ಎಡಿಟೋರಿಯಲ್

ವಿ4 : ವಿತ್ತ ; ವಿಜ್ಞಾನ ; ವಿಶೇಷ ; ವಿಹಾರ

ವಿತ್ತ

ಹಣದುಬ್ಬರದ ಏರಿಳಿತ

ಹಣದುಬ್ಬರ ಈಗ ಜಾಗತಿಕ ಸಮಸ್ಯೆಯಾಗಿ ವ್ಯಾಪಿಸಿದೆ. ಭಾರತದಲ್ಲಿ ಚಿಲ್ಲರೆ ದರ ಹಣದುಬ್ಬರವು ಸೆಪ್ಟೆಂಬರ್ ತಿಂಗಳಲ್ಲಿ ಶೇ.೭.೪೧ಕ್ಕೆ ಜಿಗಿದಿದೆ. ಇದರೊಂದಿಗೆ ಕಳೆದ ಒಂಭತ್ತು ತಿಂಗಳಿಂದಲೂ ಹಣದುಬ್ಬರ ಶೇ.೬ಕ್ಕಿಂತ ಮೇಲ್ಮಟ್ಟದಲ್ಲೇ ಇದೆ. ಹಣದುಬ್ಬರ ನಿಯಂತ್ರಿಸುವ ಹೊಣೆ ಹೊತ್ತ ಭಾರತೀಯ ರಿಸರ್ವ್ ಬ್ಯಾಂಕ್ ಹಾಕಿಕೊಂಡಿರುವ ಮಿತಿಗಿಂತಲೂ ಹೆಚ್ಚಿದೆ. ಹಣದುಬ್ಬರ ಏರಿಕೆಗೆ ಆಹಾರಧಾನ್ಯಗಳು, ತರಕಾರಿ ಮತ್ತಿತರ ಸರಕುಗಳ ಬೆಲೆ ತೀವ್ರವಾಗಿ ಹೆಚ್ಚಳವಾಗಿದ್ದು ಕಾರಣ. ಚಿಲ್ಲರೆದರ ಹಣದುಬ್ಬರಕ್ಕೆ ವ್ಯತಿರಿಕ್ತವಾಗಿ ಸಗಟುದರ ಹಣದುಬ್ಬರವು ಸೆಪ್ಟೆಂಬರ್ ತಿಂಗಳಲ್ಲಿ ಗಣನೀಯವಾಗಿ ತಗ್ಗಿದೆ. ೧೮ ತಿಂಗಳ ಕನಿಷ್ಠಮಟ್ಟಕ್ಕೆ ಇಳಿದಿದೆ. ಆದರೂ ಹಣದುಬ್ಬರ ಮಟ್ಟವು ಎರಡಂಕಿ ಮಟ್ಟದಲ್ಲೇ ಇದೆ. ಆಗಸ್ಟ್‌ನಲ್ಲಿ ಶೇ.೧೨.೪೧ರಷ್ಟಿತ್ತು. ಸಗಟು ದರ ಹಣದುಬ್ಬರವು ಹೆಸರೇ ಸೂಚಿಸುವಂತೆ ಸಗಟು ಖರೀದಿ ಹಂತದಲ್ಲಿ ಪರಿಣಾಮ ಬೀರುತ್ತದೆ. ಜನಸಾಮಾನ್ಯರಿಗೆ ನೇರವಾಗಿ ಪರಿಮಾಮ ಬೀರುವುದು ಚಿಲ್ಲರೆದರ ಹಣದುಬ್ಬರ. ಹೀಗಾಗಿ ಚಿಲ್ಲರೆ ದರ ಹಣದುಬ್ಬರ ಶೇ.೬ರಕ್ಕಿಂತ ಕಡಿಮೆಯಾಗುವವರೆಗೂ ಬಡ್ಡಿದರ ಏರಿಕೆಯ ಭಯ ಇದ್ದೇ ಇರುತ್ತದೆ.


