ಎಡಿಟೋರಿಯಲ್

ವಿದೇಶ ವಿಹಾರ : ಅಮೆರಿಕದ ಮಧ್ಯಂತರ ಚುನಾವಣೆ ಕಾಣದ ‘ಕೆಂಪು ಅಲೆ’ ಟ್ರಂಪ್‍ಗೆ ಹಿನ್ನಡೆ

ಡಿ.ವಿ.ರಾಜಶೇಖರ್‌.

ಅಮೆರಿಕದಲ್ಲಿ ಕಳೆದ ವಾರ ನಡೆದ ಮಧ್ಯಂತರ ಚುನಾವಣೆಗಳಲ್ಲಿ ಆಡಳಿತ ಡೆಮಾಕ್ರಟಿಕ್ ಪಕ್ಷ ‘ಕೆಂಪು ಅಲೆ’ಯಲ್ಲಿ (ರಿಪಬ್ಲಿಕನ್ ಪಕ್ಷ) ಕೊಚ್ಚಿಕೊಂಡು ಹೋಗುತ್ತದೆ ಎಂಬ ಚುನಾವಣಾ ಲೆಕ್ಕಾಚಾರಗಳು ಹುಸಿಯಾಗಿವೆ. ಮುಂದಿನ ಚುನಾವಣೆಗಳಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕನಸು ಕಾಣುತ್ತಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಈ ಚುನಾವಣಾ ಫಲಿತಾಂಶಗಳು ಆಘಾತವನ್ನೇ ನೀಡಿವೆ.
ಈಗ ಲಭ್ಯವಿರುವ ಚುನಾವಣೆ ಫಲಿತಾಂಶಗಳನ್ನು ನೋಡಿದರೆ ವಿರೋಧಿ ರಿಪಬ್ಲಿಕನ್ ಪಕ್ಷ ಸ್ವಲ್ಪ ಮುನ್ನಡೆ ಸಾಧಿಸಿದರೂ ಆಡಳಿತ ಡೆಮಾಕ್ರಟಿಕ್ ಪಕ್ಷದ ಸಾಧನೆ ಆಶ್ಚರ್ಯಹುಟ್ಟಿಸುವಂತಿದೆ. ಡೆಮಾಕ್ರಟಿಕ್ ಪಕ್ಷ ಹತ್ತಾರು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂಬ ಅಂದಾಜು ತಲೆಕೆಳಗಾಗಿದ್ದು ಸೆನೆಟ್ ಮತ್ತು ಜನಪ್ರತಿನಿಧಿಸಬೆಯಲ್ಲಿ ತನ್ನ ಬಹುಪಾಲು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜನಪ್ರತಿನಿಧಿಸಭೆಯಲ್ಲಿ ಬಹುಮತ ಗಳಿಸುವತ್ತ ರಿಪಬ್ಲಿಕನ್ ಪಕ್ಷ ಹೆಜ್ಜೆ ಹಾಕುತ್ತಿದೆ. ಸೆನೆಟ್‍ನಲ್ಲಿ ಡೆಮಾಕ್ರಟಿಕ್ ಪಕ್ಷ 50 ಸ್ಥಾನ ಗಳಿಸಿದ್ದು ಬಹುಮತ ಗಳಿಸಲು ಇನ್ನೊಂದು ಸ್ಥಾನ ಬೇಕಿದೆ. ಆದರೆ ಸಮಾನ ಸ್ಥಾನ(ಮತ) ಬಂದ ಸಂದರ್ಭದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ ನೀಡುವ ಮೂಲಕ ಬಹುಮತ ಗಳಿಸಲು ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ ಡೆಮಾಕ್ರಟಿಕ್ ಪಕ್ಷ ಸೆನೆಟ್‍ನಲ್ಲಿ ಬಹುಮತ ಗಳಿಸಿದಂತೆಯೇ ಆಗಿದೆ. ಇನ್ನೂ ಒಂದು ಸ್ಥಾನಕ್ಕೆ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಲಿದೆ. ಆ ಕ್ಷೇತ್ರದ ಫಲಿತಾಂಶ ರಿಪಬ್ಲಿಕನ್ ಪಕ್ಷದ ಕಡೆಗೆ ಹೋದರೂ ಡೆಮಾಕ್ರಟಿಕ್ ಪಕ್ಷಕ್ಕೆ ಸಮಸ್ಯೆಯಿಲ್ಲ. ಕಳೆದ ಚುನಾವಣೆಗಳಲ್ಲಿಯೂ ಇಂಥದೇ ಪರಿಸ್ಥಿತಿ ಇತ್ತು.
