ಬಹಳ ದಿನಗಳ ನಂತರ ಕಾಫೀ ಕುಡಿಯೋ ಟೈಮಿಗೆ ಕೊಟ್ರ ಬಂದ. ‘ನಮುಸ್ಕಾರ ಸಾ ಏನ್ ವಿಸೇಸ? ಚನ್ನಾಗಿದ್ದೀರಾ?’ ಅಂದ.
ನಾನೇನ್ ಬಿಡಪ್ಪಾ ಚನ್ನಾಗೇ ಇದ್ದೀನಿ.. ಬೆಲೆ ಏರಿಕೆ ಅಂತಾ ಸ್ವಲ್ಪ ಟೈಟ್ ಆಗಿದೆ. ಇವತ್ತುಂದಿನಾ ನಿಂಗೆ ಕಾಫಿ ಕೊಡಾನಾ ಅಂದ್ರೆ ಹಾಲಿನ ರೇಟೂ ಏರಿ ಬಿಟ್ಟಿದೆ ಷುಗರ್ ಮೊದಲೇ ಏರಿತ್ತು. ಕಾಫಿ ಪುಡೀನೂ ಏರಿದೆ.. ಇಷ್ಟೇ ನೋಡಪಾ ನಮ್ ವಿಶೇಷಾ..ಟ ಅಂದೆ.
ಕೊಟ್ರನ ಮುಖ ಕಪ್ಪಿಟ್ಟಿತು. ಮುಖ ಕಪ್ಪಿಟ್ಟಿದ್ದು ನನ್ನ ಕಷ್ಟ ಕೇಳಿ ಅಲ್ಲಾ.. ಕಾಫೀ ಸಿಗ್ತಾ ಇಲ್ವಲ್ಲಾ ಅಂತಾ.
ಆದರೂ ಸುಧಾರಿಸಿಕೊಂಡ ಕೊಟ್ರ ‘ಏನ್ ಸಾ ನೀವು? ಇಡೀ ದೇಶಾನೆ ಮ್ಯಾಕ್ರೊ ಎಕಾನಮಿ ಬಗ್ಗೆ ಚಿಂತಿಸ್ತಾ ಇದ್ರೆ ನೀವು ಮೈಕ್ರೊ ಎಕಾನಮಿ ಬಗ್ಗೆ ಚಿಂತಿಸ್ತಾ ಇದ್ದೀರಿ… ಸಣ್ಣ ಪುಟ್ಟ ಬೆಲೆ ಏರಿಕೆ ಎಲ್ಲಾ ಬುಡಿ ಸಾ.. ಇನ್‌ಫ್ಲೇಷನ್ ಕಂಟ್ರೋಲ್‌ಗೆ ಬರ್ತಾ ಇದೆ, ಕನ್ಸಪ್ಶನ್ ಜಾಸ್ತಿ ಆಗ್ತ ಇದೆ. ಎಕಾನಮಿ ಫಾಸ್ಟಾಗಿ ರಿಕವರಿ ಆಗ್ತಾ ಇದೆ.. ಸಾ..’ ಅಂದ.
ಇಪ್ಪತ್ವರ್ಷದಿಂದ ಎಕನಾಮಿಕ್ಸ್ ಕಲಿಸ್ತಾ ಇರೋನು ನಾನು.. ಈ ಬಡ್ಡಿ ಮಗಾ ನನ್ ಕ್ಲಾಸಲ್ಲೇ ನಾಲ್ಕು ಸಲ ಡುಮ್ಕಿ ಹೊಡೆದಿದ್ದಾನೆ.. ಈಗ ನಂಗೆನೇ ಮೈಕ್ರೋ, ಮ್ಯಾಕ್ರೊ ಎಕನಾಮಿಕ್ಸ್ ಅಂತೆಲ್ಲಾ ಹೇಳ್ತಾ ಕಿಂಡಲ್ ಮಾಡ್ತಾ ಇದ್ದಾನೆ ಅಂತಾ ಕೋಪ ಬಂತು. ಕಾಫಿ ಕೊಡದೇ ಹೊದ್ರೆ ಇನ್ನು ಏನೇನೋ ಹೇಳಿಬಿಡ್ತಾನೋ ಅಂತಾ ಭಯ ಆಗಿ, ‘ಕೊಟ್ರ ಬಂದಿದ್ದಾನೆ ಕಣೆ…’ ಎಂದು ಜೋರಾಗಿ ಕೂಗಿ ಹೇಳಿದೆ. ಮಡದಿ ತಕ್ಷಣ ಕಾಫಿ ಕಪ್ಪು ಹಿಡಿದು ಹೊರಬಂದಳು.. ‘ಏನೋ ಕೊಟ್ರಾ ಚನ್ನಾಗಿದ್ದೀಯೇನೋ? ಶಾನೆದಿನಾ ಆಯ್ತು ಈ ಕಡೆ ಬರಲೇ ಇಲ್ಲಾ’ ಅಂತಾ ಪ್ರೀತಿಯಿಂದ ಕೇಳಿದಳು.
