ಅತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಇತ್ತ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯ ಮೂಲಕ ಕರ್ನಾಟಕ ಪ್ರವೇಶಿಸಿದ್ದಾರೆ. ೩,೫೦೦ ಕಿ.ಮೀ. ಉದ್ದದ ಭಾರತ್ ಜೋಡೊ ಯಾತ್ರೆಯ ಮೂಲಕ ಒಡೆದು ಹೋಗಿರುವ ಮನಸುಗಳನ್ನು ಒಗ್ಗೂಡಿಸುವ ಉದ್ದೇಶ ತಮ್ಮದೆಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಇದುವರೆಗೆ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಪ್ರತಿರೋಧವೂ ವ್ಯಕ್ತವಾಗಿದೆ. ರಾಜಕೀಯ ನಾಯಕರ ಯಾತ್ರೆಗಳ ಸಂದರ್ಭಗಳಲ್ಲಿ ಇಂತಹ ಉತ್ತಮ ಪ್ರತಿಕ್ರಿಯೆ ಮತ್ತು ಪ್ರತಿರೋಧಗಳು ಸಾಮಾನ್ಯವಾಗಿರುತ್ತವೆ. ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅಷ್ಟರ ಮಟ್ಟಿಗೆ ಆಯಾ ರಾಜ್ಯಗಳ ಪೊಲೀಸರು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಜನರೊಂದಿಗೆ ಸಂವಾದಿಸುವ, ಜನರೊಂದಿಗೆ ಕೆಲಹೊತ್ತು ಕಳೆಯುವ, ಅವರ ದೂರು ದುಮ್ಮಾನಗಳನ್ನು ಆಲಿಸುವ ಕೆಲಸವನ್ನು ಇದುವರೆಗಿನ ಯಾತ್ರೆಯಲ್ಲಿ ಮಾಡಿದ್ದಾರೆ ರಾಹುಲ್. ಯಾತ್ರೆ ದಿನದಿಂದ ದಿನಕ್ಕೆ ಹೆಚ್ಚು ಜನರ ಗಮನ ಸೆಳೆಯುತ್ತಿರುವುದಂತೂ ಹೌದು.
ದೇಶ ಇಂದು ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ಆರ್ಥಿಕ ಸಮಸ್ಯೆ. ಇನ್ನೊಂದು ಸಾಮಾಜಿಕ ಸಮಸ್ಯೆ. ಹಣದುಬ್ಬರ, ಅಗತ್ಯವಸ್ತುಗಳ ಬೆಲೆ ಏರಿಕೆ, ಸಂಪತ್ತಿನ ಅಸಮರ್ಪಕ ಹಂಚಿಕೆ, ನಿರುದ್ಯೋಗ, ಅರೆ ಉದ್ಯೋಗ ಇತ್ಯಾದಿಗಳು ಆರ್ಥಿಕ ಸಮಸ್ಯೆಯಾದರೆ, ಮತೀಯ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳು, ಅದರಿಂದಾಗಿ ಕದಡುತ್ತಿರುವ ಶಾಂತಿ ಸುವ್ಯವಸ್ಥೆ, ಅಸ್ಥಿರತೆ, ಪರಿಶಿಷ್ಟ ಜಾತಿ, ಪಂಗಡಗಳ ಜನರ ಮೇಲೆ ನಿಲ್ಲದ ದೌರ್ಜನ್ಯಗಳು, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳು-ಸದ್ಯದ ಸಾಮಾಜಿಕ ಸಮಸ್ಯೆಗಳು. ಉಭಯ ಸಮಸ್ಯೆಗಳನ್ನು ಜನರ ಬಳಿ ರಾಹುಲ್ ಗಾಂಧಿ ನಿವೇದಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಆಡಳಿತಾರೂಢ ಬಿಜೆಪಿಯೇ ಕಾರಣವೆಂದೂ ಆರೋಪಿಸುತ್ತಿದ್ದಾರೆ.
ಅವರ ಆರೋಪಗಳಲ್ಲಿನ ಸತ್ಯಾಸತ್ಯತೆ ಏನೇ ಇರಲಿ, ಇತ್ತೀಚಿನ ದಿನಗಳಲ್ಲಿ ಇಂತಹ ಯಾತ್ರೆಗಳು ನಡೆದಿರಲಿಲ್ಲ. ಚಂದ್ರಶೇಖರ್, ಲಾಲ್‌ಕೃಷ್ಣ ಅಡ್ವಾಣಿ ಅವರು ನಡೆಸಿದ ಯಾತ್ರೆಗಳನ್ನು ಅವುಗಳ ಸ್ವರೂಪ ಮತ್ತು ಉದ್ದೇಶ ಬೇರೆ ಬೇರೆಯಾಗಿದ್ದರೂ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ನೆನಪಿಸುತ್ತಿದೆ. ಯಾತ್ರೆಯನ್ನು ಯಾರೇ ಮಾಡಲಿ, ಜನರ ರಾಜಕೀಯ ಪ್ರಜ್ಞೆಯನ್ನು ಒರೆಗೆ ಹಚ್ಚಲು, ಸಮಕಾಲಿನ ವಿದ್ಯಮಾನಗಳ ಬಗ್ಗೆ ಗಮನ ಸೆಳೆಯಲು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಸ ಬೆಳಕಿನಲ್ಲಿ ನೋಡಲು ಇಂತಹ ಯಾತ್ರೆಗಳ ಅಗತ್ಯವಿದೆ.