ಈ ಫಲಿತಾಂಶದಿಂದಾಗಿ ರಿಪಬ್ಲಿಕನ್ ಪಕ್ಷದ ವರ್ಚಸ್ಸು ಮುಕ್ಕಾದಂತೆ ಆಗಿದೆ. ಅದರಲ್ಲಿಯೂ ಇನ್ನೇನು ಗೆದ್ದೇಬಿಟ್ಟೆವು ಎಂಬ ಹಮ್ಮಿನಿಂದ ಮೆರೆಯುತ್ತಿದ್ದ ಟ್ರಂಪ್‍ಗೆ ಮುಖಭಂಗವಾದಂತಾಗಿದೆ. ಟ್ರಂಪ್ ಬೆಂಬಲ ನೀಡಿದ್ದ ಅನೇಕ ಅಭ್ಯರ್ಥಿಗಳಲ್ಲಿ ಕೆಲವರು ಗೆದ್ದಿರುವರಾದರೂ ಬಹುಪಾಲು ಮಂದಿ ಸೋತಿದ್ದಾರೆ. ಟ್ರಂಪ್ ಧೋರಣೆಗಳನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದ ಅವರದೇ ಪಕ್ಷದ ಕೆಲವರು ಗೆದ್ದಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.
ಸಾಮಾನ್ಯವಾಗಿ ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ (ಸೆನೆಟ್ ನ ನೂರು ಸ್ಥಾನ ಮತ್ತು ಜನಪ್ರತಿನಿಧಿ ಸಭೆಯ 435 ಸ್ಥಾನಗಳಿಗೆ ಎರಡು ವರ್ಷಕ್ಕೆ ಒಮ್ಮೆ ಚುನಾವಣೆ ನಡೆಯುತ್ತದೆ) ವಿರೋಧ ಪಕ್ಷ ಹೆಚ್ಚು ಸ್ಥಾನ ಗಳಿಸಿ ಆಡಳಿತ ಪಕ್ಷ ಹೀನಾಯ ಸೋಲು ಅನುಭವಿಸುವುದು ಕಂಡುಬರುತ್ತದೆ. ಆಡಳಿತ ಪಕ್ಷ ತನ್ನ ಸ್ಥಾನ ಬಲ ಉಳಿಸಿಕೊಂಡ ನಿದರ್ಶನಗಳಿದ್ದರೂ ವಿರೋಧ ಪಕ್ಷಗಳು ಹೆಚ್ಚು ಸ್ಥಾನ ಗಳಿಸಿರುವ ಬೆಳವಣಿಗೆ ಸಾಮಾನ್ಯವಾದುದು. ಹಣದುಬ್ಬರ, ಬೆಲೆ ಏರಿಕೆ, ಆಫ್ಘಾನಿಸ್ತಾನದಿಂದ ಸೇನೆ ಹಠಾತ್ ವಾಪಸ್, ಯುಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿಯನ್ನು ತಡೆಯುವಲ್ಲಿ ರಾಜತಾಂತ್ರಿಕ ವೈಫಲ್ಯ, ಕರೋನಾ ಸಾವು, ಬಂದೂಕು ಸಂಸ್ಕøತಿ ತಡೆಯುವಲ್ಲಿನ ವೈಫಲ್ಯ ಮುಂತಾದ ಕಾರಣಗಳಿಂದಾಗಿ ಅಧ್ಯಕ್ಷ ಜೋ ಬೈಡನ್ ಅವರ ಜನಪ್ರಿಯತೆ ಬಿದ್ದು ಹೋಗಿದೆ. ಇಂಥ ಸಂದರ್ಭದಲ್ಲಿ ಚುನಾವಣೆ ಬಂದಿದ್ದು ಫಲಿತಾಂಶಗಳು ಅಧ್ಯಕ್ಷ ಜೋ ಬೈಡನ್‍ಗೆ ಆಘಾತವನ್ನೇ ಉಂಟುಮಾಡುತ್ತದೆ ಎಂಬ ವಿರೋಧಿ ರಿಪಬ್ಲಿಕನ್ ಪಕ್ಷದ ಲೆಕ್ಕಾಚಾರ ತಪ್ಪಿದೆ. ಆಡಳಿತ ಡೆಮಾಕ್ರಟಿಕ್ ಪಕ್ಷದ ನಾಯಕರೂ ತಮ್ಮ ಪಕ್ಷ ಹಿನ್ನಡೆ ಅನುಭವಿಸುತ್ತದೆಂದು ತಿಳಿದಿದ್ದರು. ಹಣದುಬ್ಬರ, ಬೆಲೆ ಏರಿಕೆಯ ಒತ್ತಡದ ನಡುವೆಯೂ ಮತದಾರರು ಡೆಮಾಕ್ರಟಿಕ್ ಪಕ್ಷಕ್ಕೇ ಅಂಟಿಕೊಂಡು ವಿರೋಧಿ ರಿಪಬ್ಲಿಕನ್ ಪಕ್ಷಕ್ಕೆ ಒಲವು ತೋರಿಸದೆ ಉಳಿದದ್ದು ಕುತೂಹಲಕಾರಿಯಾದ ಬೆಳವಣಿಗೆಯಾಗಿದೆ. ಇದೇನೇ ಇದ್ದರೂ ಈ ಚುನಾವಣೆ ಫಲಿತಾಂಶಗಳು ಬೈಡನ್‍ಗೆ ಜೀವದಾನ ನೀಡಿದಂತಿವೆ. ಇದರಿಂದ ಉತ್ತೇಜಿತರಾಗಿ ಅವರು 2024ರ ಚುನಾವಣೆಗಳಲ್ಲಿ ಮತ್ತೆ ಸ್ಪರ್ಧಿಸುವ ಇಂಗಿತವನ್ನು ಬಹಿರಂಗವಾಗಿ ವ್ಯಕ್ತಮಾಡಿದ್ದಾರೆ.
ಅಮೆರಿಕದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಬೈಡನ್ ಅಧಿಕಾರಕ್ಕೆ ಬಂದಂದಿನಿಂದಲೂ ಒಂದಲ್ಲ ಒಂದು ಸಮಸ್ಯೆ ಅಮೆರಿಕವನ್ನು ಕಾಡುತ್ತಿದೆ. ಆಫ್ಘಾನಿಸ್ತಾನದಿಂದ ಅಮೆರಿಕ ಹೀನಾಯವಾಗಿ ಹೊರಬರಬೇಕಾಯಿತು. ಕರೋನಾ ಪಿಡುಗು ನೂರಾರು ಮಂದಿಯನ್ನು ಬಲಿತೆಗೆದುಕೊಂಡಿತು. ಕರೋನಾ ನಿಯಂತ್ರಣಕ್ಕೆ ಸರ್ಕಾರ ಅಪಾರ ಹಣ ವೆಚ್ಚಮಾಡಬೇಕಾಗಿ ಬಂತು. ಕರೋನಾ ನಿಯಂತ್ರಣಕ್ಕೆಂದೇ ಆರ್ಥಿಕ ತುರ್ತುಪರಿಸ್ಥಿತಿ ಘೋಷಿಸಲಾಯಿತು. ರಷ್ಯಾ ದೇಶ ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸಿದ್ದು ಇಡೀ ವಿಶ್ವದ ಮೇಲೆ ಕೆಟ್ಟ ಪರಿಣಾಮ ಬೀರಿತು. ಮುಖ್ಯವಾಗಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಗೆ ಆಘಾತ ಉಂಟಾಯಿತು. ರಷ್ಯಾದಿಂದ ಅನಿಲ ಪೂರೈಕೆ ನಿಂತಿರುವುದರಿಂದ ಇಡೀ ಯೂರೋಪ್ ತತ್ತರಿಸಿದೆ. ಸಹಜವಾಗಿಯೇ ಅಮೆರಿಕದ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಿತು. ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ತಗ್ಗಿಸುವ ವಿಚಾರದಲ್ಲಿ ಮತ್ತೆ ಅಮೆರಿಕ ಪ್ಯಾರಿಸ್ ಒಪ್ಪಂದದ ಭಾಗವಾಯಿತು. ಇಂಗಾಲದ ಪ್ರಮಾಣ ತಗ್ಗಿಸಲು ಅಪಾರವಾಗಿ ಹಣ ವ್ಯಯಿಸಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಅಮೆರಿಕ ಆರ್ಥಿಕತೆ ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗಿದೆ. ಹಣದುಬ್ಬರ ಹೆಚ್ಚಿದೆ, ಆಹಾರ ಪದಾರ್ಥಗಳ ಬೆಲೆ ಏರಿ ಜನರ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ದೇಶದಲ್ಲಿ ಆರ್ಥಿಕ ಹಿಂಜರಿತ ಘೋಷಿಸಲು ಪೆಡರಲ್ ಬ್ಯಾಂಕ್ ತುದಿಗಾಲಲ್ಲಿ ನಿಂತಿದೆ. ಆರ್ಥಿಕ ಹಿಂಜರಿತ ಘೋಷಿಸಿದರೆ ಸರ್ಕಾರ ಜನರ ಕಷ್ಟ ತಗ್ಗಿಸಲು ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕಾಗುವುದು. ಅದಕ್ಕಾಗಿ ಸರ್ಕಾರ ಅಪಾರ ಪ್ರಮಾಣದಲ್ಲಿ ಹಣ ವೆಚ್ಚ ಮಾಡಬೇಕಾಗುತ್ತದೆ. ಜನರಿಗೆ ಈ ವಿಚಾರಗಳು ತಿಳಿಯದೆ ಇರುವುದೇನಲ್ಲ. ಎಲ್ಲವನ್ನೂ ತಿಳಿದೂ ಮತದಾರರು ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸಿರುವುದಕ್ಕೆ ಬೇರೇನೋ ಬಲವಾದ ಕಾರಣ ಇರಲೇಬೇಕು.
ಬಹುಶಃ ಡೊಮಾಲ್ಡ್ ಟ್ರಂಪ್ ಈ ಬಾರಿಯ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಮತ್ತು ಗರ್ಭಪಾತ ನಿಷೇಧ (15 ವಾರಗಳ ನಂತರ ಗರ್ಭಪಾತ ನಿಷೇಧ) ಕಾನೂನು ತರುವ ರಿಪಬ್ಲಿಕನ್ ಪಕ್ಷದ ಚುನಾವಣಾ ಘೋಷಣೆ ಈ ಬೆಳವಣಿಗೆಗೆ ಕಾರಣ ಇರಬಹುದು ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಾರೆ. ಗರ್ಭಪಾತ ನಿಷೇಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹೊಸ ಕಾನೂನು ಜಾರಿಗೆ ತಂದು ಮಹಿಳೆಯರಿಗೆ ಗರ್ಭಪಾತ ಹಕ್ಕನ್ನು ಮತ್ತೆ ನೀಡಲು ಡೆಮಾಕ್ರಟಿಕ್ ಪಕ್ಷ ಮುಂದಾಗಿರುವುದು ಅದಕ್ಕೆ ಅನುಕೂಲಕರವಾದಂತೆ ತೋರುತ್ತಿದೆ. ಇದು ಸದ್ಯಕ್ಕೆ ಗೊತ್ತಾಗಿರುವ ಒಂದು ಕಾರಣ. “2020ರ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ. ನಾನು ಗೆದ್ದಿದ್ದೆ. ಆದರೆ ಮೋಸದಿಂದ ಅಧಿಕಾರ ತಪ್ಪಿಸಲಾಯಿತು’ ಎಂಬ ಸುಳ್ಳನ್ನೇ ಟ್ರಂಪ್ ಅವರು ಚುನಾವಣಾ ಪ್ರಚಾರ ಕಾಲದಲ್ಲಿ ಹೇಳಿಕೊಂಡು ಬಂದದ್ದು ಬಹುಶಃ ಮತದಾರರಿಗೆ ಕಿರಿಕಿರಿ ಉಂಟುಮಾಡಿರಬಹುದು. ಆ ಚುನಾವಣೆಯಲ್ಲಿ ಮೋಸ ಆದ ಆರೋಪವನ್ನು ಬೆಂಬಲಿಸಿದವರಿಗೇ ಪಕ್ಷದ ಟಿಕೆಟ್ ನೀಡಿದ್ದು ಮತ್ತು ಎಂದೂ ಸಾರ್ವಜನಿಕ ಸೇವೆ ಮಾಡದವರನ್ನೇ ಅರ್ಭರ್ಥಿಗಳನ್ನಾಗಿ ಮಾಡಿದ್ದು ಬಹುಶಃ ಹಿನ್ನಡೆಗೆ ಕಾರಣವಾಗಿರಬಹುದು. ಇವೆಲ್ಲಾ ಸದ್ಯದ ಊಹೆಗಳಷ್ಟೆ. ಇನ್ನೂ ಹಲವು ಕಾರಣಗಳಿರಬಹುದು. ಅವು ಇನ್ನೂ ಬಹಿರಂಗವಾಗಬೇಕಿದೆ.
ಮಧ್ಯಂತರ ಚುನಾವಣೆಯ ಅಂತಿಮ ಫಲಿತಾಂಶ ಬರುವುದು ಸ್ವಲ್ಪ ತಡವಾಗಬಹುದು. ಅಂತಿಮ ಫಲಿತಾಂಶದ ನಂತರವೇ ಅವುಗಳ ಪರಿಣಾಮ ಗೊತ್ತಾಗುತ್ತದೆ. ಅಮೆರಿಕದ ಸಂವಿಧಾನದ ಪ್ರಕಾರ ಸಂಸತ್ತು ಎರಡು ಮನೆಗಳಿಂದ ಕೂಡಿರುತ್ತದೆ. ಜನಪ್ರತಿನಿಧಿ ಸಭೆ ಕೆಳಮನೆಯಾದರೆ, ಸೆನೆಟ್ ಮೇಲ್ಮನೆ. ಎರಡೂ ಮನೆಗೆ ಬೇರೆ ಬೇರೆ ಕೆಲಸಗಳಿರುತ್ತವೆ. ಜನಪ್ರತಿನಿಧಿ ಸಭೆ ಸರ್ಕಾರದ ನೀತಿ ನಿರೂಪಕ ಕಾನೂನುಗಳನ್ನು ರೂಪಿಸುತ್ತದೆ. ಅವುಗಳನ್ನು ಸೆನೆಟ್ ಪರಾಮರ್ಶಿಸುತ್ತದೆ ಮತ್ತು ಒಪ್ಪಿಗೆ ನೀಡುತ್ತದೆ. ಅಧ್ಯಕ್ಷರ ಎಲ್ಲ ನೇಮಕಗಳನ್ನು ಪರಿಶೀಲನೆಗೆ ಒಳಪಡಿಸಿ ಅಂಗೀಕಾರ ನೀಡುತ್ತದೆ. ಒಂದು ಸಂಸ್ಥೆ ಮತ್ತೊಂದಕ್ಕೆ ಪೂರಕ. ಜನಪ್ರತಿನಿಧಿ ಸಭೆ ರೂಪಿಸಿದ ಕಾನೂನನ್ನು ಸೆನೆಟ್ ತಿರಸ್ಕರಿಸಿ ಹಿಂದಕ್ಕೆ ಕಳುಹಿಸಬಹುದು.
ಈ ಹಿಂದೆ ಬೈಡನ್‍ಗೆ ಎರಡೂ ಮನೆಗಳಲ್ಲಿ ಬಹುಮತವಿತ್ತು. ಅವರ ಉದ್ದೇಶಿತ ಯೋಜನೆಗಳನ್ನು ಜಾರಿಗೆ ತರುವುದು ಸುಲಭವಾಗಿತ್ತು. ಈಗ ಜನಪ್ರತಿನಿದಿಸಭೆಯಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಗಳಿಸಿದರೆ ಹೊಂದಾಣಿಕೇಯೇ ಇರಲಾರದು. ಇನ್ನು ಎರಡು ವರ್ಷ ಕಾಲ ಹೊಸ ಕಾರ್ಯಕ್ರಮವೇನೂ ಜಾರಿಗೆ ಬರಲು ಸಾಧ್ಯವಿಲ್ಲದಂಥ ಸ್ಥಿತಿ ಬರಬಹುದು. ಮುಖ್ಯವಾಗಿ ಟ್ರಂಪ್ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ಸ್ಥಗಿತಗೊಳಿಸಲು ಜನಪ್ರತಿನಿಧಿ ಸಭೆ ತೀರ್ಮಾನಿಸಬಹುದು. ಜಿಯೋ ಬೈಡನ್ ಅವರ ಪುತ್ರ ಚೀನಾದ ಕೆಲವು ಸಂಸ್ಥೆಗಳ ಜೊತೆ ನಡೆಸಿರುವ ವ್ಯವಹಾರ ಮತ್ತು ಸರ್ಕಾರ ಅದಕ್ಕೆ ನೀಡಿದ ಸಹಕಾರದ ಬಗ್ಗೆ ತನಿಖೆ ನಡೆಸುವುದಾಗಿ ಈಗಾಗಲೇ ಕೆಲವು ರಿಪಬ್ಲಿಕನ್ ಪಕ್ಷದ ನಾಯಕರು ಹೇಳಿದ್ದಾರೆ. ಈ ಬಗ್ಗೆ ವಿವಾದ ಏಳಬಹುದು. ರಿಪಬ್ಲಿಕನ್ನರು ಮುಖ್ಯವಾಗಿ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ಪುಟಿನ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಯುಕ್ರೇನ್‍ಗೆ ಅಮೆರಿಕದ ಯುದ್ಧಾಸ್ತ್ರಗಳ ರಫ್ತು ಕಡಿಮೆ ಮಾಡಬಹುದು. ಆದರೆ ಸೆನೆಟ್ ಅದನ್ನು ತಿರಸ್ಕರಿಸಬಹುದು. ಸೆನೆಟ್‍ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ ಇರುವುದರಿಂದ ರಿಪಬ್ಲಿಕನ್ ಪಕ್ಷ ಏಕ ಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮತ್ತು ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಅದೇ ರೀತಿ ಸರ್ಕಾರ ಕೂಡಾ ಜನಪ್ರತಿನಿಧಿ ಸಭೆಯ ಸಹಕಾರವಿಲ್ಲದೆ ಏನನ್ನೂ ಮಾಡುವಂತಿಲ್ಲ.
ಮುಂದಿನ ಎರಡು ವರ್ಷಗಳಲ್ಲಿ ಬೈಡನ್ ಮಾಡಲೇಬೇಕಾದ ಕೆಲವು ಕೆಲಸಗಳಿವೆ. ಹಲವು ಕಾರ್ಯಕ್ರಮಗಳಿವೆ. ಕೋರ್ಟ್ ರದ್ದುಮಾಡಿರುವ ಗರ್ಭಪಾತ ಹಕ್ಕನ್ನು ಮತ್ತೆ ಮಹಿಳೆಗೇ ನೀಡಲು ಸಾಧ್ಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕಿದೆ. ಕರೋನಾ ಪಿಡುಗಿನ ನಿಯಂತ್ರಣ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚು ಹಣ ಒದಗಿಸಬೇಕಿದೆ. ಆರ್ಥಿಕ ಹಿಂಜರಿತ ಘೋಷಿಸಬೇಕಾಗಿ ಬಂದರೆ ಅದರ ಪೂರ್ವ ಸಿದ್ದತೆಯ ಯೋಜನೆ ಜಾರಿಗೆ ತರಬೇಕಾಗಿದೆ. ವಲಸೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಬಂದೂಕು ಸಂಸ್ಕøತಿಗೆ ತಡೆ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಮುಂದಿನ ಎರಡು ವರ್ಷಗಳಲ್ಲಿ ಕೈಗೆತ್ತಿಕೊಳ್ಳಬೇಕಾಗುತ್ತದೆ. ರಿಪಬ್ಲಿಕನ್ ಪಕ್ಷದ ಜೊತೆ ಮಾತುಕತೆಗೆ ತಾವು ಸಿದ್ಧ ಎಂದು ಬೈಡನ್ ಈಗಾಗಲೇ ಹೇಲಿದ್ದಾರೆ. ಅದು ಎಷ್ಟರಮಟ್ಟಿಗೆ ಕೈಗೂಡುತ್ತದೆ ಎನ್ನುವುದನ್ನು ಕಾದು ನೋಡಬೇಕು, ಆಡಳಿತ ಡೆಮಾಕ್ರಟಿಕ್ ಪಕ್ಷದ ವೈಫಲ್ಯಗಳನ್ನು ಜನರ ಮುಂದಿಡುವ ಮೂಲಕ ರಿಪಬ್ಲಿಕನ್ ಪಕ್ಷ 2024ರ ಚುನಾವಣೆಯಲ್ಲಿ ಗೆಲವು ಸಾಧಿಸಲು ಸಹಜವಾಗಿಯೇ ಎಲ್ಲ ಯತ್ನ ಮಾಡಲಿದೆ.

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

12 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago