ಡಿ.ವಿ. ರಾಜಶೇಖರ
ಔಷಧ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಭಾರತ ಈಗ ತಲೆತಗ್ಗಿಸುವಂತಾಗಿದೆ. ಆಫ್ರಿಕಾದ ಪುಟ್ಟ ಬಡ ದೇಶ ಗಾಂಬಿಯಾದಲ್ಲಿ ಭಾರತದಿಂದ ಆಮದು ಮಾಡಿಕೊಂಡ ಕೆಮ್ಮಿನ ಸಿರಪ್ ಕುಡಿದ 66 ಮಕ್ಕಳು ಸತ್ತಿದ್ದಾರೆ ಎಂದು ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗವಾಗಿ ಹೇಳಿದೆ. ಕಳೆದ ಮೂರು ತಿಂಗಳಲ್ಲಿ ಈ ಸಾವುಗಳು ಸಂಭವಿಸಿವೆ. ಭಾರತದಿಂದ ಆಮದು ಮಾಡಿಕೊಂಡ ನಾಲ್ಕು ಕೆಮ್ಮು ನಿವಾರಕ ಸಿರಪ್‍ಗಳ ಬಗ್ಗೆ ಇತರ ದೇಶಗಳಿಗೆ ಎಚ್ಚರಿಕೆಯನ್ನೂ ನೀಡಿದೆ. ನಿರ್ದಿಷ್ಟ ಸಿರಪ್‍ಗಳ ಹೆಸರುಗಳನ್ನು ಬಹಿರಂಗ ಮಾಡಿ ಅವುಗಳನ್ನು ಬಳಸದಂತೆ ಎಲ್ಲ ದೇಶಗಳಿಗೆ ಸಲಹೆಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಎಚ್ಚರಿಕೆಯ ನಂತರ ಭಾರತದ ಔಷಧ ನಿಯಂತ್ರಣ ಸಂಸ್ಥೆ ಆ ಔಷಧಗಳನ್ನು ತಯಾರಿಸಿದ ಸಂಸ್ಥೆಯಿಂದ ಸಿರಪ್‍ಗಳ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.
ಈ ಔಷಧಗಳನ್ನು ಹರಿಯಾಣದ ಮೈಡೆನ್ ಫಾರ್ಮಸೆಟಿಕಲ್ಸ್ ಸಂಸ್ಥೆ ಉತ್ಪಾದಿಸಿದೆ. ಅವನ್ನು ಗಾಂಬಿಯಾಕ್ಕೆ ಮಾತ್ರ ಪೂರೈಸಿದ್ದು ಭಾರತದಲ್ಲಿ ಅವುಗಳನ್ನು ಬಿಡುಗಡೆ ಮಾಡಿಲ್ಲದಿರುವ ಅಂಶ ಗೊತ್ತಾಗಿದೆ ಎಂದು ಸೆಂಟ್ರಲ್ ಡ್ರಗ್ ಕಟ್ರೋಲ್ ಸಂಸ್ಥೆ ತಿಳಿಸಿದೆ. ಈ ಸಂಸ್ಥೆ ಹಿಂದೆಯೂ ಇಂಥ ಆರೋಪಕ್ಕೆ ಒಳಗಾಗಿದೆ. ಮತ್ತೆ ಅದೇ ಸಂಸ್ಥೆ ಮತ್ತೆ ಅದೇ ರೀತಿಯ ಕಳಪೆ ಔಷಧಗಳನ್ನು ಪೂರೈಸಿದ ಆರೋಪಕ್ಕೆ ಒಳಗಾಗಿರುವುದು ಭಾರತದಲ್ಲಿ ಕಾನೂನುಗಳು ಎಷ್ಟು ದುರ್ಬಲವಾಗಿವೆ ಎನ್ನುವುದನ್ನು ತೋರಿಸುತ್ತದೆ. ಆದರೆ ಈ ಬೆಳವಣಿಗೆಯಿಂದ ಆಘಾತವಾಗಿದೆ ಎಂದು ಮೈಡನ್ ಸಂಸ್ಥೆ ತಿಳಿಸಿದೆ. ಎಲ್ಲವೂ ಕಾನೂನುಬದ್ಧವಾಗಿ ಉತ್ಪಾದನೆಯಾಗಿದೆ ಎಂದು ಕೂಡಾ ಸ್ಪಷ್ಟನೆ ನೀಡಲಾಗಿದೆ.