ರಾಜಕಾರಣಿಗಳ ಪಾದ ಯಾತ್ರೆಗಳು ಯಾವತ್ತೂ ರಾಜಕೀಯ ಲಾಭವನ್ನು ತಂದುಕೊಡುತ್ತವೆ ಎಂಬುದನ್ನು ಇತಿಹಾಸ ಹೇಳುತ್ತದೆ. ಪಾದಯಾತ್ರೆ ಅಧಿಕಾರ ಗ್ರಹಿಸುವ ಹಲವು ಮಾರ್ಗಗಳಲ್ಲೊಂದು. ಈಗ ರಾಹುಲ್ ಗಾಂಧಿ ಅಧಿಕಾರಕ್ಕಾಗಿಯೇ ಪಾದಯಾತ್ರೆ ಮಾಡುತ್ತಿದ್ದಾರೆ ಎಂದೇನೂ ಭಾವಿಸಬೇಕಾಗಿಲ್ಲ. ಹಾಗಂತ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತ್ಯಾಗಮಾಡುವಷ್ಟು ಅಲೌಕಿಕತೆಯತ್ತ ಮುಖಮಾಡಿದೆ ಎಂದೇನೂ ಅಲ್ಲ.
ಭಾರತ್ ಜೋಡೊ ಯಾತ್ರೆ ಕಾಂಗ್ರೆಸ್ ಪಾಲಿಗೆ ಅಷ್ಟು ಸಲೀಸಾಗೇನೂ ಇಲ್ಲ. ಯಾತ್ರೆ ಘೋಷಣೆಯಾದ ನಂತರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಇತ್ತ ಕರ್ನಾಟಕ ಪ್ರವೇಶಿಸುವ ಹೊತ್ತಿನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ವಿಚಾರಣೆ ನಡೆಸಿದೆ. ಮೇಲ್ನೋಟಕ್ಕೆ ಇದು ಕಾನೂನು ಪ್ರಕ್ರಿಯೆ ಎಂದು ಹೇಳಿದರೂ, ಆಡಳಿತಾರೂಢ ಪಕ್ಷ ತನಿಖಾ ಸಂಸ್ಥೆಗಳನ್ನು ವ್ಯವಸ್ಥಿತ ವಾಗಿಯೇ ಬಳಸುತ್ತಿರುವುದು ಮೇಲ್ನೋಟಕ್ಕಂತೂ ಕಂಡುಬರುತ್ತಿದೆ.
ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆಯನ್ನು ಆಡಳಿತಾರೂಢ ಬಿಜೆಪಿ ವ್ಯಾಪಕವಾಗಿ ಟೀಕಿಸುತ್ತಿದೆ. ಇದು ಭಾರತ್ ಜೋಡೊ ಯಾತ್ರೆ ಅಲ್ಲ, ಭಾರತ್ ತೋಡೊ ಯಾತ್ರೆ ಎಂದು ವ್ಯಂಗ್ಯವಾಡಿದೆ. ಕೇಂದ್ರದ ಸಚಿವರು, ಪಕ್ಷದ ರಾಷ್ಟ್ರೀಯ ವಕ್ತಾರರಲ್ಲದೇ ಯಾತ್ರೆ ತೆರಳುವ ರಾಜ್ಯಗಳಲ್ಲಿರುವ ಬಿಜೆಪಿ ನಾಯಕರು ಯಾತ್ರೆಯ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಪಕ್ಷದ ಜವಾಬ್ದಾರಿ ಹೊರುವ ಶಕ್ತಿಯಿಲ್ಲ, ಅವರೊಬ್ಬ ಪೆದ್ದು, ಪದೇ ಪದೇ ವಿದೇಶಕ್ಕೆ ಹಾರುತ್ತಾರೆ ಎಂಬಿತ್ಯಾದಿ ಟೀಕೆಗಳು ಕೇಳಿ ಬರುತ್ತಿವೆ.
ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಕರ್ನಾಟಕ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ. ಏಳೆಂಟು ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಒಗ್ಗೂಡಿಸುವ ಮತ್ತು ಪಕ್ಷದಿಂದ ವಿಮುಖರಾದವರನ್ನು ಮರಳಿ ಕರೆತರುವ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಪ್ರಮುಖ ಪಾತ್ರ ವಹಿಸಲಿದೆಯೆಂದೇ ನಂಬಲಾಗಿದೆ. ಜೋಡಿಸುವ ಕೆಲಸವು ಪಕ್ಷದ ಮಟ್ಟದಲ್ಲೇ ಆದರೂ, ಯಾತ್ರೆಯ ಉದ್ದೇಶ ಈಡೇರಿದಂತೆಯೇ.
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿ ಯಾತ್ರೆ ಹೊರಟಿದ್ದಾರೆ. ಅದೂ ಭಾರತವನ್ನು ಜೋಡಿಸುವ ಸಲುವಾಗಿನ ಪಾದಯಾತ್ರೆ. ನಿಜ. ಒಡೆದ ಮನಸುಗಳನ್ನು ಒಗ್ಗೂಡಿಸುವ ತುರ್ತು ಅಗತ್ಯ ಹಿಂದೆಂದಿಗಿಂತಲೂ ಈ ಹೊತ್ತಿನಲ್ಲಿ ಹೆಚ್ಚಿದೆ. ರಾಜಕೀಯವನ್ನು ಮೀರಿ, ಈ ಯಾತ್ರೆಯು ಎಲ್ಲರೂ ಒಗ್ಗೂಡಬೇಕೆಂಬ ಸದಾಶಯವನ್ನು ಜನರಲ್ಲಿ ಮೂಡಿಸಿದರೆ ಅಷ್ಟರ ಮಟ್ಟಿಗೆ ಯಾತ್ರೆ ಯಶಸ್ಸಾದಂತೆಯೇ. ಅದು ಆಗಬೇಕಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…