ರಾಜ್‌ಘಾಟಿನ ಹೊರ ಆವರಣದಲ್ಲಿ ಮುಂಜಾನೆ ಆರರ ಹೊತ್ತಿಗೆ ಮಹಾತ್ಮ ಬಾಪು ವಾಯುವಿಹಾರ ಹೊರಟಿದ್ದರು. ಸೂರ್ಯೋದಯಕ್ಕೆ ಇನ್ನೂ ಹದಿನೈದು ನಿಮಿಷಗಳಿತ್ತು. ಆದಾಗಲೇ ರಾಜ್ ಘಾಟಿನೊಳಗೆ ಸಮಾಧಿಯ ಸುತ್ತ ಅಲಂಕಾರ ಮಾಡಿ ಮುಗಿಸಿದ್ದನ್ನು ಕಂಡು ಬಾಪು ನಕ್ಕರು. ಅದೊಂಥರಾ ವಿಷಾದವೂ ನಿರ್ಭಾವವೂ ಇದ್ದ ನಗೆ. ಆ ನಗೆ ಚೆಲ್ಲಿ ಕನ್ನಡಕ ಸರಿಮಾಡಿಕೊಂಡ ಬಾಪುಗೆ ಎದುರಿಗೊಬ್ಬ ವ್ಯಕ್ತಿ ಕಾಣಿಸಿದ. ಥೇಟು ಬುದ್ಧಿ ಜೀವಿಯಂತಹ ಗೆಟಪ್ಪು. ಕುರುಚಲು ಹೋತದ ಗಡ್ಡ, ಮಾಸಿದ ಜೀನ್ಸು, ಕಾಲರಿಲ್ಲದ ಖಾದಿಯ ಜುಬ್ಬಾ!
‘ನಮಸ್ಕಾರ ಬಾಪೂ ಹುಟ್ಟುಹಬ್ಬದ ಶುಭಾಷಯಗಳು ನಿಮಗೆ.. ಹೇಗಿದ್ದೀರಿ?’ ಎಂದು ಕೇಳಿದ ಬುದ್ಧಿಜೀವಿ ಗೆಟ್ಟಪ್ಪಿನ ವ್ಯಕ್ತಿ.
ಬಾಪು ಪಕ್ಕನೇ ನಕ್ಕರು. ಬುದ್ಧಿಜೀವಿ ಬಾಪು ನಗೆಗೆ ಕಕ್ಕಾಬಿಕ್ಕಿಯಾದ. ‘ಯಾಕೆ ಬಾಪು ನಕ್ಕಿರಿ? ನಾನೇನಾದರೂ ತಪ್ಪು ಕೇಳಿದೆನಾ?’
‘ನೀನು ಕೇಳಿದ್ದೇ ಸರಿಯೇ ಇತ್ತು. ನಾನು ನನ್ನ ಸ್ಥಿತಿ ನೆನೆದೇ ನಕ್ಕೆ. ನಾನು ನಕ್ಕಿದ್ದಕ್ಕೆ ನೀನು ಕಕ್ಕಾಬಿಕ್ಕಿ ಆಗಬೇಕಿಲ್ಲ.. ನೀನೂ ನಕ್ಕು ಹಗುರಾಗು. ನಕ್ಕು ಹಗುರಾಗೋದು ಅಂದರೆ ದ್ವೇಷ ಕೆಡವಿ, ಪ್ರೀತಿಯನ್ನು ಹೊದ್ದಂತೆ’ ಎಂದು ಬಾಪು ವಿವರಿಸಿದರು.
‘ಮಹಾತ್ಮ, ನಿಮ್ಮ ಹುಟ್ಟುಹಬ್ಬಕ್ಕೆ ಶುಭಕೋರೋಣ ಅಂತಾ ಬಂದಿದ್ದೀನಿ.. ನೀವು ಸಿಗುತ್ತೀರಿ ಅನ್ನೋ ಗ್ಯಾರಂಟಿ ಇರಲಿಲ್ಲ. ಆದರೂ ಸಿಕ್ಕಿರಿ.. ಅದು ನನ್ನ ಅದೃಷ್ಟವೋ ಪುಣ್ಯವೋ ಗೊತ್ತಿಲ್ಲ. ಎರಡನ್ನೂ ನಾನು ನಂಬೊಲ್ಲ. ನಾನು ನಿಮ್ಮುನ್ನಾ ಮತ್ತೆ ನಿಮ್ಮ ಸಿದ್ಧಾಂತ ಮಾತ್ರ ನಂಬ್ತಿನಿ’ ಎಂದು ದೀರ್ಘದಂಡ ನಮಸ್ಕಾರ ಹಾಕಿದ.
‘ಎದ್ದೇಳು.. ಈ ದೀರ್ಘದಂಡ ನಮಸ್ಕಾರ ಹಾಕುವುದರಿಂದ ನಮ್ಮ ಆರೋಗ್ಯ ಹೇಗಿದೆ ಎಂಬುದು ಗೊತ್ತಾಗುತ್ತದೆ. ಯಾರು ಸಲೀಸಾಗಿ ದೀರ್ಘದಂಡ ನಮಸ್ಕಾರ ಹಾಕುತ್ತಾರೋ ಅವರು ಆರೋಗ್ಯವಾಗಿದ್ದಾರೆ ಎಂದೇ ಅರ್ಥ. ಯಾರು ಕೂರಲು ಮತ್ತು ಮೇಲೇಳಲು ನೆಲದ ಮೇಲೆ ಕೈಯ್ಯೂರುತ್ತಾರೋ ಅವರ ಆರೋಗ್ಯದಲ್ಲಿ ಏರುಪೇರಿರುತ್ತೆ ನೀನು ಇಷ್ಟು ಸಲೀಸಾಗಿ ದೀರ್ಘದಂಡ ಹಾಕಿದ್ದೀಯ ಅಂದರೆ ನಿನ್ನ ಆರೋಗ್ಯ ಚೆನ್ನಾಗಿಯೇ ಇದೆ’ ಎಂದು ಬಾಪು ಬೆನ್ನುತಟ್ಟಿದರು.
‘ಏನಪ್ಪಾ ನಿನ್ನ ಹೆಸರು? ನನ್ನ ಹುಟ್ಟು ಹಬ್ಬಕ್ಕೆ ಶುಭಕೋರುವ ಉಮೇದು ಬಂದಿದ್ದಾದರೂ ಹೇಗೆ?’ ಎಂದು ಬಾಪು ಕೇಳಿದರು.
‘ಮಹಾತ್ಮ, ನಾನು ದಕ್ಷಿಣದ ಕಡೆಯವನು.. ನನ್ನ ಹೆಸರು ಗಾಂಧಿ ಅಂತಾ… ಅಚ್ಚರಿ ಆಯ್ತಾ? ನಮ್ಮ ಅಪ್ಪ, ತಾತಾ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು.. ನಿಮ್ಮ ಅಭಿಮಾನಿಗಳು ಹೀಗಾಗಿ ನನಗೂ ಗಾಂಧಿ ಅಂತ ಹೆಸರಿಟ್ಟಿದ್ದಾರೆ’ ಎಂದು ವಿವರಿಸಿದ.
‘ರಸ್ತೆಗಳಿಗೆ, ವೃತ್ತಗಳಿಗೆಲ್ಲ ನನ್ನ ಹೆಸರಿಟ್ಟು ನನ್ನ ಮಾನ ಹರಾಜು ಹಾಕಿದ್ದಾಯ್ತು ಇನ್ನು ವ್ಯಕ್ತಿಗಳಿಗೂ ನನ್ನ ಹೆಸರಿಟ್ಟಿದ್ದಾರೆಯೇ?’ ಎಂದು ಮಹಾತ್ಮ ಅಚ್ಚರಿಯಿಂದ ಕೇಳಿದರು.