ಸಾಮಾನ್ಯವಾಗಿ ಯಾವ ದೇಶ ಔಷಧಗಳನ್ನು ಆಮದು ಮಾಡಿಕೊಳ್ಳುತ್ತದೋ ಅದು ಔಷಧಗಳನ್ನು ಸರಿಯಾಗಿ ಪರೀಕ್ಷಿಸಿ ಲೈಸನ್ಸ್ ನೀಡಬೇಕು. ಆದರೆ ಗಾಂಬಿಯಾದಲ್ಲಿ ಅಂಥ ಪರೀಕ್ಷೆ ನಡೆಸುವ ಲ್ಯಾಬ್‍ಗಳಿಲ್ಲ. ನೆರೆಯ ಸೆನೆಗಲ್ ದೇಶಕ್ಕೆ ಕಳುಹಿಸಿ ಪರೀಕ್ಷೆ ನಡೆಸಬೇಕು. ಈ ನಾಲ್ಕು ಔಷಧಗಳಿಗೆ ಸಂಬಂಧಿಸಿದಂತೆ ಇಂಥ ಪರೀಕ್ಷೆ ನಡೆದಿದೆಯೋ ಇಲ್ಲವೋ ಎಂಬುದು ಮುಂದಿನ ತನಿಖೆಯಿಂದ ಮಾತ್ರ ಗೊತ್ತಾದೀತು. ಈ ಮಧ್ಯೆ ಮಕ್ಕಳನ್ನು ಕಳೆದುಕೊಂಡ ಗಾಂಬಿಯಾದ ತಾಯಂದಿರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಸರ್ಕಾರ ಬೇರೆ ದೇಶಗಳಿಂದ ಆಮದು ಮಾಡಿಕೊಂಡ ಔಷಧಗಳನ್ನು ಪರೀಕ್ಷೆಗೆ ಒಳಪಡಿಸುವ ಲ್ಯಾಬ್ ಸ್ಥಾಪಿಸಲಿದೆ ಎಂದು ಅಧ್ಯಕ್ಷ ಅದಾಮ ಬರೋ ಹೇಳಿದ್ದಾರೆ. ಸಂಬಂಧಿಸಿದ ಕಾನೂನುಗಳನ್ನು ಪುನರ್‍ಪರಿಶೀಲಿಸುವಂತೆಯೂ ಸೂಚನೆ ನೀಡಿರುವುದಾಗಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಟೆಲಿವಿಷನ್ ಭಾಷಣದಲ್ಲಿ ತಿಳಿಸಿ ಜನರಿಗೆ ಸಮಾಧಾನ ಹೇಳಿದ್ದಾರೆ.
ಹರಿಯಾಣದ ಮೈಡೆನ್ ಫಾರ್ಮಟಿಕಲ್ಸ್ ಪೂರೈಸಿದ ಕೆಮ್ಮಿನ ಸಿರಪ್‍ಗಳಿಂದ ಈ ಸಾವು ಸಂಭವಿಸಿರ ಬಹುದೆಂಬುದು ಜಾಂಬಿಯಾ ವೈದ್ಯರ ಅಂತೆಯೇ ವಿಶ್ವ ಆರೋಗ್ಯ ಸಂಸ್ಥೆಯ ಅನುಮಾನ. ಕಿಡ್ನಿ ವೈಫಲ್ಯದಿಂದ ಆದ ಮಕ್ಕಳ ಸಾವುಗಳಿಗೆ ಮತ್ತು ಈ ಔಷಧಗಳಿಗೆ ಸಂಬಂಧವಿರುವ ಅನುಮಾನವಿರುವುದರಿಂದ ಆ ಔಷಧಗಳನ್ನು ಬಳಸದಂತೆ ವಿಶ್ವ ಸಮುದಾಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಈ ಸಂಬಂಧವಾಗಿ ಔಷಧಗಳ ಪರೀಕ್ಷೆಗಳನ್ನು ಮುಂದುವರಿಸಲಾಗಿದೆ.
