ನಮ್ಮ ವಿಶ್ವವಿದ್ಯಾಲಯಗಳು ಭ್ರಷ್ಟಾಚಾರದ ಕೂಪವಾಗಿದೆ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ಕಳೆದ ಸುಮಾರು ಸುಮಾರು ಎರಡು ದಶಕಗಳಿಂದ ಈ ಮಾತು ಕೇಳಿ ಬರುತ್ತಲೇ ಇದೆ. ಕುಲಪತಿಗಳ ನೇಮಕ, ಪ್ರಾಧ್ಯಾಪಕರ ಆಯ್ಕೆ, ಮೌಲ್ಯಮಾಪನ, ನ್ಯಾಕ್ ಶ್ರೇಣಿ, ಪಿಎಚ್.ಡಿ. ಪದವಿ, ಹೊಸ ಕಟ್ಟಡಗಳ ಕಾಮಗಾರಿ…ಈ ಎಲ್ಲದರಲ್ಲೂ ಅಕ್ರಮದ ಕೂಗು ಸಾಮಾನ್ಯವಾಗಿದೆ. ಮೈಸೂರು ವಿವಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ವಿವಿ ಕೆಟ್ಟು ಹೋಗಿದೆ ಎಂದು ಆರೋಪಿಸಿರುವ ಸಂಸದ ಪ್ರತಾಪಸಿಂಹ ಈ ಆರೋಪಕ್ಕೆ ಮತ್ತೊಮ್ಮೆ ತುಪ್ಪ ಸುರಿದಿದ್ದಾರೆ.
ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ೧,೩೦೦ ಮಂದಿ ‘ಡಿ’ ಗ್ರೂಪ್ ನೌಕರರಾಗಿದ್ದಾರೆ. ೧೨ ಸಾವಿರ ರೂ. ಸಂಬಳಕ್ಕೆ ಲಂಚ ಕೊಟ್ಟು ಸೇರಿಕೊಳ್ಳುತ್ತಾರೆ. ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯನ್ನೂ ದುಡ್ಡು ಕೊಟ್ಟು ಪಾಸ್ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಸಂಸದರ ಆರೋಪಕ್ಕೆ ವಿವಿ ತಕ್ಷಣವೇ ಸ್ಪಷ್ಟೀಕರಣ ನೀಡಬೇಕಿತ್ತು. ಆದರೆ ಅಧಿಕಾರಿಗಳು ಇದರ ಗೋಜಿಗೆ ಹೋಗದೆ ಮೌನಕ್ಕೆ ಶರಣಾಗಿದ್ದಾರೆ. ದೇಶದ ನೂರಾರು ವಿವಿಗಳು ಇಂದು ಶಿಕ್ಷಣ ಮತ್ತು ಸಂಶೋಧನೆಗಿಂತ ಹೆಚ್ಚಾಗಿ ಅಕ್ರಮ ನೇಮಕಾತಿ, ಹಣಕಾಸು ಅವ್ಯವಹಾರಗಳ ಕಾರಣಗಳಿಗಾಗಿಯೇ ಪದೇ ಪದೆ ಸುದ್ದಿಯಾಗುತ್ತಿವೆ. ಇದಕ್ಕೆ ನಮ್ಮ ರಾಜ್ಯದ ವಿವಿಗಳೂ ಹೊರತಾಗಿಲ್ಲ.
ಎರಡು ತಿಂಗಳ ಹಿಂದೆ ವಿಧಾನಸಭೆಯಲ್ಲಿ ಜಿಲ್ಲೆಗೊಂದು ವಿವಿ ಸ್ಥಾಪಿಸಬೇಕೆಂಬ ಉದ್ದೇಶದಿಂದ ಸರ್ಕಾರ ಕರ್ನಾಟಕ ರಾಜ್ಯವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕ ಮಂಡಿಸಿತ್ತು. ಚರ್ಚೆಯಲ್ಲಿ ನಮ್ಮ ವಿವಿಗಳ ಶೈಕ್ಷಣಿಕ ವಾತಾವರಣದ ಬಗ್ಗೆ ಸದಸ್ಯರು ಪಕ್ಷಬೇಧ ಮರೆತು ಮಾತನಾಡಿದ್ದರು. ಐದು ಕೋಟಿಗಳಿಂದ ನೂರು ಕೋಟಿ ರೂ. ಗಳ ತನಕ ಕುಲಪತಿ ಹುದ್ದೆ ಬಿಕರಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸ್ಪೀರ್ ವಿಶ್ವೇಶ್ವರ ಕಾಗೇರಿಯವರು ಈ ಆತಂಕಕ್ಕೆ ದನಿಗೂಡಿಸಿದ್ದರು. ಮಂಗಳೂರು ವಿವಿ ತನ್ನ ಸಿಂಡಿಕೇಟ್ ಸಭೆಯನ್ನು ಬೆಂಗಳೂರಿನ ಐಷಾರಾಮಿ ಹೊಟೇಲ್ ವೊಂದರಲ್ಲಿ ಹಮ್ಮಿಕೊಂಡಿದ್ದರ ಬಗ್ಗೆ ಮಾಜಿ ಸಚಿವ ಯು.ಟಿ. ಖಾದರ್ ಗಮನ ಸೆಳೆದಿದ್ದರು.
