ಎಡಿಟೋರಿಯಲ್

ಪುನರ್ವಸತಿ ಗ್ರಾಮಗಳಿಗೆ ಸಮರ್ಪಕ ಸೌಲಭ್ಯದ ಕೊರತೆ

ಅನಿಲ್ ಅಂತರಸಂತೆ

ಹುಟ್ಟಿದ ಊರು, ಬೆಳೆದ ನೆಲವನ್ನು ತೊರೆದು ಬೇರೆಡೆ ಜೀವನ ಕಟ್ಟಿಕೊಳ್ಳುವುದು ಪ್ರತಿಯೊಬ್ಬರಿಗೂ ಭಾವನಾತ್ಮಕವಾಗಿ ಅದೊಂದು ಕಷ್ಟದ ಕೆಲಸ. ‘ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು’ ಎಂಬ ಡಾ.ರಾಜಕುಮಾರ್‌ರವರ ಚಿತ್ರದ ಗೀತೆಯ ಸಾಲಿನಂತೆ ಎಲ್ಲಿಯೇ ಸುತ್ತಾಡಿದರೂ ಬಳಿಕ ಹುಟ್ಟೂರಿಗೆ ಬಂದಾಗ ಸಿಗುವ ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಂತಹ ಸ್ಥಳದಿಂದ ಒಂದು ಗ್ರಾಮವನ್ನೇ ಬೇರೆಡೆಗೆ ಸ್ಥಳಾಂತರಿಸಿ ಹೊಸ ಬದುಕು ನೀಡುವುದು ನಿಜಕ್ಕೂ ಸವಾಲಿನ ಕೆಲಸ.

ರಾಜ್ಯದ ಸಾಕಷ್ಟು ಕಡೆ ಈಗಾಗಲೇ ಅರಣ್ಯ ರಕ್ಷಣೆ ಹಾಗೂ ಕಾಡುಪ್ರಾಣಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಹಾಗೂ ಜಲಾಶಯಗಳ ನಿರ್ಮಾಣದಿಂದ ಸಾಕಷ್ಟು ಕಡೆ ಆದಿವಾಸಿ ಹಾಡಿಗಳನ್ನು, ಗ್ರಾಮಗಳನ್ನು ಪುನರ್ವಸತಿಗೊಳಿಸಲಾಗಿದೆ. ಇವುಗಳ ಪೈಕಿ ಬೆರಳೆಣಿಕೆಯ ಕಡೆಗಳಲ್ಲಿ ಸಫಲತೆ ಕಂಡರೂ ಸಾಕಷ್ಟು ಕಡೆ ಪುನರ್ವಸತಿ ಕಲ್ಪಿಸಿ ದಶಕಗಳಾದರೂ ಸರಿಯಾದ ಮೂಲಸೌಕರ್ಯವನ್ನು ಒದಗಿಸಿಲ್ಲ. ನಾಗರಹೊಳೆ ಅರಣ್ಯದ ಡಿ.ಬಿ.ಕುಪ್ಪೆ ವ್ಯಾಪ್ತಿಯ ಭೋಗೇಶ್ವರ ಎಂಬ ಹಾಡಿಯ ಜನರು ಪುನರ್ವಸತಿ ಕಲ್ಪಿಸಿದ 10 ವರ್ಷಗಳ ಬಳಿಕ ಸೌಕರ್ಯಗಳ ಕೊರತೆಯಿಂದಾಗಿ ಇತ್ತೀಚೆಗೆ ತಮ್ಮ ಮೂಲಸ್ಥಾನಕ್ಕೇ ಹಿಂದಿರುಗುತ್ತೇವೆ ಎಂದು ಮರಳಿ ಕಾಡಿಗೆ ಬಂದ ಪ್ರಕರಣ ಸಾಕ್ಷಿಯಾಗಿದೆ.

ರಾಜ್ಯದಲ್ಲಿ ಸಫಲತೆ ಕಂಡ ಪುನರ್ವಸತಿಯ ಬಗ್ಗೆ ಈಚೆಗೆ ಒಂದು ಚರ್ಚೆಯಲ್ಲಿ ಕೇಳಿದ್ದೆ, ಅದು ಚಿಕ್ಕಮಗಳೂರಿನ ಭದ್ರ ಅರಣ್ಯ ವ್ಯಾಪ್ತಿಯ ಸುಮಾರು 14 ಹಳ್ಳಿಗಳ ಹಾಗೂ 500 ಕುಟುಂಬಗಳ ಯಶಸ್ವಿ ಪುನರ್ವಸತಿ ಯೋಜನೆ. 1974ರಲ್ಲಿ ಅಭಯಾರಣ್ಯವಾಗಿ ಘೋಷಿತಗೊಂಡ ಭದ್ರಕಾಡಿನ ಜೀವ ಜಲವಾಗಿದ್ದ ‘ಸೋಮವಾಹಿನಿ’ ಎಂಬ ನದಿ ದಂಡೆಯ ಮೇಲೆ ಶತಮಾನಗಳಿಂದ ಬದುಕು ಕಟ್ಟಿಕೊಂಡಿದ್ದ ಆ ಹಳ್ಳಿಗಳ ಜನರು ಅಲ್ಲಿಯೇ ಹುಟ್ಟಿ ಬೆಳೆದು ಪರಿಸರಕ್ಕೆ ಹೊಂದಿಕೊಂಡಿದ್ದರು.

ಆರಂಭದಲ್ಲಿ ‘ಭದ್ರ ಅಭಯಾರಣ್ಯ ವಿರೋಧಿ ಸಮಿತಿ’, ‘ಭದ್ರ ನಿರಾಶ್ರಿತರ ಹೋರಾಟ ಸಮಿತಿ’ಗಳನ್ನು ರಚಿಸಿ ಪುನರ್ವಸತಿ ವಿರೋಧಿಸಿದರೂ ಅಂದಿನ ಡಿಸಿಎಫ್ ಯತೀಶ್‌ಕುಮಾರ್ ಹಾಗೂ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಗೋಪಾಲ ಕೃಷ್ಣಗೌಡರವರು ವೈಯಕ್ತಿಕವಾಗಿ ಅಧಿಕಾರಿಗಳು ಎನ್ನುವುದಕ್ಕಿಂತ ಮನುಷ್ಯರಾಗಿ ಅಲ್ಲಿನ ಜನರ ಸಮಸ್ಯೆಯನ್ನು ಕಂಡು ಹೆಚ್ಚು ಕಳಕಳಿಯಿಂದ, ಹುಟ್ಟೂರಿನ ಭಾವನಾತ್ಮಕ ಸಂಬಂಧ ಬಿಟ್ಟು ತ್ಯಾಗ ಮಾಡಿ ಹೋಗುವವರಿಗೆ ಹಣ ವನ್ನು ಮತ್ತೊಂದರ ಮೂಲಕ ನಾವು ನೀಡುವ ಸಮರ್ಥನೆ ಹೆಚ್ಚಲ್ಲ ಎಂಬ ಮನೋಭಾವನೆಯಿಂದ ಆ ಪುನರ್ವಸತಿಗಾಗಿ ಶ್ರಮಿಸಿದರು. ಅದರ ಫಲವಾಗಿ ಜನರ ಮನವೊಲಿಸಿ ಅವರ ಸ್ವಯಂ ಒಪ್ಪಿಗೆಯ ಮೇರೆಗೆ 14 ಹಳ್ಳಿಗಳನ್ನು ಕಾಡಿನಿಂದ ಹೊರತಂದು ಪುನರ್ವಸತಿ ಕಲ್ಪಿಸಲಾಗಿತ್ತು. ಅಂದು ಅವರಿಗೆ ಕುಟುಂಬಕ್ಕೆ ತಲಾ 5-6 ಎಕರೆ ಭೂಮಿ, ವಸತಿ. ಹಣಕಾಸು ನೆರವು, ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು, ಉತ್ತಮ ವಿದ್ಯಾಕೇಂದ್ರಗಳು, ವಿದ್ಯುತ್ ಸೇರಿ ಎಲ್ಲಾ ರೀತಿಯ ಸೌಕರ್ಯಗಳನ್ನೂ ಒದಗಿಸಿ ಅವರ ಬದುಕನ್ನು ಸುಧಾರಿಸುವ ಪ್ರಯತ್ನ ನಡೆದಿತ್ತು. ಜೊತೆಗೆ ಭದ್ರ ಕಾಡಿನ ವನ್ಯಸಂಪತ್ತಿನ ರಕ್ಷಣೆಗೂ ಮುನ್ನುಡಿ ಬರೆದಿದ್ದರು. ಇಂದು ಈ ಪುನರ್ವಸತಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಎಂಬ ಸಾಲಿನಲ್ಲಿ ನಿಲ್ಲುತ್ತದೆ.

