲಿವುಡ್ ನಟನಾಗಿ ಮೆರೆದ ವಿಷಯ ಬಹಳಷ್ಟು ಮಂದಿಗೆ ತಿಳಿದಿರಲಾರದು. ಮೈಸೂರಿನ ಕಾರಾಪುರದಲ್ಲಿ ಜನಿಸಿದ ಸಾಬು ತನ್ನ ಒಂಬತ್ತನೆಯ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ನಂತರ ಮೈಸೂರು ಅರಮನೆಯ ಲಾಯದಲ್ಲಿರುತ್ತಾನೆ. ಆನೆಗಳ ಜೊತೆಗಿನ ಒಡನಾಟವೇ ಮುಂದೆ ಅವನನ್ನು ಹಾಲಿವುಡ್‌ವರೆಗೆ ಒಯ್ದಿತ್ತು. ಮೈಸೂರಿಗೆ ಬಂದಿದ್ದ ಬ್ರಿಟಿಷ್ ಸಾಕ್ಷ್ಯಚಿತ್ರ ನಿರ್ಮಾಪಕ ರಾಬರ್ಟ್ ಫ್ಲಾಹರ್ಟ್ ಕಣ್ಣಿಗೆ ಬಿದ್ದ ಸಾಬು, ಮುಂದೆ ‘ಎಲಿಫೆಂಟ್ ಬಾಯ್’ ಚಿತ್ರದ ಶೀರ್ಷಿಕಾ ಪಾತ್ರಧಾರಿ ಆಗುತ್ತಾನೆ.

೧೯೩೭ರಲ್ಲಿ ಈ ಚಿತ್ರ ತೆರೆಗೆ ಬರುತ್ತದೆ. ರುಡ್ಯಾರ್ಡ್ ಕಿಪ್ಲಿಂಗ್ ಅವರ ‘ಜಂಗಲ್ ಬುಕ್’ ನಿಂದ ಆರಿಸಿದ ‘ಟೂಮೈ ಆಫ್ ದಿ ಎಲಿಫೆಂಟ್ಸ್’ ಆಧರಿಸಿ ತಯಾರಾದ ಚಿತ್ರವಿದು. ಫ್ಲಾಹರ್ಟಿ ಮತ್ತು ಝೊಲ್ಟನ್ ಕೊರ್ಡಾ ನಿರ್ದೇಶನದ ಈ ಚಿತ್ರವನ್ನು ಮೈಸೂರಿನಲ್ಲಿ ಹಾಗೂ ಡೆನ್‌ಹ್ಯಾಮ್‌ನಲ್ಲಿರುವ ಲಂಡನ್ ಫಿಲಂಸ್ ಸ್ಟುಡಿಯೋ ದಲ್ಲಿ ಚಿತ್ರೀಕರಿಸಲಾಯಿತು. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸಾಬು ಈ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ನಟಿಸಿ ದೊಡ್ಡ ಹೆಸರಾದರು. ಡ್ರಮ್ (೧೯೩೮), ದಿ ಥೀಫ್ ಆಫ್ ಬಾಗ್ದಾದ್ (೧೯೪೦), ಮತ್ತು ದಿ ಜಂಗಲ್ ಬುಕ್ (೧೯೪೧) ನಲ್ಲಿ ನಟಿಸಿದ ನಂತರ ಸಾಬು ಹಾಲಿವುಡ್‌ಗೆ ಹೋಗಿ ಅರೇಬಿಯನ್ ನೈಟ್ಸ್ (೧೯೪೨), ವೈಟ್ ಸ್ಯಾವೇಜ್ (೧೯೪೩) ಮತ್ತು ಕೋಬ್ರಾ ವುಮನ್ (೧೯೪೪) ಮುಂತಾದ ಚಿತ್ರಗಳಲ್ಲಿ ನಟಿಸಿದರು.

೧೯೪೪ರಲ್ಲಿ ಅಮೆರಿಕನ್ ಪ್ರಜೆಯಾದ ನಂತರ, ಅಲ್ಲಿನ ಸೇನೆಗೆ ಸೇರಿದ ಸಾಬು, ಮುಂದೆ ಅಮೆರಿಕದ ಅಧ್ಯಕ್ಷರಾದ ರೊನಾಲ್ಡ್ ರೀಗನ್ ಜೊತೆಗೆ ವಾಯುಸೇನೆಯಲ್ಲಿದ್ದು, ಟೈಲ್ ಗನ್ನರ್ ಆಗಿ ಸೇವೆ ಸಲ್ಲಿಸಿದರು. ಅವರ ಶೌರ್ಯಕ್ಕಾಗಿ ಅವರಿಗೆ ಪ್ರತಿಷ್ಠಿತ ಗೌರವ ಡಿಸ್ಟಿಂಗ್ವಿಶ್ಡ್ -ಯಿಂಗ್ ಕ್ರಾಸ್ ನೀಡಲಾಯಿತು.

ಯುದ್ಧಾನಂತರ ಅವರು ಬ್ಲ್ಯಾಕ್ ನಾರ್ಸಿಸಸ್ (೧೯೪೭) ಮತ್ತು ದಿ ಎಂಡ್ ಆಫ್ ದಿ ರಿವರ್ (೧೯೪೭) ನಂತಹ ಹಲವು ಚಿತ್ರಗಳಲ್ಲಿ ಅಭಿನಯಿಸಿದರಾದರೂ ಅವು ಹಿಂದಿನಂತೆ ಯಶಸ್ಸು ಕಾಣಲಿಲ್ಲ. ೧೯೬೩ರಲ್ಲಿ ತಮ್ಮ ೩೯ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ನಿಧನರಾದರು. ಹಾಲಿವುಡ್‌ನ ಖ್ಯಾತನಾಮರ ಸಮಾಽಗಳ ಬಳಿಯೇ ಸಾಬೂ ಸಮಾಽಯೂ ಇದೆ.

ವಿ.ಕೆ,ಮೂರ್ತಿ (ವೆಂಕಟರಾಮ ಪಂಡಿತ ಕೃಷ್ಣಮೂರ್ತಿ) ಅವರು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಛಾಯಾಗ್ರಹಣ ವಿಭಾಗದ ಮೊದಲ ತಂಡದ (೧೯೪೩-೪೬) ವಿದ್ಯಾರ್ಥಿ. ಓದು ಮುಗಿಸಿ ಮುಂಬೈಗೆ ಹೋದ ಮೂರ್ತಿಯವರು, ಮುಂದೆ ಹಿಂದಿ ಚಿತ್ರರಂಗದ ಹೆಸರಾಂತ ಛಾಯಾಗ್ರಾಹಕರಾದರು. ಅತ್ಯಂತ ಸೂಕ್ಷ್ಮ ವಿಧಾನಗಳ ಮೂಲಕ ಛಾಯಾಗ್ರಹಣಕ್ಕೆ ಶ್ರೀಮಂತ ಹಾಗೂ ಕಲಾತ್ಮಕ ಮೆರುಗನ್ನು ತಂದುಕೊಟ್ಟ ಹಿರಿಮೆ ವಿ.ಕೆ.ಮೂರ್ತಿ ಅವರದ್ದು. ಭಾರತದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ ‘ಕಾಗಜ್ ಕಿ ಫೂಲ್’ ಮತ್ತು ‘ಸಾಹಿಬ್, ಬೀಬಿ ಔರ್ ಗುಲಾಂ’, ‘ಚಾದ್ವಿನ್ ಕಾ ಚಾಂದ್’, ‘ಬಾಜಿ’, ‘ಜಾಲ್’, ‘ಪ್ಯಾಸಾ’, ‘೧೨ ಒ ಕ್ಲಾಕ್’, ‘ಜಿದ್ದಿ’, ‘ಲವ್ ಇನ್ ಟೋಕಿಯೋ’ ಇತ್ಯಾದಿ ಚಿತ್ರಗಳಲ್ಲಿ ಮೂಡಿಬಂದ ದೃಶ್ಯ ಕಾವ್ಯಗಳು ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿವೆ. ಮಹಾನ್ ಕಲಾವಿದ ಮತ್ತು ನಿರ್ದೇಶಕ ಗುರುದತ್ ಅವರು ಜೀವಿಸಿರುವವರೆಗೆ ಅವರ ಎಲ್ಲ ಚಿತ್ರಗಳಿಗೂ ಕಣ್ಣಾಗಿದ್ದ ಮೂರ್ತಿಯವರು, ಅವರ ನಿಧನಾನಂತರದಲ್ಲಿ ಇತರ ಪ್ರಮುಖ ನಿರ್ದೇಶಕರ ಜೊತೆಯಲ್ಲಿ ಕೂಡ ಕೆಲಸ ಮಾಡಿದರು. ಚಲನಚಿತ್ರಗಳಲ್ಲದೆ ಶ್ಯಾಂ ಬೆನೆಗಲ್ ಅವರ ‘ಭಾರತ್ ಏಕ್ ಖೋಜ್’ ಮತ್ತು ಗೋವಿಂದ ನಿಹಲಾನಿ ಅವರ ‘ತಮಸ್’ ಧಾರಾವಾಹಿಗಳಿಗೂ ಪ್ರಧಾನ ಛಾಯಾಗ್ರಾಹಕರಾಗಿ ದುಡಿದ ಮೂರ್ತಿಯವರ ಕೆಲಸ ಬಹುಕಾಲ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ. ತಮ್ಮ ಛಾಯಾಗ್ರಹಣದ ಮೂಲಕ ವಿಶ್ವಖ್ಯಾತಿ ಪಡೆದ ಕನ್ನಡಿಗ ವಿ.ಕೆ.ಮೂರ್ತಿ ಕನ್ನಡದಲ್ಲಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ‘ಹೂವು ಹಣ್ಣು’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರ ಕೊಡಮಾಡುವ ಅತ್ಯುನ್ನತ ಗೌರವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮೊದಲ ತಂತ್ರಜ್ಞರು ವಿ.ಕೆ.ಮೂರ್ತಿ.

ಮುಂಬೈಯ ದಿನಗಳಲ್ಲಿ ಅಲ್ಲಿನ ಮೈಸೂರು ಅಸೋಸಿಯೇಷನ್ ಜೊತೆಗಿದ್ದ ಅವರು ಅಲ್ಲಿನ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ಉತ್ತಮ ಪಿಟೀಲು ವಾದಕರು ಕೂಡ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಜೈಲುವಾಸವನ್ನೂ ಅನುಭವಿಸಿದ್ದರು ಮೂರ್ತಿಯವರು.

ಪ್ಯಾರಿಸ್, ಲಂಡನ್ ಮತ್ತು ರೋಮ್‌ಗಳಲ್ಲಿ ಚಲನಚಿತ್ರ ಕಲೆ, ತಂತ್ರಜ್ಞಾನಗಳ ಕುರಿತಂತೆ ತರಬೇತಿ ಪಡೆಯಲು ಮೈಸೂರಿನಿಂದ ಹೋದ ಮೊದಲಿಗರು ಎಂ.ವಿ.ಕೃಷ್ಣಸ್ವಾಮಿ. ಅಷ್ಟೇ ಅಲ್ಲ ವಿಶ್ವವಿಖ್ಯಾತಿ ಪಡೆದ ರಾಬರ್ಟ್ ರೊಸೆಲಿನಿಯ ಸಹಾಯಕರಾಗಿ ಇಂಗ್ರಿಡ್ ಬರ್ಗ್‌ಮನ್ ಮತ್ತು ಜಾರ್ಜ್ ಸ್ಯಾಂಡರ್ಸ್ ನಟಿಸಿದ ಚಿತ್ರಕ್ಕೆ ಕೆಲಸ ಮಾಡಿದ್ದರು. ಚಲನಚಿತ್ರ ಕಲೆ ಮತ್ತು ತಾಂತ್ರಿಕತೆ ಬಗ್ಗೆ ಅಽಕಾರವಾಣಿಯಿಂದ ಮಾತನಾಡಬಲ್ಲವರು. ಸಾಕ್ಷ್ಯಚಿತ್ರ ನಿರ್ದೇಶನದ ತರಬೇತಿಯನ್ನು ಜಾನ್ ಗ್ರಿಯರ್ಸನ್ ಅವರಂತಹ ತಜ್ಞರಿಂದ ಪಡೆದ ಏಕೈಕ ಭಾರತೀಯ ಅವರೊಬ್ಬರೇ. ಎಂವಿಕೆ ಅವರು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಹೆಸರಾದವರು. ಶತಾಯುಷಿ ವಿಶ್ವೇಶ್ವರಯ್ಯನವರದೂ ಸೇರಿದಂತೆ ಹಲವಾರು ಸಾಕ್ಷ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಕೇಂದ್ರ ಸರ್ಕಾರದ ಹಲವಾರು ಸಿನಿಮಾ ಸಂಬಂಽಸಿದ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಫಿಲಂ ಡಿವಿಜನ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ಸೆನ್ಸಾರ್ ಮಂಡಳಿ, ಚಲನಚಿತ್ರೋತ್ಸವ ನಿರ್ದೇಶನಾಲಯ, ಭಾರತದ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಕೇಂದ್ರಗಳ ಮುಖ್ಯಸ್ಥರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಚಲನಚಿತ್ರೋತ್ಸವ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ವೇಳೆ ನಡೆದ ಚಿತ್ರೋತ್ಸವ ಒಂದರ ವೇಳೆ ಸತ್ಯಜಿತ್ ರೇ ಅವರನ್ನು ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದರು ಎನ್ನುವ ಮಾತೂ ಕೇಳಿಬಂದಿತ್ತು. ಭಾರತದಲ್ಲಿ ಸಾಕ್ಷ ಚಿತ್ರ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಎಜ್ರಾ ಮೀರ್ ಪ್ರಶಸ್ತಿಯನ್ನು ಅವರು ಪಡೆದಿದ್ದರು.