ವಿಜ್ಞಾನ

ಹಳೆ ನಗರಕ್ಕೆ ಹೊಸ ಆಯಾಮ

ಪುರಾತನ ದಕ್ಷಿಣ ಮೆಸೊಪಟ್ಯಾಮಿಯಾ ನಗರದ ಬಗೆಗಿನ ಇದುವರೆಗಿನ ಅಂದಾಜುಗಳನ್ನು ಬದಲಿಸಿಕೊಳ್ಳುವಂತಹ ಹೊಳವುಗಳು ಹೊಸ ಸಂಶೋಧನೆಯಿಂದ ಕಂಡುಬಂದಿವೆ. ಈ ಮಹಾನಗರದ ನೀರಿನ ಸ್ವರೂಪವನ್ನು ಗುರುತಿಸುವುದಕ್ಕೆ ಇದು ನೆರವಾಗಲಿದೆ. ಆಧುನಿಕ ಇರಾಕ್ ಇರುವ ಟೈಗ್ರಿಸ್ ಮತ್ತು ಯೂಫ್ರಟಿಸ್ ನದಿಗಳ ನಡುವೆ ಸುಮಾರು ೫,೦೦೦ ವರ್ಷಗಳ ಹಿಂದೆ ನಗರ ಜೀವನವು ಹೇಗೆ ಪ್ರವರ್ಧಮಾನಕ್ಕೆ ಬಂದಿತು ಎಂಬುದರ ಪ್ರಮುಖ ಅಂಶಗಳನ್ನು ವಿಶ್ಲೇಷಿಸಲಾಗುತ್ತಿದೆ. ಸುಸಜ್ಜಿತ ಡ್ರೋನ್‌ನಿಂದ ಸಂಗ್ರಹಿಸಲಾದ ದೂರಸಂವೇದಿ ಮಾಹಿತಿಯು ಲಗಾಶ್ ಎಂಬ ವಿಶಾಲವಾದ ನಗರ ವಸಾಹತು ಹೆಚ್ಚಾಗಿ ಜಲಮಾರ್ಗಗಳಿಂದ ಸಂಪರ್ಕ ಹೊಂದಿದ ನಾಲ್ಕು ಜವುಗು ದ್ವೀಪಗಳನ್ನು ಒಳಗೊಂಡಿತ್ತೆಂದು ಸೂಚಿಸುತ್ತದೆ ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಮಾನವಶಾಸ್ತ್ರದ ಪುರಾತತ್ವಶಾಸ್ತ್ರಜ್ಞ ಎಮಿಲಿ ಹ್ಯಾಮರ್ ತಿಳಿಸಿದ್ದಾರೆ. ಈ ಸಂಶೋಧನೆಗಳು ಹೊಸ ದೃಷ್ಟಿಕೋನಕ್ಕೆ ನಿರ್ಣಾಯಕ ವಿವರಗಳನ್ನು ಒದಗಿಸುತ್ತವೆ, ಸಾಂಪ್ರದಾಯಿಕವಾಗಿ ಯೋಚಿಸಿದಂತೆ ದಕ್ಷಿಣದ ಮೆಸೊಪಟ್ಯಾಮಿಯಾದ ನಗರಗಳು ದೇವಾಲಯ ಮತ್ತು ಆಡಳಿತ ಜಿಲ್ಲೆಗಳಿಂದ ಹೊರಭಾಗಕ್ಕೆ ಒಂದೇ ನಗರದ ಗೋಡೆಯಿಂದ ಸುತ್ತುವರಿದ ನೀರಾವರಿ ಜಮೀನುಗಳಾಗಿ ವಿಸ್ತರಿಸಿರಲಿಲ್ಲ ಎಂದು ಎಮಿಲಿ ಹ್ಯಾಮರ್ ವಿವರಿಸಿದ್ದಾರೆ.


ವಿಶೇಷ

ಹಿಮಕರಡಿ ಕಲಿಸಿದ ಪಾಠ

ಪ್ರಾಣಿಗಳು ಮನುಷ್ಯರಿಗಿಂತಲೂ ಹೆಚ್ಚು ಸೂಕ್ಷ್ಮ ಮತ್ತು ಚುರುಕುಮತಿಗಳಾಗಿರುತ್ತವೆ ಎಂಬುದನ್ನು ಹಿಮಕರಡಿ ಮತ್ತೆ ಸಾಬೀತು ಮಾಡಿದೆ. ನೀರಿನ ಮೇಲೆ ಹೆಪ್ಪುಗಟ್ಟಿದ ಮಂಜುಗೆಡ್ಡೆಯ ತೆಳುಹಲಗೆಯಂತಹ ಸ್ಥಳದಲ್ಲಿ ಕಾಲಿಟ್ಟರೆ ಅದು ಕುಸಿದು ನೀರಿಗೆ ಬೀಳುವುದು ಗ್ಯಾರಂಟಿ. ಬೀಳದೆ ದಾಟುವುದು ಹೇಗೆ? ಹಿಮಕರಡಿ ಮಂಜುಗಡ್ಡೆಯ ಮೇಲೆ ಕಾಲೂರುವ ಬದಲಿಗೆ ಇಡೀ ದೇಹವನ್ನು ಹರಡಿಕೊಂಡು ಸ್ಕೇಟಿಂಗ್‌ನಂತೆ ಜಾರುತ್ತಾ ಜಾರುತ್ತಾ ಹೋಗಿ ಮಂಜುಗೆಡ್ಡೆಯ ತೆಳುಹಲಗೆಯನ್ನು ಸುರಕ್ಷಿತವಾಗಿ ದಾಟುತ್ತದೆ. ಮೇಲ್ನೋಟಕ್ಕೆ ಇದು ಹಿಮಕರಡಿಯ ಚಿನ್ನಾಟದಂತೆ ಕಂಡರೂ, ಸೂಕ್ಷ್ಮವಾಗಿ ನೋಡಿದಾಗ ಕರಡಿ ಸುರಕ್ಷಿತವಾಗಿ ದಾಟಲು ಜಾರು ಆಡವನ್ನಾಡಿರುವುದು ಗೊತ್ತಾಗುತ್ತದೆ. ಈ ವಿಡಿಯೋ ತುಣುಕು ವೈರಲ್ ಆಗಿದೆ. ಟ್ವಿಟ್ಟರ, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಹಲವು ಮಂದಿ ಹಿಮಕರಡಿಯ ಜಾಣ್ಮೆಯನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ. ಇದೊಂದು ಜೀವನ ಪಾಠ ಎಂದೂ ಕೆಲವರು ಹೇಳಿದ್ದಾರೆ.