ಎರಡು ದಶಕಗಳ ಹಿಂದೆ ರಾಜ್ಯದಲ್ಲಿರುವ ಒಟ್ಟು ವಿವಿಗಳ ಸಂಖ್ಯೆ ಒಂದಂಕಿ ದಾಟಿರಲಿಲ್ಲ. ಈಗ ಅದು ೩೦ ದಾಟಿದೆ. ಇದರಿಂದ ಕುಲಪತಿ ಹುದ್ದೆಯ ಕನಸು ಕಾಣುವವರ ಸಂಖ್ಯೆಯೂ ಹೆಚ್ಚಿದೆ. ಶೈಕ್ಷಣಿಕ ಅರ್ಹತೆ ಮತ್ತು ವೈಯಕ್ತಿಕ ಸಾಧನೆಗಳನ್ನು ಆಧರಿಸಿ ನಿರ್ಧಾರವಾಗುತ್ತಿದ್ದ ಈ ಹುದ್ದೆ ಈಗ ಸೂಟ್ ಕೇಸ್ ಗಾತ್ರದ ಮೇಲೆ ತೀರ್ಮಾನವಾಗುವ ಹಂತಕ್ಕೆ ಬಂದಿದೆ. ರಾಜಭವನಗಳು ದಲ್ಲಾಳಿಗಳ ತಾಣವಾಗಿ ಭ್ರಷ್ಟರಷ್ಟೇ ಕುಲಪತಿಗಳಾಗಲು ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಲಪತಿ ಹುದ್ದೆಯ ಆಕಾಂಕ್ಷಿಯಾಗಿದ್ದ ಬೆಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕರೊಬ್ಬರು ಆತ್ಮಹತ್ಯೆಗೆ ಶರಣಾದಾಗ ಈ ಹುದ್ದೆಗಿರುವ ‘ಬೆಲೆ’ ಚರ್ಚೆಗೆ ಬಂದಿತ್ತು.
೨೦೧೮ರಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ವಿವಿಗಳಲ್ಲಿ ೫೦೦ ಕೋಟಿ ರೂ.ಗಳಿಗೂ ಹೆಚ್ಚಿನ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದರು. ಈಗ ಅದು ಸಾವಿರ ದಾಟಿರಬಹುದು. ಕುಲಪತಿ ನೇಮಕದಲ್ಲಿ ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವ ವಿವಿ ತಿದ್ದುಪಡಿ ವಿಧೇಯಕ ತರುವ ಅವರ ಪ್ರಯತ್ನ ಕೈಗೂಡಿರಲಿಲ್ಲ. ಅಂದಿನ ರಾಜ್ಯಪಾಲ ವಜುಬಾಯಿ ವಾಲಾ ಈ ವಿಧೇಯಕಕ್ಕೆ ಅಂಕಿತ ಹಾಕಿರಲಿಲ್ಲ. ಹಲವು ರಾಜ್ಯಗಳಲ್ಲಿ ಕುಲಪತಿ ನೇಮಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಕೇರಳ ಸರಕಾರ ಇತ್ತೀಚೆಗೆ ಒಂಬತ್ತು ವಿವಿಗಳಿಗೆ ತಾನೇ ಕುಲಪತಿಗಳನ್ನು ನೇಮಿಸಿತ್ತು. ಆದರೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಈ ಆಯ್ಕೆಗೆ ಸಮ್ಮತಿ ನೀಡಿರಲಿಲ್ಲ. ಸುಪ್ರೀಂಕೋರ್ಟ್ ಇಂತಹ ಆಯ್ಕೆಯೊಂದನ್ನು ಅಸಿಂಧು ಎಂದು ಸಾರಿರುವುದು ವಿವಿಗಳ ಮೇಲೆ ರಾಜ್ಯ ಸರಕಾರಗಳಿಗೆ ಇರುವ ಅಧಿಕಾರ ಮತ್ತು ನಿಯಂತ್ರಣವನ್ನು ಪ್ರಶ್ನಿಸುವಂತೆ ಮಾಡಿದೆ.