ಕೊಟ್ರ ಕಾಫೀ ಹೀರುತ್ತಾ ‘ಸಮಾವೇಸ ಅದೂ ಇದೂ ಅಂತಾ ಇತ್ತು ಅದಿಕ್ಕೆ ಬರಕ್ಕಾಗ್ಲಿಲ್ಲ ’ಅಂದ. ಮಡದಿ ನಗುತ್ತಾ ಒಳಹೋದಳು.
‘
ಅಲ್ಲಲೇ ಕೊಟ್ರ.. ಸಿ೨೦ ಸುಮ್ಮಿತ್‌ನಲ್ಲಿ ಏನೋ ಎಡವಟ್ ಮಾಡಿದ್ದೀಯಾ ಅಂತಾ ಕಾಲೇಜಲೆಲ್ಲಾ ಗುಲ್ಲಾಗಿದೆ ಗೊತ್ತಾ’ ಅಂತಾ ಕೇಳಿದೆ.
‘ಸಾ.. ಯಾವೋ ಯಡವಟ್‌ಗಳು ಗುಲ್ಲು ಮಾಡಿರಬೇಕು ಸಾ.. ಅದುಕ್ಕೆಲ್ಲಾ ತಲೆ ಕಡಿಸ್ಕೋಬೇಡಿ’ ಅಂದ.
‘
ಲೇ ಕೊಟ್ರ ಗುಲ್ಲಾಗಿರೋದು ಯಾವ ವಿಷ್ಯ ಅಂತಾ ಗೊತ್ತೇನೋ? ನಿನ್ನ ಗ್ಯಾಂಗಿನ ಹುಡುಗ್ರಜತೆ ಹೊಡೆದಾಡಿದ್ರಲ್ಲಾ.. ಆ ಹುಡುಗ್ರ ಗ್ಯಾಂಗ್ ಲೀಡರ್ ಷಿಂಗ್ಲಿಕಪ್ಪನ ಜತೆ ನೀನು ಹ್ಯಾಂಡ್ ಷೇಕ್ ಮಾಡಿದ್ದಲ್ಲದೇ ಹಗ್ ಮಾಡೋಕು ಹೋಗಿದ್ಯಂತೆ? ಹೌದೆನ್ಲಾ?’ ಅಂತ ನಾನು ಕೇಳಿದೆ.
‘ಸಾ.. ಆ ವಿಷ್ಯಾನಾ ಅಷ್ಟು ದೊಡ್ಡದು ಮಾಡೋದು ಏನಿದೆ ಸಾ? ಕಾಲೇಜ್-೨೦ ಸುಮ್ಮಿತ್‌ನಲ್ಲಿ ನಂಗೆ ಸರಿಯಾಟಿಯಾಗಿ ನಿಲ್ಲಬಲ್ಲ ಪರ್ಸನ್ ಅಂದ್ರೆ ಷಿಂಗ್ಲಿಕಪ್ಪಾ ಒಬ್ಬನೇ ಇದ್ದುದ್ದು ಅದುಕ್ಕೆ ಷೇಕ್ ಹ್ಯಾಂಡ್ ಮಾಡಿದ್ದು.. ನಾನು ಷೇಕ್ ಹ್ಯಾಂಡ್ ಮಾಡದೇ ಇದ್ದಿದ್ರೆ ಮಿಡಿಯಾ ಅಟೆನ್ಷನ್ ನನ್ ಕಡೆ ಬರ್ತಾನೇ ಇರ್ಲಿಲ್ಲ .. ಒಳ್ಳೆ ಫೋಟೋ ಆಪಾರ್ಚುನಿಟಿ ಮಿಸ್ಸಾಗಿ ಬಿಟ್ಟಿರೋದು ಸಾ..’ ಅಂದ.
‘ಏನೋಪಾ.. ನಿನ್ನ ಗ್ಯಾಂಗಿನ ಹುಡುಗ್ರುಗೆ ಹೊಡೆದ ಗ್ಯಾಂಗಿನ ಲೀಡರ್‌ಗೆ ನೀನ್ ಷೇಕ್‌ಹ್ಯಾಂಡ್ ಮಾಡಿದ್ದ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿ ಎಲ್ಲರೂ ಷೇಕ್ ಆಗಿರೋದಂತೂ ನಿಜಾ ಕಣಪ್ಪಾ..’ ಅಂದೆ.
