ಎಡಿಟೋರಿಯಲ್

ಟಾಪ್ ರ‍್ಯಾಂಕಿಂಗ್‌ನಿಂದ ಮೈಸೂರು ಮೃಗಾಲಯ ಹಿಂದೆ ಬಿದ್ದಿದ್ದು ಏಕೆ?

ಮಹಾರಾಜರ ಕನಸಿನ 130 ವರ್ಷ ಇತಿಹಾಸದ, ಮುಚ್ಚುವ ಹಂತಕ್ಕೆ ಹೋಗಿದ್ದ ಚಾಮರಾಜೇಂದ್ರ ಮೃಗಾಲಯದ ಸುಸ್ಥಿರ ಕ್ರಮಗಳು ಮಾದರಿ

ಹೊಸ ಮಾದರಿಗಳನ್ನೇ ಸೃಷ್ಟಿಸಿರುವ ಮೈಸೂರು ಮೃಗಾಲಯ ಸಹಜವಾಗಿಯೇ ಟಾಪ್ ಆಗಿರಬೇಕು ಎನ್ನುವುದು ಪ್ರಾಣಿ ಪ್ರಿಯರ ಆಶಯವೂ ಹೌದು. ಆದರೆ ಹಿಂದೆ ಬಿದ್ದಿದ್ದು ಏಕೆ, ಇದರ ಹಿಂದೆ ಏನಾದರೂ ಲಾಬಿಗಳೂ ನಡೆದವಾ ಎನ್ನುವ ಅಂಶಗಳೂ ಚರ್ಚೆಯ ಭಾಗವಾಗಿದ್ದವು. ಇದೆಲ್ಲವೂ ಪ್ರಾಣಿ ಪ್ರಿಯರು, ಮೃಗಾಲಯದ ಅಧಿಕಾರಿಗಳ ಹಂತದಲ್ಲಿಯೇ ನಡೆದವಷ್ಟೇ.

-ಕುಂದೂರು ಉಮೇಶಭಟ್ಟ

ಒಂದೂಕಾಲ ಶತಮಾನದಿಂದ ಮೈಸೂರು ಮಾತ್ರವಲ್ಲದೇ ಕರ್ನಾಟಕ ಜನರ ಪ್ರೀತಿಯ ಪ್ರಾಣಿಮನೆ, ದೇಶ- ವಿದೇಶದಲ್ಲಿ ಗೊರಿಲ್ಲಾ- ಜಿರಾಫೆ- ಚಿಂಪಾಂಜಿಗಳ ಯಶಸ್ವಿ ಸಂರಕ್ಷಣೆ ಮೃಗಾಲಯ ಎಂದೇ ಹೆಸರು ಪಡೆದಿರುವ ಚಾಮರಾಜೇಂದ್ರ ಮೃಗಾಲಯದ ರೇಟಿಂಗ್ ಹೇಗಿರಬಹುದು?.