ಹಾಗೆಂದು ವಿವಿಗಳು ರಾಜ್ಯ ಸರಕಾರದ ನಿಯಂತ್ರಣಕ್ಕೆ ಬಂದ ತಕ್ಷಣ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗುತ್ತದೆ ಎನ್ನಲು ಸಾಧ್ಯವಿಲ್ಲ. ಇದರಿಂದ ಸಚಿವರು ಮತ್ತು ರಾಜಭವನದ ಹಂತದಲ್ಲಿ ನಡೆಯುತ್ತಿದ್ದ ‘ವ್ಯವಹಾರ’ ಶಾಸಕರ ಮಟ್ಟಕ್ಕೆ ಇಳಿಯಬಹುದು ಎನ್ನುವವರಿದ್ದಾರೆ. ಇದು ನಿಜವೂ ಹೌದು. ದುಡ್ಡು, ಜಾತಿ ಮತ್ತು ಸೈದ್ಧಾಂತಿಕ ನಿಲುವನ್ನು ಆಧರಿಸಿ ನಡೆಯುವ ನೇಮಕ ವ್ಯವಸ್ಥೆ ಬದಲಾಗದೆ ವಿವಿಗಳು ಉದ್ದಾರವಾಗಲಾರವು. ಸೂಟ್‌ಕೇಸ್ ಬಳಸಿ ಕುಲಪತಿ ಹುದ್ದೆಗೇರಿದವರ ಆದ್ಯತೆ ಏನೆನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ವಿವಿ ಕ್ಯಾಂಪಸ್ ಗಳು ಕಾಂಕ್ರೀಟ್ ಕಾಡುಗಳಾಗುತ್ತಿವೆ. ಹೊಸ ಕುಲಪತಿ ಬಂದೊಡನೆ ಹೊಸ ಕಟ್ಟಡಗಳು, ಹೊಸ ಕೋರ್ಸ್‌ಗಳು, ಹೊಸ ಅನುಮೋದನೆಗಳಿಗೆ ಸಹಿ ಬೀಳುತ್ತವೆ ಹೊರತು ಶೈಕ್ಷಣಿಕ ಗುಣಮಟ್ಟ ಮೇಲಕ್ಕೇರುವುದಿಲ್ಲ.
ಇನ್ನು ಶೈಕ್ಷಣಿಕ ಗುಣಮಟ್ಟವನ್ನು ಅಳೆಯಲು ರೂಪಿಸಿರುವ ನ್ಯಾಕ್ ಎಂಬ ಮಾನದಂಡ ಭ್ರಷ್ಟಾಚಾರದ ಇನ್ನೊಂದು ಗಂಗೋತ್ರಿ. ವಿವಿ ಮತ್ತು ಕಾಲೇಜುಗಳು ನ್ಯಾಕ್ ಸದಸ್ಯರನ್ನು ನೋಡಿಕೊಳ್ಳಲೆಂದೇ ವಿಶೇಷ ವ್ಯವಸ್ಥೆ ಮಾಡುವುದು ಶೈಕ್ಷಣಿಕ ವಲಯದಲ್ಲಿ ಎಲ್ಲರಿಗೂ ತಿಳಿದ ಸಂಗತಿ. ಇತ್ತೀಚೆಗೆ ದಾವಣಗೆರೆ ವಿವಿ ತನ್ನ ಕ್ಯಾಂಪಸ್ಸಿಗೆ ಬಂದ ನ್ಯಾಕ್ ಸದಸ್ಯರ ಆತಿಥ್ಯಕ್ಕೆ ಎರಡು ಕೋಟಿ ರೂ. ಗಳಿಗೂ ಹೆಚ್ಚು ಹಣ ವ್ಯಯಿಸಿರುವ ಬಗ್ಗೆ ಸರಕಾರವೇ ತನಿಖೆಗೆ ಆದೇಶಿಸಿದೆ. ಕುಲಪತಿ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಇದೇ ವಿವಿ ೧೦ ಸೂಟ್ ಕೇಸ್ ಗಳನ್ನು ಖರೀದಿಸಿರುವುದೂ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಕಾಲೇಜು ಮತ್ತು ವಿವಿಗಳಲ್ಲಿ ಉಪನ್ಯಾಸಕರ ನೇಮಕಕ್ಕೆ ನಿಗದಿಪಡಿಸಿರುವ ಯುಜಿಸಿ ಮತ್ತು ಕೆ ಸೆಟ್ ಅರ್ಹತಾ ಪರೀಕ್ಷೆಯೂ ತನ್ನ ಮೌಲ್ಯ ಕಳೆದುಕೊಂಡಿದೆ. ಯುಜಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಎನಿಸಿದಾಗ ರಾಜ್ಯ ಸರಕಾರ ಕೆ- ಸೆಟ್ ಪರೀಕ್ಷೆ ಆರಂಭಿಸಿತ್ತು. ಎಲ್ಲ ವಿವಿಗಳು ವರ್ಷಕ್ಕೊಮ್ಮೆ ಈ ಪರೀಕ್ಷೆಯ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮೈಸೂರು ವಿವಿಯೇ ಪರೀಕ್ಷೆಯ ಹೊಣೆಗಾರಿಕೆ ವಹಿಸಿಕೊಂಡಿದೆ. ಸಹಜವಾಗಿಯೇ ಇದು ಹೊಸ ಕಾರಸ್ಥಾನಗಳಿಗೆ ಅವಕಾಶ ಮಾಡಿಕೊಟ್ಟಿದೆ. ಐದರಿಂದ ಆರು ಲಕ್ಷ ರೂ. ಹಣ ಕೊಟ್ಟರೆ ಕೆ ಸೆಟ್ ಪರೀಕ್ಷೆ ಪಾಸಾಗಬಹುದೆಂಬ ಮಾತುಗಳು ಕ್ಯಾಂಪಸ್ಸಿನಲ್ಲಿ ಕೇಳಿ ಬರುತ್ತಿವೆ.
ಇನ್ನು ವಿವಿಗಳಲ್ಲಿ ನಡೆಯುವ ಸಂಶೋಧನೆಯ ಗುಣಮಟ್ಟದ ಬಗ್ಗೆ ಈಗ ಯಾರೂ ಮಾತನಾಡುವುದಿಲ್ಲ. ಪ್ರತೀ ತಿಂಗಳು ಹತ್ತಾರು ಸಂಶೋಧನಾ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಆಯ್ಕೆ ಮತ್ತು ಬಡ್ತಿಗೆ ಮಾನದಂಡವಾಗಿರುವ ಪಿಎಚ್.ಡಿ. ಪದವಿ ಪಡೆಯುತ್ತಿದ್ದಾರೆ. ಈ ಸಂಶೋಧನೆಯ ವಸ್ತು ವಿಷಯ ಮತ್ತು ಗುಣಮಟ್ಟವನ್ನು ನೋಡಿದರೆ ನಮ್ಮ ವಿವಿಗಳನ್ನು ಒಂದಷ್ಟು ಕಾಲ ಮುಚ್ಚಿದರೆ ಯಾವ ನಷ್ಟವೂ ಆಗುವುದಿಲ್ಲ ಎನ್ನುವುದು ಖಾತರಿಯಾಗುವ ವಿಚಾರ. ಹೊಸ ಪೀಳಿಗೆಯ ಕೆಲವು ಸಂಶೋಧನಾ ವಿದ್ಯಾರ್ಥಿಗಳು ಪಿಎಚ್. ಡಿ. ಸಬ್ಜೆಕ್ಟ್ ಏನು ಎಂದು ಕೇಳಿದರೆ ಹೇಳಲು ತಡವರಿಸುತ್ತಾರೆ. ಪಿಎಚ್ಡಿಗೂ ಈಗ ಪ್ಯಾಕೇಜ್ ವ್ಯವಸ್ಥೆ ಇರುವುದರಿಂದ ಇದನ್ನು ತಿಳಿದುಕೊಳ್ಳುವ ಅಗತ್ಯವೂ ಇರುವುದಿಲ್ಲ.
ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡುವ ಸರಕಾರ, ವಿವಿಗಳಲ್ಲಿ ಹೊಸ ಪ್ರಾಧ್ಯಾಪಕರನ್ನು ನೇಮಿಸದೆ ಆರೇಳು ವರ್ಷಗಳೇ ಕಳೆದಿವೆ. ೬೬೦ ಬೋಧಕ ಹುದ್ದೆ ಹೊಂದಿರುವ ಮೈಸೂರು ವಿವಿಯಲ್ಲಿ ೨೮೦ ಮಂದಿ ಮಾತ್ರ ಕಾಯಂ ಪ್ರಾಧ್ಯಾಪಕರು. ಉಳಿದವರು ಹಂಗಾಮಿಯಾಗಿ ಕನಿಷ್ಠ ವೇತನಕ್ಕೆ ದುಡಿಯುವ ಅತಿಥಿ ಉಪನ್ಯಾಸಕರು. ಮೂಲ ಸೌಕರ್ಯ, ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ವಿವಿಗಳಲ್ಲಿ ಶಿಕ್ಷಣ ವ್ಯಾಪಾರದ ಸರಕಾಗಿರುವುದು ಒಂದೆಡೆಯಾದರೆ, ಭ್ರಷ್ಟಾಚಾರ ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಲುಷಿತಗೊಳಿಸಿದೆ. ಇದರ ಮೂಲ ಮತ್ತು ಆಳ ಪತ್ತೆ ಮಾಡಿ ಕಿತ್ತೊಗೆಯವ ಪ್ರಯತ್ನ ಮಾಡದಿದ್ದಲ್ಲಿ ನಮ್ಮ ಶಿಕ್ಷಣ ‘ಉನ್ನತ’ವಾಗಲಾರದು!
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…