‘ಷೇಕ್ ಆಗಿರೋದು ನಾನು ಹ್ಯಾಂಡ್‌ಷೇಕ್ ಮಾಡಿದ್ದಕ್ಕೆ ಅಲ್ಲಾ ಸಾ.. ನಾನು ಹ್ಯಾಂಡ್ ಷೇಕ್ ಮಾಡಿದ ಫೋಟೋ ವಿಡಿಯೋ ಯಾವ್ ಲೆವೆಲ್ಲಿಗೆ ಹೋಗಿದ್ದಾವೆ.. ಎಷ್ಟು ಪಬ್ಲಿಸಿಟಿ ಸಿಕ್ಕಿದೆ ಅಂದರೆ… ನಮ್ ವಿರೋಧಿಗಳೆಲ್ಲಾ ಷೇಕ್ ಆಗ್ಬುಟ್ಟೌರೆ.. ಸಾ..’ ಅಂದ.
‘ಅಲ್ಲಲೇ ನಿಮ್ಮುಡುಗ್ರ ಮೇಲೆ ಅಟ್ಯಾಕ್ ಮಾಡಿದ ಗ್ಯಾಂಗಿನ ಲೀಡರ್‌ನ ನೀನು ಅಟ್ಯಾಕ್ ಮಾಡೋದು ಬ್ಯಾಡ ಅಟ್ ಲೀಸ್ಟ್ ಡಿಟ್ಯಾಚ್ ಮಾಡಬಹುದಿತ್ತಲ್ವಾ? ನೀನು ಷೇಕ್ ಹ್ಯಾಂಡ್ ಮಾಡಿದ್ರಿಂದ ನಿನ್ ಗ್ಯಾಂಗಿನ ಹುಡುಗ್ರ ಮೊರಾಲಿಟಿ ಲೋ ಆಗಲ್ವಾ? ಅಂದೆ.
‘ಎಂತಾದೂ ಲೋ ಆಗಲ್ಲ ಸಾ… ಇವೆಲ್ಲ ಸುಮ್ಮನೆ ಕೆಲಸ ಇಲ್ಲದ ಜನ ಮಾಡೋ ಕಿತಾಪತಿಗಳು… ಗುಲ್ಲುಗಳು.. ನೋಡಿ ಸಾ ಇವತ್ತುಂದಿನಾ ಎದುರಿಗೆ ಸಿಕ್ಕಾಗ ನಮುಸ್ಕಾರ ಅಂದುಬಿಟ್ರೆ, ಷೇಕ್ ಹ್ಯಾಂಡ್ ಮಾಡಿಬಿಟ್ರೆ, ಒಂದು ವಾರ್ಮ್ ಹಗ್ ಕೊಟ್ರೆ ನಾವು ಕಳೆದುಕೊಳ್ಳೋದು ಏನೂ ಇರೊಲ್ಲ ಸಾ… ಲವ್ ಅಂಡ್ ಲೆಟ್ ಲವ್ ಪಾಲಿಸಿನಾ ಪಾಲಿಸಬೇಕು ಸಾ..’ ಅಂದ.
ಕೊಟ್ರ ಬಡ್ಡಿಮಗಾ ನಾನು ಅಂದುಕೊಂಡಷ್ಟು ದಡ್ಡ ಅಲ್ಲಾ.. ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಬುದ್ದಿವಂತ ಇದ್ದಾನೆ ಅನಿಸ್ತು.. ‘ಅಲ್ಲಲೇ ಕೊಟ್ರಾ ಇಷ್ಟೆಲ್ಲಾ ಒಳ್ಳೆ ಸಂಗತಿಗಳು ನಿಂಗೆ ಹೆಂಗೆ ಗೊತ್ತಾಯ್ತೋ? ಅಂತ ಕೇಳಿದೆ.
‘
ಸಾ ನಾನೀಗ ವಿಶ್ವಗುರುಗಳನ್ನು ಪಾಲೋ ಮಾಡ್ತಾ ಇದ್ದೀನಿ. ಎಲ್ಲಾ ಅವರ ಪ್ರೇರಣೆ, ಪ್ರೇರೇಪಣೆ..! ’ಅಂದ.
‘ಯಾರೋ ಅದು ನಿನ್ನ ವಿಶ್ವಗುರು?’ ಎಂದು ತಿರುಗಿ ನೋಡೋವಷ್ಟರಲ್ಲಿ ಕೊಟ್ರ ಗೇಟು ದಾಟಿ ಹೋಗಿದ್ದ!
-‘ಅಷ್ಟಾವಕ್ರಾ’
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…