ಕಳೆದ ಫೆಬ್ರವರಿಯಲ್ಲಿ ಇಂತಹದ್ದೇ ಒಂದು ಪುನರ್ವಸತಿಗೊಂಡಿರುವ ಗ್ರಾಮದ ಅಂಚಿನಲ್ಲಿನ ಕಾಡಿಗೆ ಪ್ರವಾಸ ತೆರಳಿದ್ದ ನನಗೆ ಆ ಗ್ರಾಮದ ಸೌಕರ್ಯಗಳು ನಿಜಕ್ಕೂ ಬೆರಗು ಮೂಡಿಸಿದ್ದವು. ಮಹಾರಾಷ್ಟ್ರದ ನಾಗಪುರ ಜಿಲ್ಲೆಗೆ ಹೊಂದಿಕೊಂಡಂತಿರುವ ಉಮ್ರೇಡ್ ಕರಂಡ್ಲ ಕಾಡಿನ ‘ಗೋಟಾಂಗಾವ್’ ಎಂಬ ಗ್ರಾಮವದು. ಸುಮಾರು 189 ಚ.ಕಿ.ಮೀ ವ್ಯಾಪ್ತಿಯ ಕಾಡು, ಕಳ್ಳಬೇಟೆಯಿಂದ ಅಳಿವಿನಂಚಿಗೆ ಸಾಗಿದ ಬಳಿಕ ಅರಣ್ಯ ಇಲಾಖೆಯ ಯಶಸ್ವಿ ಸಂರಕ್ಷಣೆಯಿಂದ ಈಗ ಕೊಂಚ ಉಸಿರಾಡುವಂತಾಗಿರುವ ಬಗ್ಗೆ ಹಿಂದೊಮ್ಮೆ ಲೇಖನದಲ್ಲಿ ತಿಳಿಸಿದ್ದೆ. ಉಮ್ರೇಡ್ ನಲ್ಲಿ ‘ವೈನ್‌ಗಂಗಾ’ಎಂಬ ನದಿಗೆ ೧೯೯೨ರಲ್ಲಿ ಅಡ್ಡಲಾಗಿ ನಿರ್ಮಿಸಿದ ‘ಇಂದಿರಾ ಸಾಗರ್’ ಎಂಬ ಬೃಹತ್ ಅಣೆಕಟ್ಟೆಯಿಂದ 1992ಕ್ಕೂ ಮೊದಲು ಅಲ್ಲಿ ಸುಮಾರು 110ಕ್ಕೂ ಅಧಿಕ ಗ್ರಾಮಗಳಿಗೆ ನೀರಿನಲ್ಲಿ ಮುಳುಗಡೆಗೊಳ್ಳುವ ಭೀತಿ ಎದುರಾಗಿತ್ತು. ಈ ವೇಳೆ ಅಲ್ಲಿನ 104 ಗ್ರಾಮಗಳನ್ನು ಯಶಸ್ವಿಯಾಗಿ ಪುನರ್ವಸತಿಗೊಳಿಸಲಾಗಿದೆ. ಅದರಲ್ಲಿ ಈ ‘ಗೋಟಾಂಗವ್’ ಎಂಬ ಹಳ್ಳಿಯೂ ಒಂದು.