ಸುಶಿಕ್ಷಿತರು, ಬುದ್ಧಿಜೀವಿಗಳು ಚಿತ್ರರಂಗದ ಕಡೆ ನೋಡದ ದಿನಗಳಲ್ಲಿ ಪದವೀಧರರಾಗಿ, ಉಪನ್ಯಾಸಕರಾಗಿದ್ದ ಕೃಷ್ಣಸ್ವಾಮಿಯವರು ನಟರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ೧೯೪೯ರಲ್ಲಿ ತೆರೆಕಂಡ ‘ಭಾರತಿ’ ಚಿತ್ರದ ಮುಖ್ಯ ಪಾತ್ರಧಾರಿ ಅವರು. ನಾಯಕಿಯಾಗಿ ಟಿ.ಸೂರ್ಯಕುಮಾರಿ ಇದ್ದರು. ಚಿತ್ರೀಕರಣ ರಾತ್ರಿಯಿಂದ ಬೆಳಗಿನ ವರೆಗೆ ಮುಗಿಸಿ, ಮತ್ತೆ ಹಗಲು ಹೊತ್ತು ಕಾಲೇಜಿಗೆ ಬಂದು ಪಾಠ ಮಾಡುತ್ತಿದ್ದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡದಲ್ಲಿ ಎರಡು ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ೧೯೬೬ರಲ್ಲಿ ತೆರೆಕಂಡ ‘ಸುಬ್ಬಾಶಾಸ್ತ್ರಿ’, ೧೯೭೧ರಲ್ಲಿ ತೆರೆಕಂಡ ‘ಪಾಪ-ಪುಣ್ಯ’ ಅವರ ಚಿತ್ರಗಳು. ‘ಸುಬ್ಬಾಶಾಸ್ತ್ರೀ’ ಎ.ಎನ್.ಮೂರ್ತಿರಾಯರ ಆಷಾಢಭೂತಿ ನಾಟಕವನ್ನು ಆಧರಿಸಿದರೆ, ‘ಪಾಪಪುಣ್ಯ’ ವಿ.ಸೀ. ಅವರ ಶ್ರೀಶೈಲ ಶಿಖರ ಆಧರಿಸಿದ ಚಿತ್ರ. ಮೊದಲ ಚಿತ್ರಕ್ಕೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ಸಂಯೋಜಿಸಿದರೆ, ಎರಡನೆಯದಕ್ಕೆ ಪದ್ಮಚರಣ್ ಸಂಗೀತ ನೀಡಿದ್ದರು.

ವಿಶ್ವಮಾನ್ಯರಾದ ಮೈಸೂರು ಮೂಲದ ಈ ಮೂವರ ಸೇವೆ ಚಲನಚಿತ್ರ ಕೇತ್ರಕ್ಕೆ ಮೀಸಲಾಗಿತ್ತು. ಅವರ ಶತಮಾನೋತ್ಸವವೂ ಒಂದೇ ವರ್ಷ ಎನ್ನುವುದು ವಿಶೇಷ.

andolanait

Share
Published by
andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

51 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago