ಸಾಮಾನ್ಯವಾಗಿ ಕಳ್ಳರನ್ನು ಕಂಡರೆ ಜನ ‘ಕಳ್ಳ! ಕಳ್ಳ! ಹಿಡೀರಿ! ಹಿಡೀರಿ! ’ ಅಂತ ಕೂಗಾಡುತ್ತಾರೆ. ಆದರೆ, ಗೋವಾದ ಕೆಲವು ಹಳ್ಳಿಗಳಲ್ಲಿ ಕಳ್ಳರು ಬರುತ್ತಿದ್ದಾರೆ ಎಂದು ತಿಳಿದರೆ ಸಾಕು, ಅಲ್ಲಿನ ಜನರು ತಮ್ಮ ಮನೆಯೆದುರು ಕಾಯುತ್ತ, ಅವರು ಬಂದಂತೆ ಸಕಲ ಮರ್ಯಾದೆಗಳೊಂದಿಗೆ ಅವರನ್ನು ಮನೆಯೊಳಗೆ ಬರಮಾಡಿಕೊಂಡು, ಸಿಹಿ ತಿಂಡಿ, ಪಾನೀಯ ಕೊಟ್ಟು ಸತ್ಕರಿಸಿ ಕಳುಹಿಸಿ ಕೊಡುತ್ತಾರೆ!
ಹೌದು, ಇದು ವಿಚಿತ್ರವಾದರೂ ನಿಜ. ಶಿರೋಳಿ ಎಂಬುದು ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹೊಂದಿರುವ ಗೋವಾದ ಒಂದು ಹಳ್ಳಿ. ಈ ಹಳ್ಳಿಯ ಪಲ್ಟಾಡಾಚೊ ವಾರ್ಡಿನಲ್ಲಿ ೬೫ ವರ್ಷ ಪ್ರಾಯದ ಬಾಬು ಸಾದ್ಯೋ ಗಾವಾಸ್ ಎಂಬವರು ತಮ್ಮ ಮನೆಯೆದರು ಶತಪಥ ಹಾಕುತ್ತಿದ್ದರು. ಅವರನ್ನು ನೋಡಿದರೆ ತಿಳಿಯುತ್ತಿತ್ತು ಅವರು ಯಾರನ್ನೋ ಕಾಯುತ್ತಿದ್ದಾರೆ ಎಂದು. ಹೌದು, ಅವರು ಕಾಯುತ್ತಿದ್ದುದು ‘ಕಳ್ಳ’ರನ್ನು! ಕಳ್ಳರು ಪಕ್ಕದ ಮನೆಗಳಿಗೆ ಬಂದಿದ್ದು, ಇನ್ನು ಕೆಲವೇ ಸಮಯದಲ್ಲಿ ತಮ್ಮ ಮನೆಗೂ ಬರುತ್ತಾರೆಂದು, ಗಾವಾಸ್ ಅವರನ್ನು ಬರ ಮಾಡಿಕೊಳ್ಳಲು ಮನೆಯ ಇತರ ಸದಸ್ಯರೊಂದಿಗೆ ನಿಂತು ಕಾಯುತ್ತಿದ್ದಾರೆ. ನೋಡು ನೋಡುತ್ತಿದ್ದಂತೆ ಕಳ್ಳರು ಬಂದರು! ಬಂದ ಕಳ್ಳರೆಲ್ಲ ೧೫ ವರ್ಷ ಪ್ರಾಯಕ್ಕಿಂತಲೂ ಚಿಕ್ಕ ಪ್ರಾಯದವರು. ಗಾವಾಸ್ ಮತ್ತು ಅವರ ಮನೆಯವರು ಕಳ್ಳರನ್ನು ಸ್ವಾಗತಿಸಿ, ಸಿಹಿ ತಿಂಡಿ, ತೆಂಗಿನ ಕಾಯಿ ಚೂರು, ತಂಪು ಪಾನೀಯ ಕೊಟ್ಟು ಉಪಚರಿಸಿದರು. ಹಾಗೆ ಉಪಚರಿಸಿಕೊಂಡ ಕಳ್ಳರು ತಮ್ಮ ಹೆಸರಿಗನುಗುಣವಾಗಿ ಕೈಗೆ ಸಿಕ್ಕ ತೆಂಗಿನ ಕಾಯಿ, ಹಣ್ಣು ಹಂಪಲು ಮೊದಲಾದ ಸಣ್ಣ ಪುಟ್ಟ ಸಾಮಾನುಗಳನ್ನು ಕದ್ದುಕೊಂಡು ಇನ್ನೊಂದು ಮನೆಗೆ ಹೋದರು. ತಮ್ಮನ್ನು ಸತ್ಕರಿಸಿದ ಮನೆಯಲ್ಲಿ ಕೋಳಿ ಗೀಳಿ ಕಂಡಿದ್ದರೆ ಅದನ್ನೂ ಕದ್ದೊಯ್ಯುತ್ತಿದ್ದರು.