ಗಾಂಬಿಯಾ ಸರ್ಕಾರ ದೂರಿರುವ ನಾಲ್ಕು ಔಷಧಿಗಳಲ್ಲಿ ಡೈಥಿಲಿನ್ ಗ್ಲೈಕೋಲ್ ಮತ್ತು ಎಥಿಲಿನ್ ಗ್ಲೈಕೋಲ್ ಅಂಶ ಇದ್ದು ಈ ಸಾವುಗಳಿಗೆ ಅದೇ ಕಾರಣವಾಗಿರಬಹುದು ಎಂದು ವಿಶ್ವ ಅರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೇಭ್ರಿಯೋಸಸ್ ತಿಳಿಸಿದ್ದಾರೆ. ಡೈಥಿಲಿನ್ ಗ್ಲೈಕೋಲ್ ಮತ್ತು ಎಥಿಲಿನ್ ಗ್ಲೈಕೋಲ್ ರಾಸಾಯನಿಕಗಳನ್ನು ಕರಗಿಸುವ ದ್ರಾವಣವಾಗಿದ್ದು ಅದನ್ನು ಮನುಷ್ಯರು ಸೇವಿಸುವ ಔಷಧಿಗಳಲ್ಲಿ ಬಳಕೆ ಮಾಡುವಂತಿಲ್ಲ. ಅದರ ಬಳಕೆ ಬಗ್ಗೆ ನಿಷೇಧವಿದೆ. ಹೀಗಿದ್ದರೂ ಗಾಂಬಿಯಾದ ಕೆಮ್ಮಿನ ಸಿರಪ್‍ಗಳಲ್ಲಿ ಆ ಅಂಶ ಪತ್ತೆಯಾಗಿರುವುದು ಆಘಾತಕಾರಿ.
ವಿಶ್ವದಲ್ಲಿ ನಕಲಿ ಮತ್ತು ಕಳಪೆ ಔಷಧಗಳ ತಯಾರಿಕೆ ಮತ್ತು ಪೂರೈಕೆ ಜಾಲ ಪ್ರಬಲವಾಗಿದೆ. ಬಡದೇಶಗಳೇ ಈ ಜಾಲದ ಗುರಿ. ಬಡ ದೇಶಗಳಲ್ಲಿ ಆರೋಗ್ಯ ಸೌಲಭ್ಯ ವ್ಯವಸಸ್ಥಿತವಾಗಿ ಇಲ್ಲ. ಅಷ್ಟೇ ಅಲ್ಲ ಜನ ಬಡವರಿರುವುದರಿಂದ ಕಡಿಮೆ ಹಣಕ್ಕೆ ಸಿಕ್ಕುವ ಔಷಧಗಳಿಗೆ ಮೊರೆಹೋಗುತ್ತಾರೆ. ಜೊತೆಗೆ ಅವರಲ್ಲಿ ಶಿಕ್ಷಣದ ಅರಿವು ಇಲ್ಲದಿರುವುದರಿಂದ ತಾವು ಕೊಂಡ ಔಷಧ ಕಳಪೆ ಅಥವಾ ನಕಲಿ ಎನ್ನುವುದು ತಿಳಿಯುವುದಿಲ್ಲ. ಹೀಗಾಗಿ ಕಳಪೆ ಮತ್ತು ನಕಲಿ ಔಷಧ ಮಾರಾಟಗಾರರಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಭಾರತ ಅಷ್ಟೇ ಅಲ್ಲ ಹಲವಾರು ದೇಶಗಳಿಂದಲೂ ಇಂಥ ಕಳಪೆ ಮತ್ತು ನಕಲಿ ಔಷಧಗಳು ಬಡದೇಶಗಳ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಾಟವಾಗುತ್ತಿವೆ ಎಂದು ವರದಿಯಾಗಿದೆ. ವಿಶ್ವದಲ್ಲಿ ಬಳಕೆಯಾಗುವ ಒಟ್ಟು ಔಷಧಗಳಲ್ಲಿ ಶೇ 10ರಷ್ಟು ಔಷಧಗಳು ಕಳಪೆ ಮತ್ತು ನಕಲಿ ಔಷಧಗಳಾಗಿವೆ ಎಂದು ಗುರುತಿಸಲಾಗಿದೆ. ಕೋವಿಡ್ ಪಿಡುಗು ಈ ಜಾಲ ವಿಸ್ತರಣೆಯಾಗಲು ಕಾರಣವಾಗಿದ್ದು ಕಳೆದ ವರ್ಷ ಕಳಪೆ ಮತ್ತು ನಕಲಿ ಔಷಧಗಳ ಪ್ರಮಾಣ ಶೇ 47ಕ್ಕೆ ಏರಿದೆಯೆಂದು ಅಂದಾಜುಮಾಡಲಾಗಿದೆ.
ಕಳಪೆ ಔಷಧಗಳ ಜಾಲ ಎಷ್ಟು ಪ್ರಬಲವಾಗಿದೆ ಎನ್ನುವುದಕ್ಕೆ ಭಾರತದಲ್ಲಿ ವರದಿಯಾಗಿರುವ ಕಳಪೆ, ನಕಲಿ ಔಷಧಗಳೇ ಉದಾಹರಣೆ. ಕಳೆದ ತಿಂಗಳು ಔಷಧ ನಿಯಂತ್ರಣ ಇಲಾಖೆ ಕಟಕ್‍ನಲ್ಲಿ ನಡೆಸಿದ ದಾಳಿಗಳಲ್ಲಿ ಪತ್ತೆಯಾದ ಮಾತ್ರೆಗಳು ನಕಲಿಯಾಗಿರುವುದು ಕಂಡುಬಂದಿದೆ. ಅತಿ ರಕ್ತದ ಒತ್ತಡ ಮತ್ತು ಹೃದಯಸಂಬಂಧೀ ಕಾಯಿಲೆಗಳಿಗೆ ಸಾಮಾನ್ಯವಾಗಿ ವೈದ್ಯರು ಕೊಡುವ ಟೆಲ್ಮ-ಎ ಮತ್ತು ಟೆಲ್ಮ-40 ಮಾತ್ರಗಳು ನಕಲಿಯಾಗಿದ್ದವು ಎಂದು ಔಷಧ ನಿಯಂತ್ರಣ ಸಂಸ್ಥೆ ತಿಳಿಸಿದೆ.
ಬೆಂಗಳೂರು ಮತ್ತು ಬಿಹಾರದ ಔಷಧ ವಿತರಣಾ ಸಂಸ್ಥೆ ಇವುಗಳನ್ನು ಪೂರೈಸಿತ್ತು ಎಂದು ಗೊತ್ತಾಗಿದೆ. ಉತ್ತರ ಪ್ರದೇಶದ ಗೌತಮ್ ನಗರದ ಕೆಲವು ಕಡೆ ನಡೆಸಿದ ದಾಳಿಗಳಲ್ಲಿ ಕೋವಿಡ್ -19 ಕಾಯಿಲೆಗೆ ಕೊಡುವ ಫವಿಪ್ರವಿರ್ ನಕಲಿ ಮಾತ್ರೆಗಳು ಸಾವಿರಾರು ಸಂಖ್ಯೆಯಲ್ಲಿ ಪತ್ತೆಯಾಗಿವೆ. ಇವನ್ನು ಹಿಮಾಚಲ ಪ್ರದೇಶದ ಸೋಲನ್‍ನ ಕಾರ್ಖಾನೆಯಲ್ಲಿ ಉತ್ಪಾದಿಸಿದ್ದೆಂದು ತಿಳಿಸಲಾಗಿದೆ. ವಿಚಿತ್ರ ಎಂದರೆ ಸೋಲನ್‍ನಲ್ಲಿ ಅಂಥ ಸಂಸ್ಥೆಯೇ ಇಲ್ಲದಿರುವುದು. ಮಹಾರಾಷ್ಟ್ರದ ಒಂದು ಕಡೆ ನಡೆಸಿದ ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ನಕಲಿ ಅಜಿತ್ರೋಮೈಸಿನ್ ಆಂಟಿಬಯೋಟಿಕ್ ಮಾತ್ರೆಗಳು ಪತ್ತೆಯಾಗಿವೆ.
ನಕಲಿ ಔಷಧಗಳ ಜಾಲ ಎಷ್ಟು ದೊಡ್ಡದಿದೆ ಎಂದರೆ ನೆಗಡಿ ಕೆಮ್ಮಿನಿಂದ ಹಿಡಿದು, ನೋವು ನಿವಾರಕ ಮತ್ತು ಜನನನಿಯಂತ್ರಣ ಮಾತ್ರೆಗಳವರೆಗೆ ಹಬ್ಬಿದೆ. ನಕಲಿ ಮತ್ತು ಕಳಪೆ ಔಷಧಗಳ ಹಾವಳಿ ಜಾಸ್ತಿಯಾಗುತ್ತಲೇ ಇದೆ. ಇದಕ್ಕೆ ಒಂದು ಮುಖ್ಯ ಕಾರಣ. ಈ ಸಂಬಂಧವಾದ ನಿಯಮಗಳು ಕಠಿಣವಾಗಿಲ್ಲದಿರುವುದು. ಮತ್ತು ನಕಲಿ ಮತ್ತು ಕಳಪೆ ಔಷಧಗಳ ತ್ವರಿತ ಪತ್ತೆಗೆ ಅಗತ್ಯವಾದಷ್ಟು ಸಂಖ್ಯೆಯಲ್ಲಿ ಟೆಸ್ಟಿಂಗ್ ಲ್ಯಾಬ್‍ಗಳು ಇಲ್ಲದಿರುವುದು. ಅಪರಾಧ ಎಸಗಿದವರನ್ನು ಜೈಲಿಗಟ್ಟಲು ಕಾನೂನಿನಲ್ಲಿ ಅವಕಾಶವಿದೆ. ಆದರೂ ಈವರೆಗೆ ಒಬ್ಬ ಅಪರಾಧಿಯನ್ನೂ ಜೈಲಿಗೆ ಕಳುಹಿಸಿಲ್ಲ ಎಂಬುದು ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ. ಬಹುಪಾಲು ಬಡ ಮತ್ತು ಅಭಿವೃದ್ಧಿಶೀಲ ದೇಶಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಅಭಿವೃದ್ಧಿ ದೇಶಗಳಲ್ಲಿ ಇರುವ ಹತ್ತು ಔಷಧಗಳಲ್ಲಿ ಒಂದು ಔಷಧ ಇಲ್ಲ ಕಳಪೆಯಾಗಿರುತ್ತದೆ ಅಥವಾ ನಕಲಿಯಾಗಿರುತ್ತದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಈ ಪಿಡುಗನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದೇ ನಿಯಂತ್ರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ದೇಶಗಳು ಕಳಪೆ ಮತ್ತು ನಕಲಿ ಔಷಧಗಳು ಉತ್ಪಾದನೆ ಹಾಗೂ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಜನರ ಪ್ರಾಣದ ಜೊತೆ ಚೆಲ್ಲಾಟವಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಗಳು ಹಿಂಜರಿಯಬಾರದು.
ಭಾರತವು ಆಫ್ರಿಕಾ ವಲಯದ ದೇಶಗಳೊಂದಿಗೆ ಉತ್ತಮ ವಾಣಿಜ್ಯ ಬಾಂಧವ್ಯ ಹೊಂದಿದೆ. ಅದರಲ್ಲಿಯೂ ಮುಖ್ಯವಾಗಿ ಔಷಧ ಕ್ಷೇತ್ರದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ. ಆಫ್ರಿಕಾ ಒಟ್ಟಾರೆಯಾಗಿ ಆಮದು ಮಾಡಿಕೊಳ್ಳುವ ಔಷಧಗಳ ಪ್ರಮಾಣದಲ್ಲಿ ಭಾರತದ ಪಾಲು ಶೇ 20 ರಷ್ಟು ಇದೆ. ಸುಮಾರು 17 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ಇದು. ಮಕ್ಕಳ ಸಾವು ಪ್ರಕರಣದಿಂದಾಗಿ ಆಫ್ರಿಕಾ ವಲಯದ ದೇಶಗಳು ಔಷಧ ಆಮದನ್ನು ನಿಲ್ಲಸಿದರೆ ಭಾರತಕ್ಕೆ ಅಪಾರ ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ಎಚ್ಚರ ವಹಿಸಿ ವಾಣಿಜ್ಯ ಬಾಂಧವ್ಯ ಕೆಡದಂತೆ ನೋಡಿಕೊಳ್ಳಬೇಕು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…