ಮೂರು ತಿಂಗಳ ಹಿಂದೆ ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಮಾರ್ಗದರ್ಶನದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರ( ಸಿಝಡ್‌ಎ) ಬಿಡುಗಡೆ ಮಾಡಿದ ೨೦೨೨ನೇ ಸಾಲಿನ ರೇಟಿಂಗ್ ಪಟ್ಟಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿತು. ಅತಿ ದೊಡ್ಡ ಮೃಗಾಲಯಗಳ ಪಟ್ಟಿಯಲ್ಲಿ ಮೈಸೂರು ಮೊದಲ ಸ್ಥಾನ ಪಡೆಯಲೇಬೇಕಿತ್ತು. ಏಕೆಂದರೆ ೧೩೦ ವರ್ಷಗಳ ಸುದೀರ್ಘ ಇತಿಹಾಸ ಇರುವ ೧೬೫ ಪ್ರಾಣಿಗಳ ಪ್ರದರ್ಶನ ಮಾತ್ರವಲ್ಲದೇ ಸಂರಕ್ಷಣೆಯಲ್ಲೂ ಹೊಸ ಮಾದರಿಗಳನ್ನೇ ಸೃಷ್ಟಿಸಿರುವ ಮೈಸೂರು ಮೃಗಾಲಯ ಸಹಜವಾಗಿಯೇ ಟಾಪ್ ಆಗಿರಬೇಕು ಎನ್ನುವುದು ಪ್ರಾಣಿ ಪ್ರಿಯರ ಆಶಯವೂ ಹೌದು. ಆದರೆ ಹಿಂದೆ ಬಿದ್ದಿದ್ದು ಏಕೆ, ಇದರ ಹಿಂದೆ ಏನಾದರೂ ಲಾಬಿಗಳೂ ನಡೆದವಾ ಎನ್ನುವ ಅಂಶಗಳೂ ಚರ್ಚೆಯ ಭಾಗವಾಗಿದ್ದವು. ಇದೆಲ್ಲವೂ ಪ್ರಾಣಿ ಪ್ರಿಯರು, ಮೃಗಾಲಯದ ಅಧಿಕಾರಿಗಳ ಹಂತದಲ್ಲಿಯೇ ನಡೆದವಷ್ಟೇ.

ಆರು ದಶಕದ ಹಿಂದೆ ಆರಂಭಗೊಂಡ ಅತಿ ಸಣ್ಣ ಡಾರ್ಜಲಿಂಗ್‌ನ ಪದ್ಮಜಾನಾಯ್ಡು ಹಿಮಾಲಯನ್ ಜೂವಾಲಜಿಕಲ್ ಪಾರ್ಕ್‌ಗೆ ದೊರೆತಿದ್ದು ಅಗ್ರ ಸ್ಥಾನ. ಚೆನ್ನೈನ ವೆಂಡಾಲೂರ್ ಮೃಗಾಲಯ ಎಂದೇ ಜನಪ್ರಿಯವಾಗಿರುವ ಅರಿಗ್ನಾರ್ ಅಣ್ಣಾ ಜೂವಾಲಜಿಕಲ್ ಪಾರ್ಕ್ ೨ನೇ ಸ್ಥಾನ ಪಡೆದರೆ ೩ನೇ ಸ್ಥಾನದಲ್ಲಿದ್ದುದು ನಮ್ಮ ಚಾಮರಾಜೇಂದ್ರ ಮೃಗಾಲಯ. ಅತಿ ದೊಡ್ಡ ಮೃಗಾಲಯಗಳ ಪಟ್ಟಿಯಲ್ಲಿ ಚೆನ್ನೈ ಮೃಗಾಲಯ ನಂತರ ಮೈಸೂರಿಗೆ ೨ನೇ ಸ್ಥಾನ. ಬೆಂಗಳೂರಿನ ಬನ್ನೇರಘಟ್ಟಕ್ಕೆ ೫ನೇ ಸ್ಥಾನ ಲಭಿಸಿತು.