ಶಿರೋಳಿ ಸುಮಾರು ೧೪೦ ಮನೆಗಳಿರುವ ಒಂದು ಗ್ರಾಮ. ಕಳ್ಳರನ್ನು ಹೀಗೆ ಸಕಲ ಮರ್ಯಾದೆಗಳೊಂದಿಗೆ ಮನೆಯೊಳಕ್ಕೆ ಬರ ಮಾಡಿಕೊಳ್ಳುವುದು ಆ ಗ್ರಾಮದ ಒಂದು ಹಳೆಯ ಸಂಪ್ರದಾಯ. ಈ ಸಂಪ್ರದಾಯಕ್ಕೆ ‘ಚೊರಾಂಚೆ ಫೆಸ್ಟ್’ ಅಥವಾ ‘ಚೋರೋತ್ಸವ್’ ಎಂದು ಹೆಸರು. ೧೫ ವರ್ಷಕ್ಕಿಂತ ಸಣ್ಣ ಮಕ್ಕಳು ಮೈಗೆ ಕಪ್ಪು ಬಣ್ಣ ಬಳಿದುಕೊಂಡು, ಅದಕ್ಕೆ ಅನುಗುಣವಾದ ಬಣ್ಣದ ಉಡುಪು ಧರಿಸಿ, ಮನೆಮನೆಗಳಿಗೆ ಕದಿಯಲು ಹೋಗುತ್ತಾರೆ. ಹಾಗೆ ಮನೆಗಳಿಗೆ ಹೋದಾಗ ಆ ಮನೆಯ ಪುರುಷ ಸದಸ್ಯರು ಆ ಕಳ್ಳರನ್ನು ಬರಮಾಡಿಕೊಂಡು ಸತ್ಕರಿಸುತ್ತಾರೆ ಮತ್ತು ಪುರುಷರಷ್ಟೇ ಸತ್ಕರಿಸಬೇಕು. ಒಂದು ವೇಳೆ ಮನೆಯಲ್ಲಿ ಯಾರೂ ಪುರುಷರಿಲ್ಲದಿದ್ದರೆ ಅಕ್ಕ ಪಕ್ಕದ ಮನೆಗಳ ಯಾರಾದರೂ ಪುರುಷರು ಬಂದು ಆ ಕೆಲಸವನ್ನು ನೆರವೇರಿಸುತ್ತಾರೆ.
ಶಿಗ್ಮೋ ಎಂಬುದು ಗೋವಾ ರಾಜ್ಯದ ಪ್ರಧಾನ ಹಬ್ಬ. ಐದು ದಿನಗಳ ಕಾಲ ನಡೆಯುವ ಈ ಶಿಗ್ಮೋ ಹಬ್ಬದ ಮೊದಲ ದಿನ ಹೋಳಿಯನ್ನು ಆಚರಿಸಲಾಗುತ್ತದೆ. ಎರಡನೇ ದಿನ ಚೋರೋತ್ಸವ್ ನಡೆಯುತ್ತದೆ. ಮೂರನೇ ದಿನ ಘೋಡೆಮೊಡಾನಿ ಮತ್ತು ಪಾಲ್ಕಿ ನಡೆಯುತ್ತದೆ. ನಾಲ್ಕನೇ ದಿನ ಫೂಲ್ ಪಡ್ನೆ ಮತ್ತು ಐದನೇ ದಿನ ಕರಾವಳಿ ನಡೆಯುತ್ತದೆ. ಶಿರೋಳಿ ಗ್ರಾಮ ಮಾತ್ರವಲ್ಲದೆ ಸತ್ತಾರಿ ತಾಲ್ಲೂಕಿನ ಧರ್ಬಾಂದೋರಾ, ಹೋಂಡಾ, ಝರಾಮೆ, ಕಾರಂಝೋಲ್ ಮತ್ತು ಬಿಕೋಲಿಮ್ ಗ್ರಾಮಗಳಲ್ಲೂ ಚೋರೋತ್ಸವವನ್ನು ಆಚರಿಸುತ್ತಾರೆ. ಆದರೆ, ಬೇರೆ ಬೇರೆ ಗ್ರಾಮಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ಚೋರೋತ್ಸವ ಆಚರಿಸಲ್ಪಡುತ್ತದೆ. ಉದಾಹರಣೆಗೆ, ಝರಾಮೆ ಮತ್ತು ಕಾರಂಝೋಲ್‌ನಲ್ಲಿ ದೇವಸ್ಥಾನದ ಅಂಗಣದಲ್ಲಿ ರಾತ್ರಿ ಹೊತ್ತು ಕಳ್ಳರಂತೆ ವೇಷ ಧರಿಸಿ, ಕೈಗಳಲ್ಲಿ ಖಡ್ಗಗಳನ್ನು ಹಿಡಿದುಕೊಂಡು ಎಂಟು ಜನರಲ್ಲಿ ನಾಲ್ವರನ್ನು ಅವರ ತಲೆ ಮಾತ್ರ ಕಾಣುವಂತೆ ದೇಹವನ್ನು ಮರಳಲ್ಲಿ ಹೂತು, ಉಳಿದ ನಾಲ್ವರ ದೇಹ ಕಾಣುವಂತೆ ತಲೆಗಳನ್ನು ಹೂತು ಹಾಕುತ್ತಾರೆ. ಈ ಹಳ್ಳಿಗಳ ಜನರ ನಂಬಿಕೆಯ ಪ್ರಕಾರ, ಬಹಳ ಕಾಲದ ಹಿಂದೆ ಚೋರ್ಲಾ ಘಾಟ್ ಗೆ ಹೋಗುತ್ತಿದ್ದ ಎಂಟು ಜನ ಯುವಕರ ಗುಂಪೊಂದು ದಾರಿ ನಡುವೆ ಒಂದು ಮರದ ನೆರಳಲ್ಲಿ ವಿಶ್ರಮಿಸುತ್ತಿದ್ದಾಗ, ಆ ಹಳ್ಳಿಗರು ಅವರನ್ನು ಕಳ್ಳರು ಎಂದು ತಿಳಿದು, ಅವರೆಲ್ಲರನ್ನು ಕೊಂದು ಹಾಕಿದರಂತೆ. ನಂತರ, ಅವರು ಕಳ್ಳರಲ್ಲ ಎಂದು ತಿಳಿದಾಗ ಹಳ್ಳಿಗರಿಗೆ ತಮ್ಮ ತಪ್ಪಿನ ಅರಿವಾಗಿ ಅವರೆಲ್ಲ ಗ್ರಾಮದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ತಮ್ಮ ತಪ್ಪನ್ನು ಮನ್ನಿಸುವಂತೆ ದೇವರಲ್ಲಿ ಕೇಳಿಕೊಂಡರಂತೆ. ತಮ್ಮ ಕೈಯಿಂದ ಸಾಯಿಸಲ್ಪಟ್ಟ ಆ ಯುವಕರ ನೆನಪಿಗೆ ಮತ್ತು ಪ್ರಾಯಶ್ಚಿತ್ತವಾಗಿ ಪ್ರತಿ ವರ್ಷ ಈ ಸಂಪ್ರದಾಯವನ್ನು ಆಚರಿಸಲು ಪ್ರಾರಂಭಿಸಿದರಂತೆ. ಒಂದು ವೇಳೆ ಯಾವುದೇ ಕಾರಣಕ್ಕೆ ಆ ಆಚರಣೆ ತಪ್ಪಿದರೆ ತಮ್ಮ ಹಳ್ಳಿಗೆ ತೊಂದರೆಯಾಗುತ್ತದೆ ಎಂದು ನಂಬುತ್ತಾರೆ.
ಚೋರೋತ್ಸವವನ್ನು ಗೋವಾದ ಹಿಂದೂಗಳು ಮಾತ್ರವಲ್ಲದೆ ಕ್ರಿಶ್ಚಿಯನ್ನರೂ ಆಚರಿಸುತ್ತಾರೆ. ಪ್ರತಿ ವರ್ಷದ ಮೊದಲ ಭಾನುವಾರದಂದು ಬಾರ್ಡೇಝ್ ತಾಲ್ಲೂಕಿನ ಸೊಕೊರೋ ಗ್ರಾಮದ ಮೈನಾ ಎಂಬಲ್ಲಿನ ಕ್ರಿಶ್ಚಿಯನ್ನರು ಸೆರುಳು ಗುಡ್ಡದ ನೆತ್ತಿಯ ಮೇಲಿರುವ ಕೊಣ್ಣೀರ್ ಎಂಬ ಗ್ರಾಮದಲ್ಲಿರುವ ಕ್ರಾಸಿನ ಎದುರು ಜಮಾಯಿಸಿ ಅದಕ್ಕೆ ತಮ್ಮ ನೆನಪುಗಳನ್ನು ಅರ್ಪಿಸುತ್ತಾರೆ. ಇದರ ಹಿನ್ನೆಲೆಯಲ್ಲಿ ಒಂದು ಸ್ವಾರಸ್ಯಕರವಾದ ಕತೆಯಿದೆ. ಸುಮಾರು ೨೦೦ ವರ್ಷಗಳ ಹಿಂದೆ ಹನ್ನೆರಡು ಜನ ದರೋಡೆಕೋರರ ಒಂದು ಗುಂಪು ಈ ಕೊಣ್ಣೀರ್ ಎಂಬ ಜಾಗದಲ್ಲಿ ಕಾದುಕೊಂಡು ಕುಳಿತು ಅಲ್ಲಿ ಹಾದು ಹೋಗುವ ಜನರನ್ನು ದೋಚುತ್ತಿತ್ತು. ಬಹಳ ಕಾಲ ಹೀಗೆ ದರೋಡೆಕೋರರ ಉಪಟಳಕ್ಕೆ ಗುರಿಯಾದ ಜನ ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ, ಒಂದು ದಿನ ಅವರೆಲ್ಲ ಒಟ್ಟಾಗಿ ಆ ದರೋಡೆಕೋರರ ಮೇಲೆ ದಾಳಿ ಮಾಡಿ, ಎಲ್ಲ ಹನ್ನೆರಡು ದರೋಡೆಕೋರರನ್ನು ಸಾಯಿಸಿದರು. ದರೋಡೆಕೋರರನ್ನು ಕೊಂದ ಜಾಗದಲ್ಲಿದ್ದ ಒಂದು ಬಂಡೆಯ ಮೇಲೆ ಆ ಘಟನೆಯ ನೆನಪಿಗೆ ಚಿಕ್ಕ ಗಾತ್ರದ ಹನ್ನೆರಡು ಕ್ರಾಸ್‌ಗಳನ್ನು ಕೆತ್ತಿದರು.
ಕೆಲವು ವರ್ಷಗಳ ನಂತರ ಆ ಜಾಗದಲ್ಲಿ ಒಂದು ದೊಡ್ಡ ಕ್ರಾಸ್‌ನ್ನು ನೆಟ್ಟು, ಆ ಜಾಗಕ್ಕೆ ‘ಬಾರಾ ಚೋರಾಂಚೆ ಕುರಿಸ್ (ಹನ್ನೆರಡು ಕಳ್ಳರ ಕ್ರಾಸ್)’ ಎಂದು ಹೆಸರಿಟ್ಟರು. ಗೋವಾದ ಆಲ್ಡೊನಾ ಎಂಬ ಗ್ರಾಮದಲ್ಲೂ ಒಂದು ಚೋರೋತ್ಸವ್ ಆಚರಿಸಲ್ಪಡುತ್ತದೆ. ಅದರ ಹಿಂದೆಯೂ ಒಂದು ಕಳ್ಳರ ಕತೆಯಿದೆ. ಒಮ್ಮೆ ದರೋಡೆಕೋರರ ಗುಂಪೊಂದು ಗ್ರಾಮದ ಚರ್ಚನ್ನು ದೋಚಲು ಬಂದಾಗ, ಜನ ಒಟ್ಟಾಗಿ ಅವರನ್ನು ಎದುರಿಸಿ ನಿಂತರು. ಆಗ ದರೋಡೆಕೋರರು ಹೆದರಿ ಪಲಾಯನ ಮಾಡುವಾಗ ಎಲ್ಲ ದಿಕ್ಕುಗಳಿಂದ ಅವರತ್ತ ಕಲ್ಲುಗಳು ಬೀಸಿ, ೧೬ ಜನ ಕಳ್ಳರನ್ನು ಸಾಯಿಸಿ, ನಾಲ್ವರನ್ನು ಸೆರೆ ಹಿಡಿದರು. ಉಳಿದವರು ತಪ್ಪಿಸಿಕೊಳ್ಳುವ ಭರದಲ್ಲಿ ಹೊಳೆಗೆ ಬಿದ್ದು ಸತ್ತರು. ಇದು ನಡೆದುದು ೧೮೯೫ರ ಅಕ್ಟೋಬರ್ ೨೯ರಂದು ಎಂದು ಹೇಳಲಾಗುವುದರಿಂದ ಪ್ರತಿ ವರ್ಷ ಈ ದಿನ ಆಲ್ಡೋನಾದಲ್ಲಿ ಚೋರೋತ್ಸವ ನಡೆಯುತ್ತದೆ. ಗೋವಾ ಅಂದರೆ ಫೆನಿ, ಬೀಚು, ಬಿಕಿನಿ, ಮೋಜು ಮಸ್ತಿ ಎಂಬುದು ಸಾಮಾನ್ಯವಾಗಿ ತಿಳಿದ ವಿಚಾರಗಳು. ಆದರೆ, ಇಂತಹ ಗೋವಾದಲ್ಲಿ ನೂರಾರು ವರ್ಷಗಳ ಹಿಂದಿನ ಇಂತಹ ಸಾಂಪ್ರದಾಯಗಳು ಇನ್ನೂ ಜೀವಂತವಾಗಿವೆ ಎಂಬುದು ಸೋಜಿಗದ ಸಂಗತಿ!
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…