ವಿಹಾರ

ವಿಹಂಗಮ ಚಿಕ್ಕಹೊಳೆ ಜಲಾಶಯ

ಚಾಮರಾಜನಗರ ತಾಲ್ಲೂಕಿನ ಚಿಕ್ಕಹೊಳೆ ಗ್ರಾಮದ ಬಳಿ ಹಾಗೂ ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(೨೦೯)ಯ ಬದಿಯಲ್ಲಿರುವ ಚಿಕ್ಕಹೊಳೆ ಜಲಾಶಯ ವಾರಾಂತ್ಯದ ವಿಹಾರಕ್ಕೆ ಸೂಕ್ತ ತಾಣ. ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರು ಕೃಷಿ, ಅರಣ್ಯ ಸಚಿವರಾಗಿದ್ದಾಗ ನಿರ್ಮಿಸಿದ ಜಲಾಶಯ. ಇದರ ಗರಿಷ್ಠ ಸಂಗ್ರಹ ಮಟ್ಟ ೭೪ ಅಡಿಗಳು. ಈಗ ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯದ ವ್ಯಾಪ್ತಿಯಲ್ಲಿ ೪ ಸಾವಿರ ಅಚ್ಚುಕಟ್ಟು ಪ್ರದೇಶವಿದೆ. ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಲಾಶಯದ ಕೆಳಗೆ ವಿಶಾಲವಾದ ಉದ್ಯಾನವಿದೆ ಆಹ್ಲಾದಕರ ವಾತಾವರಣ ಹೊಂದಿದೆ. ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿದ್ದು ತಂಪಾಗಿ ಬೀಸುವ ತಂಗಾಳಿ ಹಾಗೂ ಆಹ್ಲಾದಕರ ವಾತಾವರಣ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಚಾಮರಾಜನಗರದಿಂದ ೧೫ ಕಿ.ಮೀ.ದೂರದಲ್ಲಿದ್ದು ಒಂದು ದಿನ ಪ್ರವಾಸಕ್ಕೆ ಉತ್ತಮ ಪ್ರವಾಸಿ ತಾಣ. ಜಲಾಶಯದ ನೀರಿನ ರಾಶಿ ಸುತ್ತಲಿನ ಹಚ್ಚ ಹಸುರಿನ ವಾತಾವರಣ ಭಾವನಾಜೀವಿಗಳಿಗೆ ಸೂಕ್ತ. ಇಲ್ಲಿಗೆ ಒಮ್ಮೊಮ್ಮೆ ಆನೆಗಳು, ಜಿಂಕೆಗಳು, ಚಿರತೆಗಳು ನೀರು ಕುಡಿಯಲು ಬಂದು ಹೋಗುತ್ತವೆ.

andolana

Share
Published by
andolana

Recent Posts

ಮೈಸೂರಲ್ಲಿ ನಾಳೆಯಿಂದ ಮಾಗಿ ಉತ್ಸವ

ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ  ಫಲಪುಷ್ಪ ಪ್ರದರ್ಶನ ಒಳಗೊಂಡ…

17 mins ago

ಮಂಡ್ಯ ಜಿಲ್ಲೆ ಅಪ್ಪಟ ಕನ್ನಡಿಗರು ವಾಸಿಸುವ ನಾಡು: ಸಿಎಂ ಸಿದ್ದರಾಮಯ್ಯ

ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ…

22 mins ago

10ನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು: ಗೊ.ರು.ಚ ಹಕ್ಕೊತ್ತಾಯ

ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…

36 mins ago

ಕಾರು ಪಲ್ಟಿ; ಇಬ್ಬರಿಗೆ ಗಾಯ

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…

49 mins ago

ಸಂವಿಧಾನ ವಿಧಿ 371(ಜೆ) ಅಡಿಯಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ: ಪ್ರಿಯಾಂಕ್‌ ಖರ್ಗೆ

ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ‌ ಹಾಗೂ…

2 hours ago

ಕಾಂಗ್ರೆಸ್ ಸರ್ಕಾರದಲ್ಲಿ ಅಕ್ಷರಶಃ ಕರ್ನಾಟಕ ರೌಡಿಗಳ ರಾಜ್ಯವಾಗಿದೆ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು…

2 hours ago