ಒಂದು ಕಾಲಕ್ಕೆ ಭಾರತದಲ್ಲಿ ೬೫೦ಕ್ಕೂ ಹೆಚ್ಚು ಮೃಗಾಲಯಗಳಿದ್ದವು. ಬಹುಪಾಲು ಪ್ರಾಣಿ, ಪಕ್ಷಿ ಒಂದು ಕಡೆ ಇಟ್ಟ ಮನೆಗಳಾಗಿದ್ದವು. ಕೇಂದ್ರ ಮೃಗಾಲಯ ಪ್ರಾಧಿಕಾರ ಇದಕ್ಕೊಂದು ಶಿಸ್ತು ತರುವ ಉದ್ದೇಶದಿಂದ ಆಂತರಿಕವಾಗಿಯೇ ಮೃಗಾಲಯಗಳ ಸ್ಥಿತಿಗತಿಯ ವರದಿಯನ್ನು ತಯಾರಿಸಿ ಸಲಹೆ ಸೂಚನೆ ನೀಡುತ್ತಿತ್ತು. ಅಧಿಕೃತ ರೇಟಿಂಗ್ ಎನ್ನುವ ಪದ್ದತಿ ಇರಲಿಲ್ಲ. ಈಗ ಎಲ್ಲೆಡೆ ಸ್ಪರ್ಧೆಯ ಕಾಲ. ಮೃಗಾಲಯಗಳ ಮಾದರಿ ಬೇರೆಡೆಯೂ ಪಸರಿಸಲಿ ಎನ್ನುವ ಆಶಯದೊಂದಿಗೆ ಪ್ರಾಧಿಕಾರ ರೇಟಿಂಗ್( ಮ್ಯಾನೇಜ್‌ಮೆಂಟ್ ಎಫೆಕ್ಟಿವ್ ಎವ್ಯಾಲುಯೇಷನ್- ಮೀ) ಶುರು ಮಾಡಿದೆ. ಇದರಲ್ಲಿ ಪ್ರಾಣಿ ಪಕ್ಷಿಗಳ ಪ್ರದರ್ಶನ, ಅಳಿವಿನಂಚಿನ ಪ್ರಾಣಿ, ಹೊರ ದೇಶದ ಪ್ರಾಣಿಗಳು, ಮನೆಗಳ ನಿರ್ಮಾಣ, ಪಶು ವೈದ್ಯಕೀಯ ಸೇವೆ, ಪುನರ್ವಸತಿ ಕೇಂದ್ರ, ವೀಕ್ಷಕರಿಗೆ ನೀಡಿದ ಸೌಲಭ್ಯ ಎಲ್ಲವೂ ಮಾನದಂಡಗಳು. ಈ ವರ್ಷ ಮಾನ್ಯತೆ ಹೊಂದಿರುವ ೧೪೭ ಮೃಗಾಲಯಗಳು ರೇಟಿಂಗ್‌ನಲ್ಲಿ ಪಾಲ್ಗೊಂಡವು. ಇವುಗಳಲ್ಲಿ ೧೭ ದೊಡ್ಡ, ೨೩ ಮಧ್ಯಮ, ೩೩ ಸಣ್ಣ, ೬೦ ಅತಿ ಸಣ್ಣ ಮೃಗಾಲಯಗಳು, ೧೪ ಪುನರ್ವಸತಿ ಕೇಂದ್ರಗಳು ಸೇರಿದ್ದವು. ರೆಡ್ ಪಾಂಡಾ, ಹಿಮಾಲಯನ್ ಕರಡಿ, ಹಿಮಾಲಯನ್ ಥಾರ್, ಹಿಮ ಕರಡಿ ಪ್ರದರ್ಶನದಿಂದಲೇ ಶೇ.೮೩ ಅಂಕದೊಂದಿಗೆ ಡಾರ್ಜಲಿಂಗ್ ಮೃಗಾಲಯ ಮೊದಲ ಸ್ಥಾನ ಪಡೆದಿದೆ. ಮೊಸಳೆ ಸಹಿತ ಹಲವು ಪ್ರಾಣಿಗಳ ಪುನರುತ್ಥಾನ, ಮಾಸ್ಟರ್ ಪ್ಲಾನ್ ಜಾರಿಯಿಂದ ಚೆನ್ನೈ ಮೃಗಾಲಯಕ್ಕೆ ಶೇ.೮೨ ದೊರೆತಿವೆ. ಪ್ರಾಣಿಗಳ ಸಂರಕ್ಷಣೆ, ಅಂತರ್ಜಲ ವೃದ್ದಿ, ಪ್ರಾಣಿ ತ್ಯಾಜ್ಯದಿಂದ ಆದಾಯದಂತ ಸುಸ್ಥಿರ ಯೋಜನೆಗಳಿಂದ ಮೈಸೂರು ಶೇ.೮೦ ಅಂಕದೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಮೈಸೂರು ಮೃಗಾಲಯ ಮಾಸ್ಟರ್‌ಪ್ಲಾನ್ ಜಾರಿಯಲ್ಲಿ ಚೆನ್ನೈಗಿಂತ ಹಿಂದೆ ಇದೆ ಎನ್ನುವ ಅಂಶದಿಂದ ಶೇ.೫ ಅಂಕ ಕಡಿತಗೊಂಡಿದ್ದು, ಪ್ರವಾಸಿಗರಿಗೆ ವಿವರಣಾ ಕೇಂದ್ರ( ಇಂಟರ್‌ಪ್ರಿಟೇಷನ್ ಸೆಂಟರ್) ಇಲ್ಲದಿರುವುದೂ ಟಾಪ್ ರ್ಯಾಂಕಿಂಗ್‌ನಲ್ಲಿ ಹಿಂದೆ ಬಿದ್ದಿತು.