ಈಗ ಅರಣ್ಯದ ಅಂಚಿನಲ್ಲಿಯೇ ಈ ಗ್ರಾಮ ಪುನರ್ವಸತಿಗೊಂಡಿದೆ. ಈಗಲೂ ಉಮ್ರೇಡ್‌ನ ಒಂದು ಭಾಗದ ಸಫಾರಿ ಈ ಗ್ರಾಮದಿಂದಲೇ ಆರಂಭವಾಗುತ್ತದೆ. ಪುನರ್ವಸತಿ ಮಾಡಿದ ಬಳಿಕ ಕಾಡಂಚಿನಲ್ಲಿ ವಿಶಾಲವಾದ ಸ್ಥಳವನ್ನು ಈ ಗ್ರಾಮಕ್ಕೆ ನೀಡಿ, ಮುಳುಗಡೆಯಾದ ಗ್ರಾಮದ ಜನರಿಗೆ ಜಾಗ, ಹಣದ ನೆರವು ಮತ್ತು ಉದ್ಯೋಗಗಳನ್ನೂ ಕಲ್ಪಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸಫಾರಿ ಇಲ್ಲಿನ ಜನರನ್ನು ಉದ್ಯೋಗದತ್ತ ಸೆಳೆದಿದ್ದು ಪ್ರಮುಖ ಆಕರ್ಷಣೆ. ಇಲ್ಲಿನ ಸಫಾರಿಗೆ ವಾಹನ ಚಾಲಕರು, ಗೈಡ್‌ಗಳಾಗಿ ಇಲ್ಲಿನ ಜನರನ್ನೇ ಆಯ್ಕೆ ಮಾಡಿ ಉದ್ಯೋಗ ನೀಡುವ ಜೊತೆಗೆ ಮೀನುಗಾರಿಕೆ, ಅರಣ್ಯ ಇಲಾಖೆಯ ದಿನಗೂಲಿ ಕೆಲಸಕ್ಕೆ ಪ್ರೋತ್ಸಾಹ ನೀಡಲಾಗಿದೆ. ಇದರೊಂದಿಗೆ ಅರಣ್ಯ ಇಲಾಖೆಯ ವತಿಯಿಂದಲೇ ಇಲ್ಲಿನ ಕೆಲ ಯುವಕ ಯುವತಿಯರಿಗೆ ಉತ್ತಮ ವಿದ್ಯಾಭ್ಯಾಸ, ಹೋಟೆಲ್ ಮ್ಯಾನೇಜ್‌ಮೆಂಟ್‌ನಂತಹ ಜೀವನಾಧಾರಿತ ಕೋರ್ಸ್‌ಗಳ ತರಬೇತಿಯನ್ನೂ ಕೊಡಿಸಲಾಗುತ್ತಿದ್ದು, ಇಲ್ಲಿನ ಜನರು ಬದುಕು ಕಟ್ಟಿಕೊಳ್ಳಲು ಅರಣ್ಯ ಇಲಾಖೆ ನೆರವಾಗಿದೆ.

ಗ್ರಾಮದಲ್ಲಿ ಜನರು ಉತ್ತಮ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ ಗುಣಮಟ್ಟದ ಶಾಲೆಗಳು, ಗ್ರಂಥಾಲಯ, ಸುಸಜ್ಜಿತ ಆಸ್ಪತ್ರೆ, ಡಿಜಿಟಲ್ ಬೋರ್ಡ್‌ನೊಂದಿಗೆ ಕಂಗೊಳಿಸುವ ಗ್ರಾಮ ಪಂಚಾಯಿತಿ, ಸ್ಪಷ್ಟ ಬೆಳಕು ನೀಡುವ ಬೀದಿ ದೀಪಗಳು, ಉತ್ತಮವಾಗಿ ಡಾಂಬರೀಕರಣಗೊಂಡಿರುವ ರಸ್ತೆಗಳು, ಕ್ರೀಡೆಗೆ ಉತ್ತಮ ಮೈದಾನ, ಜಿಮ್, ಸಾರಿಗೆ ಸೌಲಭ್ಯದಂತಹ ಸಂಪೂರ್ಣ ಮೂಲಸೌಕರ್ಯಗಳನ್ನು ಆ ಗ್ರಾಮಕ್ಕೆ ಒದಗಿಸಲಾಗಿದೆ. ಪರಿಣಾಮ ತಮಗೆ ಬದುಕು ನೀಡಿದ ಅರಣ್ಯವು 2010ರ ಈಚೆಗೆ ಸಂರಕ್ಷಣೆಯ ಹಾದಿ ಹಿಡಿದಿದ್ದು, ಅದಕ್ಕೆ ಇಲ್ಲಿನ ಜನರ ಕೊಡುಗೆ ಅಪಾರವಾಗಿದೆ. ಅಲ್ಲಿನ ಪ್ರವಾಸೋದ್ಯಮವೂ ಅಭಿವೃದ್ಧಿಯತ್ತ ಸಾಗಿ ಉದ್ಯೋಗಗಳು ಸೃಷ್ಟಿಯಾಗಿ ಜನರ ಬದುಕನ್ನು ಸುಧಾರಿಸುವುದರ ಜೊತೆಗೆ ಕಾಡಿನಲ್ಲಿ ಹುಲಿ ಸಂಖ್ಯೆಯೂ ಏರಿಕೆ ಕಾಣುತ್ತಿದ್ದು, ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶವಾಗಲು ಸಿದ್ಧವಾಗಿ ನಿಂತಿದೆ ಉಮ್ರೇಡ್.