‘ನೋಡಿ ನೀವೀಗ ಮಹಾತ್ಮರು. ನೀವೊಂಥರಾ ಟ್ರೇಡ್‌ಮಾರ್ಕ್ ಇದ್ದಂಗೆ. ಭ್ರಷ್ಟಾಚಾರ ಮಾಡಿ ದೊಡ್ಡ ದೊಡ್ಡ ವ್ಯಕ್ತಿಗಳಾದವರೆಲ್ಲ ಇವತ್ತು ತಾವು ಶುದ್ಧರು ಎಂಬುದನ್ನು ಸಾಬೀತು ಮಾಡಿಕೊಳ್ಳಲು ನಿಮ್ಮ ಹೆಸರು ಹೇಳುತ್ತಾರೆ. ನಿಮ್ಮ ಚರಕ ಹಿಡಿದು ನೂಲು ತೆಗೆಯುವ ಫೋಟೋ ತೆಗೆಸಿಕೊಂಡು ಸರಳತೆಯನ್ನು ಸಾಬೀತು ಮಾಡುತ್ತಾರೆ. ನಿಮ್ಮ ಹುಟ್ಟು ಹಬ್ಬಕ್ಕೆ ನಿಮ್ಮದೇ ಸಮಾಧಿಗೆ ಬಂದು ಪುಷ್ಪಾರ್ಚನೆ ಮಾಡುತ್ತಾರೆ. ನಿಮ್ಮ ಸಮಾಧಿಗೆ ಬರುವ ಮುನ್ನವೇ ನಿಮ್ಮ ತತ್ವ ಆದರ್ಶಗಳನ್ನು ಸಮಾಧಿ ಮಾಡಿಯೇ ಬಂದಿರುತ್ತಾರೆ. ನೀವೋ ಹೇಳಿ ಕೇಳಿ ಮಹಾತ್ಮ ಎಲ್ಲವನ್ನು ಸಹಿಸಿಕೊಳ್ಳುತ್ತೀರಿ.. ನಿಮ್ಮ ತತ್ವ ಸಿದ್ಧಾಂತಗಳನ್ನು ಕೊಂದವರನ್ನು ಕ್ಷಮಿಸುತ್ತೀರಿ ನೀವು ಗಾಂಧಿಯಾಗಿರುವುದು ಬೇಕಿಲ್ಲ. ನಿಮಗೆ ಮಹಾತ್ಮರಾಗುವುದೇ ಇಷ್ಟ.. ಮಹಾತ್ಮನಾಗುವ ಮುಂಚಿನ ಗಾಂಧಿ ಅನ್ಯಾಯಗಳ ವಿರುದ್ಧ ಪ್ರತಿಭಟಿಸುತ್ತಿದ್ದ, ಮಹಾತ್ಮನಾದ ಮೇಲೆ ಪ್ರತಿಭಟನೆ ಶಕ್ತಿ ಉಡುಗಿ ಹೋಗಿದೆ. ಮೂಕ ಪ್ರೇಕ್ಷಕ ಆಗಿಬಿಟ್ಟಿದ್ದೀರಿ’ ಎಂದು ಬುದ್ಧಿಜೀವಿ ಗೆಟಪ್ಪಿನ ಗಾಂಧಿ ಹೇಳಿದ.
ಮಹಾತ್ಮರು ಸುಮ್ಮನೆ ನಕ್ಕರು.
‘ಮಹಾತ್ಮ ನೀವು ನಗಬೇಡಿ.. ದೇಶದಲ್ಲಿ ಮಹಾತ್ಮ ಮತ್ತು ಗಾಂಧಿ ಬೇರೆ ಬೇರೆಯಾಗಿದ್ದಾರೆ. ಈಗ ಬೆರಳೆಣಿಕೆಯಷ್ಟು ಮಹಾತ್ಮರಿದ್ದಾರೆ ಕೋಟ್ಯಂತರ ಮಂದಿ ಗಾಂಧಿಗಳು ಇದ್ದಾರೆ. ಭ್ರಷ್ಟಾಚಾರ ಮಾಡಿ ಲೂಟಿ ಹೊಡೆದು ಶ್ರೀ ಮಂತರಾದವರೆಲ್ಲ ಈಗ ಮಹಾತ್ಮರಂತೆ ಕಾಣುತ್ತಿದ್ದಾರೆ. ಅವರ ಸಂಖ್ಯೆ ನೂರು ಅಥವಾ ಸಾವಿರ ಸಂಖ್ಯೆಯಲ್ಲಿದೆ. ಕೋಟಿ ಕೋಟಿ ಜನ ಇನ್ನೂ ಸತ್ಯ, ನ್ಯಾಯ, ಅಹಿಂಸೆ ಅಂತಾ ಬವಣೆ ಪಡುತ್ತಿದ್ದಾರೆ. ಅಂತಹವರ ಸಂಖ್ಯೆ ಕೋಟಿ ಕೋಟಿ ಇದೆ. ಇವರಿಗೆ ಪ್ರತಿಭಟಿಸುವ ಶಕ್ತಿ ಇಲ್ಲ, ಇವರ ದನಿ ಆಲಿಸುವವರು ಯಾರೂ ಇಲ್ಲ. ನಾವು ಕಾಲೇಜಿಗೆ ಹೋಗುತ್ತಿದ್ದಾಗ, ಬೀಡಿ ಸಿಗರೇಟು ಸೇದದ, ಬೀರು ವಿಸ್ಕಿ ಕುಡಿಯದವನಿಗೆ, ರ್ಯಾಂಗಿಂಗ್ ಮಾಡಿದಾಗಲೂ ಪ್ರತಿಭಟಿಸದವನಿಗೆ ‘ಗಾಂಧಿ’ ಅಂತಾ ಕರೀತಿದ್ವಿ . ಈಗ ಇಡೀ ದೇಶದಲ್ಲಿ ಕೋಟಿ ಕೋಟಿ ಜನರು ಅದೇ ಮಾಡೆಲ್ಲಿನ ‘ಗಾಂಧಿ’ಗಳಾಗಿದ್ದಾರೆ. ಪೆಟ್ರೋಲ್, ಡೀಸೆಲ್, ದಿನಸಿ ಬೆಲೆ ಏರಲಿ, ಹಾಲು ಮೊಸರಿಗೂ ಟ್ಯಾಕ್ಸು ಹೇರಲಿ ಈ ಗಾಂಧಿಗಳು ಏನೂ ಮಾಡಲ್ಲ. ಸಹನಾಶೀಲರು ಎಲ್ಲವನ್ನು ಅನುಭವಿಸುತ್ತಾರೆ ಅಂತಹ ಕೋಟಿ ಕೋಟಿ ಜನರ ಪ್ರತಿನಿಧಿ ನಾನು’ ಎಂದು ಬುದ್ಧಿಜೀವಿ ಗೆಟಪ್ಪಿನ ಗಾಂಧಿ ಹೇಳಿದ.
‘ನೋಡು, ನೀವು ಕೋಟಿ ಕೋಟಿ ಜನರಿಗೆ ಸಹನೆ ಇರಬಹುದು, ತಾಳ್ಮೆ ಇರಬಹುದು ಆದರೆ ಪ್ರತಿಭಟಿಸುವ ಶಕ್ತಿ ಇಲ್ಲವಾಗಿದೆ. ಅದಕ್ಕೆ ಕಾರಣ ನಿಮ್ಮಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಪ್ರತಿಭಟಿಸಿದರೆ ಎಲ್ಲಿ ಜೈಲಿಗೆ ಹೋಗುತ್ತೇವೋ ಎಂಬ ಭಯ ನಿಮಗೆ ಇದೆ. ಒಂದು ಹೊತ್ತು ಊಟ ಮಾಡದೇ ಇದ್ದರೆ ಎಲ್ಲಿ ಪ್ರಾಣ ಹೋಗಿಬಿಡುತ್ತದೋ ಎಂಬ ಆತಂಕ ನಿಮಗೆ ಇದೆ. ಈ ಭಯ ಆತಂಕ ಹೋಗುವವರೆಗೂ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗೋದಿಲ್ಲ’ ಗಂಭೀರವಾಗಿ ಹೇಳಿದರು ಮಹಾತ್ಮ.
ಗಾಂಧಿ ಕೇಳಿದ, ‘ಹಾಗಾದರೆ, ಈಗಲೂ ಪ್ರತಿಭಟನೆ ಮಾಡಬಹುದುದೇ? ಮಾಡಿ ಗೆಲ್ಲಬಹುದೇ?’
‘ಖಂಡಿತಾ ಗೆಲ್ಲಬಹುದು ನಮ್ಮ ಕಣ್ಣೆದುರಲ್ಲೇ ಈ ದೇಶದ ರೈತರು ವರ್ಷಗಳ ಕಾಲ ಶಾಂತಿಯುತ ಪ್ರತಿಭಟನೆ ಮಾಡಿ ಗೆಲ್ಲಲಿಲ್ಲವಾ? ಪೊಲೀಸರ ಲಾಠಿಗೆ, ಜಲಫಿರಂಗಿಗಳಿಗೆ ಹೆದರಿದರೇ? ಹೆದ್ದಾರಿಗೆ ಮೊಳೆಹೊಡೆದರೆಂದು ಬೆಚ್ಚಿದರೆ? ಅವರಿಗೆ ಇಚ್ಛಾಶಕ್ತಿ ಇತ್ತು ಗೆದ್ದರು. ನೀವು, ಜನರು ಅನ್ಯಾಯದ ವಿರುದ್ಧ ಇಚ್ಛಾಶಕ್ತಿಯಿಂದ ಹೋರಾಟ ಮಾಡಿದರೆ ನಿಮಗೂ ಜಯ ಸಿಗುತ್ತದೆ’ ಎಂದರು ಮಹಾತ್ಮ.
‘ಆಗಲಿ ಮಹಾತ್ಮ ಇಚ್ಚಾಶಕ್ತಿಯಿಂದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ’ ಎಂದ ಬುದ್ಧಿಜೀವಿ ಗೆಟಪ್ಪಿನ ಗಾಂಧಿ ಮಹಾತ್ಮರಿಗೆ ದೀರ್ಘದಂಡ ನಮಸ್ಕಾರ ಮಾಡಿ ಎದ್ದ.
ಮಹಾತ್ಮ ಅಲ್ಲಿ ಇರಲೇ ಇಲ್ಲ!!
-‘ಅಷ್ಟಾವಕ್ರಾ’