ಹಾಗೆ ನೋಡಿದರೆ ಮೈಸೂರು ಮೃಗಾಲಯದ ಬೆಳವಣಿಗೆ ಹಾದಿ ರೋಚಕವಾಗಿಯೇ ಇದೆ. ೧೮೯೨ರಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದ ಪ್ರಾಣಿಮನೆಯೇ ಈಗ ದೊಡ್ಡ ಮೃಗಾಲಯದ ರೂಪ ಪಡೆದಿದೆ. ಇದು ಏಕಾಏಕಿ ಬೆಳೆದಿದ್ದೂ ಅಲ್ಲ. ಮೈಸೂರು ಮೃಗಾಲಯ ರೂಪುಗೊಳ್ಳುವ ಹಿಂದೆ ಹಲವರ ಕನಸು, ಶ್ರಮವಿದೆ. ಕಳೆದ ವರ್ಷ ಕಾಲವಾದ ಸಿ.ಡಿ.ಕೃಷ್ಣೇಗೌಡರು ಕ್ಯೂರೇಟರ್ ಹಾಗೂ ಮೊದಲ ನಿರ್ದೇಶಕರಾಗಿ ಮೂರು ದಶಕ ಕಾಲ ಮೃಗಾಲಯಕ್ಕೆ ಭದ್ರ ಅಡಿಪಾಯ ಹಾಕಿದರು. ೯೦ರ ದಶಕದಲ್ಲಿನ ಅಧಿಕಾರಿಗಳ ಆಡಳಿತ ಲೋಪದಿಂದ ಇನ್ನೇನು ಮೃಗಾಲಯ ಮುಚ್ಚೇ ಬಿಡಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಾಗ ಕುಮಾರ ಪುಷ್ಕರ್ ಎಂಬ ಯುವ, ದಕ್ಷ ಅಧಿಕಾರಿ ೨೦೦೦ದಲ್ಲಿ ಕಾರ‌್ಯನಿರ್ವಾಹಕ ನಿರ್ದೇಶಕರಾಗಿ ಬಂದರು. ಗುತ್ತಿಗೆ ಅವ್ಯವಹಾರಗಳು, ಪ್ರಾಣಿಗಳಿಗೆ ನೀಡುತ್ತಿದ್ದ ಕಳಪೆ ಆಹಾರ ತಡೆದು, ಗುಣಮಟ್ಟಕ್ಕೆ ಒತ್ತು ನೀಡಿದರು. ದತ್ತು ಯೋಜನೆ, ಯುವ ಸಂಘಟನೆಗೆ ಬಲ ತುಂಬಿದರು. ಲಾಬಿಗಳು ಹೇಗಿದ್ದವೆಂದರೆ ೨೦೦೩ರಲ್ಲಿ ಕಾರ‌್ಯನಿರ್ವಾಹಕ ನಿರ್ದೇಶಕರಾಗಿ ಬಂದ ಮನೋಜ್‌ಕುಮಾರ್ ಅವರ ಮೇಲೆ ಪ್ರಭಾವ ಬೀರಿತು. ಪ್ರಾಣಿ, ಪಕ್ಷಿಗಳಿಗೆ ವಿಷವಿಟ್ಟರು. ಅದರಲ್ಲೂ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಅರ್ಮೇನಿಯಾ ದೇಶಕ್ಕೆ ನೀಡಬೇಕಾಗಿದ್ದ ಗಣೇಶ ಎಂಬ ಆನೆಯೂ ವಿಷ ಪಾಶಕ್ಕೆ ಬಲಿಯಾಯಿತು. ಮನೋಜ್ ಕೂಡ ಜಗ್ಗಲಿಲ್ಲ. ತಮಗೆ ಅನ್ನ ನೀಡುತ್ತಿದ್ದ ಪ್ರಾಣಿ- ಪಕ್ಷಿಗಳನ್ನು ಕೊಂದವರನ್ನು ಸಿಐಡಿ ಬಂಧಿಸಿ ಜೈಲಿಗಟ್ಟಿತು. ಮಾಸ್ಟರ್ ಪ್ಲಾನ್ ರೂಪಿಸಿ ಆದಾಯದ ಮಾರ್ಗಗಳನ್ನು ಉತ್ತಮಗೊಳಿಸಿ ಸಂರಕ್ಷಣಾ ಚಟುವಟಿಕೆಗಳನ್ನು ಮನೋಜ್ ಹೆಚ್ಚಿಸಿದರು. ಆನಂತರ ಮೃಗಾಲಯ ಚಿತ್ರಣವೇ ಬದಲಾಯಿತು. ನಂತರ ಜಿ.ವಿ.ರಂಗರಾವು ಅವರು ದಶಕದ ಬೇಡಿಕೆಯಾಗಿದ್ದ ಜಿರಾಫೆ ಸಹಿತ ಹಲವು ಪ್ರಾಣಿಗಳ ವಿನಿಮಯಕ್ಕೆ ಒತ್ತು ಕೊಟ್ಟರು. ಕನ್ನಡಗಿರೇ ಆದ ಬಿ.ಪಿ. ರವಿ ನಾಲ್ಕು ವರ್ಷ ಕಾಲ ಮೃಗಾಲಯದ ಸುಸ್ಥಿರ ಪ್ರಗತಿಗೆ ಮಹತ್ವ ನೀಡಿ, ಮಾಸ್ಟರ್ ಪ್ಲಾನ್ ಪ್ರಕಾರವೇ ಯೋಜನೆ ಜಾರಿಗೊಳಿಸಿದ್ದು ಇಡೀ ದೇಶದ ಹತ್ತಾರು ಮೃಗಾಲಯಗಳಿಗೆ ಮಾದರಿಯೂ ಆಯಿತು. ಬಿ.ಪಿ.ರವಿ ಅವರು ಐದು ವರ್ಷದಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿಯಾಗಿ ರಾಜ್ಯದ ೯ ಮೃಗಾಲಯಗಳನ್ನು ಸಶಕ್ತಗೊಳಿಸಿದ್ದಾರೆ. ಹಂಪಿಯಲ್ಲಿ ಆರಂಭಿಸಿದ ಮೃಗಾಲಯದ ವಿಶೇಷತೆ, ವಿಭಿನ್ನತೆ, ದಕ್ಷತೆ ರವಿ ಅವರ ಕಾರ‌್ಯಕ್ಷಮತೆಯ ಪ್ರತೀಕದಂತಿದೆ. ವಿಜಯರಂಜನ್‌ಸಿಂಗ್, ಕಮಲಾ ಕರಿಕಾಳನ್ ಸಹಿತ ಹಲವರು ತಮ್ಮದೇ ರೀತಿಯಲ್ಲಿ ಕಾರ‌್ಯನಿರ್ವಹಿಸಿದ್ದಾರೆ. ನಾಲ್ಕು ವರ್ಷದಿಂದ ನಿರ್ದೇಶಕರಾಗಿರುವ ಅಜಿತ್ ಕುಲಕರ್ಣಿ ಅವರ ಪ್ರಯತ್ನಗಳೂ ಸಾಕಷ್ಟಿವೆ.

ಅಧಿಕಾರಿಗಳ ಜತೆಗೆ ಸಿಬ್ಬಂದಿಯ ತಾಯ್ತನದ ಪ್ರೀತಿ, ಕಕ್ಕುಲತಿಯಿಂದಲೇ ಹತ್ತಾರು ಪ್ರಾಣಿಗಳು ಉಳಿದಿವೆ. ತಾಯಿ ಹಾಲು ಕೊಡದಿದ್ದಾಗ ಸಿಬ್ಬಂದಿಯೇ ಬಾಟಲಿ ಹಾಲುಡಿಸಿ ಜಿರಾಫೆ ಮರಿಗಳನ್ನು ಬದುಕಿಸಿದ್ದಾರೆ. ಹುಲಿ, ಆನೆ, ಚಿಂಪಾಂಜಿ, ಗೊರಿಲ್ಲಾಗಳನ್ನು ನೋಡಿಕೊಂಡ ಹತ್ತಾರು ಮಾನವೀಯ ಕೈಗಳ ಕಾಳಜಿಯೂ ಇದೆ. ದತ್ತು ಯೋಜನೆ ಮೂಲಕವೂ ಜನರ ಬಾಂಧವ್ಯ ಬೆಸೆದಿದೆ. ಯುವ ಸಮೂಹದೊಂದಿಗೆ ಭವಿಷ್ಯವನ್ನು ಹೊಸೆದಿದೆ. ಮೈಸೂರಿಗೆ ಬಂದಾಗ ನಮ್ಮದೇ ಮನೆ ಎನ್ನುವಂತೆ ಮೃಗಾಲಯಕ್ಕೆ ಹೋಗಿ ಬರಲೇಬೇಕು ಎನ್ನುವ ಜನರ ಪ್ರೀತಿಯನ್ನು ಮರೆಯಲಾದೀತೆ?. ಕೋವಿಡ್ ಕಾಲದಲ್ಲಿ ಕಷ್ಟಕ್ಕೆ ಸಿಲುಕಿದಾಗ ಕೈ ಹಿಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹಲವು ರೀತಿಯಲ್ಲಿ ನೆರವು ನೀಡಿದ ಇನ್ಫೋಸಿಸ್ ಸುಧಾಮೂರ್ತಿ ಸೇರಿ ಹಲವು ಉದ್ಯಮಿಗಳು, ಚಿತ್ರನಟರು, ರಾಜಕೀಯ ನೇತಾರರು, ಕ್ರೀಡಾಪಟುಗಳು, ಹತ್ತಾರು ಸಂಘ ಸಂಸ್ಥೆಗಳ ಬೆಂಬಲಕ್ಕೆ ಬೆಲೆ ಕಟ್ಟಲಾದೀತೇ?

ಒಂದು ಹಂತಕ್ಕೆ ಮುಚ್ಚುವ ಹಂತಕ್ಕೆ ಹೋಗಿ ಈಗ ವರ್ಷಕ್ಕೆ ೨೫ ಲಕ್ಷ ಜನರನ್ನು ಆಕರ್ಷಿಸುವ, ೨೫ ಕೋಟಿ ಗೂ ಮಿಗಿಲಾಗಿ ಆದಾಯ ಗಳಿಸುತ್ತಾ ಸಹಸ್ರಾರು ಮಂದಿ ಉದ್ಯೋಗ ನೀಡುತ್ತಿರುವ ಮೈಸೂರು ಮೃಗಾಲಯದ ಬೆಳವಣಿಗೆ ಹೇಗಿರಬೇಕು ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರ ಸಲಹೆಗಳನ್ನೂ ನೀಡಿದೆ. ಇಡೀ ಮೃಗಾಲಯದ ಪ್ರಗತಿಯ ಸ್ಪಷ್ಟ ನೋಟ, ಉದ್ದೇಶ- ಗುರಿಗಳೊಂದಿಗೆ ಯೋಜನೆ ರೂಪಿಸುವುದು ಮಾತ್ರವಲ್ಲದೇ ದಿಲ್ಲಿಯ ನ್ಯಾಷನಲ್ ಝುವಾಲಜಿಕಲ್ ಪಾರ್ಕ್‌ನ ನೀತಿಯಂತೆ ಅವುಗಳ ಜಾರಿ, ದಾಖಲೀಕರಣಕ್ಕೂ ಒತ್ತು ನೀಡಬೇಕು. ಎಲ್ಲಾ ಪ್ರಾಣಿಗಳಿಗೆ ಜೋಡಿ ಗುರುತಿಸಬೇಕು. ಕಾಡುಕೋಣ, ನೀಲಗಿರಿ ಲಂಗೂರ್, ಸೀಂಗಳೀಕ, ಸೀಳುನಾಯಿ, ಭಾರತೀಯ ಬೂದು ತೋಳಗಳೂ ಸೇರಿ ಪ್ರಮುಖ ಪ್ರಾಣಿಗಳ ತಳಿ ಸಂವರ್ಧನೆಯನ್ನು ವೈಜ್ಞಾನಿಕ ಮಾದರಿಯಲ್ಲಿ ರೂಪಿಸಬೇಕು. ಪ್ರವಾಸಿಗರಿಗೆ ವಿವರಣಾ ಕೇಂದ್ರವನ್ನು ರೂಪಿಸಬೇಕು ಎಂದು ಸಲಹೆ ನೀಡಿದೆ. ಅಲ್ಲದೇ ಮೈಸೂರಿನ ಹಲವು ಮಾದರಿಗಳನ್ನು ಇತರೆಡೆ ಅಳವಡಿಸಿಕೊಳ್ಳಲು ಪ್ರಾಧಿಕಾರ ಸೂಚಿಸಿದೆ.

ವಿಶ್ವದಲ್ಲಿ ಅಮೆರಿಕಾ. ಸಿಂಗಾಪೂರ್, ಜಪಾನ್, ದಕ್ಷಿಣಾ ಆಫ್ರಿಕಾ ಸಹಿತ ಹತ್ತಾರು ಪ್ರಮುಖ ಮೃಗಾಲಯಗಳಿವೆ. ಖಾಸಗಿ ಸಂಸ್ಥೆಗಳು ನಡೆಸುವ ರೇಟಿಂಗ್‌ನಲ್ಲಿ ಭಾರತದ ಮೃಗಾಲಯಗಳಿಗೆ ಸ್ಥಾನ ಸಿಕ್ಕಿದ್ದು ಕಡಿಮೆ. ಆದರೆ ಭಾರತದಲ್ಲಿ ನಡೆಯುವ ಖಾಸಗಿ ರೇಟಿಂಗ್‌ನಲ್ಲಿ ಮೈಸೂರು ಮೃಗಾಲಯ ಸದಾ ಮುಂಚೂಣಿಯಲ್ಲಿದೆ. ಏಕೆಂದರೆ ಅಲ್ಲಿ ನೀಡುವ ಸೌಲಭ್ಯ, ವೈಜ್ಞಾನಿಕ ಮಾರ್ಗೋಪಾಯಗಳು ಬಹಳ ಮುಂದೆ ಇವೆ. ಹಾಗೆಂದು ನಮ್ಮ ಮೃಗಾಲಯಗಳ ಸಾಧನೆಯ ಹಾದಿಯನ್ನು ಅಲ್ಲಗಳೆಯಲು ಆಗೋಲ್ಲ. ಎರಡು ದಶಕದಲ್ಲಿ ಮೈಸೂರು ಮೃಗಾಲಯ ಸಾಧಿಸಿರುವ ಪ್ರಗತಿ ಹಾದಿ ನೋಡಿದಾಗ ರೇಟಿಂಗ್‌ಗಿಂತ ಭವಿಷ್ಯ ಗಟ್ಟಿಯಿದೆ ಅನ್ನಬಹುದಲ್ಲವೇ?.

andolana

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

1 hour ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

1 hour ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

2 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

3 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

12 hours ago