ಅಂತಹ ಒಂದು ಯಶಸ್ವಿ ಪುನರ್ವಸತಿಯನ್ನು ಅಂದು ಉಮ್ರೇಡ್ ಕಾಡಂಚಿನಲ್ಲಿ ಕಂಡು ನಮ್ಮ ರಾಜ್ಯದಲ್ಲಿಯೂ ಈಗಾಗಲೇ ಕೈಗೊಂಡಿರುವ ಪುನರ್ವಸತಿಗಳು ಇದೇ ಮಾರ್ಗದಲ್ಲಿ ಸಫಲತೆ ಕಾಣಬಹುದಲ್ಲವೇ ಎಂಬ ಪ್ರಶ್ನೆ ಮೂಡಿದ್ದು ಸಹಜ. ರಾಜ್ಯದ ಕಬಿನಿ ಜಲಾಶಯದ ನಿರ್ಮಾಣದ ಹಿನ್ನೆಲೆಯಲ್ಲಿ ಸಮೀಪದ ಕಾಡಂಚಿನ ಸುಮಾರು ೩೪ಕ್ಕೂ ಅಧಿಕ ಹಳ್ಳಿಗಳನ್ನು ಪುನರ್ವಸತಿಗೊಳಿಸಲಾಗಿತ್ತು. ಈಗ 50 ವರ್ಷಗಳೇ ಉರುಳಿವೆ. ಇಂದಿಗೂ ಇಲ್ಲಿನ ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆಗಳಿಲ್ಲ, ಬೀದಿ ದೀಪಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಕ್ಕುಪತ್ರ, ಮೂಲ ಸೌಕರ್ಯಗಳನ್ನು ನೀಡಿಲ್ಲ ಎಂಬೆಲ್ಲ ದೂರುಗಳು ಆ ಗ್ರಾಮದ ಜನರಿಂದ ಕೇಳಿ ಬರುತ್ತಲೇ ಇವೆ. ಅಲ್ಲದೇ ಶರಾವತಿ ಯೋಜನೆಯಲ್ಲಿಯೂ 1960೦ರಲ್ಲಿ ಪುನರ್ವಸತಿಗೊಂಡ ಹಳ್ಳಿಗಳಿಗೆ ಸೌಲಭ್ಯ ಇನ್ನೂ ಲಭ್ಯವಾಗಿಲ್ಲ.

ಕಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದ ಆದಿವಾಸಿಗಳನ್ನು ಏಕಾಏಕಿ ಕಾಡಿನಿಂದ ಹೊರತಂದು ಬೇಸಾಯ ಮಾಡಿ, ನಗರವಾಸಿಗಳೊಂದಿಗೆ ಜೀವಿಸಿ ಎನ್ನುವ ಬದುಕಿನ ಸಂಸ್ಕೃತಿಯ ಬದಲಾವಣೆಯ ಅಳವಡಿಕೆ ನಿಜಕ್ಕೂ ಅಸಾಧ್ಯ. ಜೊತೆಗೆ ಜನವಸತಿ ಬದುಕಿಗೆ ಹೊಂದಿಕೊಳ್ಳಲು ಸಾಕಷ್ಟು ವರ್ಷಗಳ ಸಮಯವೇ ಬೇಕಾಗುತ್ತದೆ. ಅಲ್ಲಿಯವರೆಗೂ ಅವರಿಗೆ ಸರ್ಕಾರಗಳ ನೆರವು ಮತ್ತು ಪ್ರೋತ್ಸಾಹ ಅತ್ಯಗತ್ಯವಾಗಿ ಬೇಕಾಗುತ್ತದೆ.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

8 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

8 hours ago